ಎಲ್ಪಿಜಿ ಅನಿಲ ಸೋರಿಕೆಯಿಂದ ಮನೆ ಹೊತ್ತಿ ಉರಿದಿದ್ದು, ಇಬ್ಬರು ಸಜೀವ ದಹನವಾದ ಘಟನೆ ಬೆಂಗಳೂರಿನ ನೆಲಮಂಗಲದಲ್ಲಿ ನಡೆದಿದೆ.
ನಾಗರಾಜ್ (50), ಶ್ರೀನಿವಾಸ್ (50) ಮೃತ ದುರ್ದೈವಿಗಳು. ಅವಘಡದಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ನೆಲಮಂಗಲ ಬಳಿಯ ಅಡಕಮಾರನಹಳ್ಳಿ ಓವರ್ ಟ್ಯಾಂಕ್ ಬಳಿ ಅವಘಡ ಸಂಭವಿಸಿದೆ.
ಗಂಗಯ್ಯ ಎಂಬವರಿಗೆ ಸೇರಿದ ಎರಡು ಬಾಡಿಗೆ ಮನೆ ಇವೆ. ಎರಡರಲ್ಲಿ ಒಂದು ಮನೆಯನ್ನು ನಾಗರಾಜ್ ಬಾಡಿಗೆಗೆ ಪಡೆದಿದ್ದರು. ಮೂಲತಃ ಬಳ್ಳಾರಿಯವರಾಗಿದ್ದ ನಾಗರಾಜ್ ಕುಟುಂಬ ಎರಡು ವರ್ಷದ ಹಿಂದೆ ಬಾಡಿಗೆಗೆ ಬಂದಿತ್ತು. ನಾಗರಾಜ್ ಪತ್ನಿ ಲಕ್ಷ್ಮಿ ದೇವಿ (35), ಮಕ್ಕಳಾದ ಬಸನಗೌಡ (19), ಅಭಿಷೇಕ್ ಗೌಡ (18) ವಾಸವಾಗಿದ್ದರು. ಬೆಳಗ್ಗೆ ಕೆಲಸಕ್ಕೆಂದು ತೆರಳುತ್ತಿದ್ದ ನಾಗರಾಜ್ ದೇವರಿಗೆ ದೀಪ ಹಚ್ಚಿದ್ದರು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಮರ್ಯಾದೆಗೇಡು ಹತ್ಯೆಗಳು ನಿಲ್ಲಬೇಕಿದ್ದರೆ ಜಾತಿವಿನಾಶ ಆಗಲೇಬೇಕು
ಖಾಲಿಯಾಗಿದ್ದ ಸಿಲಿಂಡರ್ ಬದಲಾಯಿಸಲು ಎರಡನೇ ಮಗ ಅಭಿಷೇಕ್ ಮುಂದಾಗಿದ್ದರು. ಈ ವೇಳೆ ಸಿಲಿಂಡರ್ನಿಂದ ಗ್ಯಾಸ್ ಲೀಕ್ ಆಗಿದ್ದು, ದೀಪದ ಬೆಂಕಿ ತಗುಲಿದೆ. ಮನೆ ಹೊತ್ತಿ ಉರಿದಿದ್ದು ನಾಗರಾಜ್, ಲಕ್ಷ್ಮಿದೇವಿ, ಬಸವನಗೌಡ, ಅಭಿಷೇಕ್ಗೂ ಬೆಂಕಿ ಅವಘಡಕ್ಕೆ ಸಿಲುಕಿದ್ದರು. ಕೂಡಲೇ ಎಲ್ಲರನ್ನೂ ಸ್ಥಳೀಯರು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದರು. ಅಭಿಷೇಕ್, ಶಿವಶಂಕರ್, ಲಕ್ಷ್ಮೀದೇವಿ ಹಾಗೂ ಬಸವ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.