ಮೊಬೈಲ್ ಗೇಮಿಂಗ್‌ನಂಥ ಆಧುನಿಕತೆ ಸೃಷ್ಟಿಸಿದ ಮೌಢ್ಯಗಳಿಗೆ ಯುವ ಸಮೂಹ ಬಲಿಯಾಗದಿರಲಿ. ನಮ್ಮ ಓದು ಅಧ್ಯಯನಗಳು ನಮ್ಮೊಳಗೆ ಸೂಕ್ಷ್ಮತೆ ಬೆಳೆಸುತ್ತವೆ. ಆತ್ಮವಿಶ್ವಾಸ ಮೂಡಿಸುತ್ತವೆ. ಸ್ವವಿಮರ್ಶೆ ಹಾಗೂ ಲೋಕ ವಿಮರ್ಶೆಯ ಗುಣ ಸೃಷ್ಟಿಸುತ್ತವೆ ಎಂದು ಶ್ರೀ ಬಸವೇಶ್ವರ ಪದವಿ ಕಾಲೇಜು ಅಧ್ಯಾಪಕ ಡಾ.ಭೀಮಾಶಂಕರ ಬಿರಾದಾರ್ ಹೇಳಿದರು.
ಬೀದರ್ ವಿಶ್ವವಿದ್ಯಾಲಯದ ಸಹಯೋಗದಲ್ಲಿ ದೊಡ್ಡಪ್ಪ ಅಪ್ಪ ಬಿಸಿಎ ಕಾಲೇಜು ವತಿಯಿಂದ ಎಸ್ಎಸ್‌ಕೆಬಿ ಕಾಲೇಜಿನಲ್ಲಿ ಸೋಮವಾರ ನಡೆದ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರದಲ್ಲಿ ಭಾರತ ನಿರ್ಮಾಣದಲ್ಲಿ ಯುವಕರ ಪಾತ್ರ ಕುರಿತು ಮಾತನಾಡಿದರು .
‘ಸಾಮಾಜಿಕ ಜಾಲತಾಣ ಗೀಳು ರೋಗ, ಖಿನ್ನತೆ ಉಂಟುಮಾಡಿ ಆತ್ಮಹತ್ಯೆಗೆ ಕಾರಣವಾಗಿವೆ. ಯುವ ಸಮೂಹ ನಿತ್ಯ ಕ್ರೀಯಾಶೀಲರಾಗಿರುವ ದಾರಿ ಕಂಡುಕೊಳ್ಳಬೇಕು. ಲೋಕದ ಕ್ರೀಯಾಶೀಲತೆ ಸೃಜನಶೀಲ ಕೆಲಸಗಳ ಕಟ್ಟುವಿಕೆಯಲ್ಲಿ ಅಡಗಿದೆ. ಏಕಾಂತವೂ ಲೋಕಾಂತದ ಅರಿವಿಗೆ ದಾರಿಯಾಗಿದೆʼ ಎಂದರು.
‘ಬುದ್ಧ, ವಚನಕಾರರು, ಸಾಹಿತಿಗಳು ಈ ದೇಶವನ್ನು ವೈಚಾರಿಕವಾಗಿ ಕಟ್ಟಿದ್ದಾರೆ. ಗಾಂಧಿ, ವಿವೇಕಾನಂದರು, ಅಂಬೇಡ್ಕರ್, ಲೋಹಿಯಾ ಮೊದಲಾದವರು ಜಾತ್ಯತೀತ ಮತ್ತು ಪ್ರಜಾಪ್ರಭುತ್ವದ ನಾಡು ಕಟ್ಟಿದ್ದಾರೆ. ಹಲವಾರು ವಿಜ್ಞಾನಿಗಳು ವೈಜ್ಞಾನಿಕವಾಗಿ ವಿಶ್ವವನ್ನು ಕಟ್ಟಿಕೊಟ್ಟಿದ್ದಾರೆ. ಈ ಎಲ್ಲವನ್ನೂ ಅರಿಯುವ ವ್ಯವಧಾನ ಮತ್ತು ಸಹನೆ ಯುವಶಕ್ತಿಯಲ್ಲಿ ಇರಬೇಕು’ ಎಂದರು.
ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಸಂತೋಷ ಕೊರಾಳೆ ಮಾತನಾಡಿ, ‘ಆಡಳಿತಾತ್ಮಕ ಹಾಗೂ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಯುವ ಸಮುದಾಯ ಸಿದ್ಧತೆ ನಡೆಸಬೇಕು. ಯುಪಿಎಸ್ಸಿ ಹಾಗೂ ಕೆಎಎಸ್ ಪರೀಕ್ಷೆ ಹೆಚ್ಚಾಗಿ ಬರೆಯುವುದು ಬಿಎ, ಬಿಎಸ್ಸಿ, ಬಿಕಾಂ ಪದವಿ ವಿದ್ಯಾರ್ಥಿಗಳು. ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಕೀಳರಿಮೆ ಬಿಟ್ಟರೆ ಯಶಸ್ಸು ಸಾಧ್ಯ’ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಲ್ಯಾಣಪ್ಪಾ ನಾವದಗಿ ಮಾತನಾಡಿ, ‘ತಂತ್ರಜ್ಞಾನದ ದುರುಪಯೋಗ ದೇಶಕ್ಕೆ ಅಪಾಯ ತರುತ್ತದೆ. ಅದರ ಸದ್ಬಳಕೆಗೆ ಯುವ ಸಮುದಾಯ ಕಾಳಜಿ ತೋರಬೇಕು. ಸಮಾಜಕ್ಕೆ ಒಳ್ಳೆಯದನ್ನು ಮಾಡುವ ಮೂಲಕ ಯುವಕರು ದೇಶದ ಭವಿಷ್ಯ ರೂಪಿಸಬೇಕು’ ಎಂದರು.
ಎಸ್ಎಸ್ ಕೆಬಿ ಕಾಲೇಜು ಪ್ರಾಚಾರ್ಯ ಡಾ. ಬಸವರಾಜ ಎವಲೆ, ದೊಡ್ಡಪ್ಪ ಅಪ್ಪ ಬಿಸಿಎ ಕಾಲೇಜು ಪ್ರಾಚಾರ್ಯ ಲೋಕೇಶ ಮನ್ನಾಳೆ
ಎನ್ನೆಸ್ಸೆಸ್ ಅಧಿಕಾರಿಗಳಾದ ಡಾ.ಸುರೇಶ ಎಚ್. ಆರ್, ಮಹಾದೇವ ದೇಗಾಂವ್, ಶಾಂತಕುಮಾರ ಭೂರೆ, ಪ್ರಾಧ್ಯಾಪಕರಾದ ಪ್ರೊ. ವಿಠೋಬಾ ಡೊಣ್ಣೇಗೌಡರು, ಡಾ.ರಮೇಶ ಕೆ. ಬಿ, ಭೀಮಾಶಂಕರ ಪೂಜಾರಿ, ವಿನಾಯಕ ಮುಳ್ಳೂರು, ಶಿಲ್ಪಾರಾಣಿ ಮಠಪತಿ ಸೇರಿದಂತೆ ಹಲವರಿದ್ದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಸ್ವಾವಲಂಬಿ ಬದುಕಿಗೆ ಮನರೇಗಾ ಬಲ: ಬ್ಯಾಂಕ್ ಮ್ಯಾನೇಜರ್ ಹುದ್ದೆ ತೊರೆದು ಕುರಿ ಸಾಕಾಣಿಕೆಯತ್ತ ಪದವೀಧರ
ಅಶ್ವಿನಿ ನಾಗರಾಳೆ ಅತಿಥಿ ಪರಿಚಯಿಸಿದರು. ಪ್ರೀತಿ ಪವಾರ್ ಸ್ವಾಗತಿಸಿದರು. ಜ್ಯೋತಿ ಪೂಜಾರಿ ನಿರೂಪಿಸಿದರು. ರಾಮಲಿಂಗ ವಂದಿಸಿದರು.