ಸುಮಾರು 34 ವರ್ಷಗಳ ಕಾಲ ವೃತ್ತಿಜೀವನ ನಡೆಸಿ, ಈ ಅವಧಿಯಲ್ಲಿ 57 ಬಾರಿ ವರ್ಗಾವಣೆಗೊಂಡು, ವಿವಿಧ ಪ್ರದೇಶಗಳಲ್ಲಿ ಪ್ರಮಾಣಿಕವಾಗಿ ಸೇವೆ ಸಲ್ಲಿಸಿದ್ದ ಹಿರಿಯ ಐಎಎಸ್ ಅಧಿಕಾರಿ ಅಶೋಕ್ ಖೇಮ್ಕಾ ಅವರಿಗೆ ಬುಧವಾರ (ಏಪ್ರಿಲ್ 30) ವೃತ್ತಿಯ ಕೊನೆಯ ದಿನ. ಇಂದು ಅವರು ನಿವೃತ್ತಿ ಹೊಂದಲಿದ್ದಾರೆ.
ಪ್ರಮಾಣಿಕ ಅಧಿಕಾರಿ ಎಂದೇ ಖ್ಯಾತಿ ಪಡೆದಿದ್ದ ಅಶೋಕ್ ಖೇಮ್ಕಾ ಅವರು 2014ರ ಡಿಸೆಂಬರ್‌ನಲ್ಲಿಯೂ ಕೊನೆಯ ಬಾರಿಗೆ ವರ್ಗಾವಣೆ ಕೊಂಡಿದ್ದರು. 34 ವರ್ಷಗಳಲ್ಲಿ ಬರೋಬ್ಬರಿ 57 ಬಾರಿ ವರ್ಗಾವಣೆಗೊಂಡಿರುವ ಅವರು ಒಂದೆಡೆ ನಿಂತು ಸೇವೆ ಸಲ್ಲಿಸಿರುವ ಸರಾಸರಿ ಕಾಲಾವಧಿ ಕೇವಲ ಐದಾರು ತಿಂಗಳು ಮಾತ್ರ.
ಅಶೋಕ್ ಅವರು 1965ರ ಏಪ್ರಿಲ್ 30ರಂದು ಕೋಲ್ಕತ್ತಾದಲ್ಲಿ ಜನಿಸಿದರು. 1988ರಲ್ಲಿ ಖರಗ್‌ಪುರ ಐಐಟಿಯಲ್ಲಿ ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್‌ನಲ್ಲಿ ಬ್ಯಾಚುಲರ್ ಆಫ್ ಟೆಕ್ನಾಲಜಿ ಪದವಿಯನ್ನು ಪಡೆದರು. ನಂತರ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ (TIFR) ನಲ್ಲಿ ಕಂಪ್ಯೂಟರ್ ಸೈನ್ಸ್‌ನಲ್ಲಿ ಪಿಎಚ್‌ಡಿ ಮತ್ತು ವ್ಯವಹಾರ ಆಡಳಿತ ಮತ್ತು ಹಣಕಾಸು ವಿಷಯದಲ್ಲಿ ವಿಶೇಷ ಎಂಬಿಎ ಪದವಿಯನ್ನು ಪಡೆದಿದರು. ಅಲ್ಲದೇ, ಸೇವೆಯಲ್ಲಿರುವಾಗಲೇ ಅವರು ಪಂಜಾಬ್ ವಿಶ್ವವಿದ್ಯಾಲಯದಿಂದ ಎಲ್‌ಎಲ್‌ಬಿಯನ್ನೂ ಪೂರ್ಣಗೊಳಿಸಿದ್ದರು.
ಅಶೋಕ್ ಖೇಮ್ಕಾ ಅವರು ಹರಿಯಾಣ ಕೇಡರ್‌ನ 1991ರ ಬ್ಯಾಚ್ ಐಎಎಸ್ ಅಧಿಕಾರಿಯಾಗಿದ್ದಾರೆ. ಅವರು 2012ರಲ್ಲಿ ರಾಬರ್ಟ್ ವಾದ್ರಾ ಅವರಿಗೆ ಸಂಬಂಧಿಸಿದ ಗುರುಗ್ರಾಮ್ ಭೂ ಒಪ್ಪಂದಕ್ಕೆ ಸಂಬಂಧಿಸಿದಂತೆ ಮಾಲಕತ್ವವನ್ನು ವರ್ಗಾಯಿಸುವ ಪ್ರಕ್ರಿಯೆಯನ್ನು ರದ್ದುಗೊಳಿಸಿ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದರು.