ಉಡುಪಿಯ ಹಿರಿಯಡ್ಕ ಬೈಕ್‌ನಲ್ಲಿ ಹಿಂಬಾಲಿಸಿಕೊಂಡು ಆಟೋರಿಕ್ಷಾ ಚಾಲಕನಿಗೆ ತಲ್ವಾರ್ ದಾಳಿ ಮಾಡಿದ ಆರೋಪಿಗಳಿಬ್ಬರನ್ನು ಹಿರಿಯಡ್ಕ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಾದ ಹಿರಿಯಡ್ಕದ ಬೊಮ್ಮರ ಬಿಟ್ಟು ನಿವಾಸಿ ಸಂದೇಶ್ (31) ಮತ್ತು ಹಿರಿಯಡ್ಕದ ಬಾಪೂಜಿ ದರ್ಕಾಸ್ ನಿವಾಸಿ ಸುಶಾಂತ್ (32) ಎಂಬವರನ್ನು ಬಂಧಿಸಲಾಗಿದೆ. ರೌಡಿಶೀಟರ್ ಸುಹಾಸ್ ಶೆಟ್ಟಿ ಹತ್ಯೆ ಬೆನ್ನಲ್ಲೇ ಅಲ್ಲಲ್ಲಿ ಹಲ್ಲೆ ಪ್ರಕರಣಗಳು ನಡೆಯುತ್ತಿದೆ.
ಬಡಗಬೆಟ್ಟು ನಿವಾಸಿ ಅಬುಬಕ್ಕರ್ (50) ಇವರ ಪರಿಚಯದ ದಿನೇಶ್ ಎಂಬುವರು ದೂರವಾಣಿ ಕರೆಮಾಡಿ ಮದಗದಿಂದ ಅತ್ರಾಡಿಗೆ ಬಾಡಿಗೆ ಬರಲು ತಿಳಿಸಿದ್ದರು. ಆತ್ರಾಡಿ ಗ್ಯಾಸ್ ಪೆಟ್ರೋಲ್ ಬಂಕ್ ಬಳಿ ಬರುತ್ತಿರುವ ಸಮಯ ಹಿಂದಿನಿಂದ ಒಂದು ಮೋಟಾರ್ ಸೈಕಲ್‌ನಲ್ಲಿ ಇಬ್ಬರು ವ್ಯಕ್ತಿಗಳು ಹಿಂಬಾಲಿಸಿಕೊಂಡು ಆಟೋ ರಿಕ್ಷಾವನ್ನು ಅಡ್ಡಗಟ್ಟಿ ನಿಲ್ಲಿಸಲು ಪ್ರಯತ್ನಿಸಿದ್ದರು ಎಂದು ಹೇಳಲಾಗಿದೆ.
ಇದನ್ನು ಓದಿದ್ದೀರಾ? ರೌಡಿಶೀಟರ್ ಹತ್ಯೆ ಹಿನ್ನೆಲೆ: ಸಂಘಪರಿವಾರದಿಂದ ಶುಕ್ರವಾರ ದ.ಕ. ಜಿಲ್ಲಾ ಬಂದ್‌ಗೆ ಕರೆ
ದಾಳಿಯ ಸೂಚನೆ ಅರಿತ ಚಾಲಕ ಗಾಡಿಯನ್ನು ನಿಲ್ಲಿಸದೇ ಮುಂದೆ ಬಂದಾಗ, ಹಿಂಬದಿ ಕುಳಿತ ವ್ಯಕ್ತಿಯ ಕೈಯಲ್ಲಿ ತಲವಾರು ರೀತಿಯ ಆಯುಧವಿದ್ದು, ಅವರಲ್ಲಿ ಒಬ್ಬ ವ್ಯಕ್ತಿ “ಆಯನ್ ಕಡುಪು ಬುಡೊಚ್ಚಿ” (ಅವನನ್ನು ಕೊಲೆ ಮಾಡು ಬಿಡಬೇಡ) ಎಂಬುದಾಗಿ ಹೇಳಿದ್ದಾರೆ ಎನ್ನಲಾಗಿದೆ.
ಶೇಡಿಗುಡ್ಡೆ ಬಳಿ ರೋಸ್ ಬಸ್ಸಿನವರ ಮನೆ ಬಳಿ ಇರುವ ರಸ್ತೆಯಲ್ಲಿ ಆಟೋರಿಕ್ಷಾವನ್ನು ನಿಲ್ಲಿಸಿ ಓಡಲು ಪ್ರಶ್ನಿಸಿದಾಗ ಆಗ ಬೈಕ್‌ನಲ್ಲಿದ್ದ ಒಬ್ಬ ವ್ಯಕ್ತಿಯು ತನ್ನ ಕೈಯಲ್ಲಿದ್ದ ತಲವಾರಿನಿಂದ ಅಬುಬಕ್ಕರ್ ಅವರ ತಲೆಗೆ ಬೀಸಿದ್ದಾರೆ. ಅಬುಬಕ್ಕರ್ ಅವರು ತಲವಾರಿನ ಹೊಡೆತದಿಂದ ತಪ್ಪಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಇನ್ನೊಬ್ಬ ವ್ಯಕ್ತಿಯು ಯಾವುದೋ ಬಾಟಲಿಯನ್ನು ಕೈಯಲ್ಲಿ ಹಿಡಿದು ಅಬುಬಕ್ಕರ್ ಅವರ ಆಟೋ ರಿಕ್ಷಾದ ಮುಂಭಾಗದ ಕನ್ನಡಿಗೆ ಹೊಡೆದಿದ್ದಾರೆ. ಆರೋಪಿಗಳು ಕೊಲ್ಲುವ ಉದ್ದೇಶದಿಂದ ಈ ರೀತಿ ಮಾಡುತ್ತಿರುವುದನ್ನು ತಿಳಿದ ಅಬುಬಕ್ಕರ್ ಅವರು ಅಲ್ಲೇ ಪಕ್ಕದಲ್ಲಿದ್ದ ಕಂಪೌಂಡ್ ಅನ್ನು ಜಿಗಿದು ಓಡಿ ಹೋಗಿದ್ದಾರೆ.
ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ: 35/2025 ಕಲಂ, 126(2), 109, 324(3), 352, 351(2) ಜೊತೆ 3(5) BNSರಂತೆ ಪ್ರಕರಣ ದಾಖಲಿಸಲಾಗಿದೆ. ತನಿಖೆ ಮುಂದುವರಿದಿದೆ.
