ಅರಣ್ಯ ಭೂಮಿ ಮತ್ತು ಗೈರಾಣ ಭೂಮಿ ಸಾಗುವಳಿದಾರರಿಗೆ ಪಟ್ಟಾ ಕೊಡಬೇಕು ಎಂದು ಒತ್ತಾಯಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ರಾಯಚೂರು ಜಿಲ್ಲಾಧಿಕಾರಿ ಕಚೇರಿಯ ಅಧಿಕಾರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದ್ದಾರೆ.
ರಾಯಚೂರು ತಾಲೂಕಿನ ಉಂಡ್ರಾಳದೊಡ್ಡಿ, ಬಾಪೂರು, ಮಾಸದೊಡ್ಡಿ, ಎಲ್.ಕೆ.ದೊಡ್ಡಿ, ಮುರಿಕಿದೊಡ್ಡಿ, ಮಂಡಲಗೇರಾ, ಅರಸಿಕೇರಾ, ಅರಸಿಕೇರಾ ತಾಂಡ, ಯರಗೇರಾ, ಚಂದ್ರಬಂಡಾ, ಯಾಪಲದಿನ್ನಿ, ಜಂಬಲದಿನ್ನಿ, ಪುಚ್ಚಲದಿನ್ನಿ, ಕೊತ್ತದೊಡ್ಡಿ, ಜುಲಂಗೇರಾ, ವಿಜಾಪೂರು, ಸಿಂಗನೋಡಿ, ಸಿಂಗನೋಡಿ ತಾಂಡ ಸೇರಿದಂತೆ ಬಹುತೇಕ ಗ್ರಾಮಗಳಲ್ಲಿ ಅರಣ್ಯ ಭೂಮಿ, ಗೈರಾಣ ಸಿ, ಮತ್ತು ಡಿ ಭೂಮಿ ದೊಡ್ಡ ಪ್ರಮಾಣದಲ್ಲಿ ಇದೆ. ಈ ಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವವರಿಎಗೆ ಪಟ್ಟಾ ನೀಡಬೇಕು” ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.
“ಈ ಭೂಮಿಗಳಲ್ಲಿ ಹರಿಜನ, ಗಿರಿಜನರು, ಲಮಾಣಿಗಳು, ನಾಯಕ ಜನಾಂಗದವರು ಸೇರಿ ಹಿಂದುಳಿದ ಜನಾಂಗದವರೂ ವಾಸ ಮಾಡುತ್ತಿದ್ದಾರೆ. ಅರಣ್ಯ ಭೂಮಿಯನ್ನು ಸುಮಾರು 60 ವರ್ಷಗಳಿಂದ ಸಾಗುವಳಿ ಮಾಡುತ್ತಾ ಭೂಮಿಯನ್ನು ಅಭಿವೃದ್ಧಿ ಪಡಿಸಿದ್ದಾರೆ. ನೀರಾವರಿ ಮಾಡಿಕೊಳ್ಳುವ ಮೂಲಕ ಬೆಳೆ ಬೆಳೆಯುತ್ತಾ ಅವರ ಕುಟುಂಬದ ನಿರ್ವಹಣೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ” ಎಂದು ತಿಳಿಸಿದರು.
“ಬಡ ಕೂಲಿಕಾರರಿಗೆ ಯಾವುದೇ ಸ್ವಂತ ಭೂಮಿ ಇಲ್ಲ. ಸಾಗುವಳಿ ಮಾಡುತ್ತಿರುವ ಅರಣ್ಯ ಭೂಮಿಯೇ ಅವರಿಗೆ ಮುಖ್ಯವಾಗಿದೆ. ಸರ್ಕಾರವು 2002ರಲ್ಲಿ ಕಂದಾಯವಾಗಿದ್ದ ಭೂಮಿಯನ್ನು ಅರಣ್ಯ ಇಲಾಖೆಗೆ ವರ್ಗಾಯಿಸಲಾಗಿದೆ. ಆದರೆ ಈ ಭೂಮಿಯನ್ನು ಅರಣ್ಯ ಇಲಾಖೆಯವರು ಬಲವಂತವಾಗಿ ಕಸಿದುಕೊಂಡಿದ್ದಾರೆ” ಎಂದು ಆರೋಪಿಸಿದರು.
“ಅರಣ್ಯ ಇಲಾಖೆಯವರು ಸಾಗುವಳಿದಾರರಿಗೆ ನಿರಂತರವಾಗಿ ತೊಂದರೆ ಕೊಡುತ್ತಿದ್ದಾರೆ. ರೈತರ ಮೇಲೆ ಸುಳ್ಳು ಪ್ರಕರಣಗಳನ್ನು ದಾಖಲು ಮಾಡಿ ಬಡ ಕೂಲಿಕಾರರನ್ನು ನ್ಯಾಯಾಲಯಕ್ಕೆ ಅಲೆಯುವಂತೆ ಮಾಡುತ್ತಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಯಾದಗಿರಿ | ಸಾರ್ವವಜನಿಕ ಬಾವಿ ತೆರವು ವಿರೋಧಿಸಿ ದಸಂಸ ಪ್ರತಿಭಟನೆ
“ಸಾಗುವಳಿದಾರರು ಅಕ್ರಮ ಸಕ್ರಮದಡಿ ಪಟ್ಟಾಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಇದೀಗ ಅರ್ಜಿ ಸ್ಥಗಿತಗೊಂಡಿದೆ. ಅರಣ್ಯ ಇಲಾಖೆ ಅಧಿಕಾರಿ ಮಾತ್ರ ದೌರ್ಜನ್ಯ ನಡೆಸುತ್ತಿದ್ದಾರೆ. ಕೂಡಲೇ ಎಚ್ಚೆತ್ತುಕೊಂಡು ಸಮಸ್ಯೆ ಬಗೆಹರಿಸಿ ಸಾಗುವಳಿದಾರರಿಗೆ ಪಟ್ಟಾ ನೀಡಬೇಕು” ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಅಧ್ಯಕ್ಷ ಕರಿಯಪ್ಪ ಹಚ್ಚೊಳ್ಳಿ, ರಮೇಶ, ಇಸ್ಮಾಯಿಲ್, ಮಾರೆಪ್ಪ, ಆಂಜನೇಯ, ಮಲ್ಲಯ್ಯ, ಎಂ ನಾಗರಾಜ, ರವಿ, ಸತ್ಯಪ್ಪ, ಬಸವರಾಜ ಸೇರಿದಂತೆ ಬಹುತೇಕರು ಇದ್ದರು.