ಬೆಳಗಾವಿ ಮಹಾನಗರ ಪಾಲಿಕೆ(ಬಿಸಿಸಿ)ಗೆ ತೆರಿಗೆ ವಂಚನೆ ಮತ್ತು ಕಟ್ಟಡ ನಿರ್ಮಾಣ ನಿಯಮಗಳಲ್ಲಿ ಗಂಭೀರ ಉಲ್ಲಂಘನೆ ಆರೋಪದ ಮೇಲೆ ವೆಗಾ ಫನ್ ಮೊಬೈಲ್ ಪ್ರೈವೇಟ್ ಲಿಮಿಟೆಡ್‌ಗೆ 7,08,66,578 ರೂಪಾಯಿಗಳ ತೆರಿಗೆ ದಂಡವನ್ನು ವಿಧಿಸಿದೆ.
ನಿಜವಾದ ನಿರ್ಮಾಣ ಪ್ರದೇಶ ಮತ್ತು ಆಸ್ತಿ ತೆರಿಗೆ ಮೌಲ್ಯಮಾಪನಕ್ಕಾಗಿ ಘೋಷಿಸಲಾದ ಪ್ರದೇಶದ ನಡುವಿನ ವ್ಯತ್ಯಾಸಗಳ ಆಧಾರದ ಮೇಲೆ ಹಾಗೂ ಅದರ ಕಾರ್ಯಾಚರಣೆಗಳು ಕೈಗಾರಿಕಾ ವರ್ಗಕ್ಕೆ ಸೇರಿದ್ದರೂ ಕೂಡ ವಾಣಿಜ್ಯ ಮಳಿಗೆ ಅಡಿಯಲ್ಲಿ ತೆರಿಗೆ ಪಾವತಿಸುವುದನ್ನು ಮುಂದುವರಿಸಿದ್ದರಿಂದ ಈಗ ಏಳು ಕೋಟಿ ರೂಪಾಯಿ ದಂಡ ವಿಧಿಸಿದೆ.
ಕರ್ನಾಟಕ ಮುನ್ಸಿಪಲ್ ಕಾರ್ಪೊರೇಷನ್ಸ್ ಕಾಯ್ದೆ, 1976 ರ ಸೆಕ್ಷನ್ 112(ಸಿ) ಅಡಿಯಲ್ಲಿ ಕ್ರಮ ಕೈಗೊಳ್ಳುವಂತೆ ಕಂಪನಿಯು ವಿಚಾರಣೆಯ ಸಮಯದಲ್ಲಿ ಉಲ್ಲಂಘನೆಗಳನ್ನು ಒಪ್ಪಿಕೊಂಡಿರುವುದಾಗಿ ವರದಿಯಾಗಿದೆ.
2025ರ ಜನವರಿ 31, ಏಪ್ರಿಲ್ 15 ಮತ್ತು ಏಪ್ರಿಲ್ 21 ಈ ಮೂರು ವಿಚಾರಣೆಗಳ ನಂತರ ಬಿಸಿಸಿ ಆಯುಕ್ತೆ ಶುಭಾ ಬಿ ಈ ಆದೇಶ ಹೊರಡಿಸಿದ್ದಾರೆ.
“ಮುನ್ಸಿಪಲ್ ಕಾಯ್ದೆಗೆ ಅನುಗುಣವಾಗಿ, ತೆರಿಗೆ ಕುರಿತ ಬಿಸಿಸಿ ಸ್ಥಾಯಿ ಸಮಿತಿಗೆ ಮೇಲ್ಮನವಿ ಸಲ್ಲಿಸುವ ಮೊದಲು ಕಂಪನಿಯು ದಂಡದ ಮೊತ್ತದ ಶೇ.50ರಷ್ಟು ಠೇವಣಿ ಇಡಬೇಕು. ಈ ಹಿಂದೆ ಪಾವತಿಸಿದ ತೆರಿಗೆ ಮೊತ್ತವನ್ನು ಕಡಿತಗೊಳಿಸಿದ ನಂತರ ತೆರಿಗೆಯನ್ನು ಲೆಕ್ಕಹಾಕಲಾಗಿದೆ” ಎಂದು ಶುಭಾ ತಿಳಿಸಿದ್ದಾರೆ.
“24,000 ಚದರ ಅಡಿ ಕಟ್ಟಡವು ಸಂಪೂರ್ಣವಾಗಿ ಅನಧಿಕೃತವಾಗಿದ್ದು, ಮಾನ್ಯ ಕಟ್ಟಡ ಪರವಾನಗಿ ಇಲ್ಲದೆ ನಿರ್ಮಿಸಲಾಗಿದೆ. ಇದರ ಹೊರತಾಗಿಯೂ, ಕಂಪನಿಯು 2004ರಿಂದ ಸ್ವಯಂ ಮೌಲ್ಯಮಾಪನ ಯೋಜನೆಯನ್ನು ಬಳಸಿಕೊಂಡು ತೆರಿಗೆ ಪಾವತಿಸುತ್ತಿದೆ. ಈ ಕಟ್ಟಡಕ್ಕೆ ಪರವಾನಗಿ ಇದೆಯೆ? ಕಟ್ಟಡದ ಹೂಡಿಕೆಗೆ ಅನುಗುಣವಾಗಿ ತೆರಿಗೆ ವಿಧಿಸಲಾಗಿದೆವೆಯೆ? ಇತ್ಯಾದಿ ವಿಷಯಗಳ ಕುರಿತು ಸಹಜವಾಗಿ ನಗರಾಭಿವೃದ್ಧಿ ಪ್ರಾಧಿಕಾರ ಅಥವಾ ಮಹಾನಗರ ಪಾಲಿಕೆ ಇವು ಪರಿಶೀಲನೆ ಮಾಡಬೇಕಾಗಿತ್ತು. ಆದರೆ ನಿರ್ಲಕ್ಷ್ಯ ವಹಿಸಲಾಗಿದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಮಂಗಳೂರು | ಸುಹಾಸ್ ಶೆಟ್ಟಿ ಹತ್ಯೆಯಲ್ಲಿ ಫಾಝಿಲ್ ಸಹೋದರ ಕೂಡ ಭಾಗಿ: ಕಮಿಷನರ್ ಅಗರ್ವಾಲ್
ವೆಗಾ ಫನ್‌ಮೊಬೈಲ್ ಕಂಪೆನಿ ಆಗಸ್ಟ್ 2002ರಲ್ಲಿ ಭೂಮಿಯನ್ನು ಗುತ್ತಿಗೆಗೆ ಪಡೆಯಲು ಬೆಮ್ಕೊ ಕಂಪನಿಯೊಂದಿಗೆ ತಿಳುವಳಿಕಾ ಒಡಂಬಡಿಕೆ(ಎಂಒಯು) ಮಾಡಿಕೊಂಡಿದೆ. ಆರಂಭದಲ್ಲಿ, 2002-03ರಲ್ಲಿ, ಕಂಪನಿಯು ಭೂಮಿಯನ್ನು ಖಾಲಿ ಎಂದು ಘೋಷಿಸಿ ತೆರಿಗೆ ಪಾವತಿಸಿತ್ತು. 2003ರ ಡಿಸೆಂಬರ್‌ನಲ್ಲಿ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಿದ್ದರೂ, 2004-05ರಲ್ಲಿ ಕಟ್ಟಡ ನಿರ್ಮಾಣ ಕಾರ್ಯ ನಡೆದಿಲ್ಲ. ಈ ಜಾಗದ ಬಳಕೆಯು ಕೈಗಾರಿಕಾ ವರ್ಗಕ್ಕೆ ಸೇರಿದ್ದರೂ ಕೂಡ ಕಟ್ಟಡ ತೆರಿಗೆಯನ್ನು ವಾಣಿಜ್ಯ ಮಳಿಗೆ ಅಡಿಯಲ್ಲಿ ಪಾವತಿಸಲಾಗುತ್ತಿತ್ತು. ಈ ವ್ಯತ್ಯಾಸಗಳನ್ನು ಕಂಡುಹಿಡಿದ ನಂತರ ಆಯುಕ್ತರು ವಿವರವಾದ ವಿಚಾರಣೆಯನ್ನು ಪ್ರಾರಂಭಿಸಿದರು. ವಿಚಾರಣೆಯ ನಂತರ, ಏಪ್ರಿಲ್ 25ರ ಆದೇಶವು ಸಂಪೂರ್ಣ ತೆರಿಗೆ ಮತ್ತು ದಂಡದ ಮೊತ್ತವನ್ನು ಬಿಸಿಸಿಗೆ ಪಾವತಿಸುವಂತೆ ಕಂಪನಿಗೆ ನಿರ್ದೇಶನ ನೀಡಿದೆ.