ಮಂಗಳೂರು ನಗರದ ಹೊರವಲಯದ ವಾಮಂಜೂರಿನ ಕುಡುಪು ಎಂಬಲ್ಲಿ ಕೇರಳದ ಮುಸ್ಲಿಂ ಯುವಕ ಅಶ್ರಫ್ ಅವರ ಗುಂಪು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿಂತೆ ಇಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಹರೀಶ್ ಕುಮಾರ್ ಕೆ. ಪತ್ರಿಕಾಗೋಷ್ಠಿಯನ್ನು ಕರೆದಿದ್ದರು. ಈ ಸುದ್ದಿಗೋಷ್ಠಿಯಲ್ಲಿ ಕರಾವಳಿಯ ಪತ್ರಕರ್ತರು ಕೇಳಿದ ಹಲವು ಪ್ರಶ್ನೆಗಳಿಗೆ ಉತ್ತರಿಸಲು ತಡಕಾಡಿದ್ದಲ್ಲದೇ, ಬೆವರಿಳಿಸಿದ ಬೆಳವಣಿಗೆ ನಡೆದಿದೆ.
ಸುದ್ದಿಗೋಷ್ಠಿಯ ಆರಂಭದಲ್ಲಿ ಮಾತನಾಡಿದ ಹರೀಶ್ ಕುಮಾರ್ ಕೆ., “ಜಿಲ್ಲೆಗೆ ಬಹಳಷ್ಟು ವಲಸೆ ಕಾರ್ಮಿಕರು ಕೆಲಸ ಹುಡುಕಿಕೊಂಡು ಬರುತ್ತಾರೆ. ಹೊರರಾಜ್ಯದವರು ಇಲ್ಲದೇ ಇದ್ದರೆ, ಕರಾವಳಿಯಲ್ಲಿ ಕೃಷಿ, ಕೈಗಾರಿಕೆ ಸೇರಿದಂತೆ ಯಾವ ಚಟುವಟಿಕೆಗಳೂ ನಡೆಯುವುದಿಲ್ಲ. ಈ ನಡುವೆಯೇ ಕುಡುಪುವಿನಲ್ಲಿ ಅಮಾಯಕ ಮುಸ್ಲಿಂ ಯುವಕನನ್ನು ಗುಂಪೊಂದು ಹತ್ಯೆ ಮಾಡಿದೆ. ಆ ಮೂಲಕ ಜಿಲ್ಲೆಯ ಶಾಂತಿ ಕದಡುವ ಕೆಲಸವನ್ನು ಮಾಡಿದ್ದಾರೆ” ಎಂದು ತಿಳಿಸಿದರು.

“ಬಿಜೆಪಿಯವರ ಪ್ರಚೋದನೆಯೇ ಇಂತಹ ಘಟನೆಗೆ ಕಾರಣ. ಸುಮಾರು 40ಕ್ಕೂ ಅಧಿಕ ಮಂದಿಯಿದ್ದ ಗ್ರೂಪಿಗೆ ಸ್ಥಳೀಯ ಬಿಜೆಪಿ ಮುಖಂಡ ಪಿಸ್ತೂಲ್ ರವಿ ಎಂಬಾತ ‘ತೂಪುನ ದಾದ, ಪಾಡ್‌ಲೆ ಆಯೆಗ್(ನೋಡೋದೇನು, ಹೊಡೀರಿ ಅವನಿಗೆ) ಎಂದು ತುಳುವಿನಲ್ಲಿ ಪ್ರಚೋದಿಸಿ ಯುವಕನ ಹತ್ಯೆಗೆ ಕಾರಣನಾಗಿದ್ದಾನೆ. ಈಗ 20 ಮಂದಿಯ ಬಂಧನವಾಗಿದೆ. ಪ್ರಮುಖ ಆರೋಪಿ ತನ್ನ ಮೂರೂ ಮೊಬೈಲ್ ಅನ್ನು ಆಫ್ ಮಾಡಿ, ಪರಾರಿಯಾಗಿದ್ದಾನೆ. ಆ ಯುವಕನನ್ನು ಕೊಲ್ಲುವಂತಹ ಅವಶ್ಯಕತೆ ಏನಿತ್ತು?” ಎಂದು ಕೇಳಿದರು.
“ಕ್ರಿಕೆಟ್ ಆಟಲು ಬಂದಿದ್ದವರೆಲ್ಲ ಅಮಾಯಕರು. ಅವರನ್ನು ಪ್ರಚೋದಿಸಿದ್ದರಿಂದ ಈ ರೀತಿಯ ಗುಂಪು ಹತ್ಯೆಯಾಗಿದೆ. ಬಿಜೆಪಿಯವರ ಪ್ರಚೋದನೆಯಿಂದ ಇಂದು ಸಾವಿರಾರು ಯುವಕರು ಜೈಲಿನಲ್ಲಿದ್ದಾರೆ. ಈಗ ಕುಡುಪು ಪ್ರಕರಣದಲ್ಲಿ ಬಂಧಿಸಲ್ಪಟ್ಟ ಎಲ್ಲ 20 ಮಂದಿಯೂ ಹಿಂದುಳಿದ ವರ್ಗಕ್ಕೆ ಸೇರಿದವರು. ದುಡಿದು ತಿನ್ನುವ ಯುವಕರನ್ನು ಈ ರೀತಿಯಲ್ಲಿ ಪ್ರಚೋದಿಸಿ, ಅವರ ಭವಿಷ್ಯವನ್ನೇ ಹಾಳುಗೆಡವಿದ್ದಾರೆ. ಬಂಧಿತರ ಪೈಕಿಯಲ್ಲಿ ತಮ್ಮ ಮನೆ ನಡೆಸುವವರೂ ಇರಬಹುದು. ಅವರ ಕುಟುಂಬದ ಇಂದಿನ ಪರಿಸ್ಥಿತಿಗೆ ಬಿಜೆಪಿಯೇ ಕಾರಣ” ಎಂದು ಕಾಂಗ್ರೆಸ್ ದ.ಕ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಕೆ ತಿಳಿಸಿದರು.
ಗೃಹ ಸಚಿವರಿಗೆ ‘ಪಾಕಿಸ್ತಾನ್ ಜಿಂದಾಬಾದ್’ ಮಾಹಿತಿ ಯಾರು ಕೊಟ್ಟಿದ್ದಾರೋ ಗೊತ್ತಿಲ್ಲ!
ಮಂಗಳೂರು ಗುಂಪು ಹತ್ಯೆ ಘಟನೆಗೆ ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ ಕಾರಣ ಎಂದು ಗೃಹ ಸಚಿವ ಪರಮೇಶ್ವರ್ ನಿನ್ನೆ ಹೇಳಿಕೆ ನೀಡಿದ್ದರು. ಈ ಮಾಹಿತಿ ಅವರಿಗೆ ತಲುಪಿಸಿದ್ದು ಯಾರು ಎಂದು ಪತ್ರಕರ್ತರು ಕೇಳಿದ್ದಕ್ಕೆ ಉತ್ತರಿಸಿದ ಕಾಂಗ್ರೆಸ್ ದ.ಕ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, “ಗೃಹ ಸಚಿವರಿಗೆ ಯಾರು ಮಾಹಿತಿ ಕೊಟ್ಟಿದ್ದಾರೋ ಗೊತ್ತಿಲ್ಲ. ‘ಪಾಕಿಸ್ತಾನ್ ಜಿಂದಾಬಾದ್’ ಹೇಳಿಕೆ ನನ್ನದಲ್ಲ, ಕೊಲೆ ಆರೋಪಿಗಳದ್ದು ಎಂದು ಇವತ್ತು ಸ್ಪಷ್ಟೀಕರಣ ನೀಡಿದ್ದಾರೆ. ಈ ಬಗ್ಗೆ ಅವರಿಗೆ ಯಾರು ಹೇಳಿದ್ದಾರೆ ಎಂಬುದನ್ನು ನಾನು ಕೇಳಲು ಹೋಗಿಲ್ಲ, ಅವರೂ ನನಗೆ ಹೇಳಿಲ್ಲ” ಎಂದುತ್ತರಿಸಿದರು.
ನಿಮ್ಮ ಪಕ್ಷದ ಮುಖಂಡರಿಂದಾದರೂ ಈ ಬಗ್ಗೆ ಗೃಹ ಸಚಿವರು ಕೇಳಬಹುದಿತ್ತಲ್ಲವೇ ಎಂದು ಮರುಪ್ರಶ್ನೆ ಹಾಕಿದಾಗ, “ಪಕ್ಷದ ಮುಖಂಡರಿಗಿಂತಲೂ ಪೊಲೀಸ್ ಅವರಿಂದ ಮಾಹಿತಿ ಕೇಳಿರಬಹುದು. ಯಾರಿಂದ ಅವರು ಮಾಹಿತಿ ಕೇಳಿದ್ದಾರೆಂಬುದು ಸ್ಪಷ್ಟವಾದ ಮಾಹಿತಿ ನಮಗೂ ಇಲ್ಲ” ಎಂದು ಉತ್ತರಿಸಿದರು.
ಸರ್ಕಾರದ ವೈಫಲ್ಯವಲ್ಲ, ಪೊಲೀಸ್ ಅಧಿಕಾರಿಯ ವೈಫಲ್ಯ!
ಆ ಬಳಿಕ ಈ ಗುಂಪು ಹತ್ಯೆ ಘಟನೆ ಪೊಲೀಸ್ ಇಲಾಖೆಯ ವೈಫಲ್ಯವಲ್ಲವೇ ಎಂದು ಪತ್ರಕರ್ತರೋರ್ವರು ಕೇಳಿದಾಗ, “ಇಲ್ಲ ಇದು ಪೊಲೀಸ್ ಇಲಾಖೆಯ ವೈಫಲ್ಯವಲ್ಲ. ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಕೆಳಮಟ್ಟದ ಅಧಿಕಾರಿಗಳು ಸರಿಯಾದ ಮಾಹಿತಿ ನೀಡದಿರುವುದೇ ವೈಫಲ್ಯಕ್ಕೆ ಕಾರಣ” ಎಂದಾಗ, “ಹಾಗಾದರೆ, ಇದು ಸರ್ಕಾರದ ವೈಫಲ್ಯವಲ್ಲವೇ? ಎಂದು ಪತ್ರಕರ್ತರು ಮರು ಪ್ರಶ್ನೆ ಹಾಕಿದ್ದಾರೆ.
ಇದಕ್ಕುತ್ತರಿಸಿದ ಕಾಂಗ್ರೆಸ್ ಜಿಲ್ಲಾ ಮುಖಂಡ, “ಕಮಿಷನರ್ ಅವರಿಗೆ ಮಾಹಿತಿ ಬಂದ ಬಳಿಕ ಈವರೆಗೆ 20 ಜನರನ್ನು ಬಂಧಿಸಿದ್ದಾರೆ. ಇದು ಸರ್ಕಾರದ ವೈಫಲ್ಯ ಎಂದು ನಾನು ಒಪ್ಪುವುದಿಲ್ಲ. ಪೊಲೀಸ್‌ನವರು ಕರ್ತವ್ಯಲೋಪ ಮಾಡಿದ್ದನ್ನು ನೀವು(ಮಾಧ್ಯಮದವರು) ಸರ್ಕಾರದ ವೈಫಲ್ಯ ಅಂತ ಹೇಳುವುದು ನಿಮ್ಮ ಕರ್ತವ್ಯ. ಅದರ ವಿರುದ್ಧ ನನ್ನ ಅಭಿಪ್ರಾಯವಿಲ್ಲ. ಕುಡುಪು ಗುಂಪು ಹತ್ಯೆ ಪ್ರಕರಣದಲ್ಲಿ ಮಂಗಳೂರು ಗ್ರಾಮಾಂತರ ಠಾಣೆಯ ಇನ್‌ಸ್ಪೆಕ್ಟರ್‌ರ ವೈಫಲ್ಯ ಎದ್ದು ಕಾಣುತ್ತಿವೆ. ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ನಮ್ಮ ಪಕ್ಷದಿಂದ ಗೃಹ ಸಚಿವರು ಹಾಗೂ ಸರಕಾರಕ್ಕೆ ಪತ್ರ ಬರೆದು ಮನವಿ ಮಾಡಲಾಗಿದೆ. ಇನ್ನೇನು ಮಾಡಲಿಕ್ಕಾಗುತ್ತದೆ? ಫಾಸಿ(ಗಲ್ಲು ಶಿಕ್ಷೆ) ಕೊಡಲಿಕ್ಕಾಗತ್ತಾ” ಎಂದು ಉತ್ತರಿಸಿದರು.
ಈ ಘಟನೆಗೆ ಕಮಿಷನರ್ ಕೂಡ ಕಾರಣರಲ್ಲವೇ? ಎಂದು ಕೇಳಿದಾಗ, “ಇನ್ಸ್‌ಪೆಕ್ಟರ್ ಮಾತನ್ನು ಅಷ್ಟು ಸಮಯ ನಂಬಿದ್ದು ಕಮಿಷನರ್ ಅವರದ್ದೂ ತಪ್ಪು” ಎಂದು ಹೇಳಿದರು.
ದ.ಕ.ಜಿಲ್ಲಾ ಉಸ್ತುವಾರಿ ಸಚಿವರ ‘ಅನ್ಯಕೋಮು’ ಎಂಬ ಪದ ಬಳಕೆ ಎಷ್ಟು ಸರಿ ಎಂದು ಪತ್ರಕರ್ತರು ಪ್ರಶ್ನಿಸಿದಾಗ, ಹರೀಶ್ ಕುಮಾರ್ ಸಮರ್ಪಕ ಉತ್ತರ ನೀಡದೆ ಜಾರಿಕೊಂಡದ್ದಲ್ಲದೇ, ‘ನನಗೆ ಈ ಬಗ್ಗೆ ಗೊತ್ತಿಲ್ಲ. ನಾನು ನೋಡಿಲ್ಲ’ ಎಂದಷ್ಟೇ ತಿಳಿಸಿದರು.
ಪ್ರಕರಣ ಇಷ್ಟೊಂದು ಗಂಭೀರವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರು ಎಲ್ಲಿದ್ದಾರೆ? ಎಂದು ಕೇಳಿದಾಗ, “ಒಂದು ಮರ್ಡರ್ ಆದ ಕೂಡಲೇ ಉಸ್ತುವಾರಿ ಸಚಿವರು ಸ್ಥಳಕ್ಕೆ ಬರಬೇಕೆಂಬುದು ಕಡ್ಡಾಯ ಏನೂ ಅಲ್ಲ. ಘಟನೆಯ ಬಗ್ಗೆ ಗೃಹ ಸಚಿವರಲ್ಲಿ ಮಾತನಾಡಿದ್ದಾರೆ. ಹೇಳಿಕೆ ಕೂಡ ಕೊಟ್ಟಿದ್ದಾರೆ. ಮೇ 3ನೇ ತಾರೀಕು ಜಿಲ್ಲೆಗೆ ಬರುತ್ತಾರೆ” ಎಂದು ಉತ್ತರಿಸಿದರು.
ಇದರಿಂದ ಕೆರಳಿದ ಪತ್ರಕರ್ತರು, 3ನೇ ತಾರೀಖಿಗೆ ಬಂದು ಏನು ಮಾಡ್ಲಿಕ್ಕಿದ್ದಾರೆ? ಎಂದು ಗರಂ ಆಗಿಯೇ ಪ್ರಶ್ನಿಸಿದ್ದಾರೆ. ಇದಕ್ಕುತ್ತರಿಸಿದ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಹರೀಶ್ ಕುಮಾರ್, “ಈಗ ಯುವಕನನ್ನು ಕೊಂದಾಗಿದೆಯಲ್ಲವೇ? ಕೊಂದ ಮೇಲೆ ಇವತ್ತು ಬಂದರೂ ಒಂದೇ, ನಾಳೆ ಬಂದರೆ ಒಂದೇ. ಜಿಲ್ಲೆಯವರೇ ಉಸ್ತುವಾರಿ ಸಚಿವರಾದರೇ, ಸ್ವಲ್ಪ ಜಿಲ್ಲೆಯಲ್ಲೂ ಎಲ್ಲರಿಗೂ ಸಿಗ್ತಾರೆ. ಹೊರಗಿನವರಾದ ಕಾರಣ ಇಂತಹ ಸಮಸ್ಯೆ ಉಂಟಾಗ್ತದೆ” ಎಂದು ತಿಳಿಸಿದರು.

“ಮೃತಪಟ್ಟ ಯುವಕನಿಗೆ ಸರ್ಕಾರದಿಂದ ಪರಿಹಾರ ಘೋಷಣೆ ಮಾಡುವ ಬಗ್ಗೆಯೂ ಉಸ್ತುವಾರಿ ಸಚಿವರಲ್ಲಿ ಮಾತನಾಡುತ್ತೇವೆ. ಯುವಕ ವಯನಾಡ್‌ನವನಾಗಿರುವುದರಿಂದ ಸಂಸದೆ ಪ್ರಿಯಾಂಕಾ ಗಾಂಧಿಯವರ ಗಮನಕ್ಕೂ ಬಂದಿರಬಹುದು. ಆ ಬಗ್ಗೆ ನಮಗೆ ಮಾಹಿತಿ ಇಲ್ಲ. ಅವರು ಕೂಡ ಈ ಬಗ್ಗೆ ಕ್ರಮ ತೆಗೆದುಕೊಳ್ಳಲೂಬಹುದು” ಎಂದು ಉತ್ತರಿಸಿದರು.
ಮಂಗಳೂರಿನ ಪತ್ರಕರ್ತರ ನಿರಂತರ ಪ್ರಶ್ನೆಗಳಿದ್ದ ಇಂದಿನ ಸುದ್ದಿಗೋಷ್ಠಿಯಲ್ಲಿ ‘ಥ್ಯಾಂಕ್ಯೂ’ ಎನ್ನುತ್ತಾ ಕೊನೆಗೂ, ಹಿಡಿದಿಟ್ಟಿದ್ದ ಉಸಿರನ್ನು ಬಿಟ್ಟರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ಕೆ.ಕೆ.ಶಾಹುಲ್ ಹಮೀದ್, ಸುಹೈಲ್ ಕಂದಕ್, ನವಾಝ್, ಲಾರೆನ್ಸ್ ಡಿಸೋಜ, ವಿಶ್ವಾಸ್ ಕುಮಾರ್ ದಾಸ್, ಶಬ್ಬೀರ್ ಸಿದ್ದಕಟ್ಟೆ, ಟಿ.ಕೆ.ಸುಧೀರ್, ಪ್ರಕಾಶ್ ಸಾಲ್ಯಾನ್, ಶುಭೋದಯ ಆಳ್ವ, ಹೊನ್ನಯ್ಯ ಉಪಸ್ಥಿತರಿದ್ದರು.