ದೇಶದ ಸುದ್ದಿ ಮಾಧ್ಯಮಗಳು ಪಹಲ್ಗಾಮ್ ಉಗ್ರ ದಾಳಿಯ ಹೊಣೆಯನ್ನು, ಭದ್ರತಾ ವೈಫಲ್ಯವನ್ನು ಮೋದಿ ಮತ್ತು ಅಮಿತ್ ಶಾ ತಲೆಗೆ ಕಟ್ಟಲು ತಯಾರಿಲ್ಲ. ಬದಲಿಗೆ ಪ್ರಶ್ನೆ ಮಾಡುವವರಿಗೆ ದೇಶದ್ರೋಹಿ ಪಟ್ಟ ಕಟ್ಟಲಾಗುತ್ತಿದೆ...
‘ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ 26 ಪ್ರವಾಸಿಗರ ನರಮೇಧಗೈದ ಎಲ್ಲಾ ಉಗ್ರರನ್ನು ಹುಡುಕಿ ಹುಡುಕಿ ಬೇಟೆಯಾಡುತ್ತೇವೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ದೆಹಲಿಯಲ್ಲಿ ಗುಡುಗಿದ್ದಾರೆ.
ಗೃಹ ಸಚಿವರ ‘ಹುಡುಕಿ ಹುಡುಕಿ ಬೇಟೆಯಾಡುವ’ ಹೇಳಿಕೆ ಈಗ ಟ್ರೋಲ್‌ಗೆ ಒಳಗಾಗಿದೆ. ವೈರಲ್ ಆಗುತ್ತಿದೆ. ಅದರಲ್ಲೂ ಕೇಂದ್ರ ಸರ್ಕಾರದ ನಡೆಗಳ ಕುರಿತು ಕಟುವಾಗಿ ಟೀಕಿಸುವ, ತರ್ಕಬದ್ಧವಾಗಿ ವಿಚಾರ ಮಂಡಿಸುವ ತೃಣಮೂಲ ಕಾಂಗ್ರೆಸ್ಸಿನ ಸಂಸದೆ ಮೊಹುವಾ ಮೊಯಿತ್ರಾ ಅವರು, ‘ಪಹಲ್ಗಾಮ್‌ನಲ್ಲಿ ಉಗ್ರರ ದಾಳಿಯಾಗಿ ಇಂದಿಗೆ ಹತ್ತು ದಿನಗಳು ಕಳೆದವು. ಈ ಹತ್ತು ದಿನಗಳಲ್ಲಿ ಕೇಂದ್ರ ಸರ್ಕಾರ, ಸೋಷಿಯಲ್ ಮೀಡಿಯಾದಲ್ಲಿ ಸರ್ಕಾರವನ್ನು ಪ್ರಶ್ನೆ ಮಾಡುವವರನ್ನು ಹುಡುಕಿ ಹುಡುಕಿ ಬೇಟೆಯಾಡುತ್ತಿದೆ’ ಎಂದು ಲೇವಡಿ ಮಾಡಿದ್ದಾರೆ.
ಅದಕ್ಕೆ ಪೂರಕವಾಗಿ ಅವರು, ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಸಕ್ರಿಯವಾಗಿರುವ, ಕೇಂದ್ರ ಸರ್ಕಾರವನ್ನು ಪ್ರಶ್ನೆ ಮಾಡುವ ನೇಹಾ ಸಿಂಗ್ ರಾಥೋಡ್ ಮತ್ತು ಡಾ. ಮೆಡುಸಾರ ಮೇಲೆ ಕೇಸು ದಾಖಲಿಸಿರುವುದನ್ನು ಉಲ್ಲೇಖಿಸಿದ್ದಾರೆ.
ಪಹಲ್ಗಾಮ್ ಉಗ್ರ ದಾಳಿಯ ನಂತರ ನಿರ್ದಿಷ್ಟ ಧಾರ್ಮಿಕ ಸಮುದಾಯವನ್ನು ಗುರಿಯಾಗಿಸಿಕೊಂಡು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಲಾದ ಪ್ರಚೋದನಕಾರಿ ಪೋಸ್ಟ್‌ಗಳು ದೇಶದ ಏಕತೆಗೆ ಹಾನಿ ಉಂಟುಮಾಡಬಹುದು ಎಂಬ ದೂರಿನ ಆಧಾರದ ಮೇರೆಗೆ; ಕವಯಿತ್ರಿ, ಜಾನಪದ ಗಾಯಕಿ ನೇಹಾ ಸಿಂಗ್ ರಾಥೋಡ್ ಹಾಗೂ ಲಕ್ನೋ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಪ್ರೊ. ಮಾದ್ರಿ ಕಟೋಕಿ ಯಾನೆ ಡಾ. ಮೆಡುಸಾ ವಿರುದ್ಧ ಪೊಲೀಸರು ದೇಶದ್ರೋಹ ಪ್ರಕರಣ ದಾಖಲಿಸಿದ್ದಾರೆ.
ಇದನ್ನು ಓದಿದ್ದೀರಾ?: ಪಹಲ್ಗಾಮ್ ದಾಳಿಗೆ ಭಾರತ ಪ್ರತೀಕಾರ ತೀರಿಸಿಕೊಳ್ಳಲಿದೆ: ಕೇಂದ್ರ ಗೃಹ ಸಚಿವ ಅಮಿತ್ ಶಾ
ಏತನ್ಮಧ್ಯೆ, ಕೆಲವು ರಾಜಕೀಯ ನಾಯಕರು, ಅದರಲ್ಲೂ ವಿಶೇಷವಾಗಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಡಾ. ಜಿ. ಪರಮೇಶ್ವರ್, ಪಹಲ್ಗಾಮ್ ಉಗ್ರ ದಾಳಿಗೆ ಕೇಂದ್ರ ಗುಪ್ತಚರ ಸಂಸ್ಥೆಗಳ ಲೋಪ ಮತ್ತು ಭದ್ರತಾ ವೈಫಲ್ಯವೇ ಕಾರಣ ಎಂದು ಟೀಕಿಸಿದ್ದಾರೆ. ಮುಂದುವರೆದು, ಇದು ಗೃಹ ಸಚಿವಾಲಯದ ಅಡಿಯಲ್ಲಿ ಕಾರ್ಯ ನಿರ್ವಹಿಸುವ ಕಾರಣಕ್ಕೆ ದಾಳಿಯ ಹೊಣೆಯನ್ನು ಗೃಹ ಸಚಿವರಾದ ಅಮಿತ್ ಶಾ ಹೊತ್ತುಕೊಳ್ಳಬೇಕು ಎಂದಿದ್ದಾರೆ.
ಹಾಗೆಯೇ ಮಹಾರಾಷ್ಟ್ರದ ಶಿವಸೇನೆ ನಾಯಕ ಸಂಜಯ್ ರಾವತ್, ಜಮ್ಮು ಮತ್ತು ಕಾಶ್ಮೀರದ ಭದ್ರತೆಯ ಜವಾಬ್ದಾರಿಯನ್ನು ಸೇನೆ ಹೊತ್ತುಕೊಂಡಿದ್ದರೂ, ಕಾರ್ಯಾಚರಣೆಯಲ್ಲಿದ್ದರೂ ದಾಳಿ ನಡೆದಿದೆ. ಈ ಬಗ್ಗೆ ಮೊದಲು ಕ್ರಮ ಕೈಗೊಳ್ಳಬೇಕಾದ್ದು ಕೇಂದ್ರ ಗೃಹ ಸಚಿವಾಲಯ. ಭದ್ರತೆಯ ವಿಷಯದಲ್ಲಿ ಕೇಂದ್ರ ಸರ್ಕಾರ ಪದೇ ಪದೇ ತಪ್ಪೆಸಗುತ್ತಿದೆ. ಪ್ರಧಾನಮಂತ್ರಿಗಳು ಗೃಹ ಸಚಿವರ ರಾಜೀನಾಮೆ ಸ್ವೀಕರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಮುಂದುವರೆದು, ದೇಶ ಉಗ್ರರ ದಾಳಿಯಂತಹ ಆತಂಕದ ಸ್ಥಿತಿಯಲ್ಲಿರುವಾಗಲೇ ಕೇಂದ್ರ ಸರ್ಕಾರ 60 ಸಾವಿರ ಕೋಟಿ ಕೊಟ್ಟು 27 ರಫೇಲ್ ಯುದ್ಧ ವಿಮಾನಗಳನ್ನು ಖರೀದಿಸಿದೆ. ಪ್ರಧಾನಿ ಮೋದಿಯವರು ಭಾರತೀಯ ಸೇನೆಗೆ ಶಕ್ತಿ ತುಂಬಿ ಸಂಪೂರ್ಣ ಅಧಿಕಾರ ಕೊಟ್ಟಿದ್ದೇವೆ ಎನ್ನುತ್ತಾರೆ. ಆದರೂ ದಾಳಿಗಳು ನಡೆಯುತ್ತಲೇ ಇವೆ. ಇದರಲ್ಲಿ ರಾಜಕೀಯ ನಾಯಕರ ಪಾತ್ರವೇನು ಎನ್ನುವುದನ್ನು ದೇಶಕ್ಕೆ ತಿಳಿಸಬೇಕಾಗಿದೆ. ಹಾಗೆಯೇ ನಾಲ್ಕು ಯೂ ಟ್ಯೂಬ್ ಚಾನಲ್‌ಗಳ ಮೇಲೆ ನಿಷೇಧ ಹೇರುವುದು ಪ್ರತೀಕಾರವಾಗುವುದಿಲ್ಲ, ನಾಟಕ ಎನಿಸಿಕೊಳ್ಳುತ್ತದೆ ಎಂದು ಲೇವಡಿ ಮಾಡಿದ್ದಾರೆ.
ಕೇಂದ್ರ ಸರ್ಕಾರವು ಆಗಸ್ಟ್ 5, 2019ರಂದು ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ವಿಶೇಷ ಸ್ಥಾನಮಾನವನ್ನು ನೀಡುವ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿತು. ನರೇಂದ್ರ ಮೋದಿ ಸರ್ಕಾರದ ಈ ನಿರ್ಧಾರವು ಅನೇಕ ರೀತಿಯಲ್ಲಿ ದೋಷಪೂರಿತವಾಗಿತ್ತು. ಈ ಕ್ರಮವು ಇತಿಹಾಸದ ನಿರಾಕರಣೆಯಾಗಿತ್ತು ಮತ್ತು ಜಮ್ಮು- ಕಾಶ್ಮೀರದ ಜನರು ಭಾರತದೊಂದಿಗೆ ಹೊಂದಿದ್ದ ಸಾಮಾಜಿಕ ಒಪ್ಪಂದವನ್ನು ಉಲ್ಲಂಘಿಸಿತ್ತು.
ಆದರೆ ಕೇಂದ್ರ ಸರ್ಕಾರ, ರಾಜ್ಯಕ್ಕೆ ವಿಶೇಷ ಸ್ಥಾನಮಾನ ಮತ್ತು ವಿಶಿಷ್ಟ ರಾಜಕೀಯ ಗುರುತನ್ನು ನೀಡಲಾಗಿದೆ; ಮುಖ್ಯವಾಹಿನಿಗೆ ತಂದಿರುವುದರಿಂದ ಅಲ್ಲಿ ಉಗ್ರರ ಸಮಸ್ಯೆ ಕಡಿಮೆಯಾಗಿದೆ ಎಂದು ವಾದಿಸಿತ್ತು. ಈಗ ಜಮ್ಮು – ಕಾಶ್ಮೀರದ ಹೊರಗಿನ ಜನರು ಮತ್ತು ಹೂಡಿಕೆದಾರರು ಕೇಂದ್ರಾಡಳಿತ ಪ್ರದೇಶದಲ್ಲಿ ಮನೆ, ಭೂಮಿಯನ್ನು ಖರೀದಿಸಬಹುದು. ಇದಲ್ಲದೆ ಕಾಶ್ಮೀರದಿಂದ ಪಲಾಯನ ಮಾಡಿದ ಅನೇಕ ಮಂದಿ ಕಾಶ್ಮೀರಿ ಪಂಡಿತರು, ತಮ್ಮ ನಾಡಿಗೆ ವಾಪಸಾಗಬಹುದು, ವ್ಯಾಪಾರ-ವ್ಯವಹಾರ ಆರಂಭಿಸಬಹುದು ಎಂದಿತ್ತು. ಮೋದಿಯವರ ಮಾತಿನಿಂದಾಗಿ ಪ್ರವಾಸಿಗರ ಸಂಖ್ಯೆಯೂ ಹೆಚ್ಚಾಗಿತ್ತು.
ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾಯಿತ ಸರ್ಕಾರವಿದ್ದರೂ, ಸೇನೆ, ಗುಪ್ತಚರ ಮತ್ತು ಪೊಲೀಸ್ ವ್ಯವಸ್ಥೆ ಕೇಂದ್ರದ ಸುಪರ್ದಿಯಲ್ಲಿತ್ತು. ಗವರ್ನರ್ ಮೂಲಕ ರಾಜ್ಯ ಸರ್ಕಾರವನ್ನು ನಿಯಂತ್ರಿಸುತ್ತಿತ್ತು. ಇಂತಹ ಇಕ್ಕಟ್ಟಿನ ಸಂದರ್ಭದಲ್ಲಿಯೇ ಪಹಲ್ಗಾಮ್‌ನಲ್ಲಿ ಉಗ್ರರ ದಾಳಿ ನಡೆದಿದೆ. 26 ಅಮಾಯಕರ ಪ್ರಾಣಪಕ್ಷಿ ಹಾರಿಹೋಗಿದೆ.
ಇದನ್ನು ಓದಿದ್ದೀರಾ?: ಪಹಲ್ಗಾಮ್ ದಾಳಿ | ಸೇನೆಗೆ ಮಹಾಬಲ; ಭಾರತದ ಭವಿಷ್ಯ ಹೇಗಿರಬೇಕು?
ಪಹಲ್ಗಾಮ್ ದಾಳಿಯಾದ ನಂತರ ಕೇಂದ್ರ ಸರ್ಕಾರ ಎಚ್ಚೆತ್ತುಕೊಂಡಿದೆ. ದಾಳಿಯ ಹಿಂದಿನ ಸಂಚು ಮತ್ತು ಗುಪ್ತಚರ ಇಲಾಖೆಯ ವೈಫಲ್ಯ ಕುರಿತು ರಾಷ್ಟ್ರೀಯ ತನಿಖಾ ಸಂಸ್ಥೆ(NIA) ತನಿಖೆ ನಡೆಸುತ್ತಿದೆ. ಉಗ್ರರ ದಾಳಿಗೆ ಗೃಹ ಸಚಿವರನ್ನು ನೇರವಾಗಿ ಆರೋಪಿ ಸ್ಥಾನದಲ್ಲಿ ನಿಲ್ಲಿಸಲು ಖಚಿತ ಮಾಹಿತಿಗಳಿಲ್ಲದಿದ್ದರೂ, ಗುಪ್ತಚರ ವೈಫಲ್ಯದ ಆರೋಪಗಳು ಗೃಹ ಸಚಿವಾಲಯದ ಕಾರ್ಯನಿರ್ವಹಣೆಯ ಮೇಲೆ ಪರೋಕ್ಷವಾಗಿ ಪ್ರಶ್ನೆಗಳನ್ನು ಎತ್ತುವಂತೆ ಮಾಡಿದೆ. ದಾಳಿಯ ನಂತರ ನಡೆದ ಸರ್ವಪಕ್ಷ ಸಭೆಯಲ್ಲಿ, ಸಿಕ್ಕ ಅವಕಾಶವನ್ನು ಬಳಸಿಕೊಂಡ ವಿರೋಧ ಪಕ್ಷಗಳು, ಸರ್ಕಾರದ ನಿಲುವಿಗೆ ಬೆಂಬಲ ವ್ಯಕ್ತಪಡಿಸುತ್ತಲೇ, ಭದ್ರತಾ ವೈಫಲ್ಯದ ಪ್ರಶ್ನೆಯನ್ನೂ ಎತ್ತಿವೆ. ಇಕ್ಕಟ್ಟಿಗೆ ಸಿಲುಕಿದ ಕೇಂದ್ರ ಸರ್ಕಾರ, ತನ್ನ ಕಡೆಯಿಂದಾದ ವೈಫಲ್ಯವನ್ನು ಒಪ್ಪಿಕೊಂಡಿದೆ. ಅದು ಮಾಧ್ಯಮಗಳಲ್ಲಿ ‘ಪುಟ್ಟ’ದಾಗಿ ವರದಿಯಾಗಿದೆ.
ವಿಪರ್ಯಾಸಕರ ಸಂಗತಿ ಎಂದರೆ, ಮೋದಿಯವರ ಕೃಪಾಕಟಾಕ್ಷಕ್ಕೆ ಒಳಗಾಗಿರುವ, ದೇಶದ ಸುದ್ದಿ ಮಾಧ್ಯಮಗಳು ಪಹಲ್ಗಾಮ್ ಉಗ್ರ ದಾಳಿಯ ಹೊಣೆಯನ್ನು, ಭದ್ರತಾ ವೈಫಲ್ಯವನ್ನು ಮೋದಿ ಮತ್ತು ಅಮಿತ್ ಶಾ ತಲೆಗೆ ಕಟ್ಟಲು ತಯಾರಿಲ್ಲ. ಬದಲಿಗೆ ಪ್ರಶ್ನೆ ಮಾಡುವವರಿಗೆ ದೇಶದ್ರೋಹಿ ಪಟ್ಟ ಕಟ್ಟಲಾಗುತ್ತಿದೆ, ಮೊಕದ್ದಮೆ ಹೂಡಲಾಗುತ್ತಿದೆ, ಬಾಯಿ ಮುಚ್ಚಿಸಲಾಗುತ್ತಿದೆ.
ಪಹಲ್ಗಾಮ್‌ನಲ್ಲಿ ಉಗ್ರರು ದಾಳಿ ಮಾಡಿ ಇವತ್ತಿಗೆ ಹತ್ತು ದಿನಗಳಾದವು. ಹತ್ತು ದಿನಗಳಿಂದ ‘ಹುಡುಕಿ ಹುಡುಕಿ ಬೇಟೆ’ಯಾಡುತ್ತಿರುವುದು ಯಾರನ್ನು?

ಲೇಖಕ, ಪತ್ರಕರ್ತ