ಕಾರಿನ ಟಯರ್ ಬ್ಲಾಸ್ಟ್ ಆಗಿ ರಸ್ತೆ ಬದಿಯ ಮಸೀದಿಗೆ ಡಿಕ್ಕಿ ಹೊಡೆದು ಪರಿಣಾಮ ಸಮತಾ ಸೈನಿಕ ದಳದ ರಾಜ್ಯಾಧ್ಯಕ್ಷ, ದಲಿತ ಹೋರಾಟಗಾರ ಬಿ.ಚನ್ನಕೃಷ್ಣಪ್ಪ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಬೆಂ.ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನ ದಳಸಗೆರೆ ಗ್ರಾಮದವರಾದ ಇವರು, ಮದುವೆ ಕಾರ್ಯಕ್ರಮವೊಂದಕ್ಕೆ ಚಿಕ್ಕಬಳ್ಳಾಪುರ ತೆರಳಿದ್ದರು.
ಮದುವೆ ಮುಗಿಸಿ ವಾಪಾಸ್ ಬರುವಾಗ ನಂದಿ ವೈದ್ಯಕೀಯ ಕಾಲೇಜು ಸಮೀಪದ ವರ್ಲಕೊಂಡ ಬಳಿ ಇದ್ದಕ್ಕಿದ್ದಂತೆ ಕಾರಿನ ಟಯರ್ ಬ್ಲಾಸ್ಟ್ ಆಗಿ ನಿಯಂತ್ರಣ ತಪ್ಪಿ ಮಸೀದಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ಪರಿಣಾಮ ಚನ್ನಕೃಷ್ಣಪ್ಪ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಕಾರಿನ ಚಲಿಸುತ್ತಿದ್ದ ವಕೀಲೆಗೂ ಸಣ್ಣಪುಟ್ಟ ಗಾಯಗಳಾಗಿವೆ.
ದಲಿತ ಸಮುದಾಯವನ್ನೇ ತನ್ನ ಕುಟುಂಬವನ್ನಾಗಿಸಿಕೊಂಡಿದ್ದ ಚನ್ನಕೃಷ್ಣಪ್ಪ ಅವರು ಸಂಘಟನೆ ಮತ್ತು ತನ್ನ ಶಕ್ತಿಯುತ ಮಾತಿನ ಮೂಲಕ ಚಳುವಳಿಯ ಹಾದಿಯಲ್ಲಿ ಕಳೆದ ಮೂರೂವರೆ ದಶಕಗಳಿಗೂ ಹೆಚ್ಚು ಕಾಲದಿಂದಲೂ ಸಾಮಾಜಿಕ ನ್ಯಾಯದ ಪರ ಹೋರಾಟಗಳನ್ನು ರೂಪಿಸುತ್ತಿದ್ದರು. ಹೋರಾಟದ ಮೂಲಕ ದನಿ ಇಲ್ಲದ ದಮನಿತ ಸಮುದಾಯಕ್ಕೆ ದನಿಯಾಗಿದ್ದರು.
ಅನೇಕ ಸಾರ್ವಜನಿಕ ಸಂಸ್ಥೆಗಳಲ್ಲಿ ಅಮೂಲ್ಯ ಸೇವೆಯನ್ನು ಸಲ್ಲಿಸಿದ್ದ ಅವರು ಅತ್ಯಂತ ಕ್ರಿಯಾಶೀಲ ಸಮಾಜ ಸೇವಕರಾಗಿದ್ದು, ಅಪಾರ ಕುಟುಂಬದವರನ್ನು ಮತ್ತು ಬಂಧು ಮಿತ್ರರನ್ನು ಅಗಲಿದ್ದಾರೆ.
ಅವರ ನಿಧನಕ್ಕೆ ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ, ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಹಾಗೂ ದಲಿತ ಹೋರಾಟಗಾರರು ಕಂಬನಿ ಮಿಡಿದಿದ್ದಾರೆ.
ಅವರ ಹುಟ್ಟೂರಾದ ದಳಸಗೆರೆಯಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.