ಬೆಂಗಳೂರಿಗೆ ತಲುಪಬೇಕಿದ್ದ ಬರೋಬ್ಬರಿ 5,140 ಹೊಸ ಮೊಬೈಲ್ ಫೋನ್‌ಗಳನ್ನು ಕದ್ದಿದ್ದ ಏಳು ಮಂದಿ ಖದೀಮರನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಪೇರೇಸಂದ್ರ ಪೊಲೀಸರು ಬಂಧಿಸಿದ್ದಾರೆ. ಖದೀಮರಿಂದ ಮೊಬೈಲ್‌ಗಳ ಕಳವಿಗೆ ಬಳಸಿದ್ದ ಟ್ರಕ್ ಮತ್ತು ಕೆಲವು ಮೊಬೈಲ್‌ಗಳನ್ನು ವಶಕ್ಕೆ ಪಡೆದಿದ್ದಾರೆ.
2024ರ ನವೆಂಬರ್‌ನಲ್ಲಿ ಉತ್ತರ ಪ್ರದೇಶದ ನೋಯ್ಡಾದಿಂದ ಬೆಂಗಳೂರಿಗೆ ಟ್ರಕ್‌ವೊಂದರಲ್ಲಿ 6,640 ಹೊಸ ಮೊಬೈಲ್‌ಗಳನ್ನು ಸಾಗಿಸಲಾಗುತ್ತಿತ್ತು. ಆದರೆ, ನೋಯ್ಡಾದಿಂದ ಚಿಕ್ಕಬಳ್ಳಾಪುರದವರೆಗೆ ಬಂದ ಟ್ರಕ್ ಬೆಂಗಳೂರು ತಲುಪಿರಲಿಲ್ಲ. ಟ್ರಕ್‌ನ ಚಾಲಕ ಕೂಡ ಮೊಬೈಲ್ ಕಂಪನಿಯ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಬಳಿಕ, ಜಿಪಿಎಸ್ ಮೂಲಕ ಹುಡುಕಿದಾಗ, ಚಿಕ್ಕಬಳ್ಳಾಪುರದ ರೆಡ್ಡಿಗೊಲ್ಲವಾರಹಳ್ಳಿಯಲ್ಲಿ ಟ್ರಕ್ ಇರುವುದು ಪತ್ತೆಯಾಗಿತ್ತು. ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ, ಚಾಲಕನ ಕ್ಯಾಬಿನ್‌ನಿಂದ ರಂಧ್ರ ಕೊರೆದು, 5,140 ಮೊಬೈಲ್‌ಗಳನ್ನು ಮತ್ತೊಂದು ಟ್ರಕ್‌ಗೆ ತುಂಬಿಸಿಕೊಂಡು ಆರೋಪಿಗಳು ಪರಾರಿಯಾಗಿದ್ದರು.
ಘಟನೆ ಸಂಬಂಧ ಪೇರೇಸಂದ್ರ ಪೊಲೀಸ್ ಠಾಣೆಯಲ್ಲಿ ಕಂಪನಿಯವರು ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೇರೇಸಂದ್ರ ಪೊಲೀಸರು ಸೆನ್ ಪೊಲೀಸರು ಸಹಾಯದೊಂದಿಗೆ ಹರಿಯಾಣ, ರಾಜಸ್ಥಾನ, ಹಿಮಾಚಲ ಪ್ರದೇಶ ಹಾಗೂ ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಆರೋಪಿಗಳಿಗಾಗಿ ಹುಡುಕಾಡ ನಡೆಸಿದ್ದರು.
ಬರೋಬ್ಬರಿ 6 ತಿಂಗಳ ಬಳಿಕ ಏಳು ಮಂದಿ ಆರೋಪಿಗಳನ್ನು ಹರಿಯಾಣದ ಪಲ್ವಾಲಾ ಜಿಲ್ಲೆಯ ಆಲಿಮಿಯೋ ಗ್ರಾಮದಲ್ಲಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಕಂಪನಿಯ ಟ್ರಕ್ ಚಾಲಕ ರಾಹುಲ್, ಇಮ್ರಾನ್, ಮಹಮದ್ ಮುಸ್ತಾಫಾ, ಅನೂಪ್ ರಾಯ್, ಅಭಿಜಿತ್ ಪೌಲ್, ಸಕೃಲ್ಲಾ ಹಾಗೂ ಯೂಸುಫ್ ಖಾನ್ ಎಂದು ಹೆಸರಿಸಲಾಗಿದೆ.
ಈ ವರದಿ ಓದಿದ್ದೀರಾ?: ರೈತರ ಭೂಮಿ ಕಸಿಯಲೆಂದೇ ಬಂದ ಸ್ಮಾರ್ಟ್ ಸಿಟಿ ಯೋಜನೆ: ಹೆಚ್‌ಡಿಡಿ-ಡಿಕೆಶಿ ಪಾತ್ರವೇನು?
ಕದ್ದಿದ್ದ 5,140 ಮೊಬೈಲ್‌ಗಳ ಪೈಕಿ 56 ಮೊಬೈಲ್‌ಗಳು ಮಾತ್ರವೇ ಆರೋಪಿಗಳ ಬಳಿ ಇದ್ದವು, ಅವುಗಳನ್ನು ಪೊಲೀಸರು ವಶಕ್ಕೆ ಪಡೆಸಿದ್ದಾರೆ. ಅಲ್ಲದೆ, ಕದ್ದ ಮೊಬೈಲ್‌ಗಳ ಸಾಗಾಟಕ್ಕೆ ಬಳಸಲಾಗಿದ್ದ ಟ್ರಕ್‌ಅನ್ನೂ ವಶಪಡಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಆರೋಪಿಗಳು ಉಳಿದೆಲ್ಲ ಮೊಬೈಲ್‌ಗಳನ್ನು ದೆಹಲಿಯಲ್ಲಿ 90 ಲಕ್ಷ ರೂಪಾಯಿಗೆ ಕಾಳಸಂತೆಯಲ್ಲಿ ಮಾರಾಟ ಮಾಡಿದ್ದಾರೆ ಎಂದು ಹೇಳಲಾಗಿದ್ದು, ಆರೋಪಿಗಳ ಖಾತೆಯಲ್ಲಿದ್ದ ಒಟ್ಟು 20 ಲಕ್ಷ ರೂ.ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.