ಮೋದಿ ಮತ್ತು ಬಿಜೆಪಿ ನಾಯಕರು ಜಾತಿ ಗಣತಿ ವಿರುದ್ಧ ಹೇಗೆಲ್ಲ ದಾಳಿ ನಡೆಸಿದ್ದರು ಗೊತ್ತೆ?

Date:

Advertisements
ಬಿಜೆಪಿ ನಾಯಕ ನಿಶಿಕಾಂತ್ ದುಬೆ, “ಜಾತಿ ಜನಗಣತಿಯಿಂದಾಗಿ ಪಾಕಿಸ್ತಾನ ಮತ್ತು ಬಾಂಗ್ಲಾದೇಶದಂತಹ ಹಲವಾರು ಭಾಗಗಳಾಗಿ ಭಾರತವು ಒಡೆದು ಹೋಗುತ್ತದೆ' ಎಂದಿದ್ದರು

ಜನಗಣತಿಯೊಂದಿಗೆ ಜಾತಿಗಣತಿಯನ್ನೂ ನಡೆಸುವುದಾಗಿ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ಘೋಷಿಸಿದೆ. ಬಿಹಾರ ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲಿ ಮಾಡಿರುವ ಈ ಮಹತ್ವದ ಪ್ರಕಟಣೆ ಚರ್ಚೆಯನ್ನು ಹುಟ್ಟಿಹಾಕಿದೆ. ಬ್ರಿಟಿಷರು ಆಳ್ವಿಕೆ ನಡೆಸುತ್ತಿದ್ದ ಸಂದರ್ಭದಲ್ಲಿ, ಅಂದರೆ 1931ರಲ್ಲಿ ನಡೆದ ಜಾತಿಗಣತಿಯೇ ಕೊನೆಯ ಜಾತಿಗಣತಿ. ಆನಂತರ ಅಧಿಕಾರ ನಡೆಸಿದ ಕಾಂಗ್ರೆಸ್ ಆದಿಯಾಗಿ ಯಾವುದೇ ಪಕ್ಷದ ಸರ್ಕಾರ ಜನಗಣತಿಯೊಂದಿಗೆ ಜಾತಿಗಣತಿಯನ್ನು ಕೈಗೆತ್ತಿಕೊಳ್ಳಲಿಲ್ಲ.

1941ರ ಗಣತಿಯು ವಿಶ್ವಮಹಾಯುದ್ಧದ ಕಾರಣ ಪೂರ್ಣವಾಗಲಿಲ್ಲ. 1951ರಲ್ಲಿ ಗಣತಿ ನಡೆದಿತ್ತಾದರೂ ನೆಹರೂ ನೇತೃತ್ವದ ಸರ್ಕಾರ ಜಾತಿ ಎಂಬ ಅಂಶವನ್ನು ಕೈಬಿಟ್ಟಿತು. ಆದರೆ ಇಂದು ಕಾಲ ಬದಲಾಗಿದೆ. ತಮ್ಮ ಪ್ರಾತಿನಿಧ್ಯದ ಪ್ರಶ್ನೆಯನ್ನು ಬಹುಸಂಖ್ಯಾತ ಎಸ್‌ಸಿ, ಎಸ್‌ಟಿ, ಒಬಿಸಿ ಸಮುದಾಯಗಳು ಬಲವಾಗಿ ಮುಂದಿಡುತ್ತಿವೆ. ಹೀಗಾಗಿ ಜಾತಿಗಣತಿಯನ್ನು ವಿರೋಧಿಸಿದರೆ ಆ ಸಮುದಾಯಗಳ ವಿರೋಧವನ್ನು ಕಟ್ಟಿಕೊಳ್ಳಬೇಕಾಗುತ್ತದೆ.

ಈ ಸಾಮಾಜಿಕ ಪಲ್ಲಟಗಳ ಭಾಗವಾಗಿ ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ, ಕಾಂಗ್ರೆಸ್ ಪಕ್ಷವು ಜಾತಿಗಣತಿಯನ್ನು ತನ್ನ ಮುಖ್ಯ ಅಜೆಂಡಾವಾಗಿ ಘೋಷಿಸಿತು. ಆನಂತರ ಬಿಜೆಪಿ ನಾಯಕರು ಮತ್ತು ಪಕ್ಷದ ಬೆಂಬಲಿಗರು ಕಾಂಗ್ರೆಸ್ ವಿರುದ್ಧ ಮುಗಿಬಿದ್ದರು. ಸ್ವತಃ ಪ್ರಧಾನಿ ಮೋದಿಯವರೇ ಜಾತಿ ಗಣತಿಯನ್ನು ‘ಮಾವೋವಾದಿ ಚಿಂತನೆ’ ಎಂದು ಜರಿದರು. ಆದರೆ ಇಂದು ಜಾತಿ ಗಣತಿಯನ್ನು ಹಾಡಿಹೊಗಳುವ ಸ್ಥಿತಿ ಬಿಜೆಪಿ ಮತ್ತು ಅದರ ನಾಯಕರಿಗೆ ಬಂದು ಬಿಟ್ಟಿದೆ. ಇದೇ ಹೊತ್ತಿನಲ್ಲಿ ಬಿಜೆಪಿ ಮತ್ತು ಸಂಘಪರಿವಾರದ ನಾಯಕರು ‘ಜಾತಿ ಗಣತಿ’ಯನ್ನು ಹೇಗೆಲ್ಲ ಜರಿದಿದ್ದರು ಎಂಬುದನ್ನು ಅವಲೋಕನ ಮಾಡಿಕೊಳ್ಳಬೇಕಾಗುತ್ತದೆ. ಅವರ ನಿಲುವಿನಲ್ಲಿ ಈ ಬದಲಾವಣೆ ಕಂಡುಬಂದಿದ್ದು ಹೇಗೆ ಎಂಬುದನ್ನು ಯೋಚಿಸಬೇಕಾಗುತ್ತದೆ.

Advertisements

ಜಾತಿ ಗಣತಿಗೆ ಮೋದಿಯ ಮೂದಲಿಕೆ

ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷವು ತನ್ನ ಪ್ರಣಾಳಿಕೆಯಲ್ಲಿ, ‘ಸಾಮಾಜಿಕ- ಆರ್ಥಿಕ ಸಮೀಕ್ಷೆ ಮತ್ತು ಜಾತಿ ಗಣತಿಯನ್ನು ನಡೆಸುತ್ತೇವೆ’ ಎಂದು ಪ್ರಕಟಿಸಿತು. ಕಾಂಗ್ರೆಸ್‌ನ ಪ್ರಣಾಳಿಕೆಯನ್ನೇ ಗುರಿಯಾಗಿಸಿಕೊಂಡು ಇಡೀ ಚುನಾವಣಾ ಪ್ರಚಾರ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿಯವರು, “ಜಾತಿ ಗಣತಿ ಮತ್ತು ಸಾಮಾಜಿಕ, ಆರ್ಥಿಕ ಸಮೀಕ್ಷೆಯು ವೈಯಕ್ತಿಕ ಆಸ್ತಿ ಹಕ್ಕಿನ ಮೇಲೆ ನಡೆಯುತ್ತಿರುವ ದಾಳಿಯಾಗಿದೆ. ಇದು ಮಾವೋವಾದಿಗಳ ಸಿದ್ಧಾಂತವನ್ನು ಪ್ರತಿಧ್ವನಿಸುತ್ತಿದೆ” ಎಂದು ಮೂದಲಿಸಿದ್ದರು.

ನ್ಯೂಸ್ 18 ನೆಟ್‌ವರ್ಕ್‌ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಈ ಮಾತುಗಳನ್ನು ಆಡಿದ್ದರು. “ಸಂಪತ್ತನ್ನು ಪುನರ್ವಿತರಣೆ ಮಾಡಲು ಕಾಂಗ್ರೆಸ್ ಸಮೀಕ್ಷೆಗಳನ್ನು ನಡೆಸುತ್ತದೆ. ಈ ಪರಿಕಲ್ಪನೆಯು ಪ್ರತಿಯೊಂದು ಮನೆಯ ಮೇಲೆ ನಡೆಯುತ್ತಿರುವ ದಾಳಿ” ಎಂದು ಪ್ರತಿಪಾದಿಸಿದ್ದರು.

ಬಿಜೆಪಿಯ ಮಾತೃಸಂಸ್ಥೆಯಾದ ಆರ್‌ಎಸ್‌ಎಸ್, 2023ರ ಡಿಸೆಂಬರ್ 19ರಂದು ಜಾತಿ ಗಣತಿಯನ್ನು ವಿರೋಧಿಸಿತ್ತು. ಆರ್‌ಎಸ್‌ಎಸ್‌ನ ವಿದರ್ಭ ಪ್ರಾಂತ್ಯದ ಮುಖ್ಯಸ್ಥ ಶ್ರೀಧರ್ ಗಾಡ್ಗೆ, “ಜಾತಿ ಆಧಾರಿತ ಜನಗಣತಿಯ ಬೇಡಿಕೆಯನ್ನು ನಾವು (ಆರ್‌ಎಸ್‌ಎಸ್) ಬೆಂಬಲಿಸುವುದಿಲ್ಲ. ಅಂತಹ ಕ್ರಮಗಳಿಂದಾಗಿ ದೇಶದಲ್ಲಿ ಸಾಮಾಜಿಕ ಅಸಮಾನತೆಗಳು ಉಲ್ಬಣವಾಗುತ್ತವೆ. ಜಾತಿ ಗಣತಿಯಿಂದ ಯಾವುದೇ ಬದಲಾವಣೆಯನ್ನು ನಾವು ಕಾಣುವುದಿಲ್ಲ. ನಷ್ಟವನ್ನಷ್ಟೇ ನಾವು ನೋಡಬೇಕಾಗುತ್ತದೆ. ಜಾತಿ ಗಣತಿಯು ಅಸಮಾನತೆಯ ಮೂಲವಾಗಿದೆ. ಅದನ್ನು ಪ್ರೋತ್ಸಾಹಿಸುವುದು ಸಮರ್ಥನೀಯವಲ್ಲ” ಎಂದು ಹೇಳಿದ್ದರು.

rss 5
ಜಾತಿ ಗಣತಿಯನ್ನು ವಿರೋಧಿಸಿದ್ದ ಆರ್‌ಎಸ್‌ಎಸ್‌

ಜಾತಿ ಗಣತಿ ವರದಿಯನ್ನು ಬಿಡುಗಡೆ ಮಾಡಲು ಮುಂದಾಗಿರುವ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೇಲೆ ಅತ್ಯಂತ ಕೆಟ್ಟದ್ದಾಗಿ ದಾಳಿ ಮಾಡಿತ್ತು ಕರ್ನಾಟಕ ಬಿಜೆಪಿ. ಎಐ ಟೂಲ್‌ ಬಳಸಿ ವಿಕಾರವಾಗಿ ಚಿತ್ರವನ್ನು ಸೃಷ್ಟಿಸಿದ್ದ ಬಿಜೆಪಿ, ಸಿದ್ದರಾಮಯ್ಯನವರು ಸ್ಕಲ್ ಕ್ಯಾಪ್ ಧರಿಸಿ, ‘ಹಿಂದೂಗಳ ವಿಭಜನೆ’ ಎಂಬ ಪ್ರತಿ ಹಿಡಿದು ನಿಂತಿರುವಂತೆ ಪೋಸ್ಟರ್‌ ಪ್ರಕಟಿಸಿತ್ತು. ಜೊತೆಗೆ, “ಈ ಅವೈಜ್ಞಾನಿಕ ಜಾತಿ ಜನಗಣತಿಯು ಹಿಂದೂಗಳನ್ನು ವಿಭಜಿಸುವ ಉದ್ದೇಶವನ್ನು ಹೊಂದಿದೆ – ಬೇರೇನೂ ಅಲ್ಲ” ಎಂದು ಬರೆದುಕೊಂಡಿತ್ತು.

ನವೆಂಬರ್‌ನಲ್ಲಿ ನಡೆದ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ, ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಅವರು ಜನಗಣತಿಯನ್ನು ವಿಭಜನೆಯ ಅಸ್ತ್ರವೆಂದು ಬಿಂಬಿಸುವ ಘೋಷಣೆಯನ್ನು ಮೊಳಗಿಸಿದ್ದರು. “ಬಟೇಂಗೆ ತೋ ಕಟೇಂಗೆ- ನಾವು ವಿಭಜನೆಯಾದರೆ ನಮ್ಮನ್ನು ಕತ್ತರಿಸಲಾಗುವುದು” ಎಂದು ಹಿಂದೂಗಳನ್ನು ಹೆದರಿಸಿದ್ದರು.

ಲೋಕಸಭಾ ಚುನಾವಣಾ ಫಲಿತಾಂಶದ ಎರಡು ತಿಂಗಳ ನಂತರ, ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ನೀಡಿದ ಟೆಲಿವಿಷನ್ ಸಂದರ್ಶನವೊಂದರಲ್ಲಿ ಜಾತಿ ಗಣತಿಯನ್ನು ದೇಶ ವಿಭಜನೆಯ ಅಸ್ತ್ರವೆಂಬಂತೆ ಪ್ರತಿಪಾದಿಸಿದರು. “ಜಾತಿ ಜನಗಣತಿಯಿಂದಾಗಿ ಇತರ ಹಿಂದುಳಿದ ವರ್ಗಗಳ ಮೀಸಲಾತಿ ಶೇ.100ರಷ್ಟು ಕಡಿಮೆ ಆಗುತ್ತದೆ. ಪಾಕಿಸ್ತಾನ ಮತ್ತು ಬಾಂಗ್ಲಾದೇಶದಂತಹ ಹಲವಾರು ಭಾಗಗಳಾಗಿ ಭಾರತವು ಒಡೆದು ಹೋಗುತ್ತದೆ. ದೇಶ ನಾಶವಾಗುತ್ತದೆ” ಎಂದು ಅಭಿಪ್ರಾಯ ತಾಳಿದ್ದರು.

ಇದನ್ನೂ ಓದಿರಿ: ಭಾರತದಲ್ಲಿ ಮೊದಲಿಗೆ ಜಾತಿಗಣತಿ ನಡೆದದ್ದು ಯಾವಾಗ? ಅಂಬೇಡ್ಕರ್ ಏನು ಹೇಳಿದ್ದರು?

“ಕಾಂಗ್ರೆಸ್ ಪಕ್ಷದ ಮುಖ್ಯ ಕಾರ್ಯಸೂಚಿ ಮುಸ್ಲಿಮರಿಗೆ ಮೀಸಲಾತಿ ನೀಡುವುದಾಗಿದೆ. ಭಾರತದಲ್ಲಿ 44 ಲಕ್ಷ ಜಾತಿಗಳಿವೆ. ಜಾತಿ ವ್ಯವಸ್ಥೆಯ ಸಂಕೀರ್ಣತೆಯನ್ನು ಬಿಡಿಸಿ ಪ್ರಕ್ರಿಯೆ ನಡೆಸಲು ಕಂಪ್ಯೂಟರ್‌ಗಳಿಗೂ ಕೂಡ ಸಾಧ್ಯವಾಗುವುದಿಲ್ಲ” ಎಂದು ವಾದಿಸಿದ್ದರು.

ಬಿಜೆಪಿಯ ಐಟಿ ಸೆಲ್ ರಾಷ್ಟ್ರೀಯ ಮುಖ್ಯಸ್ಥ ಅಮಿತ್ ಮಾಳವೀಯ ಅವರು ಈ ಹಿಂದೆ ಸರಣಿಯಾಗಿ ಜಾತಿ ಗಣತಿಯ ವಿರುದ್ಧ ಟ್ವೀಟ್ ಮಾಡಿದ್ದರು: “ಜಾತಿ ಜನಗಣತಿಯು ಅಸ್ತಿತ್ವದಲ್ಲಿರುವ ಸಾಮಾಜಿಕ  ವ್ಯವಸ್ಥೆಯನ್ನು ಅಸ್ಥಿರಗೊಳಿಸಬಹುದು. ಇದರಿಂದಾಗಿ ಮೆರಿಟ್ ಮತ್ತು ಕಠಿಣ ಪರಿಶ್ರಮ ಪಕ್ಕಕ್ಕೆ ಸರಿದುಬಿಡುತ್ತದೆ. ಜನಗಣತಿಯಲ್ಲಿ ಜಾತಿಯನ್ನು ಸೇರಿಸುವುದು ರಾಜಕೀಯವಾಗಿ ಅನುಕೂಲ ತರಬಹುದು. ಆದರೆ ಭವಿಷ್ಯಕ್ಕೆ ಬೇಕಾದ ಅಗತ್ಯಗಳನ್ನು ಪೂರೈಸುವುದಿಲ್ಲ. ಜಾತಿ ಗಣತಿಯಿಂದಾಗಿ ಕೇವಲ ವರ್ಗೀಯ ಹಿತಾಸಕ್ತಿ ಮತ್ತು ಹಳೆಯ ಪೂರ್ವಗ್ರಹಗಳು ಪೂರೈಕೆಯಾಗುತ್ತವೆಯಷ್ಟೇ.. ಎಂಟು ದಶಕಗಳ ಹಿಂದೆ ಭಾರತವು ಜಾತಿ ಗಣತಿಯನ್ನು ಹೊರಗಿಟ್ಟಿತು. ಎನ್‌ಡಿಎ ಸರ್ಕಾರವು 2001ರ ಗಣತಿಯಲ್ಲಿ ಜಾತಿ ಗಣತಿಯನ್ನು ಸೇರಿಸಲು ನಿರಾಕರಿಸಿತು. ಜಾತಿ ಗಣತಿಯನ್ನು ಪುನರ್ ಪರಿಶೀಲಿಸಬೇಕೆಂದರೆ, ಅದಕ್ಕೆ ಕೊಂಚವೂ ಯೋಗ್ಯತೆ ಇಲ್ಲ…”- ಇವು ಅಮಿತ್ ಮಾಳವೀಯರ ಆಣಿಮುತ್ತುಗಳು.

ಈಗ ಯೂಟರ್ನ್ ತೆಗೆದುಕೊಂಡಿರುವ ಮಾಳವೀಯ ವರಸೆ ಬದಲಿಸಿದ್ದಾರೆ. “ಜಾತಿ ಗಣತಿ ಮಾಡಬೇಕೆಂಬುದು ಬಿಜೆಪಿ ಸರ್ಕಾರದ ನಿರ್ಧಾರ. ಇದರಲ್ಲಿ ಕ್ರೆಡಿಟ್ ತೆಗೆದುಕೊಳ್ಳುವುದನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಿಲ್ಲಿಸಬೇಕು. 2024ರ ಸೆಪ್ಟೆಂಬರ್ 18ರಂದೇ ಅಮಿತ್ ಶಾ ಅವರು ಜಾತಿ ಗಣತಿಯ ಕುರಿತು ಸುಳಿವು ನೀಡಿದ್ದರು. 2011ರಲ್ಲಿ, ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವು ಸಾಮಾಜಿಕ-ಆರ್ಥಿಕ ಮತ್ತು ಜಾತಿ ಜನಗಣತಿಯನ್ನು ಪ್ರಾರಂಭಿಸಿತು. ಇದರಲ್ಲಿ ಜಾತಿ ಅಂಶವೂ ಸೇರಿತ್ತು. 1931ರ ನಂತರ ನಡೆದ ಮೊದಲ ಪ್ರಯತ್ನ ಅದಾಗಿತ್ತು. ಆದರೆ ಕಾಂಗ್ರೆಸ್ ಸರ್ಕಾರವು ಜಾತಿಗಳ ವಿವರ ಬಿಡುಗಡೆ ಮಾಡಲು ವಿಫಲವಾಯಿತು” ಎಂದು ದೂರಿದ್ದಾರೆ.

ಬಿಜೆಜೆಯ ಮಿತ್ರ ಪಕ್ಷವಾದ ಜೆಡಿಎಸ್‌ನ ನಾಯಕ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರದ ಜಾತಿಗಣತಿ ವಿರುದ್ಧ ಭಾರೀ ವಾಗ್ದಾಳಿ ನಡೆಸಿದ್ದರು. ಎರಡು ವಾರಗಳ ಹಿಂದಷ್ಟೇ ಪ್ರತಿಕ್ರಿಯಿಸಿದ್ದ ಅವರು, “ಜಾತಿ-ಜಾತಿಗಳ ಮಧ್ಯೆ ಸಂಘರ್ಷ ಸೃಷ್ಟಿಸಿ, ಸಮಾಜವನ್ನು ಒಡೆಯುವ ಉದ್ದೇಶದಿಂದ ಸಿದ್ದರಾಮಯ್ಯನವರು ಜಾತಿಗಣತಿ ವರದಿಯನ್ನು ಮುನ್ನೆಲೆಗೆ ತಂದಿದ್ದಾರೆ. ಈ ಮೂಲಕ ರಾಜ್ಯವನ್ನು ಸರ್ವನಾಶ ಮಾಡಲು ಹೊರಟಿದ್ದಾರೆ. ಸಿದ್ದರಾಮಯ್ಯ ಅವರು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಜಾತಿಗಣತಿ ವರದಿ ತರುತ್ತಿದ್ದಾರೆ. ತಮ್ಮ ಸ್ವಾರ್ಥಕ್ಕಾಗಿ ಜನಸಮುದಾಯಗಳ ಮಧ್ಯೆ ಒಡಕು ಮೂಡಿಸುತ್ತಿದ್ದಾರೆ. ಜಾತ್ಯತೀತ ಎಂದು ಹೇಳಿಕೊಳ್ಳುವ ಮತ್ತು ಸಂವಿಧಾನ ಪ್ರತಿಯನ್ನು ಸದಾ ಕೈಯ್ಯಲ್ಲಿ ಹಿಡಿದು ಶೋ ಮಾಡುವ ಕಾಂಗ್ರೆಸ್, ಸಮಾಜವನ್ನು ಒಡೆಯುತ್ತಿದೆ” ಎಂದು ಆರೋಪಿಸಿದ್ದರು. ಈಗ ಇದೇ ಕುಮಾರಸ್ವಾಮಿಯವರು ಮೋದಿಯವರನ್ನು ಹಾಡಿಹೊಗಳುತ್ತಿದ್ದಾರೆ. ಜಾತಿಗಣತಿ ಮಾಡುವುದು ಮಹತ್ವದ ನಿರ್ಧಾರ ಎನ್ನುತ್ತಿದ್ದಾರೆ.

ಜಾತಿ ಗಣತಿಯನ್ನು ವಿರೋಧಿಸಿದರೆ ತೆರಬೇಕಾದ ರಾಜಕೀಯ ಬೆಲೆಯನ್ನು ಬಿಜೆಪಿ ಮತ್ತು ಸಂಘಪರಿವಾರ ಅರ್ಥಮಾಡಿಕೊಂಡಂತೆ ಕಾಣುತ್ತಿದೆ. ನಿಲುವುಗಳನ್ನು ಬದಲಿಸಿರುವುದು ಸ್ವಾಗತಾರ್ಹ ನಡೆ. ಆದರೆ ಜಾತಿಗಣತಿ ಯಾವಾಗ ನಡೆಯುತ್ತದೆ, ಯಾವಾಗ ಮುಗಿಯುತ್ತದೆ ಎಂಬ ಕಾಲಮಿತಿ ಪ್ರಕಟವಾಗಬೇಕು.

ಇದನ್ನೂ ಓದಿರಿ: ಜಾತಿ ಗಣತಿ ವರದಿ ವಿರೋಧಿಸುತ್ತಿರುವ ಶಾಮನೂರು ಹುನ್ನಾರವೇನು? ಕಾಂಗ್ರೆಸ್‌ನಲ್ಲಿ ಕ್ರಮ ಯಾಕಿಲ್ಲ?

ಜನಗಣತಿಯು 2021ರಲ್ಲಿ ನಡೆಯಬೇಕಿತ್ತು. ಕೋವಿಡ್ ನೆಪದಲ್ಲಿ ಅದನ್ನು ಕೈಗೆತ್ತಿಕೊಳ್ಳಲೇ ಇಲ್ಲ. ಜನಗಣತಿಯಲ್ಲಿ ಜಾತಿಗಣತಿಯನ್ನು ಮಾಡುತ್ತಿರುವುದು ಮಹತ್ವದ್ದಾದರೂ ಕೇವಲ ಜಾತಿಗಳ ಅಂಕಿ-ಸಂಖ್ಯೆಗಳಷ್ಟೇ ಸಂಗ್ರಹಿಸಿದರೆ ಪ್ರಯೋಜನವಿಲ್ಲ. ಪ್ರತಿ ಜಾತಿಗಳ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿಗಳ ಮಾಹಿತಿಯನ್ನು ಕಡ್ಡಾಯವಾಗಿ ದಾಖಲಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಸಿದ್ದರಾಮಯ್ಯನವರು ಆಗ್ರಹ ಮಾಡಿದ್ದಾರೆ. ಸಾಮಾಜಿಕ, ಶೈಕ್ಷಣಿಕ ಸ್ಥಿತಿಗತಿ ತಿಳಿಸದ ಜಾತಿಗಣತಿಯಿಂದ ಯಾವುದೇ ಪರಿಣಾಮವಾಗುವುದಿಲ್ಲ. ಯಾರ ಬಳಿ ಎಷ್ಟು ಆಸ್ತಿ ಇದೆ, ಯಾರಿಗೆ ಹೆಚ್ಚು ಉದ್ಯೋಗ ಮತ್ತು ಸರ್ಕಾರದ ಸವಲತ್ತುಗಳು ದೊರಕಿವೆ, ಯಾವ ಸಮುದಾಯಕ್ಕೆ ಪ್ರಾತಿನಿಧ್ಯದ ಕೊರತೆ ಇದೆ ಎಂಬುದನ್ನು ತಿಳಿಸಿದರೆ ಜಾತಿಗಣತಿಗೆ ಬೆಲೆ ಇದೆ. ಅಂತಹ ವಿವರಗಳ ಆಧಾರದಲ್ಲಿ ಮಾನವ ಅಭಿವೃದ್ಧಿ ಸೂಚ್ಯಂಕವನ್ನು ಮೇಲೆತ್ತುವ ಕಾರ್ಯಕ್ರಮಗಳನ್ನು ಸರ್ಕಾರ ರೂಪಿಸಬಹುದು.

yathiraj 2
ಯತಿರಾಜ್‌ ಬ್ಯಾಲಹಳ್ಳಿ
+ posts

ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಯತಿರಾಜ್‌ ಬ್ಯಾಲಹಳ್ಳಿ
ಯತಿರಾಜ್‌ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗದಗ | ಮುಶಿಗೇರಿ ವಸತಿ ನಿಲಯಕ್ಕೆ ಮೂಲ ಸೌಕರ್ಯಗಳ ಕೊರತೆ; ವಿದ್ಯಾರ್ಥಿಗಳ ಗೋಳು ಕೇಳೋರ್ಯಾರು?

ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ವಸತಿ...

Download Eedina App Android / iOS

X