ಕಾಮನ್‌ವೆಲ್ತ್ ಹಗರಣ | 15 ವರ್ಷಗಳ ಬಳಿಕ ಕೇಸ್ ಕ್ಲೋಸ್; ದೆಹಲಿ ಕೋರ್ಟ್‌ ಅಂಗೀಕರಿಸಿದ್ದೇಕೆ?

Date:

Advertisements
ತನಿಖೆಯ ಸಮಯದಲ್ಲಿ ಆರೋಪಗಳನ್ನು ದೃಢೀಕರಿಸಲಾಗಿಲ್ಲ. ಸೀಮಿತ ಸಮಯದ ಚೌಕಟ್ಟಿನೊಳಗೆ ಯಶಸ್ವಿ ಕ್ರೀಡಾಕೂಟವನ್ನು ಆಯೋಜಿಸಲು, ಉತ್ತಮ ಸೇವೆಗಳನ್ನು ನೀಡಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರಿಣತಿ ಹೊಂದಿರುವ ಕೆಲವೇ ಕೆಲವು ಸೇವಾ ಪೂರೈಕೆದಾರರನ್ನು ನೇಮಿಸಿಕೊಳ್ಳಲು ಪ್ರಮಾಣಿತ ಕಾರ್ಯವಿಧಾನವನ್ನು ಅಳವಡಿಸಿಕೊಳ್ಳಲಾಗಿದೆ ಎಂಬುದನ್ನು ನ್ಯಾಯಾಲಯ ಗಮನಿಸಿದೆ

2010ರಲ್ಲಿ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟದ ಆಯೋಜನೆಯಲ್ಲಿ ನಡೆದಿದೆ ಎನ್ನಲಾಗಿದ್ದ ಹಗರಣದ ಪ್ರಕರಣವನ್ನು ಈಗ ಮುಕ್ತಾಯಗೊಳಿಸಲು ಜಾರಿ ನಿರ್ದೇಶನಾಲಯ (ಇಡಿ) ವರದಿ ಸಲ್ಲಿಸಿದೆ. 15 ವರ್ಷಗಳ ಆರೋಪ, ತನಿಖೆಯ ಬಳಿಕ ಪ್ರಕರಣವನ್ನು ಮುಕ್ತಾಯಗೊಳಿಸಲು ಇಡಿ ಸಲ್ಲಿಸಿದ ವರದಿಯಲ್ಲಿ ದೆಹಲಿ ವಿಶೇಷ ನ್ಯಾಯಾಲಯವು ಅಂಗೀಕರಿಸಿದೆ. ಅಂದಿನ ಕ್ರೀಡಾಕೂಟದ ಆಯೋಜನಾ ಸಮಿತಿಯ ಅಧ್ಯಕ್ಷರಾಗಿದ್ದ ಕಾಂಗ್ರೆಸ್‌ ನಾಯಕ ಸುರೇಶ್ ಕಲ್ಮಾಡಿ ಮತ್ತು ಸಮಿತಿಯ ಆಗಿನ ಪ್ರಧಾನ ಕಾರ್ಯದರ್ಶಿ ಲಲಿತ್ ಭಾನೋಟ್ ಈಗ ದೋಷಮುಕ್ತರಾಗಿದ್ದಾರೆ.

ಅಂದಹಾಗೆ, ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರವು 2010ರಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಕಾಮನ್‌ವೆಲ್ತ್‌ ಕ್ರೀಡಾಕೂಟವನ್ನು ಆಯೋಜಿಸುವ ಹೊಣೆ ಹೊತ್ತಿತ್ತು. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 2010ರ ಅಕ್ಟೋಬರ್ 3ರಿಂದ 14ರವರೆಗೆ 11 ದಿನಗಳ ಕ್ರೀಡಾಕೂಟವನ್ನು ಆಯೋಜಿಸಿತ್ತು.

ಕ್ರೀಡಾಕೂಟದ ಆಯೋಜನೆ ವೇಳೆ ಸಮಯಾವಧಿಯಲ್ಲಿನ ವಿಳಂಬವನ್ನು ಪೂರೈಸಲು ಸರ್ಕಾರಿ ಕಾರ್ಯವಿಧಾನಗಳನ್ನು ಪಾಲಿಸಲಾಗಿಲ್ಲ ಎಂದು ‘ಕಂಟ್ರೋಲರ್ ಅಂಡ್ ಆಡಿಟರ್ ಜನರಲ್ ಆಫ್ ಆಡಿಟರ್’ (ಸಿಎಜಿ) ವರದಿಯು ಆರೋಪಿಸಿತ್ತು.

Advertisements

ಕ್ರೀಡಾಕೂಟದ ಆಯೋಜನೆಯಲ್ಲಿ ನೀಡಲಾಗಿದ್ದ ಎರಡು ಒಪ್ಪಂದಗಳು- 1. ಕ್ರೀಡಾ ಕಾರ್ಯಪಡೆ ಸೇವೆಗಳು (GWS), 2. ಕ್ರೀಡಾ ಯೋಜನೆ ಮತ್ತು ಅಪಾಯ ನಿರ್ವಹಣಾ ಸೇವೆಗಳಿಗೆ (GPPRMS) ಸಂಬಂಧಿಸಿದ ಗುತ್ತಿಗೆಗಳು- ಈ ಆರೋಪದ ಪ್ರಮುಖ ಅಂಶಗಳಾಗಿದ್ದವು. ಈ ಒಪ್ಪಂದಗಳ ಮೂಲಕ ‘ಅನಗತ್ಯ ಆರ್ಥಿಕ ಲಾಭ’ ಪಡೆಯಲು ಯತ್ನಿಸಿದ್ದಾರೆ. ಪರಿಣಾಮವಾಗಿ, ಕ್ರೀಡಾಕೂಟ ಸಂಘಟನಾ ಸಮಿತಿಗೆ 30 ಕೋಟಿ ರೂ. ನಷ್ಟವನ್ನುಂಟು ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಆರೋಪಗಳ ಹಿನ್ನೆಲೆಯಲ್ಲಿ ಕೇಂದ್ರೀಯ ತನಿಖಾ ದಳ (ಸಿಬಿಐ) ಹಲವಾರು ಎಫ್‌ಐಆರ್‌ಗಳನ್ನು ದಾಖಲಿಸಿತ್ತು.

2012ರ ಆಗಸ್ಟ್‌ನಲ್ಲಿ ಕಲ್ಮಾಡಿ, ಸಿಡಬ್ಲ್ಯೂಜಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿ.ಕೆ ಗೌತಮ್, ಸಿಡಬ್ಲ್ಯೂಜಿ ಖಜಾಂಚಿ ಎ.ಕೆ.ಮಟ್ಟೂ, ಕ್ರೀಡಾಕೂಟದ ಆಯೋಜನಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಲಲಿತ್ ಭಾನೋಟ್, ಈವೆಂಟ್ ನಾಲೆಡ್ಜ್ ಸರ್ವಿಸ್ (ಇಕೆಎಸ್) ಸ್ವಿಟ್ಜರ್‌ಲ್ಯಾಂಡ್‌ನ ಸಿಇಒ ಕ್ರೇಗ್ ಗಾರ್ಡನ್ ಮೆಲಾಚೆ ಹಾಗೂ ಇತರ ಅಪರಿಚಿತ ವ್ಯಕ್ತಿಗಳ ವಿರುದ್ಧ ಸಿಬಿಐ ಎಫ್‌ಐಆರ್ ದಾಖಲಿಸಿತ್ತು. ಬಳಿಕ, 2013ರಲ್ಲಿ ಅದೇ ಆರೋಪಿಗಳ ವಿರುದ್ಧ ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಹಣ ವರ್ಗಾವಣೆ ತಡೆ ಕಾಯ್ದೆ (PMLA) ಅಡಿಯಲ್ಲಿ ಇಡಿ ಕೂಡ ಪ್ರಕರಣ ದಾಖಲಿಸಿಕೊಂಡಿತ್ತು.

ಇದನ್ನು ಓದಿದ್ದೀರಾ?: ಸಿಂಧು ಜಲ ಒಪ್ಪಂದ ಸ್ಥಗಿತವು ಭಾರತಕ್ಕೇ ಹಾನಿಕಾರಕ; ಯಾಕೆ ಗೊತ್ತೇ?

ಪ್ರಕರಣದ ತನಿಖೆ ನಡೆಸಿದ್ದ ಸಿಬಿಐ, ಆರೋಪವನ್ನು ಸಾಬೀತು ಮಾಡಲು ಯಾವುದೇ ಸಾಕ್ಷ್ಯಾಧಾರ, ಪುರಾವೆಗಳಿಲ್ಲವೆಂದು ಹೇಳಿತ್ತು. ಪ್ರಕರಣ ದಾಖಲಾದ ಎರಡು ವರ್ಷಗಳಿಗಿಂತಲೂ ಕಡಿಮೆ ಅವಧಿಯಲ್ಲಿ, ಅಂದರೆ, 2014ರ ಜನವರಿಯಲ್ಲಿಯೇ ಸಿಬಿಐ ಪ್ರಕರಣದ ಮುಕ್ತಾಯ ವರದಿ ಸಲ್ಲಿಸಿತ್ತು. ಸಿಬಿಐ ವರದಿಯನ್ನು ಪರಿಶೀಲಿಸಿದ ಬಳಿಕ 2016ರಲ್ಲಿ ನ್ಯಾಯಾಲಯವು ವಿಚಾರಣೆಯನ್ನು ಮುಕ್ತಾಯಗೊಳಿಸಿತು. ಪ್ರಕರಣದ ತನಿಖೆಯನ್ನು ಸಿಬಿಐ ಕೈಬಿಟ್ಟಿತು.

ಸಿಬಿಐನಿಂದ ಮುಕ್ತಾಯದ ವರದಿ ಸ್ವೀಕರಿಸಿ, 2016ರಲ್ಲಿ ಮುಕ್ತಾಯ ಆದೇಶ ನೀಡಿದ ನ್ಯಾಯಾಲಯವು, “ತನಿಖೆಯ ಸಮಯದಲ್ಲಿ ಆರೋಪಗಳನ್ನು ದೃಢೀಕರಿಸಲಾಗಿಲ್ಲ. ತಾಂತ್ರಿಕ ವಿಶೇಷಣಗಳನ್ನು ಒಳಗೊಂಡ ಗುಣಮಟ್ಟದ ಸೇವೆಯನ್ನು ಒದಗಿಸಲು, ಸೀಮಿತ ಸಮಯದ ಚೌಕಟ್ಟಿನೊಳಗೆ ಯಶಸ್ವಿ ಕ್ರೀಡಾಕೂಟವನ್ನು ಆಯೋಜಿಸಲು, ಉತ್ತಮ ಸೇವೆಗಳನ್ನು ನೀಡಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರಿಣತಿ ಹೊಂದಿರುವ ಕೆಲವೇ ಕೆಲವು ಸೇವಾ ಪೂರೈಕೆದಾರರನ್ನು ನೇಮಿಸಿಕೊಳ್ಳಲು ಪ್ರಮಾಣಿತ ಕಾರ್ಯವಿಧಾನವನ್ನು ಅಳವಡಿಸಿಕೊಳ್ಳಲಾಗಿದೆ ಎಂಬುದನ್ನು ನ್ಯಾಯಾಲಯ ಗಮನಿಸಿದೆ” ಎಂದು ಹೇಳಿತ್ತು.

ಆದಾಗ್ಯೂ, ಇಡಿ ತನ್ನ ತನಿಖೆಯನ್ನು ಮುಂದುವರೆಸಿತ್ತು. ಇದೀಗ, ಬರೋಬ್ಬರಿ 15 ವರ್ಷಗಳ ಬಳಿಕ ಇಡಿ ಕೂಡ ಪ್ರಕರಣವನ್ನು ಮುಕ್ತಾಯಗೊಳಿಸಲು ವರದಿ ಸಲ್ಲಿಸಿದೆ. ಅಕ್ರಮವಾಗಿ ಹಣ ವರ್ಗಾವಣೆ ಆಗಿದೆ ಎಂಬುದನ್ನು ಹಣ ವರ್ಗಾವಣೆ ತಡೆ ಕಾಯ್ದೆ (PMLA) ಅಡಿಯಲ್ಲಿ ಸಾಬೀತು ಮಾಡಲು ಯಾವುದೇ ಆಧಾರವಿಲ್ಲ. ಯಾವುದೇ ಅಪರಾಧ ನಡೆದಿದೆ ಎಂಬುದನ್ನು ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಆರೋಪಿಗಳು ಯಾವುದೇ ಆಪಾದಿತ ಅಪರಾಧ ಎಸಗಿದ್ದಾರೆ ಎಂಬುದಕ್ಕೆ ಪುರಾವೆಗಳಿಲ್ಲ ಎಂದು ಇಡಿ ವರದಿಯಲ್ಲಿ ಉಲ್ಲೇಖಿಸಿದೆ.

ಇದನ್ನು ಓದಿದ್ದೀರಾ?: ಕಾಮನ್‌ವೆಲ್ತ್‌ ಹಗರಣ | ಪ್ರಕರಣ ಮುಕ್ತಾಯಕ್ಕೆ ಇಡಿ ವರದಿ; ಮೋದಿ-ಕೇಜ್ರಿ ಕ್ಷಮೆಯಾಚನೆಗೆ ಕಾಂಗ್ರೆಸ್‌ ಆಗ್ರಹ

ಕಳೆದ ಸೋಮವಾರ (2025 ಏಪ್ರಿಲ್ 28) ಇಡಿ ಸಲ್ಲಿಸಿದ ಮುಕ್ತಾಯ ವರದಿಯನ್ನು ವಿಶೇಷ ನ್ಯಾಯಾಧೀಶ ಸಂಜೀವ್ ಅಗರ್ವಾಲ್ ಅವರು ಸ್ವೀಕರಿಸಿದ್ದಾರೆ ಮತ್ತು ಅಂಗೀಕರಿಸಿದ್ದಾರೆ. ನ್ಯಾಯಾಧೀಶರ ಆದೇಶದ ಮೂಲಕ ಪ್ರಕರಣದ ತನಿಖೆಯನ್ನು ಇಡಿ ಮುಕ್ತಾಯಗೊಳಿಸಿದೆ.

ಇಡಿ ಸಲ್ಲಿಸಿದ ಮುಕ್ತಾಯ ವರದಿಯನ್ನು ಅಂಗೀಕರಿಸಿದ ನ್ಯಾಯಾಲಯವು, ”ಪಿಎಂಎಲ್‌ಎ-2002ರ ಸೆಕ್ಷನ್ 3ರ ಅಡಿಯಲ್ಲಿ ಯಾವುದೇ ಅಪರಾಧವನ್ನು ಸಾಬೀತು ಮಾಡಲಾಗಿಲ್ಲ. ಅಪರಾಧ ನಡೆದಿದೆ ಎಂಬುದಕ್ಕೆ ಯಾವುದೇ ದಾಖಲೆಗಳಿಲ್ಲ. ಇಡಿ ನಡೆಸಿದ ವಿವೇಚನಾಯುಕ್ತ ತನಿಖೆಗಳ ಹೊರತಾಗಿಯೂ, ಪ್ರಸ್ತುತ ಇಸಿಐಆರ್‌ಅನ್ನು (ಪ್ರಕರಣ) ಮುಂದುವರಿಸಲು ಯಾವುದೇ ಕಾರಣವಿಲ್ಲ. ಪರಿಣಾಮವಾಗಿ, ಇಡಿ ಸಲ್ಲಿಸಿದ ಮುಕ್ತಾಯ ವರದಿಯನ್ನು ಅಂಗೀಕರಿಸಲಾಗಿದೆ” ಎಂದು ಹೇಳಿದೆ.

ಆಪಾದಿತ ಕಾಮನ್‌ವೆಲ್ತ್‌ ಹಗರಣದ ಪ್ರಕರಣದ ತನಿಖೆ ನಡೆಸಿದ ಸಿಬಿಐ ಮತ್ತು ಇಡಿ ಪ್ರಕರಣವನ್ನು ಮುಕ್ತಾಯಗೊಳಿಸಿವೆ. ಯುದಹಾಗೆ, ಯುಪಿಎ ಸರ್ಕಾರದ ವಿರುದ್ಧ ಕೇಳಿಬಂದಿದ್ದ 2ಜಿ ಸ್ಪೆಕ್ಟ್ರಮ್ ಹಗರಣದ ತನಿಖೆಯನ್ನು ತನಿಖಾ ಸಂಸ್ಥೆಗಳು ಮುಕ್ತಾಯಗೊಳಿಸಿವೆ. ಹೀಗಾಗಿ, ಯುಪಿಎ ಸರ್ಕರದ ವಿರುದ್ಧ ಸದ್ದು ಮಾಡಿದ್ದ ಎರಡು ಭಾರೀ ಹಗರಣಗಳು ಸಾಬೀತಾಗದೆ, ಮುಕ್ತಾಯಗೊಂಡಿವೆ. ಇದೇ ಹಗರಣಗಳ ವಿರುದ್ಧ ಅಣ್ಣಾ ಹಜಾರೆ ನೇತೃತ್ವದಲ್ಲಿ ಭ್ರಷ್ಟಾಚಾರ ವಿರೋಧಿ ಆಂದೋಲನಗಳು ಭುಗಿಲೆದ್ದಿದ್ದವು. ಈ ಆಂದೋಲನದ ಭಾಗವಾಗಿ ಎಎಪಿ ಹುಟ್ಟಿಕೊಂಡಿತು. ಕೇಂದ್ರದಲ್ಲಿ ಬಿಜೆಪಿ ಅಧಿಕಾರ ಹಿಡಿಯಲು ಸಾಧ್ಯವಾಯಿತು. ಗಮನಾರ್ಹವೆಂದರೆ, ಈ ಭ್ರಷ್ಟಾಚಾರ ಆರೋಪಗಳನ್ನು ಮಾಡಿದ್ದ, ಕಳೆದ 11 ವರ್ಷಗಳಿಂದ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿಯೇ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಸಮಯದಲ್ಲಿ ಪ್ರಕರಣವನ್ನು ತನಿಖಾ ಸಂಸ್ಥೆಗಳು ಮುಕ್ತಾಯಗೊಳಿಸಿವೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉತ್ತರಾಖಂಡ | ಕಪಾಳ ಮೋಕ್ಷ ಮಾಡಿದ ಶಿಕ್ಷಕನಿಗೆ ಗುಂಡು ಹಾರಿಸಿದ ವಿದ್ಯಾರ್ಥಿ

ತರಗತಿಯಲ್ಲಿ ಕಪಾಳ ಮೋಕ್ಷ ಮಾಡಿದ ಕಾರಣಕ್ಕೆ ಕುಪಿತಗೊಂಡ ವಿದ್ಯಾರ್ಥಿಯೊಬ್ಬ ತನ್ನ ಶಿಕ್ಷಕನ...

ಅಯೋಧ್ಯೆ | ಆಸ್ಪತ್ರೆಗೆ ದಾಖಲಿಸಲು ನಿರಾಕರಣೆ, ತಂದೆಯ ತೋಳಿನಲ್ಲಿ ಮೃತಪಟ್ಟ ಬಾಲಕ

ತೀವ್ರವಾಗಿ ಅಸ್ಪಸ್ಥಗೊಂಡಿದ್ದ ತನ್ನ 12 ವರ್ಷದ ಪುತ್ರನನ್ನು ಸರ್ಕಾರಿ ಆಸ್ಪತ್ರೆಗೆ ಕರೆ...

ನಟಿಗೆ ಕಿರುಕುಳ ಆರೋಪ: ಕೇರಳ ಯುವ ಕಾಂಗ್ರೆಸ್ ಅಧ್ಯಕ್ಷನ ಹುದ್ದೆ ತೊರೆದ ರಾಹುಲ್ ಮಾಂಕೂಟತ್ತಿಲ್

ಕೇರಳದ ರಾಜಕೀಯದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿರುವ ಅಶ್ಲೀಲ ಸಂದೇಶ ಹಾಗೂ ದುರ್ವರ್ತನೆ...

ನ್ಯಾಯದೇಗುಲಗಳಿಗೆ ಬಲು ಇಕ್ಕಟ್ಟಾದ ಬಾಗಿಲುಗಳ ಕಟ್ಟಿದ್ದೇವೆ- ಸಿಜೆಐ

‘ಹೈಕೋರ್ಟ್ ಜಡ್ಜ್ ಗಳ ಪೈಕಿ ಮೊಂಡರು, ಹಟಮಾರಿಗಳು, ಜಂಭದ ಕೋಳಿಗಳಿದ್ದಾರೆ...ಇನ್ನು ಕೆಲವರ...

Download Eedina App Android / iOS

X