ಹಾಡಹಗಲೇ ಮಾಬ್ ಲಿಂಚಿಂಗ್- ಗುಂಪು ಹತ್ಯೆ ನಡೆದಾಗಲೂ ಕ್ರಮ ಕೈಗೊಳ್ಳುವುದಿರಲಿ, ಪ್ರತಿಕ್ರಿಯಿಸುವುದಕ್ಕೂ ಎರಡು ಮೂರು ದಿನ ತೆಗೆದುಕೊಂಡರೆ, ಇಲ್ಲೊಂದು ಸರ್ಕಾರವಿದೆಯೇ, ಆ ಸರ್ಕಾರ ಜೀವಂತವಿದೆಯೇ ಎಂದು ರಾಜ್ಯದ ಜನತೆ ಪ್ರಶ್ನಿಸಬೇಕಾಗಿದೆ.
ʼಮಂಗಳೂರಿನ ಹೊರವಲಯದ ಕುಡುಪು ಬಳಿ ಯುವಕನನ್ನ ಕಲ್ಲಿನಿಂದ ಹೊಡೆದು ಬರ್ಬರ ಹತ್ಯೆ ಮಾಡಿರುವ ಘಟನೆ ಅತ್ಯಂತ ಖಂಡನೀಯ. ಕ್ರಿಕೆಟ್ ಆಟ ಆಡುವ ವೇಳೆ ಆಟಗಾರರ ಗುಂಪು ಹಾಗೂ ಅನ್ಯ ಕೋಮಿನ ಯುವಕನ ನಡುವೆ ಪರಸ್ಪರ ಮಾತಿನ ಚಕಮಕಿ ನಡೆದು, ಯುವಕನ ಮೇಲೆ ಹಲ್ಲೆ ಮಾಡಲಾಗಿದೆ’ -ಇದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಅವರು ಹೇಳಿದ್ದು- ಘಟನೆ ನಡೆದು 40 ಗಂಟೆಗಳ ನಂತರ.
ದಕ್ಷಿಣ ಕನ್ನಡ ಜಿಲ್ಲೆ ಹೇಳಿಕೇಳಿ ಕೋಮುವಾದದ ಪ್ರಯೋಗಶಾಲೆ. ಇದೇ ಸಮಯದಲ್ಲಿ ಪಹಲ್ಗಾಮ್ ಉಗ್ರ ದಾಳಿ ನಡೆದಿದೆ, ಅದನ್ನು ಗೋದಿ ಮೀಡಿಯಾ ಮುಸ್ಲಿಂ ದ್ವೇಷಕ್ಕೆ ತಿರುಗಿಸುತ್ತಿದೆ. ಇಂತಹ ಸಂದಿಗ್ಧ ಸಂದರ್ಭದಲ್ಲಿ ಜಿಲ್ಲೆಯ ಸಾಮಾಜಿಕ ಸಂಕೀರ್ಣತೆಯ ಸಿಕ್ಕುಗಳನ್ನು ಅರಿಯಬೇಕಾದ್ದು ಹಾಗೂ ದಮನಿತರ, ಶೋಷಿತರ, ಅಸಹಾಯಕ ಮಹಿಳೆಯರ ಪರ ನಿಲ್ಲಬೇಕಾದ್ದು ಅಧಿಕಾರಸ್ಥರ ಮೊದಲ ಕರ್ತವ್ಯ.
ಉಸ್ತುವಾರಿ ಸಚಿವರೆಂದರೆ ಉತ್ಸವಮೂರ್ತಿಗಳಲ್ಲ; ಮೆರವಣಿಗೆ, ಸನ್ಮಾನ, ಶಂಕುಸ್ಥಾಪನೆಗಳಿಗಷ್ಟೇ ಸೀಮಿತವಲ್ಲ. ತಮ್ಮನ್ನು ಆರಿಸಿ ಆಡಳಿತ ನಡೆಸಿ ಎಂದು ಕಳಿಸಿರುವವರು ಕೇವಲ ಮೇಲ್ಜಾತಿ ಜನರಲ್ಲ. ದನಿ ಇಲ್ಲದವರ ಪರ ನಿಲ್ಲುವುದನ್ನು ಹೊಸದಾಗಿ ಹೇಳಿಕೊಡಬೇಕಾಗಿಲ್ಲ. ಬಹುಸಂಖ್ಯಾತ ಸಮುದಾಯಕ್ಕೆ ಸೇರಿದ 20-30 ಜನರ ಗುಂಪು ಒಬ್ಬ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ವ್ಯಕ್ತಿಯ ಮೇಲೆ ಬಿದ್ದು, ಬಡಿದು, ಹತ್ಯೆ ಮಾಡಿದೆ ಎಂದು ಗೊತ್ತಾದ ಮೇಲೂ, ʼಅನ್ಯ ಕೋಮಿನʼ ಎಂದು ತಿಪ್ಪೆ ಸಾರಿಸುವ ಹೇಳಿಕೆ, ಸಚಿವರಿಗೆ ಶೋಭೆ ತರುವಂಥದ್ದಲ್ಲ.
ಈ ರೀತಿಯ ಮಾಬ್ ಲಿಂಚಿಂಗ್- ಗುಂಪು ಹಲ್ಲೆ- ದೂರದ ಬಿಹಾರ ಮತ್ತು ಉತ್ತರ ಪ್ರದೇಶಗಳಲ್ಲಿ ನಡೆಯುವ ಅಮಾನವೀಯ ವಿದ್ಯಮಾನ. ಕರ್ನಾಟಕದಲ್ಲಿಯೂ ನಡೆಯುತ್ತದೆ, ನಡೆಸಿದವರ ಬಗ್ಗೆ ಮೃದು ಧೋರಣೆ ತಾಳಲಾಗುತ್ತದೆ ಎಂದರೆ, ಬಿಜೆಪಿಗೂ, ಕಾಂಗ್ರೆಸ್‌ಗೂ ವ್ಯತ್ಯಾಸವೇನು? ಹತ್ಯೆಯಾದವನು ಮುಸ್ಲಿಂ ಬದಲಿಗೆ ಹಿಂದೂ ಆಗಿದ್ದರೆ, ಏನಾಗುತ್ತಿತ್ತು? ಎನ್ನುವ ಪ್ರಶ್ನೆಗಳೂ ಎದುರಾಗುತ್ತವೆ.
ಇದನ್ನು ಓದಿದ್ದೀರಾ?: ಮಂಗಳೂರು ಗುಂಪು ಹತ್ಯೆ | ಸುದ್ದಿಗೋಷ್ಠಿಯಲ್ಲಿ ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಬೆವರಿಳಿಸಿದ ಪತ್ರಕರ್ತರು!
ಇನ್ನು ಗೃಹ ಸಚಿವರಾದ ಡಾ.ಜಿ. ಪರಮೇಶ್ವರ್ ಅವರು, ʼಪಾಕಿಸ್ತಾನ್ ಜಿಂದಾಬಾದ್ ಹೇಳಿಕೆ ನನ್ನದಲ್ಲ, ಕೊಲೆ ಆರೋಪಿಗಳದ್ದು. ಅವರು ಪೊಲೀಸರಿಗೆ ಹೇಳಿದ್ದನ್ನು ನಾನು ಹೇಳಿದ್ದೆ, ಅಷ್ಟೇ. ನನ್ನ ನಿನ್ನೆಯ ಹೇಳಿಕೆಯನ್ನು ತಿದ್ದಿದ್ದೇನೆ’ ಎಂದರು. ಇದು ಘಟನೆ ನಡೆದು 48 ಗಂಟೆಗಳ ನಂತರದ್ದು ಹಾಗೂ 72 ಗಂಟೆಗಳ ನಂತರ ತಿದ್ದಿದ್ದು.
ಮಂಗಳೂರಿನಲ್ಲಿ ನಡೆದ ಗುಂಪು ಹತ್ಯೆ ಪ್ರಕರಣಕ್ಕೆ ಬೆಂಗಳೂರಿನಲ್ಲಿ ಕೂತು, ʼಪಾಕಿಸ್ತಾನದ ಪರ ಘೋಷಣೆ ಕೂಗಿದರಂತೆ’ ಎಂದು ಖುದ್ದು ಗೃಹ ಸಚಿವರೇ ಷರಾ ಬರೆದುಬಿಟ್ಟರು. ಹತ್ಯೆಯಾದವನು ಆಡಿದ್ದಾನೆ ಎನ್ನುವುದಕ್ಕೆ ಯಾವುದೇ ಖಚಿತವಾದ ಆಧಾರವಿಲ್ಲ. ಅದನ್ನು ಯಾರೂ ಕೇಳಿಸಿಕೊಂಡಿದ್ದೂ ಇಲ್ಲ. ನಾವು ನಂಬಬೇಕಾದದ್ದು ಕೊಲೆಗಾರನ ಬಾಯಲ್ಲಿ ಬಂದ ಮಾತುಗಳನ್ನಲ್ಲ; ನ್ಯಾಯಪ್ರಕ್ರಿಯೆ, ಸತ್ಯದ ಪರಿಶೀಲನೆ ಮತ್ತು ಮಾನವೀಯ ಮೌಲ್ಯಗಳನ್ನು. ಆದರೆ, ಗೃಹ ಸಚಿವರ ನಿಲುವು, ಹೇಳಿಕೆಗಳು- ಹಿಂಸೆಯನ್ನು ಬೆಂಬಲಿಸುವಂತೆ, ಹತ್ಯೆ ಮಾಡಿದವರನ್ನು ಬಚಾವು ಮಾಡುವಂತೆ ಕಾಣತೊಡಗಿವೆ.
ನಾಳೆ, ಬಲಾಢ್ಯರು, ಬಲಿಷ್ಠರು ಗುಂಪುಗೂಡಿ ಅಸಹಾಯಕನನ್ನು ಹತ್ಯೆ ಮಾಡಿ, ʼಅವನು ಪಾಕಿಸ್ತಾನ್ ಜಿಂದಾಬಾದ್ʼ ಎಂದು ಕೂಗಿದ ಎಂದರೆ ಸಾಕಾ? ಕೊಲೆ ಮಾಡಿದವನೇ ಸಾಕ್ಷಿ, ತೀರ್ಪುಗಾರ, ಪೊಲೀಸ್, ನ್ಯಾಯಾಧೀಶನಾದರೆ, ನಮ್ಮ ಸಮಾಜದಲ್ಲಿ ನ್ಯಾಯದ ಅಸ್ತಿತ್ವವೇನು? ಕಾಯ್ದೆ, ಕಾನೂನು, ಕೋರ್ಟುಗಳೇಕೆ ಬೇಕು? ಕಾನೂನು ಮತ್ತು ಗೃಹ ಖಾತೆ ಸಚಿವರೇಕೆ ಇರಬೇಕು?
ಹಿಂದಿನ ಬಿಜೆಪಿ ಸರ್ಕಾರ ಮಾಡಿಟ್ಟ ಅಧ್ವಾನಗಳನ್ನು ಸರಿಪಡಿಸುವ ಸಲುವಾಗಿ, ಕರಾವಳಿ ಭಾಗದಲ್ಲಿ ನಡೆಯುವ ಅನೈತಿಕ ಪೊಲೀಸ್ ಗಿರಿ ತಡೆಯಲು ಆ್ಯಂಟಿ ಕಮ್ಯುನಲ್ ವಿಂಗ್ ಸ್ಥಾಪನೆ ಮಾಡುವುದಾಗಿ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದ್ದರು. ಆದರೆ, ಈಗ ಅದೇ ಕರಾವಳಿಯಲ್ಲಿ ನಡೆದಿರುವ ಗುಂಪು ಹತ್ಯೆ, ಅದನ್ನು ಗೇಲಿ ಮಾಡುವಂತಿದೆ.
ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಬ್ರಾಹ್ಮಣ ಜಾತಿಗೆ ಸೇರಿದವರು. ಗೃಹ ಸಚಿವ ಡಾ. ಜಿ. ಪರಮೇಶ್ವರ್, ಪರಿಶಿಷ್ಟ ಜಾತಿಗೆ ಸೇರಿದವರು. ಇವರಿಬ್ಬರೂ, ಯಾರನ್ನೂ ನೇರವಾಗಿ ಎದುರಿಸಿದವರಲ್ಲ, ಯಾರಿಗೂ ನೋವುಂಟು ಮಾಡಿದವರಲ್ಲ. ಆ ಕಾರಣಕ್ಕಾಗಿಯೇ ಇದ್ದೂ ಇಲ್ಲದಂತಿರುವವರು, ಹಾಗಿರುವುದೇ ಸರಿ ಎಂದುಕೊಂಡಿರುವವರು. ಅಸಹಾಯಕರು ಅತ್ತರೂ ಕೊರಗದ ಸೋಗಲಾಡಿ ಸುಭಗರು.
ಇದನ್ನು ಓದಿದ್ದೀರಾ: ಕರಾವಳಿ ಜಿಲ್ಲೆಗೂ ಕಾಲಿಟ್ಟ ಗುಂಪು ಹಲ್ಲೆ, ಹತ್ಯೆ: ಮಂಗಳೂರು ಜನತೆ ಹೇಳೋದೇನು?
ಇಂತಹವರನ್ನು ಮಂತ್ರಿಗಳನ್ನಾಗಿ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರಾದರೂ, ಮಂಗಳೂರಿನ ಗುಂಪು ಹತ್ಯೆ ಬಗ್ಗೆ ಖಡಕ್ ಕ್ರಮ ಕೈಗೊಂಡಿದ್ದಾರೆಯೇ? ಗುಂಪು ಹತ್ಯೆ ಮಾಡಿದ್ದು ತಪ್ಪು ಎಂದಿದ್ದಾರೆಯೇ? ಅವರೂ ಕೂಡ ಗೃಹ ಸಚಿವರ ಜಾಡಿಗೆ ಬಿದ್ದು, ʼಪಾಕಿಸ್ತಾನ ಪರ ಘೋಷಣೆ ಕೂಗಿದ ಆರೋಪದ ಮೇಲೆ ಗುಂಪು ಹತ್ಯೆ ಮಾಡಿದ ಪ್ರಕರಣದಲ್ಲಿ 15 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ’ ಎಂದಿದ್ದಾರೆ. ಅದೂ ಘಟನೆ ನಡೆದು 72 ಗಂಟೆಗಳ ನಂತರ.
ಇಂತಹ ಬೇಜವಾಬ್ದಾರಿ ಸಚಿವರನ್ನು ರಾಜ್ಯದ ಜನತೆ ಇಲ್ಲಿಯವರೆಗೆ ಕಂಡಿದ್ದಿಲ್ಲ. ಹಾಡಹಗಲೇ ಮಾಬ್ ಲಿಂಚಿಂಗ್- ಗುಂಪು ಹತ್ಯೆ ನಡೆದಾಗಲೂ ಕ್ರಮ ಕೈಗೊಳ್ಳುವುದಿರಲಿ, ಪ್ರತಿಕ್ರಿಯಿಸುವುದಕ್ಕೂ ಎರಡು ಮೂರು ದಿನ ತೆಗೆದುಕೊಂಡರೆ, ಇಲ್ಲೊಂದು ಸರ್ಕಾರವಿದೆಯೇ, ಆ ಸರ್ಕಾರ ಜೀವಂತವಿದೆಯೇ ಎಂದು ರಾಜ್ಯದ ಜನತೆ ಪ್ರಶ್ನಿಸಬೇಕಾಗಿದೆ.
