ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ಔರಾದ್ ತಾಲ್ಲೂಕಿನ ಸಂತಪೂರ ಗ್ರಾಮದ ಜ್ಞಾನ ಭಾರತಿ ಗುರುಕುಲ ಪ್ರೌಢ ಶಾಲೆಯ ವಿದ್ಯಾರ್ಥಿ ಆದರ್ಶ ವಿಠ್ಠಲರಾವ ತಾಲ್ಲೂಕಿಗೆ ಟಾಪರ್ ಆಗಿ ಹೊರಹೊಮ್ಮುವ ಮೂಲಕ ಗಮನ ಸೆಳೆದಿದ್ದಾರೆ.
ಆದರ್ಶ 625 ಅಂಕಗಳ ಪೈಕಿ 620 ಅಂಕ (ಶೇ 99.20) ಗಳಿಸಿದ್ದಾರೆ. ಕನ್ನಡದಲ್ಲಿ 125, ಸಮಾಜ ವಿಜ್ಞಾನ 100, ಇಂಗ್ಲಿಷ್ 98 ಹಾಗೂ ಹಿಂದಿ, ಗಣಿತ, ವಿಜ್ಞಾನದಲ್ಲಿ ತಲಾ 99 ಅಂಕ ಪಡೆದಿದ್ದಾರೆ.
ಆದರ್ಶ ಅವರ ಕುಟುಂಬ ಮೂಲತಃ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸದ್ಯ ಸಂತಪೂರನಲ್ಲಿ ನೆಲೆಸಿರುವ ಇವರ ತಂದೆ ಪುಟ್ಟದೊಂದು ಕಿರಾಣಿ ಅಂಗಡಿ ನಡೆಸುತ್ತಾರೆ.
ʼಪರೀಕ್ಷೆಗೆ ಮುಂಚೆಯೇ ಅಚ್ಚುಕಟ್ಟಾಗಿ ಸಿದ್ಧತೆ ಮಾಡಿಕೊಂಡಿದ್ದರಿಂದ ಸಾಧನೆ ಸುಲಭವಾಯಿತು. ಶಾಲೆಯಲ್ಲಿ ಶಿಕ್ಷಕರ, ಪಾಲಕರ ಪ್ರೋತ್ಸಾಹದಿಂದ ಸಾಧನೆ ಮಾಡಲು ಸಾಧ್ಯವಾಗಿದೆ. ಪಿಯುಸಿ ವಿಜ್ಞಾನ ವಿಭಾಗ ಆಯ್ಕೆ ಮಾಡಿಕೊಳ್ಳುವೆ. ಮುಂದೆ ಜೆಇಇ ಸಿದ್ಧತೆ ನಡೆಸಿ ವಿಜ್ಞಾನಿ ಆಗುವ ಕನಸಿದೆʼ ಎಂದು ಹೇಳಿದರು.
ʼನಮ್ಮ ಮಗ ತಾಲ್ಲೂಕಿಗೆ ಪ್ರಥಮ ಸ್ಥಾನ ಗಳಿಸಿರುವುದು ಅತ್ಯಂತ ಸಂತಸವಾಗಿದೆ. ಸಾಧನೆಯ ಛಲ, ಸ್ಪಷ್ಟ ಗುರಿ ಹಾಗೂ ಕಲಿಕೆಯ ಬಗ್ಗೆ ಆಸಕ್ತಿ ಇದ್ದರೆ ಹೆಚ್ಚಿನ ಅಂಕಗಳನ್ನು ಗಳಿಸುವುದು ಕಷ್ಟವೇನಲ್ಲ. ಒತ್ತಾಯದ ಓದು ಹೆಚ್ಚು ಉತ್ತಮ ಫಲ ನೀಡದು. ಶೈಕ್ಷಣಿಕ ಸಾಧನೆಯಲ್ಲಿ ವಿದ್ಯಾರ್ಥಿಗಳ ಪರಿಶ್ರಮ ಮಹತ್ವ ಪಡೆದುಕೊಳ್ಳುತ್ತದೆʼ ಎಂದು ಪೋಷಕರು ಹೇಳಿದರು.
ವಿದ್ಯಾರ್ಥಿ, ಪೋಷಕರಿಗೆ ಸನ್ಮಾನ :
ಪ್ರಸಕ್ತ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಸಂತಪೂರ ಗ್ರಾಮದ ಜ್ಞಾನ ಭಾರತಿ ಗುರುಕುಲ ಪ್ರೌಢ ಶಾಲೆಯು ಶೇ 98.12ರಷ್ಟು ಫಲಿತಾಂಶ ಪಡೆದು ಉತ್ತಮ ಸಾಧನೆ ಮಾಡಿದೆ. ತಾಲ್ಲೂಕಿಗೆ ಪ್ರಥಮ ಸ್ಥಾನ ಗಳಿಸಿ ಸಾಧನೆಗೈದ ವಿದ್ಯಾರ್ಥಿ ಆದರ್ಶ ವಿಠ್ಠಲರಾವ್ ಅವರಿಗೆ ಶಾಲಾ ಆಡಳಿತ ಮಂಡಳಿಯಿಂದ ಗೌರವಿಸಲಾಯಿತು.
ಪರೀಕ್ಷೆ ಬರೆದ 41 ವಿದ್ಯಾರ್ಥಿಗಳ ಪೈಕಿ 20 ಅಗ್ರಶ್ರೇಣಿ, 17 ಪ್ರಥಮ ದರ್ಜೆ ಹಾಗೂ 2 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ. ಕನ್ನಡ ವಿಷಯದಲ್ಲಿ 6 ವಿದ್ಯಾರ್ಥಿಗಳು 125ಕ್ಕೆ 125 ಅಂಕ ಗಳಿಸಿ ಗಮನ ಸೆಳೆದಿದ್ದಾರೆ.
ಆದರ್ಶ ಶೇ 99.20 ರಷ್ಟು ಅಂಕ ಗಳಿಸಿ ತಾಲ್ಲೂಕಿಗೆ ಟಾಪರ್ ಆಗಿದ್ದಾರೆ. ಆದಿತ್ಯ ಶೇ 98.72, ಅಮೂಲ್ಯ ಶೇ 96.48, ಸಾಯಿಕುಮಾರ ಶೇ 96, ಸೃಷ್ಟಿ ಶೇ 95.68, ಜ್ಯೋತಿ ಶೇ 95.52, ಗಣೇಶ ಶೇ 95.20 ಹಾಗೂ ಮಹಾದೇವ ಚಂದ್ರಕಾಂತ ಶೇ 95.04ರಷ್ಟು ಅಂಕ ಪಡೆದು ಸಾಧನೆ ತೋರಿದ್ದಾರೆ.
ಈ ಸುದ್ದಿ ಓದಿದ್ದೀರಾ? SSLC Results : 31ನೇ ಸ್ಥಾನಕ್ಕೆ ಬೀದರ್ ; ಶ್ರೀಜಾ ಪಾಟೀಲ್ ಜಿಲ್ಲೆಗೆ ಟಾಪರ್
ವಿದ್ಯಾರ್ಥಿಗಳ ಸಾಧನೆಗೆ ಜ್ಞಾನ ದಾಸೋಹ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ವಿಜಯಕುಮಾರ್ ಬಾಬಣೆ, ಕಾರ್ಯದರ್ಶಿ ಗುರುನಾಥ ದೇಶಮುಖ, ಪ್ರೌಢ ವಿಭಾಗದ ಮುಖ್ಯಗುರು ಮಧುಕರ ಭಂಗಾರೆ, ಪ್ರಾಥಮಿಕ ವಿಭಾಗದ ಚಿರಂಜೀವಿ ಪಾಟೀಲ್ ಹಾಗೂ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ.