ವಿವಾಹೇತರ ಸಂಬಂಧ ಶಂಕೆ ಹಿನ್ನೆಲೆಯಲ್ಲಿ ಎರಡು ವರ್ಷದ ಮಗು ಕಣ್ಣೆದುರಲ್ಲೆ ದಂಪತಿಯನ್ನು ಭೀಕರವಾಗಿ ಕೊಲೆ ಮಾಡಿರುವ ದಾರುಣ ಘಟನೆ ಬಸವಕಲ್ಯಾಣ ತಾಲ್ಲೂಕಿನ ಕೊಹಿನೂರು ಪಹಾಡ ಬಳಿ ಮಂಗಳವಾರ ನಡೆದಿದೆ.
ಬಸವಕಲ್ಯಾಣ ತಾಲ್ಲೂಕಿನ ಜಾಫರವಾಡಿ ನಿವಾಸಿ ರಾಜಕುಮಾರ್ ಕೊಳಸೂರೆ (28), ಸಾರಿಕಾ (23) ಕೊಲೆಯಾದ ದಂಪತಿ. ಅದೇ ತಾಲ್ಲೂಕಿನ ಯರಂಡಗಿ ಗ್ರಾಮದ ದತ್ತಾತ್ರೇಯ ಬಾಲೆ ಹಾಗೂ ತುಕಾರಾಮ ಚಿಟ್ಟಂಪಲ್ಲೆ ಕೊಲೆಗೈದದವರು.
ಕೊಲೆಯಾದ ರಾಜಕುಮಾರ್ ಆರೋಪಿ ದತ್ತಾತ್ರೇಯ ಅವರ ಸಹೋದರಿ ಜೊತೆ ವಿವಾಹೇತರ ಸಂಬಂಧ ಹೊಂದಿದ್ದು , ಅಲ್ಲದೇ ಸಾಮಾಜಿಕ ಜಾಲತಾಣದಲ್ಲಿ ಇಬ್ಬರು ಜೊತೆಗಿದ್ದ ಫೋಟೋಗಳನ್ನು ರಾಜಕುಮಾರ್ ಶೇರ್ ಮಾಡಿದ್ದ ಎಂದು ಹೇಳಲಾಗುತ್ತಿದೆ.
ರಾಜಕುಮಾರ್ ಕೊಲೆಗೆ ಸಂಚು ರೂಪಿಸಿದ ಆರೋಪಿಗಳು ಯುವತಿ ಕಡೆಯಿಂದ ಕರೆ ಮಾಡಿಸಿ ಮುಂಬೈಯಿಂದ ಊರಿಗೆ ಕರೆಸಿಕೊಂಡಿದ್ದಾರೆ. ನಿನ್ನೆ (ಏ.29) ಕೊಹಿನೂರು ಪಹಾಡ-ಲಾಡವಂತಿ ಸಮೀಪ ಮಾತನಾಡುವ ನೆಪದಲ್ಲಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಮಚ್ಚಿನಿಂದ ಕತ್ತು ಸೀಳಿ ದಂಪತಿಯನ್ನು ಹತ್ಯೆಗೈದಿದ್ದಾರೆ.
ಜೊತೆಯಲ್ಲಿದ್ದ ಎರಡು ವರ್ಷದ ಮಗು ಕಣ್ಣೆದುರೇ ಪೋಷಕರನ್ನು ಕಳೆದುಕೊಂಡು ಅನಾಥ ಶವಗಳ ಎದುರು ಕುಳಿತಿದ್ದ ದೃಶ್ಯ ಮನಕಲಕುವಂತಿತ್ತು.
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ, ಡಿವೈಎಸ್ಪಿ ಜೆ.ಎಸ್. ನ್ಯಾಮೆಗೌಡರ್, ಸಿಪಿಐ ಕೃಷ್ಣಕುಮಾರ ಪಾಟೀಲ್, ಪಿಎಸ್ಐ ಸುವರ್ಣ ಮಲ್ಲಶೆಟ್ಟಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೀದರ್ | ಸ್ವಾವಲಂಬಿ ಬದುಕಿಗೆ ಮನರೇಗಾ ಬಲ: ಬ್ಯಾಂಕ್ ಮ್ಯಾನೇಜರ್ ಹುದ್ದೆ ತೊರೆದು ಕುರಿ ಸಾಕಾಣಿಕೆಯತ್ತ ಪದವೀಧರ
ಕೊಲೆ ಆರೋಪಿಗಳಾದ ದತ್ತಾತ್ರಿ ಬಾಲೆ , ತುಕಾರಾಮ ಬಾಬುರಾವ್ ಹಾಗೂ ವಿವಾಹಿತ ಮಹಿಳೆಯೊಬ್ಬರ ವಿರುದ್ದ ಮಂಠಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೂವರನ್ನು ಬಂಧಿಸಲಾಗಿದೆ ಎಂದು ಎಸ್ಪಿ ಪ್ರದೀಪ್ ಗುಂಟಿ ತಿಳಿಸಿದ್ದಾರೆ.