ಪಹಲ್ಗಾಮ್ ಭಯೋತ್ಪಾದಕ ದಾಳಿಯ ವಿರುದ್ಧ ನಡೆದ ಪ್ರತಿಭಟನಾ ರ್‍ಯಾಲಿಯಲ್ಲಿ ರೈತ ನಾಯಕ ರಾಕೇಶ್ ಟಿಕಾಯತ್ ಭಾಗವಹಿಸುವಿಕೆಯನ್ನು ಕೆಲವು ಜನರು ವಿರೋಧಿಸಿದ ನಂತರ ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ಶನಿವಾರ ಮುಜಫರ್‌ನಗರದಲ್ಲಿ ತುರ್ತು ‘ಕಿಸಾನ್ ಪಂಚಾಯತ್’ಗೆ ಕರೆ ನೀಡಿದೆ.
ಘಟನೆಯ ಕುರಿತು ಚರ್ಚಿಸಲು ಮುಜಫರ್‌ನಗರದ ಜಿಐಸಿ ಮೈದಾನದಲ್ಲಿ ಪಂಚಾಯತ್ ನಡೆಸಲಾಗುವುದು ಎಂದು ಬಿಕೆಯು ರಾಷ್ಟ್ರೀಯ ಅಧ್ಯಕ್ಷ ನರೇಶ್ ಟಿಕಾಯತ್ ಘೋಷಿಸಿದರು. ‘ಆಕ್ರೋಶ ರ್‍ಯಾಲಿ’ಯಲ್ಲಿ ನಡೆದ ಘಟನೆಯು ರೈತರ ಚಳುವಳಿಯನ್ನು ದುರ್ಬಲಗೊಳಿಸಲು ‘ರಾಜಕೀಯ ಪಕ್ಷ’ ಆಯೋಜಿಸಿದ ಪಿತೂರಿಯ ಭಾಗವಾಗಿದೆ ಎಂದು ನರೇಶ್ ಟಿಕಾಯತ್ ಹೇಳಿದರು.
ಇದನ್ನು ಓದಿದ್ದೀರಾ? ಕನ್ವರ್ ಯಾತ್ರೆ ಬಳಿಕ ರೈತರ ಬೃಹತ್ ಪ್ರತಿಭಟನೆ; ಕೇಂದ್ರಕ್ಕೆ ರಾಕೇಶ್ ಟಿಕಾಯತ್ ಎಚ್ಚರಿಕೆ
ಶುಕ್ರವಾರ, ಪಹಲ್ಗಾಮ್ ದಾಳಿಯನ್ನು ವಿರೋಧಿಸಿ ಬಲಪಂಥೀಯ ಗುಂಪುಗಳು ಆಯೋಜಿಸಿದ್ದ ರಾಕೇಶ್ ಟಿಕಾಯತ್ ಅವರನ್ನು ಟೀಕಿಸಲಾಗಿದೆ ಮತ್ತು ಹಿಂತಿರುಗುವಂತೆ ಘೋಷಣೆ ಕೂಗಲಾಗಿದೆ. ಈ ಗದ್ದಲದಲ್ಲಿ ರಾಕೇಶ್ ಪೇಟವೂ ಬಿದ್ದಿತ್ತು. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು.
ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ನರೇಶ್ ಟಿಕಾಯತ್, “ಈ ಘಟನೆ ಸ್ವಯಂಪ್ರೇರಿತವಾಗಿ ನಡೆದಿಲ್ಲ. ಇದು ಪೂರ್ವ ಯೋಜಿತ ಮತ್ತು ರಾಜಕೀಯ ಉದ್ದೇಶದಿಂದ ಕೂಡಿದೆ” ಎಂದು ಆರೋಪಿಸಿದ್ದಾರೆ.
ये @RakeshTikaitBKU जी की ही नहीं बल्कि पूरे देश के किसानों की पगड़ी उछाली गई है।
— Pushpendra Saroj (@Pushpendra_MP_) May 2, 2025
जनता सब देख रही है, जवाब देगी।#RakeshTikait pic.twitter.com/QqTUVZj8Bp
ಹಾಗೆಯೇ, “ಇದು ರೈತರ ಧ್ವನಿಯನ್ನು ನಿಗ್ರಹಿಸಲು ಒಂದು ನಿರ್ದಿಷ್ಟ ರಾಜಕೀಯ ಪಕ್ಷದಿಂದ ನಡೆಸಲ್ಪಟ್ಟ ಪಿತೂರಿ. ಕೆಲವು ಯುವಕರನ್ನು ಉದ್ದೇಶಪೂರ್ವಕವಾಗಿ ರ್‍ಯಾಲಿಯನ್ನು ಅಡ್ಡಿಪಡಿಸಲು ಕಳುಹಿಸಲಾಗಿದೆ. ಘೋಷಣೆಗಳನ್ನು ಕೂಗಿದವರು ಮದ್ಯಪಾನ ಮಾಡಿರುವಂತೆ ಕಂಡುಬಂದಿದೆ” ಎಂದು ದೂರಿದ್ದಾರೆ.
ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಇತ್ತೀಚೆಗೆ ನಡೆದ ಭಯೋತ್ಪಾದಕ ದಾಳಿಯಲ್ಲಿ 26ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಈ ಭಯೋತ್ಪಾದಕ ದಾಳಿಯನ್ನು ವಿರೋಧಿಸಿ ಬಿಕೆಯು ಟ್ರ್ಯಾಕ್ಟರ್ ಮೆರವಣಿಗೆಯನ್ನು ಆಯೋಜಿಸುವುದಾಗಿ ಟಿಕಾಯತ್ ಘೋಷಿಸಿದರು. ಮೆರವಣಿಗೆಯ ದಿನಾಂಕವನ್ನು ಮುಂದಿನ ದಿನಗಳಲ್ಲಿ ನಿರ್ಧರಿಸಲಾಗುವುದು ಎಂದು ತಿಳಿಸಿದ್ದರು. ಹಾಗೆಯೇ ಭಯೋತ್ಪಾದಕ ಚಟುವಟಿಕೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅವರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.
