ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕು ಹಳ್ಳಿಮೈಸೂರಿನಲ್ಲಿ, ಹಾಸನ ವಿಶ್ವ ವಿದ್ಯಾನಿಲಯ ಘಟಕ ಕಾಲೇಜಿನಲ್ಲಿ ಪರಿಶಿಷ್ಟ ಜಾತಿ(ಎಸ್.ಸಿ) ಸಮುದಾಯಕ್ಕೆ ಸೇರಿದ ವ್ಯಕ್ತಿಗೆ ನಿಂದನೆ ಖಂಡಿಸಿ ಡಿಎಚ್ಎಸ್ ವತಿಯಿಂದ ಸೋಮವಾರ ಪತ್ರಿಕಾ ಗೋಷ್ಠಿ ನಡೆಸಲಾಯಿತು.
ಹಳ್ಳಿಮೈಸೂರಿನಲ್ಲಿರುವ ವಿಶ್ವ ವಿದ್ಯಾನಿಲಯ ಘಟಕ ಕಾಲೇಜಿನಲ್ಲಿ ಪರಮೇಶ್ ಜಿ.ಕೆ ಎಂಬುವವರು ಕಳೆದ 4 ವರ್ಷಗಳಿಂದ ಪರಿಚಾರಕರಾಗಿ (ಅಟೆಂಡರ್) ಕಾರ್ಯ ನಿರ್ವಹಿಸುತ್ತಿದ್ದಾರೆ. ಕಾಲೇಜಿನಲ್ಲಿ ಅಥಿತಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿರುವ ಕವಿತಾ ಬಿ.ಡಿ ಮತ್ತು ಡಾ. ಚಂದ್ರಶೇಖರ್ ಎಚ್.ಆರ್ ಎಂಬುವವರು ಹಲವು ತಿಂಗಳುಗಳಿಂದ ಪರಮೇಶ್ ರವರು ಪರಿಶಿಷ್ಟ ಜಾತಿಯ ದಲಿತ ಸಮುದಾಯಕ್ಕೆ ಸೇರಿದವರು ಎಂಬ ಕಾರಣಕ್ಕೆ ಕಾಲೇಜಿನಲ್ಲಿ ಮದ್ಯಾಹ್ನ ಊಟದ ಸಂದರ್ಭಗಳಲ್ಲಿ ಜೊತೆಯಲ್ಲೇ ಒಟ್ಟಿಗೆ ಕೂತು ಊಟ ಮಾಡುವುದನ್ನು ಸಹಿಸದೆ, ಹಲವು ನೆಪಗಳನ್ನೊಡ್ಡಿ ಪರಮೇಶ್ ಊಟ ಮಾಡುವುದನ್ನು ತಪ್ಪಿಸಿರುತ್ತಾರೆ.
ಹಾಗೆಯೇ, ನಾಯಿಗೆ ನಿಂದಿಸುವ ನೆಪದಲ್ಲಿ ಬೈಯುವುದಲ್ಲದೆ. ನಾವು, ಒಬ್ಬ ಎಸ್.ಸಿ (ಪರಿಶಿಷ್ಟ ಜಾತಿ) ಯವನ ಜೊತೆ ಕೂರಬೇಕಾ ಎಂದು ಸಾರ್ವಜನಿಕವಾಗಿ ಅವರಿವರ ನೆಪದಲ್ಲಿ ನಿಂದಿಸಿ, ಜಾತಿಯತೆ ಅಸ್ಪೃಶ್ಯತೆ ಆಚರಣೆ ಮಾಡಿದ್ದಾರೆ. ಈ ಬಗ್ಗೆ ದಿನಾಂಕ: 20/03/2025 ರಂದು ಕವಿತ ಮತ್ತು ಚಂದ್ರಶೇಖರ್, ಪರಮೇಶ್ ಎಂಬ ವ್ಯಕ್ತಿಯ ಮೇಲೆ ಜಾತಿಯ ಹೆಸರು ಹಿಡಿದು ಅಪಮಾನಿಸಿ ಮಾತನಾಡಿದ್ದಾರೆ ಎಂದು ಡಿಎಚ್ಎಸ್ ಪೃಥ್ವಿ ತಿಳಿಸಿದರು.
ಈ ಎಲ್ಲಾ ಬೆಳವಣಿಗೆಗಳಿಂದ ನೊಂದ ಪರಮೇಶ್ ರವರು ಹಾಸನ ವಿಶ್ವ ವಿದ್ಯಾನಿಲಯದ ಕುಲ ಸಚಿವರಿಗೆ ಪತ್ರ ಬರೆದು, ಕವಿತ.ಬಿ.ಡಿ ಮತ್ತು ಡಾ.ಚಂದ್ರಶೇಖರ್ ಎಚ್. ಆರ್. ಎಂಬುವವರ ಮೇಲೆ 20.03.2025 ರಂದು ಹಳ್ಳಿ ಮೈಸೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದ್ದು, ಎಫ್ಐಆರ್ ಮಾಡಲಾಗಿರುತ್ತದೆ. ಅರಕಲಗೂಡು ಶಾಸಕ ಎ. ಮಂಜು ರವರು ಕಾಲೇಜಿಗೆ ಭೇಟಿ ನೀಡಿ, ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುವ ಬದಲು ಜಾತಿ ನಿಂದನೆಗೆ ಒಳಗಾಗಿ ನೊಂದ ಪರಮೇಶ್ ಎಂಬುವವರ ಮೇಲೆ ದಬ್ಬಾಳಿಕೆಯ ಮಾತುಗಳನ್ನಾಡಿ, ದೂರನ್ನು ಹಿಂಪಡೆಯುವಂತೆ ಬೆದರಿಕೆ ಒಡ್ಡಿರುವುದು ಅತ್ಯಂತ ಖಂಡನೀಯವಾಗಿದೆ ಎಂದು ಪೃಥ್ವಿ ತಿಳಿಸಿದರು.
ಈ ಘಟನೆಗೆ ಕುರಿತು ವಿ.ವಿ ಕೇಂದ್ರದಿಂದ ಯಾರಿಗೂ ನೋಟೀಸ್ ನೀಡದೇ, ಯಾವುದೇ ವಿಚಾರಣೆ ನಡೆಸದೆ ಹಾಗೂ ಈ ಬಗ್ಗೆ ಸರಿಯಾದ ಪೊಲೀಸ್ ತನಿಕೆ ನಡೆಸದಿರುವುದು ಅತ್ಯಂತ ನಿರ್ಲಕ್ಷ್ಯತನವಾಗಿರುತ್ತದೆ. ಇದು ವಿದ್ಯಾರ್ಥಿಗಳ ನಡುವೆ, ಶೈಕ್ಷಣಿಕ ವಲಯದಲ್ಲಿ ಕೆಟ್ಟ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಪಾಠ ಹೇಳುವ ಉಪನ್ಯಾಸಕರೇ ಈ ರೀತಿಯಲ್ಲಿ ಅನಾಗರೀಕವಾಗಿ ಅಸ್ಪೃಶ್ಯತೆ, ಜಾತಿ ತಾರತಮ್ಯ ಮಾಡಿರುವುದು ಅತ್ಯಂತ ದುರಂತದ ಸಂಗತಿ ಮತ್ತು ನಾಗರೀಕ ಸಮಾಜ ತಲೆ ತಗ್ಗಿಸುವಂತಹದ್ದಾಗಿರುತ್ತದೆ.
ಇದನ್ನೂ ಓದಿದ್ದೀರಾ?ಹಾಸನ l ಆನೆ ದಾಳಿ: ತೋಟದ ಮಾಲೀಕ ಸಾವು
ಈ ಘಟನೆಯನ್ನು ಹಾಗೂ ಶಾಸಕರಾದ ಎ. ಮಂಜುರವರು ಹಾಗು ಹಾಸನ ವಿ.ವಿ ಆಡಳಿತ ಮಂಡಳಿ ತಪ್ಪಿತಸ್ಥರ ಪರವಾಗಿರುವುದನ್ನು ಡಿಎಚ್ಎಸ್ ವಿರೋಧಿಸುತ್ತದೆ. ಈ ವೇಳೆ ಪೃಥ್ವಿ ಎಂ.ಜಿ, ರಾಜು ಸಿಗರನಹಳ್ಳಿ, ಮೀನಾಕ್ಷಿ ಎಚ್.ಟಿ, ಪ್ರಸನ್ನ ಕುಮಾರ್ ಸಿ.ಕೆ ಇದ್ದರು.
