ಬೀದರ್ ಜಿಲ್ಲೆಯ ಕೆಲವು ಕಡೆ ದಲಿತರ ಮೇಲೆ ಹಲ್ಲೆ ನಡೆದಿದೆ ಎಂಬ ದೂರುಗಳಿದ್ದು, ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ಇಲಾಖೆ ನೊಂದವರಿಗೆ ತಕ್ಷಣವೇ ಸೂಕ್ತ ರಕ್ಷಣೆ ನೀಡಬೇಕು ಹಾಗೂ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಸೂಚನೆ ನೀಡಿದ್ದಾರೆ.
ʼಸರ್ವ ಜನಾಂಗಕ್ಕೂ ಲೇಸು ಬಯಸಿದ ಸಮ ಸಮಾಜದ ನಿರ್ಮಾತೃ ವಿಶ್ವಗುರು ಬಸವಣ್ಣನವರು ಮತ್ತು ವಂಚಿತರಿಗೆ, ಶೋಷಿತರಿಗೆ, ದುರ್ಬಲರಿಗೆ ಸಂವಿಧಾನದ ಮೂಲಕ ಧ್ವನಿ ನೀಡಿದ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜಯಂತಿಯ ಸಂದರ್ಭದಲ್ಲಿ ಇಂತಹ ಅಹಿತಕರ ಘಟನೆಗಳು ನಡೆಯುತ್ತಿರುವ ಬಗ್ಗೆ ಅವರು ನೋವು ವ್ಯಕ್ತಪಡಿಸಿದ್ದಾರೆ.
ಕ್ರಮಕ್ಕೆ ಸೂಚನೆ:
ಜಯಂತಿ ಆಚರಣೆ, ಸಾರ್ವಜನಿಕ ಕಾರ್ಯಕ್ರಮ ಸೇರಿ ಯಾವುದೇ ಸಂದರ್ಭದಲ್ಲಿ ಯಾವುದೇ ಜನಾಂಗೀಯ ಹಲ್ಲೆ ನಡೆದು, ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗದಂತೆ ಪೊಲೀಸ್ ಇಲಾಖೆ ಮತ್ತು ಸ್ಥಳೀಯ ಆಡಳಿತ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಮುಗ್ಧ ಜನರಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರು ನಿರ್ದೇಶನ ನೀಡಿದ್ದಾರೆ.
ತಪ್ಪಿತಸ್ಥರು ಯಾರೇ ಆಗಿದ್ದರೂ ಅವರ ವಿರುದ್ಧ ನಿರ್ದಾಕ್ಷಿಣ್ಯ ಮತ್ತು ಕಾನೂನು ರೀತ್ಯ ಕ್ರಮ ಕೈಗೊಳ್ಳಬೇಕು. ಮುಂದೆ ಇಂತಹ ಘಟನೆ ನಡೆಯದಂತೆ ಎಚ್ಚರ ವಹಿಸಬೇಕು, ಮರುಕಳಿಸಿದರೆ ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ಇಲಾಖೆಯನ್ನೇ ಹೊಣೆ ಮಾಡಲಾಗುವುದು ಎಂದು ಸಚಿವರು ಎಚ್ಚರಿಕೆ ನೀಡಿದ್ದಾರೆ.
ಖುದವಂತಪುರ ಘಟನೆಗೆ ಖಂಡನೆ, ಶಾಂತಿಗೆ ಮನವಿ:
ಭಾಲ್ಕಿ ತಾಲ್ಲೂಕಿನ ಖುದವಂತಪುರ ಗ್ರಾಮದಲ್ಲಿ ಏ.29ರಂದು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮೆರವಣಿಗೆ ವೇಳೆ ನಡೆದ ಘಟನೆಯನ್ನು ಸಚಿವರು ಖಂಡಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೀದರ್ | ಅಂಬೇಡ್ಕರ್ ಜಯಂತಿ ಮೆರವಣಿಗೆ ವೇಳೆ ಗಲಾಟೆ : 10 ಜನರ ವಿರುದ್ಧ ಪ್ರಕರಣ ದಾಖಲು
ʼಬೀದರ್ ಸರ್ವಜನಾಂಗದ ಶಾಂತಿಯ ತೋಟವಾಗಿದ್ದು, ಜಿಲ್ಲೆಯಲ್ಲಿ ಯಾರೂ ಶಾಂತಿ ಕದಡಬಾರದು. ಕೆಲವು ಅಹಿತಕರ ಘಟನೆಗಳಿಂದಲೇ ದ್ವೇಷ ಹೆಚ್ಚಾಗಿ, ಸೌಹಾರ್ದತೆಗೆ ಭಂಗ ಬರುತ್ತದೆ. ಒಂದು ಕಿಡಿಯನ್ನು ನಿರ್ಲಕ್ಷಿಸಿದರೆ ಅದು ಬೆಂಕಿಯ ಜ್ವಾಲೆ ಆಗುತ್ತದೆ. ಹೀಗಾಗಿ ವೈಯಕ್ತಿಕ ವಿಚಾರಗಳನ್ನು ಸಾರ್ವತ್ರೀಕರಣ ಮಾಡದಂತೆ ಮತ್ತು ಸೋದರರಂತೆ ಬಾಳುವಂತೆ ಜಿಲ್ಲೆಯ ಎಲ್ಲ ಜನತೆಗೆ ಅದರಲ್ಲೂ ಖುದವಂತಪುರದ ಜನತೆಗೆ ಸಚಿವ ಈಶ್ವರ ಖಂಡ್ರೆ ಮನವಿ ಮಾಡಿದ್ದಾರೆ.