ದೇಶಾದ್ಯಂತ ಜನಗಣತಿಯ ಜೊತೆಗೆ ಜಾತಿಗಣತಿಯನ್ನೂ ನಡೆಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಇದು ತಮ್ಮ ಬೃಹತ್ ಗೆಲುವು ಎಂದು ಜಾತಿಗಣತಿಗಾಗಿ ನಿರಂತರವಾಗಿ ಒತ್ತಾಯಿಸಿದ್ದ ವಿಪಕ್ಷಗಳು ಹೇಳಿಕೊಂಡಿವೆ. ಚುನಾವಣಾ ವಸ್ತಿಲಿನಲ್ಲಿರುವ ಬಿಹಾರದಲ್ಲಿ ಮಿತ್ರಪಕ್ಷಗಳಾದ (ಮಹಾಘಟಬಂಧನ್) ಕಾಂಗ್ರೆಸ್ ಮತ್ತು ಲಾಲು ಯಾದವ್ ಅವರ ರಾಷ್ಟ್ರೀಯ ಜನತಾದಳ (ಆರ್‌ಜೆಡಿ) ಜಾತಿಗಣತಿಗೆ ಕೇಂದ್ರ ಒಪ್ಪಿರುವುದರ ಹಿಂದೆ ತಮ್ಮ ಹೋರಾಟದ ಶ್ರಮವಿದೆ ಎಂದು ಹೇಳಿಕೊಂಡಿವೆ.
“30 ವರ್ಷಗಳ ಹಿಂದೆ ನಾವು (ಸಮಾಜವಾದಿಗಳು) ಮೀಸಲಾತಿ, ಜಾತಿ ಜನಗಣತಿ, ಸಮಾನತೆ, ಭ್ರಾತೃತ್ವ, ಜಾತ್ಯತೀತತೆ ಇತ್ಯಾದಿಗಳ ಬಗ್ಗೆ ಏನನ್ನು ಯೋಚಿಸಿದ್ದೆವೋ, ಅದನ್ನು ದಶಕಗಳ ನಂತರ ಇತರರು ಅನುಸರಿಸುತ್ತಿದ್ದಾರೆ. ಜಾತಿಗಣತಿಗೆ ಒತ್ತಾಯಿಸಿದ್ದಕ್ಕೆ ನಮ್ಮನ್ನು ‘ಜಾತಿವಾದಿಗಳು’ ಎಂದು ಕರೆದಯುತ್ತಿದ್ದವರಿಗೆ ಈಗ ಉತ್ತರ ಸಿಕ್ಕಿದೆ. ಈ ಸಂಘಿಗಳು ನಮ್ಮ ಕಾರ್ಯಸೂಚಿಗೆ ತಕ್ಕಹಾಗೆ ನೃತ್ಯ ಮಾಡುವಂತೆ ನಾವು ಮಾಡುತ್ತೇವೆ” ಎಂದು ಆರ್‌ಜೆಡಿ ಸಂಸ್ಥಾಪಕ ಲಾಲು ಪ್ರಸಾದ್ ಯಾದವ್ ಹೇಳಿದ್ದಾರೆ.
“ಇದು ನಮ್ಮ ದೊಡ್ಡ ಗೆಲುವು. ಪ್ರಧಾನಿ ನರೇಂದ್ರ ಮೋದಿ ಜಾತಿ ಜನಗಣತಿಯನ್ನು ವಿರೋಧಿಸಿದ್ದರು. ಆದರೆ, ಕೇಂದ್ರವು ಈಗ ನಮ್ಮ ಕಾರ್ಯಸೂಚಿಗೆ ತಕ್ಕಂತೆ ಕೆಲಸ ಮಾಡುತ್ತಿದೆ” ಎಂದು ಲಾಲು ಅವರ ಪುತ್ರ, ಆರ್‌ಜೆಡಿ ನಾಯಕ ತೇಜಶ್ವಿ ಯಾದವ್ ಹೇಳಿದ್ದಾರೆ.
ಈ ವರದಿ ಓದಿದ್ದೀರಾ?: ಜಾತಿಗಣತಿಗೆ ಮೋದಿ ಸರ್ಕಾರ ಒಪ್ಪಿಗೆ; ರಾಹುಲ್ ಗಾಂಧಿ ಹೋರಾಟದ ಫಲ ಎಂದ ನೆಟ್ಟಿಗರು
ಕಾಂಗ್ರೆಸ್ ಕೂಡ, ಜಾತಿಗಣತಿಯು ತನ್ನ ಹೋರಾಟದ ಸುದೀರ್ಘ ವಿಷಯವಾಗಿತ್ತು. ಇದು ತಮ್ಮ ಹೋರಾಟ ಫಲ ಎಂದು ಹೇಳಿದೆ. 2024ರ ಲೋಕಸಭಾ ಚುನಾವಣೆಗೆ ಮುನ್ನ, ಆರ್‌ಜೆಡಿ ಮತ್ತು ಸಮಾಜವಾದಿ ಪಕ್ಷದಂತಹ ಪಕ್ಷಗಳು ನಡೆಸಿದ್ದ ಜಾತಿ ಜನಗಣತಿಯ ಬೇಡಿಕೆಯನ್ನು ಕಾಂಗ್ರೆಸ್ ಕೈಗೆತ್ತಿಕೊಂಡಿತು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ನಿರಂತರವಾಗಿ ಜಾತಿಗಣತಿಗಾಗಿ ಧ್ವನಿ ಎತ್ತುತ್ತಾ ಬಂದಿದ್ದಾರೆ. ಲೋಕಸಭಾ ಚುನಾವಣೆಯ ಸಮಯದಲ್ಲೂ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶಾದ್ಯಂತ ಜಾತಿಗಣತಿಯನ್ನು ನಡೆಸುವುದಾಗಿ ಮತ್ತು ಮೀಸಲಾತಿಯ ಮಿತಿಯನ್ನು ಹೆಚ್ಚಿಸುವುದಾಗಿ ರಾಹುಲ್ ಗಾಂಧಿ ಭರವಸೆ ನೀಡಿದ್ದರು.
“ಕಾಂಗ್ರೆಸ್ ಮತ್ತು ಅದರ ಇಂಡಿಯಾ ಮೈತ್ರಿಕೂಟದ ಪಾಲುದಾರರು ಜಾತಿಗಣತಿಯನ್ನು ಕೇವಲ ರಾಜಕೀಯ ಸಾಧನವಾಗಿ ಬಳಸಿಕೊಂಡಿದ್ದಾರೆ. 2010ರಲ್ಲಿ ಜಾತಿಗಣತಿಗೆ ಸಂಪುಟ ಅನುಮೋದನೆ ಪಡೆದಿದ್ದರೂ ಸಹ ಹಿಂದಿನ ಯುಪಿಎ ಸರ್ಕಾರ ಜನಗಣತಿಯ ಬದಲು ಜಾತಿ ಸಮೀಕ್ಷೆಯನ್ನು ನಡೆಸಿತು” ಎಂದು ಸಚಿವ ಅಶ್ವಿನ್ ವೈಷ್ಣವ್ ಆರೋಪಿಸಿದ್ದಾರೆ.