ನ್ಯಾಯಮೂರ್ತಿಗಳಾದ ಹೆಚ್.ಎನ್. ನಾಗಮೋಹನ್ ದಾಸ್ ಏಕ ಸದಸ್ಯ ವಿಚಾರಣಾ ಆಯೋಗದಿಂದ ಪರಿಶಿಷ್ಟ ಜಾತಿಯ ಒಳ ಮೀಸಲಾತಿ ಸಮೀಕ್ಷೆಗೆ ಸಂಬಂಧಿಸಿದಂತೆ ಜಿಲ್ಲಾ ಮಟ್ಟದ ಮಾಸ್ಟರ್ ಟ್ರೆನರ್‌ಗಳಿಂದ ತಾಲೂಕಾ ಮಟ್ಟದ ಮಾಸ್ಟರ್ ಟ್ರೆನರ್‌ಗಳಿಗೆ ತರಬೇತಿ ಕಾರ್ಯಾಗಾರಕ್ಕೆ ಜಿಲ್ಲಾಧಿಕಾರಿಗಳಾದ ನಿತೀಶ್ ಕೆ ಅವರು ಚಾಲನೆ ನೀಡಿದರು.
ನಗರದ ನೂತನ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಮಾತನಾಡಿ ಟ್ರೆನರ್‌ಗಳು ಸಮೀಕ್ಷಾ ವ್ಯಾಪ್ತಿಯಲ್ಲಿರುವ ಮನೆಗಳಿಗೆ ಮತದಾರರ ಪಟ್ಟಿಯಲ್ಲಿರುವ ಮನೆ ಸಂಖ್ಯೆಗಳ ಆಧಾರದ ಮೇಲೆ ಭೇಟಿ ನೀಡಬೇಕು. ಮತ್ತು ಪರಿಶಿಷ್ಟ ಜಾತಿಯ ಕುಟುಂಬಗಳನ್ನು ಗುರುತಿಸಬೇಕು. ಯಾವ ದಿನದಂದು, ಯಾವ ಯಾವ ಮನೆಗಳನ್ನು ಸಮೀಕ್ಷೆಗೆ ಒಳಪಡಿಸಲಾಗುವುದು ಎಂಬ ಮಾಹಿತಿಯನ್ನು ಆದಷ್ಟು ಮಟ್ಟಿಗೆ ಮುಂಚಿತವಾಗಿಯೆ ಗೊತ್ತುಪಡಿಸಿಕೊಳ್ಳಬೇಕು ಎಂದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಪರಿಶಿಷ್ಟ ಜಾತಿಗಳ ಸಮೀಕ್ಷೆ ; ಮಾದಿಗ ನಮೂದಿಸಲು ಮನವಿ
ಸಮೀಕ್ಷೆಯಲ್ಲಿ ಪರಿಶಿಷ್ಟ ಜಾತಿಯವರ ಯಾವುದೇ ಮನೆಯನ್ನು ಬಿಡದೆ, ಪ್ರತಿಯೊಂದು ಮನೆಗೆ ಭೇಟಿ ನೀಡಿ ಅಲ್ಲಿರುವ ಪ್ರತಿಯೊಂದು ಕುಟುಂಬದ ಎಲ್ಲ ಸದಸ್ಯರ ಮಾಹಿತಿಯನ್ನು ಮೊಬೈಲ್ ಆ್ಯಫ್‌ನಲ್ಲಿ ಭರ್ತಿ ಮಾಡಬೇಕು. ಸಮೀಕ್ಷೆ ನಡೆಸುವಾಗ ಸಮೀಕ್ಷೆ ಬ್ಲಾಕಿನ ಅಧಿಕೃತ ಭಾಗವಾಗಿರುವ ಯಾವುದೇ ಮನೆಯನ್ನು ಬಿಡಬೇಡಿ. ಅಲ್ಲದೆ ಕುಟುಂಬವನ್ನು ಭೇಟಿ ಮಾಡಿದಾಗ, ಪ್ರಶ್ನಾವಳಿಯನ್ನು ತುಂಬಲು ಆತುರಪಡಬೇಡಿ. ನಿಮ್ಮ ಭೇಟಿಯ ಉದ್ದೇಶದ ಬಗ್ಗೆ ಮಾಹಿತಿ ನೀಡುವವರಿಗೆ ಸಂಕ್ಷಿಪ್ತವಾಗಿ ತಿಳಿಸಿ ನಿಮ್ಮ ಪರಿಚಯವನ್ನು ಮಾಡಿಕೊಳ್ಳಬೇಕೆಂದರು.
ಅಪರ ಜಿಲ್ಲಾಧಿಕಾರಿ ಮಾತನಾಡಿ ಶಿವಾನಂದ ಅವರು ಗೌರವಾನ್ವಿತ ನ್ಯಾಯಮೂರ್ತಿಗಳಾದ ಶ್ರೀ ಹೆಚ್.ಎನ್. ನಾಗಮೋಹನ್ ದಾಸ್ ಏಕ ಸದಸ್ಯ ವಿಚಾರಣಾ ಆಯೋಗದಿಂದ ಪರಿಶಿಷ್ಟ ಜಾತಿಯ ಒಳ ಮೀಸಲಾತಿ ಸಮೀಕ್ಷೆಗೆ ಪರಿಶಿಷ್ಟ ಜಾತಿಯ ಪಟ್ಟಿಗೆ ಸೇರಿರುವ ಜನರ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ರಾಜಕೀಯ, ಔದ್ಯೋಗಿಕ ಪ್ರಾತಿನಿಧ್ಯತೆ ಇತ್ಯಾದಿ ಸ್ಥಿತಿಗತಿಗಳ ಬಗ್ಗೆ ಸಮೀಕ್ಷೆ ಮಾಡುವುದು ಆಯೋಗದ ಉದ್ದೇಶವಾಗಿದ್ದು, ಸಮೀಕ್ಷೆದಾರರು ನಿಯಮಗಳ ಅನುಸಾರ ಸಮೀಕ್ಷೆ ಮಾಡಬೇಕೆಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಲಿಂಗಸುಗೂರು ಸಹಾಯಕ ಆಯುಕ್ತರಾದ ಬಸವಣೆಪ್ಪಾ ಕಲಶೆಟ್ಟಿ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಚಿದಾನಂದಪ್ಪ, ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಕೆ.ಬಿ.ಬಡಿಗೇರ, ತರಬೇತಿದಾರರಾದ ಸದಾಶಿವಪ್ಪ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕಿನ ತಹಶೀಲ್ದಾರ್, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಇದ್ದರು.
