ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸತತ ನಾಲ್ಕು ವರ್ಷಗಳಿಂದ ಸ್ಥಗಿತಗೊಂಡಿದ್ದ ಲ್ಯಾಪ್‌ಟಾಪ್ ವಿತರಣೆಯ ಕಾರ್ಯವನ್ನು ಪುನರಾರಂಭಿಸಬೇಕು. ವಿದ್ಯಾರ್ಥಿಗಳಿಗೆ ಶಿಷ್ಯ ವೇತನ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿ ದಲಿತ ವಿದ್ಯಾರ್ಥಿ ಪರಿಷತ್ ಮುಖಂಡರು ಬೆಂಗಳೂರಿನಲ್ಲಿ ಧಾರವಾಡ ಗ್ರಾಮೀಣ ಶಾಸಕ ವಿನಯ್ ಕುಲಕರ್ಣಿ ಅವರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದ್ದಾರೆ.
ಬೆಂಗಳೂರಿನಲ್ಲಿರುವ ವಿನಯ್ ಕುಲಕರ್ಣಿ ಅವರ ನಿವಾಸದಲ್ಲಿ ಶಾಸಕರನ್ನು ಭೇಟಿ ಮಾಡಿದ ವಿದ್ಯಾರ್ಥಿ ಮುಖಂಡರು, “ಕರ್ನಾಟಕ ವಿಶ್ವವಿದ್ಯಾಲಯದ ಎಸ್‌ಸಿ/ಎಸ್‌ಟಿ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಣೆ ಮಾಡುವ ಕಾರ್ಯಕ್ರಮವನ್ನು ನಾಲ್ಕು ವರ್ಷಗಳಿಂದ ಸ್ಥಗಿತಗೊಳಿಸಲಾಗಿದೆ. ಕಾರ್ಯಕ್ರಮವನ್ನು ಪುನರಾರಂಭಿಸಿ, ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ಸೌಲಭ್ಯ ಕಲ್ಪಿಸಿಕೊಡಬೇಕು. ವಿವಿಧ ಪದವಿ, ಸ್ನಾತಕೋತ್ತರ ಹಾಗೂ ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಶಿಷ್ಯವೇತನ ಮಂಜೂರು ಮಾಡಬೇಕು” ಎಂದು ಒತ್ತಾಯಿಸಿದರು.
“ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿರುವ ಎಲ್ಲ ವಸತಿ ನಿಲಯಗಳಲ್ಲಿನ ವಿದ್ಯಾರ್ಥಿಗಳಿಗೆ ಮಾಸಿಕ ಶಿಷ್ಯವೇತನವನ್ನು ಇಂದಿನ ಮಾರುಕಟ್ಟೆಯ ದರವನ್ನು ಗಮನದಲ್ಲಿಟ್ಟುಕೊಂಡು 5,000ಕ್ಕೆ ಹೆಚ್ಚಿಸಬೇಕು. ಕಾನೂನು ವಿದ್ಯಾರ್ಥಿಗಳಿಗೆ ಸ್ಥಗಿತಗೊಂಡಿದ್ದ ಮಾಸಿಕ ಶಿಷ್ಯವೇತನವನ್ನು ಪುನಃ ಪ್ರಾರಂಭಿಸಬೇಕು. ಸ್ನಾತಕೋತ್ತರ ವಿದ್ಯಾರ್ಥಿಗಳು ಮಾಡುವ ಕ್ಷೇತ್ರಕಾರ್ಯ ಅಧ್ಯಯನ ವರದಿಗಾಗಿ 10,000 ರೂ.ವರೆಗೆ ದೊರೆಯುವಂತಾಗಬೇಕು. ವಿಶ್ವವಿದ್ಯಾಲಯದಲ್ಲಿ ಅಭ್ಯಾಸಿಸುತ್ತಿರುವ ಎಸ್‌ಸಿ/ಎಸ್‌ಟಿ ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಪದವಿ, ಡಿಪ್ಲಮಾ ಹಾಗೂ ವಸತಿ ನಿಲಯದ ಪ್ರವೇಶ ಶುಲ್ಕಗಳನ್ನು ಹೆಚ್ಚಿಸಿದ್ದು, ಅದನ್ನು ಕಡಿತಗೊಳಿಸಬೇಕು. ಮ್ಯಾನೇಜ್ಮೆಂಟ್ ಕೋಟಾದಡಿಯಲ್ಲಿ ಪದವಿ, ಸ್ನಾತಕೋತ್ತರ ಪದವಿ ಮತ್ತು ವೃತ್ತಿಪರ ಕೋರ್ಸುಗಳಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯ ಹಾಗೂ ಶಿಷ್ಯವೇತನ ಮಂಜೂರು ಮಾಡಬೇಕು” ಎಂದು ಆಗ್ರಹಿಸಿದರು.
ಶಾಸಕರ ಭೇಟಿ ವೇಳೆ ಸಂಘಟನೆಯ ಧಾರವಾಡ ಜಿಲ್ಲಾ ಅಧ್ಯಕ್ಷ ಹನುಮಂತ ದಾಸರ, ಪ್ರಧಾನ ಕಾರ್ಯದರ್ಶಿ ಮಂಜುನಾಥ ಹಾಸಟ್ಟಿ, ಸಂಗಮೇಶ ಬನಸೋಡೆ, ಕುಮಾರ್ ತಳವಾರ ಹಾಗೂ ಬಸವರಾಜ್. ಎಚ್. ಇದ್ದರು.