ಇತ್ತೀಚೆಗೆ ಟೊಮೇಟೋ ಸೇರಿದಂತೆ ಬಹುತೇಕ ತರಕಾರಿ ಬೆಲೆಗಳ ತೀವ್ರ ಕುಸಿತದಿಂದ ರಾಜ್ಯದ ರೈತರು ತೀವ್ರ ಆರ್ಥಿಕ ಸಂಕಷ್ಟ ಅನುಭವಿಸುತ್ತಿದ್ದಾರೆ. ತಾವು ಬೆಳೆಸಿದ ಉತ್ಪನ್ನಗಳನ್ನು ಕಡಿಮೆ ದರಕ್ಕೆ ಮಾರಲೂ ಆಗದೆ, ಹಿಂತಿರುಗಿ ಮನೆಗೆ ಕೊಂಡೊಯ್ಯಲೂ ಆಗದೆ ಪರಿತಪಿಸುತ್ತಿದ್ದಾರೆ.
ತರಕಾರಿ ಬೆಳೆಯು ರೈತರ ಕೃಷಿ ಪದ್ದತಿಯ ಒಂದು ಭಾಗವೂ ಹೌದು. ಇವುಗಳಲ್ಲಿ ವಾರ್ಷಿಕ, ಬಹುವಾರ್ಷಿಕ, ಅರ್ಧವಾರ್ಷಿಕ ಹಾಗೂ ತ್ರೈಮಾಸಿಕ ತರಕಾರಿಗಳು ಇವೆ. ತರಕಾರಿ ಬೆಳೆಯನ್ನೇ ಆಧರಿಸಿ ಜೀವನ ನಡೆಸುವ ರೈತರ ಪರಿಸ್ಥಿತಿ ಇತ್ತ ನಿರ್ದಿಷ್ಟ ಬೆಲೆಯೂ ಇಲ್ಲದೇ ಬೀದಿಗೆ ಬಿದ್ದಂತಾಗಿದೆ.
ರೈತರ ಉಪಕೃಷಿ ಹಾಗೂ ಮುಖ್ಯ ಕೃಷಿಯಾಗಿರುವ ಈ ಬೆಳೆಗಳಿಗೆ ಗೌರವಯುತವಾದ ಬೆಲೆ ಸಿಗದೇ ಇದ್ಧಾಗ ಅವರ ಗೋಳು, ಸಂಕಟ ನೋವು ಕೇಳುವವರಿಲ್ಲ. ನೋಡಿ ಮರುಗಿ ಹೋಗುತ್ತಾರೆ ಅಷ್ಟೇ. ರಸ್ತೆಯಲ್ಲಿಟ್ಟು ಹಾಗೂ ವ್ಯವಸ್ಥಿತ ಜಾಗದಲ್ಲಿಟ್ಟು ಮಾರುವ ವ್ಯಾಪಾರಸ್ಥರಿಗೂ ಬಿಸಿಲ ಬೇಗೆಯಲ್ಲಿ ಬೆಂದು ದಿನದ ಕೂಲಿಯಾದರೂ ಅವರಿಗೆ ಸಿಗದೇ ಇದ್ದಾಗ ಸಾಲದ ಹೊರೆ ಹಾಗೂ ನಷ್ಟದ ಬರೆ ಅವರ ಪಾಲಿನ ಬುತ್ತಿ.
ಭೂಮಿಯ ಮಣ್ಣು ಹದಗೊಳಿಸಿ, ಬೀಜ ಬಿತ್ತನೆ ಮಾಡಿ, ಗೊಬ್ಬರ ಹಾಕಿ ನೀರುಣಿಸಿ ಬೆಳೆಗೆ ಅಂಟಿದ ರೋಗಗಕ್ಕೆ ಔಷಧಿ ಸಿಂಪಡಿಸಿ, ಉಲುಸಾಗಿ ಬೆಳೆದ ಪೈರೊಳಗಿನ ಕಳೆ ಕಿತ್ತು ಹದಗೊಳಿಸಿ ವಾಣಿಜ್ಯ ಮಾರುಕಟ್ಟೆಗೆ ತರಬೇಕಾದರೆ ರೈತರು ಹೈರಾಣಾಗಿರುತ್ತಾರೆ. ಹೀಗೆ ಆಗಾಗ ಅಥವಾ ರೈತರ ಸರಿಯಾದ ಸಮಯದಲ್ಲೇ ಬೆಲೆ ಕೈಕೊಟ್ಟರೆ ವರ್ಷವಿಡೀ ಪಟ್ಟ ಶ್ರಮ ವ್ಯರ್ಥವಾಗುತ್ತದೆ.
ಭಾರತದ ರಾಜಕಾರಣಿಗಳು ಹಾಗೂ ಸೋ-ಕಾಲ್ಡ್ ದೇಶ ಪ್ರೇಮಿಗಳು ರೈತರನ್ನು ‘ದೇಶದ ಬೆನ್ನೆಲುಬು, ಅನ್ನದಾತರು ಅವರ ಅಭಿವೃದ್ಧಿಯೇ ನಮ್ಮ ಕರ್ತವ್ಯ’ ಎನ್ನುವ ಮಾತುಗಳು ಚುನಾವಣಾ ಹಾಗೂ ತಮ್ಮ ಸ್ವಾರ್ಥ ಪ್ರತಿಭಟನೆಯ ಸಂದರ್ಭಗಳಲ್ಲಿ ಪ್ರಚಾರಕ್ಕಾಗಿ ಬಳಸುವ ಶ್ಲೋಕಗಳಾಗಿವೆ. ಆದರೆ, ಅವರು ಬೆಳೆದಿರುವ ಬೆಳೆಗಳ ಬೆಲೆ ಕುಸಿತಗೊಂಡಾಗ, ಆಕ್ರೋಶಿತನಾಗಿ ತರಕಾರಿಗಳನ್ನು ರಸ್ತೆಗೆ ಚೆಲ್ಲಿ ಮೌನ ಪ್ರತಿಭಟನೆ ಮಾಡುವಾಗ ಯಾರೊಬ್ಬರೂ ಕಣ್ಣೆತ್ತಿ ಕೂಡ ನೋಡಲ್ಲ. ಆಗ ರೈತರ ಆಕ್ರೋಶಕ್ಕೆ ಸರಕಾರದ ತಿರಸ್ಕಾರದ ನೋಟವೊಂದೇ ಉತ್ತರವಾಗುತ್ತದೆ.
ವಾಣಿಜ್ಯ ಬೆಳೆಯಾದ ತರಕಾರಿಯು ಇದ್ದಕ್ಕಿದ್ದಂತೆ ತನ್ನ ಬೆಲೆಯಲ್ಲಿ ಕುಸಿತ ಕಂಡಾಗ ರೈತರು ಕಂಗಾಲಾಗಿಬಿಡುತ್ತಾರೆ. ನೀರಾವರಿವುಳ್ಳ ರೈತರು ಮೆಕ್ಕೆಜೋಳ, ಜೋಳ, ಕಬ್ಬು, ಶೇಂಗಾ, ಮೆಣಸಿನಕಾಯಿ, ಹತ್ತಿ ಮುಂತಾದ ದೀರ್ಘಕಾಲದ ಹಾಗೂ ದ್ವೈಮಾಸಿಕ ಬೆಳೆಗಳನ್ನು ಬೆಳೆದಾಗ ಅದರ ಖರ್ಚಗಳ ಹೊರೆಯನ್ನು ನಿಭಾಯಿಸಲು ತರಕಾರಿಗಳಂತ ಪರ್ಯಾಯ ಉಪಕೃಷಿಯನ್ನು ಆಯ್ದುಕೊಳ್ಳುತ್ತಾರೆ. ಅದರಲ್ಲಿಯೂ ನಷ್ಟದ ಬೆಂಕಿಗೆ ಬಿದ್ದರೆ ಅವರು ಕೃಷಿಯನ್ನು ನಂಬುವುದಾದರೂ ಹೇಗೆ ಎನ್ನುವ ಗೊಂದಲದೊಳಗೆ ಮರಳಿ ಕೃಷಿಯನ್ನೇ ಆಶ್ರಯಿಸಬೇಕಾಗುತ್ತದೆ.
ರಸ್ತೆಗೆ ಚೆಲ್ಲಿ ಪ್ರತಿಭಟನೆ
ಟೊಮೇಟೋ, ಈರುಳ್ಳಿ, ಬದನೆಕಾಯಿ, ಸೌತೆಕಾಯಿ, ಹೀರೇಕಾಯಿ, ಚೌಳಿ, ಹೂಕೋಸ್ ಮುಂತಾದ ತರಕಾರಿಗಳ ಬೆಲೆ ಎರಡು ತಿಂಗಳದಿಂದ ನೆಲಕಚ್ಚಿದ್ದರಿಂದ ಇತ್ತೀಚೆಗೆ ಹೂವಿನಹಡಗಲಿ ತಾಲೂಕಿನ ರೈತರು ಬೇಸತ್ತು ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸಿದರು. ಬೆಳೆದಿರುವ ವಿವಿಧ ತರಕಾರಿಗಳನ್ನು ತಂದು ರಸ್ತೆಗೆ ಚೆಲ್ಲಿ ಸರಕಾರಗಳ ವಿರುಧ್ಧ ಹಾಗೂ ಜಿಲ್ಲಾಡಳಿತದ ವಿರುದ್ಧ ಮೌನವಾಗಿ ಪ್ರತಿಭಟಿಸಿದರು.

ಈದಿನ.ಕಾಮ್ನೊಂದಿಗೆ ಮಾತಾನಾಡಿ, “ಸರ್ರ ನೋಡ್ರಿ, ನನ್ಗ 3 ಎಕ್ರೆ ಹೊಲ ಐತ್ರಿ, ಅದ್ರಾಗ ಬ್ಯಾರೆಬ್ಯಾರೆ ತರಕಾರಿ ಹಾಕ್ತೇನ್ರಿ. ಕಾಯ್ಪಲೆ ಬೆಳದು ಮಾರ್ಕೆಟ್‌ಗೆ ಹೋಗಿ ಮಾರ್ತವ್ರಿ. ಇದ್ನ ನಂಬ್ಕೊಂಡು ಜೀವನ ಮಾಡ್ತೆವಿ. ಹೊಲ ಹಸ ಮಾಡಿ, ಬೀಜ ಹಾಕಿ, ಅದರ ಕಳೆ ತೆಗ್ಸಿ, ರೋಗ ಹೆಚ್ಚ ಆದಾಗ ಔಸ್ದಿ ಹೊಡ್ದು, ಕಿತ್ತ-ಕೊಯ್ದ ಮಾರಾಟ ಮಾಡಾಕೊದ್ರ ಕೆಜಿ 5 ರೂ, ರೂ 10 ಮೂರು ಕೆಜಿ ಕೇಳ್ತಾರಿ. ಹಿಂಗಾದಾಗ ರೈತ್ರು ನಾವೆಂಗ ಬದ್ಕದ ಹೇಳ್ರಿ” ಎಂದು ನೋವಿನಿಂದ ನುಡಿಯುತ್ತಾರೆ ಹೂವಿನಹಡಗಲಿ ತಾಲೂಕಿನ ತಮಲಾಪೂರದ ರೈತ ಮಾರುತಿ ಗುತ್ತಿ.
2500-3000ರೂಗೆ ಕೆಜಿ ಬೀಜ ತಂದು ಕಳೆ ಕೆತ್ಸಾಕ ರೂ 10,000, 25,000-30,000 ಕಾಯ್ಪಲ್ಲೆ ಕೀಳಾಕ, ಕಟ್ಟ ಮಾಡಾಕ ಬಂದಾಗ ಅದರ ಆಳಿನ ಖರ್ಚು ಕಡ್ಮಿ ಅಂದ್ರೂ ರೂ 42,000 ಮತ್ತ ಅದ್ನ ಮಾರ್ಕೆಟ್‌ಗೆ ಕಳ್ಸಾಕ ಗಾಡಿ ಖರ್ಚು ರೂ 12,000 ಹೆಚ್ಚು ಕಡಿಮಿ ರೂ 85,000 ರಿಂದ 90,000 ತಗ್ಲತೈತಿ ನಮ್ಗ ಬರ ಲಾಭ ಅಂದ್ರ ರೂ 52-56 ಸಾವಿರ ಅಷ್ಟ.. ಹಿಂಗಾದ್ರ ನಾವು ಬದ್ಕಕ್ ಆಗ್ತದೇನ್ರೀ” ಎಂದು ತಮ್ಮ ಅಳಲು ತೋಡಿಕೊಂಡರು.

ಟಾಟಾ ಎಸಿ ಗಾಡಿಯಲ್ಲಿ ‘100 ಕ್ಕೆ 6ಕೆಜಿ ಈರುಳ್ಳಿ’ ಎಂದು ಹೋಗಿ ಬರುವ ಗ್ರಾಹಕರನ್ನ ಕೂಗಿ ಕರೆಯುತ್ತಿದ್ದ ಕೊಪ್ಪಳದ ಸಣ್ಣ ವ್ಯಾಪಾರಿ ಯಮನೂರಪ್ಪ ಸಿಂದೋಗಿ, “ಸರ್ರ ವ್ಯಪಾರ ಏನು ಇಲ್ರಿ ತರಕಾರಿ ಮಾರ್ಕೆಟ್ ರೇಟ್ ಬಿದ್ದೈತ್ರಿ, ಈಗ ರೈತ್ರ ಮಾಲ ಜಾಸ್ತಿ ಐತ್ರಿ ರೇಟ್ ನೋಡಿದ್ರ ಹಳ್ಳ ಹಿಡದೈತ್ರಿ. ಅವ್ರ ಬೆಳ್ದಿದ್ಕ ಏನಾರ ಸ್ವಲ್ಪ ಬೆಲಿ ಇದ್ರ ನಮ್ಗೂ ಒಂದ್ರೂಪಾಯಿ ಲಾಭ ಸಿಗ್ತಿತ್ತು; ಬೆಳ್ದವರಿಗಿ ಒಂದೆರಡು ರೂಪಾಯಿ ಸಿಗ್ತಿತ್ತು. ಪಾಪ ರೈತ್ರುಗು ಇಲ್ಲ ನಮ್ಗು ಇಲ್ರಿ, ಏರ್ಕಂಡ ಬಂದ ಗಾಡಿ ಖರ್ಚ ತಗಿಯಾಕ ಅಗಲ್ರಿ” ಎಂದು ಬೇಸರ ವ್ಯಕ್ತಪಡಿಸಿದರು.
ಮಾರ್ಕೆಟ್ ಹರಾಜ ಕೂಗುವ ಸುಲೇಮಾನ್ ಕಿಲ್ಲೆದಾರ್, “ಬೇಸಿಗೆ ಕಾಲದಲ್ಲಿ ನೀರಾವರಿ ಹೊಂದಿರುವ ರೈತರು ಹೆಚ್ಚು ತರಕಾರಿ ಬೆಳೆಯುವುದರಿಂದ ಬಜಾರಕ್ಕೆ ತರಕಾರಿ ಹೆಚ್ಚಾಗಿ ಬರುತ್ತೆ. ಇಲ್ಲಿಂದ ಹೊರ ರಾಜ್ಯಗಳಿಗೆ ಹೋಗುವುದು ಕಡಿಮೆ ಆದಾಗ ಇಲ್ಲಿ ಬೆಲೆ ಕಡಿಮೆ ಆಗುತ್ತೆ. ಮತ್ತೊಂದು ವಿಷಯ ಅಂದ್ರೆ.. ಬೇಸಿಗೆಯಲ್ಲಿ ಮುಖ್ಯ ಆಹಾರ ಬೆಳೆ ಬೆಳೆಯುವುದು ಕಡಿಮೆ. ರೈತರು ಅನಿವಾರ್ಯವಾಗಿ ತರಕಾರಿ ಬೆಳೆಯನ್ನು ಹೆಚ್ಚು ಅವಲಂಬಿಸುತ್ತಾರೆ. ಇದರಿಂದಲೂ ಬೆಲೆ ಇಳಿಮುಖವಾಗುತ್ತದೆ. ಮಳೆಗಾಲ ಆರಂಭವಾದಂತೆ ದೀರ್ಘ ಬೆಳೆಗಳನ್ನು ಬೆಳೆಯಲು ತೊಡಗುತ್ತಾರೆ. ಆಗ ತರಕಾರಿ ಬೆಳೆಯಲು ಹಿಂದೇಟು ಹಾಕುತ್ತಾರೆ. ಆಗ ತರಕಾರಿ ಬೆಲೆ ಗಗನಕ್ಕೇರುತ್ತದೆ” ಎಂದು ಬೆಲೆ ಏರಿಕೆ ಹಾಗೂ ಕುಸಿತದ ಬಗ್ಗೆ ಹೇಳಿದರು.

ರಾಜ್ಯ ಈರುಳ್ಳಿ ಬೆಳೆಗಾರರ ಸಂಘದ ಅಧ್ಯಕ್ಷ ಎನ್ ಎಂ ಸಿದ್ದೇಶ ಮಾತನಾಡಿ, “ವಿಜಯನಗರ ಜಿಲ್ಲೆ ಸೇರಿ ಉತ್ತರ ಕರ್ನಾಟಕದಲ್ಲಿ ಹಿಂಗಾರು ಋತುವಿನಲ್ಲಿ ಈರುಳ್ಳಿ ಉತ್ತಮ ಇಳುವರಿ ಬಂದಿದೆ. ಬೆಂಗಳೂರು ಮಾರುಕಟ್ಟೆಯಲ್ಲಿ ನಮ್ಮ ಭಾಗದ ಫಸಲಿಗೆ ಉತ್ತಮ ಬೆಲೆ ಸಿಗುತ್ತಿಲ್ಲ. ಪ್ರತಿ ಕ್ವಿಂಟಲ್ ಈರುಳ್ಳಿ ಉತ್ಪಾದನಾ ವೆಚ್ಚ ₹2,000 ರಿಂದ ₹2,500 ಇದೆ. ಆದರೆ, ಮಾರುಕಟ್ಟೆಯಲ್ಲಿ ಕ್ವಿಂಟಲ್ ಈರುಳ್ಳಿ ದರ ₹1,000 ದಿಂದ ₹1,200ಕ್ಕೆ ಕುಸಿದಿದೆ. ತಾಲೂಕು ಕೇಂದ್ರಗಳಲ್ಲಿ ಖರೀದಿ ಕೇಂದ್ರ ತೆರೆದು ಈರುಳ್ಳಿಯನ್ನು ಕ್ವಿಂಟಲ್‌ಗೆ ₹4,000ರಂತೆ ಖರೀದಿಸಲು ಸರ್ಕಾರ ಕ್ರಮ ಕೈಗೊಂಡರೆ ರೈತರಿಗೆ ಅನುಕೂಲವಾದೀತು.’ ಎಂದರು.
ಇದನ್ನೂ ಓದಿ: ಕೊಪ್ಪಳ | ಪಹಲ್ಗಾಮ್ ಭಯೋತ್ಪಾದಕ ದಾಳಿ ಖಂಡಿಸಿ ಎಸ್‌ಡಿಪಿಐ ಪ್ರತಿಭಟನೆ
ಟೊಮೇಟೋ ಸೇರಿದಂತೆ ಹಲವಾರು ತರಕಾರಿಗಳ ದರ ಪತನವು ಕೃಷಿಕರ ಬದುಕಿಗೆ ಭಾರೀ ಹೊಡೆತ ನೀಡುತ್ತಿದೆ. ತಮ್ಮ ಬೆಳೆಗೆ ತಕ್ಕ ಬೆಲೆ ಸಿಗದೆ ರೈತರು ತಮ್ಮ ಉತ್ಪನ್ನಗಳನ್ನು ರಸ್ತೆಗೆಸೆಯುವ ಸ್ಥಿತಿಗೆ ತಲುಪಿರುವುದು ದುರಂತಕರ. ಇದು ಕೇವಲ ಆರ್ಥಿಕ ಸಮಸ್ಯೆಯಲ್ಲ, ರೈತನ ಆತ್ಮವಿಶ್ವಾಸಕ್ಕೂ ಸವಾಲು. ಈ ಪರಿಸ್ಥಿತಿಗೆ ಶಾಶ್ವತ ಪರಿಹಾರ ನೀಡಲು ಸರ್ಕಾರ ಮತ್ತು ಮಾರುಕಟ್ಟೆ ವ್ಯವಸ್ಥೆ ತಕ್ಷಣ ಗಮನ ಹರಿಸಬೇಕು. ಬೆಲೆಯ ಸ್ಥಿರತೆಗೆ ಖಾತರಿ ನೀಡುವ ದಾರಿಗಳು, ನೇರ ಮಾರಾಟ ವ್ಯವಸ್ಥೆಗಳು ಮತ್ತು ಸಂಗ್ರಹಣಾ ಸೌಲಭ್ಯಗಳ ಪೂರೈಕೆ ಮೂಲಕ ರೈತರ ಆರ್ಥಿಕ ಭದ್ರತೆಯನ್ನು ವೃದ್ಧಿಸುವುದು ಅವಶ್ಯಕ. ರೈತನು ಬಾಳಿದಾಗ ಮಾತ್ರವಷ್ಟೇ ದೇಶ ಬಾಳುತ್ತದೆ ಎಂಬ ಸತ್ಯವನ್ನು ಮರೆಯಬಾರದು.

ಕೇಶವ ಕಟ್ಟಿಮನಿ
ಕೃಷಿ, ಪುಸ್ತಕ ಓದುಗ,
ಫೀಲ್ಡ್ ಕೋರ್ಡಿನೇಟರ್,
ಕೊಪ್ಪಳ ಮತ್ತು ಬಳ್ಳಾರಿ, ಮಾಸ್ ಮೀಡಿಯಾ ಫೌಂಡೇಶನ್