2002ರ ಗೋಧ್ರಾ ನಂತರದ ಗಲಭೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಾಮಾಜಿಕ ಕಾರ್ಯಕರ್ತೆ ಹಾಗೂ ಮಾನವ ಹಕ್ಕುಗಳ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಅವರಿಗೆ ಸುಪ್ರೀಂ ಕೋರ್ಟ್ ನೀಡಿದ್ದ ಮಧ್ಯಂತರ ರಕ್ಷಣೆಯನ್ನು ಜುಲೈ 19ರವರೆಗೆ ವಿಸ್ತರಿಸಿದೆ.
ನಿಯಮಿತ ಜಾಮೀನು ಅರ್ಜಿಯನ್ನು ನಿರಾಕರಿಸಿದ್ದ ಗುಜರಾತ್ ಹೈಕೋರ್ಟ್ ಆದೇಶದ ವಿರುದ್ಧ ತೀಸ್ತಾ ಸೆಟಲ್ವಾಡ್ ಸಲ್ಲಿಸಿದ ಮನವಿಯ ಮೇರೆಗೆ ಸುಪ್ರೀಂ ಕೋರ್ಟ್ ಗುಜರಾತ್ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ. ಮುಂದಿನ ವಿಚಾರಣೆಯನ್ನು ಜುಲೈ 19ರಂದು ನಿಗದಿಪಡಿಸಲಾಗಿದೆ.
ಜುಲೈ 1ರಂದು ನ್ಯಾಯಾಲಯಕ್ಕೆ ಕೂಡಲೇ ಶರಣಾಗುವಂತೆ ಸಾಮಾಜಿಕ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಅವರಿಗೆ ಗುಜರಾತ್ ಹೈಕೋರ್ಟ್ ಶನಿವಾರ ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್ ಒಂದು ವಾರದವರೆಗೆ ತಡೆಯಾಜ್ಞೆ ನೀಡಿದೆ.
ಈ ಸುದ್ದಿ ಓದಿದ್ದೀರಾ? ತೀಸ್ತಾ ಸೆಟಲ್ವಾಡ್ಗೆ ಮಧ್ಯಂತರ ಜಾಮೀನು ನೀಡಿದ ಸುಪ್ರೀಂ ಕೋರ್ಟ್
2002ರ ಗುಜರಾತ್ ಗಲಭೆ ಪ್ರಕರಣದಲ್ಲಿ ಅಮಾಯಕರನ್ನು ಸಾಕ್ಷ್ಯಗಳಾಗಿ ಮಾಡಿದ ಆರೋಪದ ಮೇಲೆ ತೀಸ್ತಾ, ನಿವೃತ್ತ ಪೊಲೀಸ್ ಅಧಿಕಾರಿ ಆರ್ ಬಿ ಶ್ರೀಕುಮಾರ್ ಸೇರಿದಂತೆ ಇತರರ ವಿರುದ್ಧ ಗುಜರಾತ್ ಪೊಲೀಸರು ಎಫ್ಐಆರ್ ದಾಖಲಿಸಿದ್ದರು. ಈ ಪ್ರಕರಣದಲ್ಲಿ ತೀಸ್ತಾ ಅವರಿಗೆ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ನೀಡಿತ್ತು. ಇದರ ಅವಧಿ ಪೂರ್ಣಗೊಂಡ ಕಾರಣ ಕೋರ್ಟ್ಗೆ ಶರಣಾಗುವಂತೆ ಹೈಕೋರ್ಟ್ ಸೂಚಿಸಿತ್ತು.
ಹಾಗಾಗಿ, ತ್ವರಿತವಾಗಿ ಜಾಮೀನಿನ ವಿಚಾರಣೆ ನಡೆಸುವಂತೆ ತೀಸ್ತಾ ಅವರು ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು. ಮುಖ್ಯ ನ್ಯಾಯಮೂರ್ತಿ ಅವರ ಸೂಚನೆ ಮೇರೆಗೆ ನ್ಯಾಯಾಲಯದ ಕಲಾಪ ಮುಗಿದ ಬಳಿಕ ಸಂಜೆ 6.30ಕ್ಕೆ ವಿಚಾರಣೆ ನಡೆಸಿದ ವಿಭಾಗೀಯ ಪೀಠವು ಈ ಬಗ್ಗೆ ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿ ವಿಸ್ತೃತ ಪೀಠಕ್ಕೆ ಜಾಮೀನು ಅರ್ಜಿಯನ್ನು ವರ್ಗಾಯಿಸಿತ್ತು.
ಹಿರಿಯ ವಕೀಲ ಚಂದರ್ ಉದಯ್ ಸಿಂಗ್ ಮತ್ತು ವಕೀಲರಾದ ಅರ್ಪಣಾ ಭಟ್ ಅವರು, ತೀಸ್ತಾ ಪರ ವಾದ ಮಂಡಿಸಿದರು.
ಗುಜರಾತ್ ಮುಖ್ಯಮಂತ್ರಿಯಾಗಿದ್ದ ವೇಳೆ ನರೇಂದ್ರ ಮೋದಿ ಅವರ ವರ್ಚಸ್ಸಿಗೆ ಕಳಂಕ ತರುವ ಉದ್ದೇಶದಿಂದ ಸುಳ್ಳು ಸಾಕ್ಷ್ಯಾಧಾರಗಳನ್ನು ಸೃಷ್ಟಿಸಿದ ಆರೋಪದ ಮೇಲೆ ತೀಸ್ತಾ ವಿರುದ್ಧ 2022ರ ಜೂನ್ 24ರಂದು ಎಫ್ಐಆರ್ ದಾಖಲಿಸಿ ಬಂಧಿಸಲಾಗಿತ್ತು. ಈ ಪ್ರಕರಣದಲ್ಲಿ ಅವರಿಗೆ ಸೆಪ್ಟೆಂಬರ್ 2ರಂದು ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ನೀಡಿತ್ತು.