ಮಾರ್ಚ್ 21 ರಿಂದ ಏಪ್ರಿಲ್ 4 ರ ವರೆವಿಗೂ ರಾಜ್ಯದಲ್ಲಿ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶದಲ್ಲಿ ಚೇತನ ವಿದ್ಯಾಮಂದಿರದ ವಿದ್ಯಾರ್ಥಿ ಮೊಹಮದ್ ಮುಸ್ತಾರ್ ಆದೀಲ್ 625 ಕ್ಕೆ 625 ಅಂಕ ಪಡೆಯುವ ಮೂಲಕ ರಾಜ್ಯಕ್ಕೆ ಟಾಪರ್ ಆಗಿದ್ದಾರೆ.
” ಟಾಪರ್ ಬಂದಿರುವುದು ಖುಷಿ ತಂದಿದೆ. ಗಣಿತ, ವಿಜ್ಞಾನ ವಿಷಯಗಳು ನನಗೆ ತುಂಬಾ ಇಷ್ಟವಾದವು. ಆದರೆ ನನಗೆ ಸಮಾಜ ವಿಜ್ಞಾನ ಕಷ್ಟವಾಗುತ್ತಿತ್ತು. ಉಪನ್ಯಾಸಕರು ಕಥೆ ರೂಪದಲ್ಲಿ ಹೇಳಿಕೊಡುತ್ತಿದ್ದರು. ಪಠ್ಯ ಪುಸ್ತಕಕ್ಕೆ ಮಾತ್ರ ಸೀಮಿತವಾಗದೆ ಇತರ ಚಟುವಟಿಕೆಯನ್ನು ಮಾಡುತ್ತಿದ್ದೆ. ಶಿಕ್ಷಕರು ನಮಗೆ ಮಾರ್ಗದರ್ಶನ ಮಾಡುತ್ತಿದ್ದರು. ಮೊದಲ ದಿನದಿಂದಲೂ ಪ್ರತಿ ದಿನ 2 ಗಂಟೆ ಓದಿದರೆ ಸಾಕು. ಅರ್ಥ ಮಾಡಿಕೊಂಡು ಓದಬೇಕು. ಮನೆಯಲ್ಲಿ ಓದಿಗೆ ಪ್ರೋತ್ಸಾಹ ನೀಡುತ್ತಿದ್ದರು. ನನಗೆ ವೈದ್ಯನಾಗಬೇಕೆಂಬ ಆಸೆಯಿದೆ ಎಂದು ವಿದ್ಯಾರ್ಥಿ ಮೊಹಮದ್ ಮುಸ್ತಾರ್ ಆದೀಲ್ ತನ್ನ ಬಯಕೆ ವ್ಯಕ್ತಪಡಿಸಿದ್ದಾರೆ.
ತುಮಕೂರಿನ ಸದಾಶಿವನಗರದಲ್ಲಿ ವಾಸವಿದ್ದೇವೆ. ನಾನು ಖತಾರ್‌ನಲ್ಲಿ ಪ್ರಾಜೆಕ್ಟ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದೆ. ತದ ನಂತರ ವಾಲೆಂಟರಿ ರಿಟೈನ್ ಮೆಂಟ್ ತೆಗೆದುಕೊಂಡೆ. ಮಗನಿಗೆ ಪ್ರತಿನ ದಿನ ಓದಿಕೊಳ್ಳುವಂತೆ, ಆಯಾ ವಿಷಯಗಳನ್ನು ಮನನ ಮಾಡಿಸುತ್ತಿದ್ದೆ. ಶಿಕ್ಷಕರು ಅಲ್ಲದೇ ನಾನು ಸಹ ಫಾಲೋಅಪ್ ಮಾಡುತ್ತಿದ್ದೆ. ಇದರಿಂದಾಗಿ ಮಗ ರ್ಯಾಂಕ್ ಬಂದಿದ್ದಾನೆ. ನಮಗೆ ಸಂತೋಷವಾಗಿದ್ದು, ಆತ ವೈದ್ಯನಾಗಬೇಕೆಂಬ ಆಸೆಗೆ ನಮ್ಮ ಬೆಂಬಲ ಸದಾ ಇರುತ್ತದೆ ಎಂದು ವಿದ್ಯಾರ್ಥಿ ತಂದೆ ಮೊಹಮದ್ ಮನ್ಸೂರ್ ಆದೀಲ್ ಹಾಗೂ ತಾಯಿ ಹಫ್ರೋಜ್ ಜಹಾನ್ ಖುಷಿ ಹಂಚಿಕೊಂಡರು.
ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಕೆ.ವಿ. ಸುಬ್ಬರಾವ್ ಮಾತನಾಡಿ, ಸರ್ವೋದಯ ಶಿಕ್ಷಣ ಸಂಸ್ಥೆಯ ಆಶ್ರಯದಲ್ಲಿ ನಡೆಯುತ್ತಿರುವ ಚೇತನ ವಿದ್ಯಾಮಂದಿರ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೊದಲ ರ್ಯಾಂಕ್ ಬಂದಿರುವುದು ತುಂಬಾ ಸಂತೋಷ ತಂದಿದೆ. ಇದುವರೆಗೂ 2 ಮತ್ತು 3ನೇ ಸ್ಥಾನ ಬರುತ್ತಿತ್ತು. ಇದೇ ಮೊದಲ ಬಾರಿಗೆ ಪ್ರಥಮ ಸ್ಥಾನ ಪಡೆದಿದೆ. ಇದಕ್ಕೆ ಕಾರಣಕರ್ತರಾದ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಫಸ್ಟ್ ರ‍್ಯಾಂಕ್ ಜತೆಗೆ ಇನ್ನು 4 ರ‍್ಯಾಂಕ್‌ಗಳನ್ನು ಸಂಸ್ಥೆಯ ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ ಎಂದು ಹೇಳಿದರು.
ಚೇತನ ವಿದ್ಯಾಮಂದಿರ ಸಂಸ್ಥೆಯ ಎಸ್. ಸುಬ್ಬರಾಯ, ಕೆ.ವಿ. ಸುಬ್ಬರಾವ್ ವಿದ್ಯಾರ್ಥಿ ಮೊಹಮದ್ ಮುಸ್ತಾರ್ ಆದೀಲ್ ರವರನ್ನು ಅಭಿನಂದಿಸಿದರು.