ರೌಡಿಶೀಟರ್‌ನನ್ನು ದುಷ್ಕರ್ಮಿಗಳು ಹಾಡಹಗಲೇ ಅಟ್ಟಾಡಿಸಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ, ಬರ್ಬರವಾಗಿ ಹತ್ಯೆಗೈದಿರುವ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಧನಲಕ್ಷ್ಮೀ ಚಿತ್ರಮಂದಿರದ ಬಳಿ ನಡೆದಿದೆ.
ದುಷ್ಕರ್ಮಿಗಳು ರೌಡಿಶೀಟರ್‌ನನ್ನು ನಡುರಸ್ತೆಯಲ್ಲಿ ಅಟ್ಟಾಡಿಸಿ ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಿದ್ದಾರೆ. ಮಾಸ್ತಿಗೌಡ (30) ಕೊಲೆಯಾದ ರೌಡಿಶೀಟರ್. ಇನ್ನೋವಾ ಕಾರಿನಲ್ಲಿ ಬಂದ ನಾಲ್ಕೈದು ದುಷ್ಕರ್ಮಿಗಳು ಕೃತ್ಯ ಎಸಗಿದ್ದಾರೆಂಬ ಆರೋಪವಿದೆ.
ಮಾಸ್ತಿಗೌಡ ಚನ್ನರಾಯಪಟ್ಟಣ ತಾಲೂಕಿನ ಹೊನ್ನಮಾರನಹಳ್ಳಿ ಗ್ರಾಮದವನು ಎಂದು ತಿಳಿದುಬಂದಿದೆ. ಆತ ಚನ್ನರಾಯಪಟ್ಟಣ ಭಾಗದಲ್ಲಿ ರೌಡಿಯಾಗಿ ಕುಖ್ಯಾತಿ ಪಡೆದಿದ್ದ. ಹಲವಾರು ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಆತನ ವಿರುದ್ಧ ಪೊಲೀಸರು ರೌಡಿಶೀಟ್ ತೆರೆದಿದ್ದರು. ಕಾಲಕಾಲಕ್ಕೆ ಠಾಣೆಗೆ ಬಂದು ಸಹಿ ಹಾಕುವಂತೆ ಸೂಚಿಸಿದ್ದರು.
ಪೊಲೀಸರು ಆತನನ್ನು ನಿಯಂತ್ರಿಸಲು ಯತ್ನಿಸಿದರೂ ಆತ ಹಿಂದೆ ಕಟ್ಟಿಕೊಂಡಿದ್ದ ದ್ವೇಷಗಳಿಂದ ಈ ಕೊಲೆ ನಡೆದಿದೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೊಲೀಸರು ನಡುರಸ್ತೆಯಲ್ಲಿ ನಡೆದ ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಸಿಸಿ ಟಿವಿ ಫೂಟೇಜ್‌ಗಳನ್ನು ಪರಿಶೀಲಿಸುತ್ತಿದ್ದಾರೆ. ಮಾಸ್ತಿ ಗೌಡನಿಗೆ ಇರಬಹುದಾದ ವೈರಿಗಳನ್ನು ಗುರುತಿಸುವ ಕೆಲಸವೂ ನಡೆದಿದೆ. ಈಗಾಗಲೇ ಪೊಲೀಸರಿಗೆ ಕೆಲವರ ಮೇಲೆ ಸಂಶಯ ಬಂದಿದ್ದು, ಅವರನ್ನು ಕರೆದು ತಂದು ವಿಚಾರಣೆ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಈ ಸುದ್ದಿ ಓದಿದ್ದೀರಾ? ಗದಗ | ವನ ಮಹೋತ್ಸವಕ್ಕೆ ಗ್ರಾ.ಪಂ ಅಧ್ಯಕ್ಷ ಲಕ್ಷ್ಮಣ ಕಂಬಳಿ ಚಾಲನೆ
ಮಾಸ್ತಿ ಗೌಡನನ್ನು ದುಷ್ಕರ್ಮಿಗಳು ನೂರಾರು ಜನರ ನಡುವೆಯೇ ಅಟ್ಟಾಡಿಸಿಕೊಂಡು ಹೋಗಿದ್ದರಿಂದ ಸ್ಥಳದಲ್ಲಿ ಭಾರೀ ಆತಂಕ ಸೃಷ್ಟಿಯಾಗಿತ್ತು. ಕೊಲೆಯಾದ ಸ್ಥಳದಲ್ಲಿ ಸಾವಿರಾರು ಜನರು ಸೇರಿದ್ದರು. ಪೊಲೀಸರು ರಸ್ತೆ ಬಂದ್ ನಡೆಸಿ ಮಹಜರು ನಡೆಸಿದರು. ಈ ಘಟನೆಯ ಬಳಿಕ ನಗರದಾದ್ಯಂತ ನಾಕಾಬಂದಿ ಮಾಡಿ ದುಷ್ಕರ್ಮಿಗಳು ಪಟ್ಟಣ ಬಿಟ್ಟು ಹೊರಗೆ ಹೋಗುವುದನ್ನು ತಡೆಯಲು ಪ್ರಯತ್ನಿಸಲಾಗಿದೆ.