ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಶುಕ್ರವಾರವೂ ಗುಡುಗು, ಸಿಡಿಲಿನೊಂದಿಗೆ ಧಾರಾಕಾರ ಮಳೆ ಸುರಿದಿದೆ. ಹಾಗೆಯೇ ದೆಹಲಿ ಸೇರಿದಂತೆ ಉತ್ತರ ಭಾರತದ ಹಲವೆಡೆ ಇಂದು ಬೆಳಿಗ್ಗೆಯಿಂದಲೇ ಬಿರುಗಾಳಿ ಸಹಿತ ಮಳೆ ಸುರಿದಿದ್ದು, ಇದರಿಂದ ಉಂಟಾದ ಅವಘಡಗಳಲ್ಲಿ ಏಳು ಜನರು ಸಾವಿಗೀಡಾಗಿದ್ದಾರೆ.
ಗುರುವಾರ ಸಂಜೆ ಸುರಿದ ಮಳೆಯಿಂದ ಹಲವೆಡೆ ಮರಗಳು ಮುರಿದು ಬಿದ್ದಿವೆ. ರಸ್ತೆಯಲ್ಲಿ ನೀರು ನಿಂತು ಸಂಚಾರಕ್ಕೆ ತೊಡಕುಂಟಾಗಿತ್ತು. ಕತ್ರಿಗುಪ್ಪೆ ಮುಖ್ಯರಸ್ತೆಯ ಬಸ್ ನಿಲ್ದಾಣದ ಬಳಿ ಆಟೊದ ಮೇಲೆ ಮರ ಉರುಳಿ ಬಿದ್ದು, ಆಟೊ ಚಾಲಕ, ಇಟ್ಟಮಡು ನಿವಾಸಿ ಮಹೇಶ್ (45) ಸ್ಥಳದಲ್ಲೇ ಮೃತಪಟ್ಟಿದ್ದರು.
ಶುಕ್ರವಾರದ ಮಳೆಗೆ ರಾಜಧಾನಿಯಲ್ಲಿ ಸದ್ಯಕ್ಕೆ ಯಾವುದೇ ಅನಾಹುತಗಳು ವರದಿಯಾಗಿಲ್ಲ. ಹೆಬ್ಬಾಳ, ಸಂಜಯನಗರ, ಆರ್.ಟಿ ನಗರ, ಗಂಗಾನಗರ, ಮೇಖ್ರಿ ಸರ್ಕಲ್, ಶಿವಾನಂದ ಸರ್ಕಲ್, ಮೆಜೆಸ್ಟಿಕ್, ಆನಂದ್ ರಾವ್ ಸರ್ಕಲ್, ಗಾಂಧಿನಗರ, ಕೆ.ಆರ್ ಸರ್ಕಲ್, ಕಾರ್ಪೋರೇಶನ್ ಹಾಗೂ ಮಾರ್ಕೆಟ್, ಮಲ್ಲೇಶ್ವರಂ, ರಾಜಾಜಿನಗರ, ಗಾಂಧಿ ನಗರದಲ್ಲಿ ಸಂಜೆ ಜೋರಾಗಿ ಮಳೆ ಸುರಿದಿದೆ. ಚಿಕ್ಕಬಳ್ಳಾಪುರದಲ್ಲಿ ಜೋರು ಮಳೆಯಾಗಿದ್ದು, ಬಾಗೇಪಲ್ಲಿಯ ತರಕಾರಿ ಬೆಳೆಗಳು ನೆಲ ಕಚ್ಚಿವೆ.
ಮೇ.3ರಂದು ಹಾವೇರಿ, ಧಾರವಾಡ, ಗದಗ, ಕಲಬುರಗಿ, ರಾಯಚೂರು ಹಾಗೂ ಕೊಪ್ಪಳ ಜಿಲ್ಲೆಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮೇ 7ರ ವರೆಗೆ ಮಳೆಯ ಸಾಧ್ಯತೆ
IMD ಪ್ರಕಾರ, ಮೇ 4ರ ವರೆಗೆ ಕರ್ನಾಟಕದ ವಿವಿಧ ಭಾಗಗಳಲ್ಲಿ ಧಾರಾಕಾರ ಮಳೆ ಮುಂದುವರಿಯಲಿದೆ. ಚಂಡಮಾರುತದ ಪ್ರಭಾವ ಮತ್ತು ಪೂರ್ವ ಮುಂಗಾರು ಮಳೆಯಿಂದ ರಾಜ್ಯದ ಬಿಸಿಲು ಕಡಿಮೆಯಾಗಿ ತಂಪಾದ ಹವಾಮಾನ ನಿರೀಕ್ಷಿಸಲಾಗಿದೆ.