ಭಾರತದ ದೀರ್ಘಾವಧಿ ಶೈಕ್ಷಣಿಕ ವೀಸಾ ಹೊಂದಿರುವ ಪಾಕಿಸ್ತಾನದ ಮಹಿಳೆಯೊಬ್ಬರು ಎಂಬಿಬಿಎಸ್ ಅಧ್ಯಯನ ಮಾಡುತ್ತಿದ್ದು, ಹೀಗಾಗಿ ಅವರು ಭಾರತ ತೊರೆಯುವ ಕ್ರಮವಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ತಿಳಿಸಿದ್ದಾರೆ.
ಕಾಶ್ಮೀರದ ಪಹಲ್ಲಾಮ್ ನಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾಕರ ದಾಳಿಯ ನಂತರ ಪಾಕಿಸ್ತಾನದ ವಿರುದ್ಧ ಆಕ್ರೋಶ ಭುಗಿಲೆದ್ದಿದ್ದು, ಭಾರತ ಮತ್ತು ಪಾಕಿಸ್ಥಾನದ ನಡುವೆ ಉದ್ವಿಗ್ನತೆ ಹೆಚ್ಚಿರುವ ಹಿನ್ನೆಲೆಯಲ್ಲಿ, ‘ಭಾರತದಲ್ಲಿ ನೆಲೆಸಿರುವ ಎಲ್ಲಾ ಪಾಕಿಸ್ಥಾನಿ ಪ್ರಜೆಗಳು ಏಪ್ರಿಲ್ 27 ರೊಳಗೆ ವಾಪಸ್ ತೆರಳಬೇಕು’ ಎಂದು ಕೇಂದ್ರ ಸರ್ಕಾರ ಸೂಚನೆ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ
ಪಾಕಿಸ್ತಾನಿ ಪ್ರಜೆಗಳನ್ನು ಪತ್ತೆ ಮಾಡಿ ಅವರ ದೇಶಕ್ಕೆ ಕಳುಹಿಸಲಾಗುತ್ತಿದೆ. ಆದರೂ, ದೀರ್ಘಾವಧಿಯ ವೀಸಾ ಹೊಂದಿರುವವರಿಗೆ ವಿನಾಯಿತಿ ನೀಡಲಾಗುತ್ತಿದೆ.
ಈ ಸಂಬಂಧ ಸ್ಪಷ್ಟನೆ ನೀಡಿದ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ “ನಾವು ಗೃಹ ಸಚಿವಾಲಯ ಮತ್ತು ಸರ್ಕಾರದಿಂದ ಸುತ್ತೋಲೆ ಸ್ವೀಕರಿಸಿದ್ದೇವೆ. ಪಾಕಿಸ್ತಾನದ ಮಹಿಳೆಯೊಬ್ಬರು ಅಧ್ಯಯನಕ್ಕಾಗಿ ಕೇಂದ್ರದಿಂದ ನೀಡಲಾದ ದೀರ್ಘಾವಧಿ ವೀಸಾದಲ್ಲಿ ನೆಲೆಸಿದ್ದು, ವ್ಯಾಸಂಗ ಮಾಡುತ್ತಿದ್ದು, ಇದರ ಮಾನ್ಯತೆಯು ಆಗಸ್ಟ್ 2025 ರವರೆಗೆ ಇರುತ್ತದೆ. ಆದ್ದರಿಂದ, ಅವರ ವಿರುದ್ಧ ಯಾವುದೇ ಕ್ರಮದ ಅಗತ್ಯವಿಲ್ಲ” ಎಂದು ಸ್ಪಷ್ಟಪಡಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ದೇಶದಲ್ಲಿ ಬೌದ್ಧಿಕ ವಲಯವೂ ಕೂಡ ಜಾತಿ, ಧರ್ಮ, ಪಕ್ಷಗಳಾಗಿ ವಿಭಜಿತ ಗೊಂಡಿದೆ; ನಾಡೋಜ ಬರಗೂರು ರಾಮಚಂದ್ರಪ್ಪ.
ಕೇಂದ್ರ ಹಾಗೂ ವಿದೇಶಾಂಗ ಸಚಿವಾಲಯದ ಸುತ್ತೋಲೆಯ ಪ್ರಕಾರ, “ಪಾಕಿಸ್ತಾನಿ ನಾಗರಿಕರಿಗೆ ನೀಡಲಾದ ದೀರ್ಘಾವಧಿಯ ವೀಸಾಗಳು ಸಹ ಮಾನ್ಯವಾಗಿರುತ್ತವೆ. ರಾಜತಾಂತ್ರಿಕ (ರಾಯಭಾರ ಕಚೇರಿ) ಮತ್ತು ಅಧಿಕೃತ ವೀಸಾಗಳು ಮಾನ್ಯವಾಗಿರುತ್ತವೆ, ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಭಾರತದಿಂದ ನಿರ್ಗಮಿಸಲು ಯಾವುದೇ ಗಡುವನ್ನು ನಿರ್ಧರಿಸುತ್ತದೆ. ಹೊಸ ರಾಜತಾಂತ್ರಿಕ ಮತ್ತು ಅಧಿಕೃತ ವೀಸಾಗಳು ಅಥವಾ ದೀರ್ಘಾವಧಿಯ ವೀಸಾಗಳ ಮೇಲೆ ನಿರ್ಬಂಧಗಳು ಕಡ್ಡಾಯವಿಲ್ಲ” ಎಂದು ತಿಳಿಸಲಾಗಿದೆ.