ಬಿರುಗಾಳಿ ಸಹಿತವಾಗಿ ಸುರಿದ ಬಾರೀ ಮಳೆಗೆ 2 ಎಕರೆ ಭೂಮಿಯಲ್ಲಿ ಬೆಳೆದಿದ್ದ ಹೀರೆಕಾಯಿ ಬೆಳೆ ನೆಲಸಮವಾಗಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಮಿಟ್ಟೇಮರಿ ಹೋಬಳಿಯ ಕನಗಮಾಕಲಪಲ್ಲಿ ಗ್ರಾಮದ ರೈತ ಮುರುಳಿ ಎಂಬುವರು ತಮ್ಮ ಎರಡು ಎಕರೆ ಭೂಮಿಯಲ್ಲಿ ಹೀರೆಕಾಯಿ ಬೆಳೆ ಬೆಳೆದಿದ್ದರು. ಒಂದೂವರೆ ತಿಂಗಳಿಂದ ನೀರು, ಗೊಬ್ಬರ ನೀಡಿ ಬೆಳೆದಿದ್ದ ಬೆಳೆ ಮಳೆಯ ಹೊಡೆತಕ್ಕೆ ಸಿಲುಕಿ ನೆಲಕಚ್ಚಿದೆ.
ಇನ್ನೆರಡು ದಿನಗಳಲ್ಲಿ ಬೆಳೆ ಕಟಾವು ಮಾಡಬೇಕಿತ್ತು. ಅಷ್ಟರಲ್ಲಿ ಏಕಾಏಕಿಯಾಗಿ ಜೋರಾದ ಗಾಳಿ ಮಳೆ ಸುರಿದಿದ್ದು, 2 ಎಕರೆಯಲ್ಲಿ ಬೆಳೆದಿದ್ದ ಸಂಪೂರ್ಣ ಬೆಳೆ ನಷ್ಟವಾಗಿದೆ. ಕಷ್ಟ ಬೆಳೆದು ಬೆಳೆ ಈ ರೀತಿ ನಷ್ಟವಾಗಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರದತಾಗಿದೆ ಎಂದು ರೈತ ಮುರುಳಿ ಕಂಗಾಲಾಗಿದ್ದಾರೆ.
ಇದನ್ನೂ ಓದಿ : ಚಿಕ್ಕಬಳ್ಳಾಪುರ | ಪುತ್ಥಳಿ ವಿವಾದ; ಕೆಂಪೇಗೌಡರನ್ನು ಅಪಮಾನಿಸಿದರೆ ತಕ್ಕ ಪಾಠ: ನಿರ್ಮಾಪಕ ಉಮಾಪತಿ
ಈ ಕುರಿತು ಈದಿನ ಡಾಟ್ ಕಾಮ್ ಜತೆಗೆ ಮಾತನಾಡಿದ ರೈತ ಸಂಘ ರಾಜ್ಯ ಸಂಚಾಲಕ ಲಕ್ಷ್ಮಣ್ ರೆಡ್ಡಿ, ರೈತರು ಬೆಳೆದಿದ್ದ ಬೆಳೆ ಮಳೆ, ಗಾಳಿಯಿಂದ ನೆಲಸಮವಾಗಿದೆ. ಸಾಲ ಮಾಡಿ ಬೆಳೆ ಬೆಳೆಯುವ ರೈತರಿಗೆ ಇದು ದೊಡ್ಡ ಆಘಾತ. ಈ ರೀತಿ ನಷ್ಟ ಅನುಭವಿಸುವ ರೈತರಿಗೆ ಇಲಾಖೆಯಿಂದ ಸೂಕ್ತ ಪರಿಹಾರ ದೊರೆಯುವಂತಾಗಬೇಕು ಎಂದು ಹೇಳಿದರು.