ಮಂಗಳೂರು ನಗರದ ಬಜಪೆ ಸಮೀಪ ಮೇ 1ರ ಗುರುವಾರದಂದು ನಡೆದ ರೌಡಿಶೀಟರ್ ಸುಹಾಸ್ ಶೆಟ್ಟಿ ಹತ್ಯೆಗೆ ಸಂಬಂಧಿಸಿದಂತೆ ಈಗಾಗಲೇ ಎಂಟು ಮಂದಿಯನ್ನು ಬಂಧಿಸಿದ್ದು, ಈ ಹತ್ಯೆಯಲ್ಲಿ ಫಾಝಿಲ್ ಸಹೋದರ ಕೂಡ ಭಾಗಿಯಾಗಿರುವ ಹಿನ್ನೆಲೆಯಲ್ಲಿ ಅವರನ್ನೂ ಕೂಡ ಬಂಧಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.
ಶನಿವಾರ (ಮೇ 03) ನಗರದ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹತ್ಯೆಗೆ ಸಂಬಂಧಿಸಿದಂತೆ 10 ಮಂದಿ ಆರೋಪಿಗಳನ್ನು ಗುರುತಿಸಿದ್ದೇವೆ. 8 ಮಂದಿಯನ್ನು ಬಂಧಿಸಿದ್ದೇವೆ. ಅಬ್ದುಲ್ ಸಫ್ವಾನ್, ನಿಯಾಜ್ ಶಾಂತಿಗುಡ್ಡೆ, ಬಜ್ಪೆ, ಮೊಹಮ್ಮದ್ ಮುಝಮಿಲ್, ಕಲಂದರ್ ಶಾಫಿ, ರಂಜಿತ್, ನಾಗರಾಜ್, ಮೊಹಮ್ಮದ್ ರಿಜ್ವಾನ್ ಜೋಕಟ್ಟೆ, ಆದಿಲ್ ಮೆಹರೂಫ್ ಎಂಬವರನ್ನು ಬಂಧಿಸಲಾಗಿದೆ. ಇದರಲ್ಲಿ ಆದಿಲ್ ಮೆಹರೂಫ್ ಅವರು 2022ರಲ್ಲಿ ಸುರತ್ಕಲ್‌ನಲ್ಲಿ ಕೊಲೆಯಾದ ಫಾಝಿಲ್ ಅವರ ಸಹೋದರ ಎಂದು ಕಮಿಷನರ್ ಮಾಹಿತಿ ನೀಡಿದ್ದಾರೆ.

“ಆರೋಪಿ ಸಫ್ವಾನ್‌ಗೆ ಸುಹಾಸ್ ಶೆಟ್ಟಿ ತನ್ನನ್ನು ಕೊಲೆ ಮಾಡಬಹುದು ಎಂಬ ಭಯ ಇತ್ತು. ಅಬ್ದುಲ್ ಸಫ್ವಾನ್ ಈ ಕೊಲೆ ಪ್ರಕರಣದ ಪ್ರಮುಖ ಆರೋಪಿ. 2023ರಲ್ಲಿ ತಂಡವೊಂದು ಅಬ್ದುಲ್ ಸಫ್ವಾನ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿತ್ತು. ಸುಹಾಸ್ ಶೆಟ್ಟಿ ತಂಡದಿಂದ ಹತ್ಯೆಯಾಗುವ ಆತಂಕ ಇದ್ದಿದ್ದರಿಂದ ಸುಹಾಸ್ ಶೆಟ್ಟಿಯ ಹತ್ಯೆಗೆ ಸಫ್ವಾನ್ ತೀರ್ಮಾನಿಸಿದ್ದ. ಈ ಹಿನ್ನೆಲೆಯಲ್ಲಿ ಸಫ್ವಾನ್ 2022 ರಲ್ಲಿ ಕೊಲೆಯಾದ ಫಾಝಿಲ್ ಸಹೋದರ ಆದಿಲ್‌ನನ್ನು ಸಂಪರ್ಕಿಸಿದ್ದಾನೆ. ಸುಹಾಸ್ ಹತ್ಯೆಗೆ ಆದಿಲ್ 5 ಲಕ್ಷ ರೂ. ಕೊಡುವ ಭರವಸೆ ನೀಡಿ, 3 ಲಕ್ಷ ರೂ. ಮುಂಗಡ ಪಾವತಿಸಿದ್ದ. ಇದು ಮಿಕ್ಸ್ ಕೇಸ್, ಕೇವಲ ಪ್ರತೀಕಾರದ ಕೊಲೆ ಎಂದು ಹೇಳಲು ಆಗುವುದಿಲ್ಲ” ಎಂದು ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.

ನಿಯಾಝ್ ಎಂಬಾತ ತನ್ನ ಸ್ನೇಹಿತರಾದ ನಾಗರಾಜ್ ಮತ್ತು ರಂಜಿತ್ ಎಂಬವರನ್ನು ಸಂಪರ್ಕ ಮಾಡಿದ್ದಾನೆ. ಆರೋಪಿಗಳು ಮೇ 1ರಂದು ಸುಹಾಸ್ ಚಲನವಲನ ಗಮನಿಸಿ ಹತ್ಯೆ ನಡೆಸಿದ್ದಾರೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಪ್ರಕರಣದ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಸ್ಪೀಕರ್ ಯು ಟಿ ಖಾದರ್ ರಾಜೀನಾಮೆ ನೀಡಬೇಕು: ಬಿಜೆಪಿ ಶಾಸಕ ಭರತ್ ಶೆಟ್ಟಿ
ತನಿಖೆಯ ಮುನ್ನವೇ ಫಾಝಿಲ್ ಕುಟುಂಬಕ್ಕೆ ಸ್ಪೀಕರ್ ಯು ಟಿ ಖಾದರ್ ಕ್ಲೀನ್ ಚಿಟ್ ನೀಡಿದ್ದರು. ಹಾಗಾಗಿ ಅವರು ತಕ್ಷಣ ರಾಜೀನಾಮೆ ನೀಡಬೇಕು ಎಂದು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಭರತ್ ಶೆಟ್ಟಿ ಆಗ್ರಹಿಸಿದ್ದಾರೆ.
ತನಿಖೆಯ ಮುನ್ನವೇ ಫಾಝಿಲ್ ಕುಟುಂಬಕ್ಕೆ ಸ್ಪೀಕರ್ ಕ್ಲೀನ್ ಚಿಟ್ ತಕ್ಷಣ ರಾಜೀನಾಮೆ ನೀಡಿ
— Dr. Bharath Shetty Y. (@bharathshetty_y) May 3, 2025
ಸುಹಾಸ್ ಶೆಟ್ಟಿ ಹತ್ಯೆಗೆ ಸಂಬಂಧ ಪಟ್ಟಂತೆ ಮಾತನಾಡಿದ ಸಭಾಪತಿ ಯು. ಟಿ ಖಾದರ್ ಅವರು `ಈ ಹಿಂದೆ ನಡೆದ ಫಾಝಿಲ್ ಕೊಲೆಗೂ – ಸುಹಾಸ್ ಶೆಟ್ಟಿ ಕೊಲೆಗೂ ಯಾವುದೇ ರೀತಿಯ ಸಂಬಂಧ ಇಲ್ಲ, ನನಗೆ ಫಾಝಿಲ್ ಮನೆಯವರು ಕರೆ ಮಾಡಿ ಹೇಳಿದ್ದಾರೆ´ ಎಂದಿದ್ದರು. #Suhas pic.twitter.com/RoJFpsOd5U
ಸುಹಾಸ್ ಶೆಟ್ಟಿ ಹತ್ಯೆಗೆ ಸಂಬಂಧ ಪಟ್ಟಂತೆ ಮಾತನಾಡಿದ್ದ ಸಭಾಪತಿ ಯು. ಟಿ ಖಾದರ್ ಅವರು `ಈ ಹಿಂದೆ ನಡೆದ ಫಾಝಿಲ್ ಕೊಲೆಗೂ – ಸುಹಾಸ್ ಶೆಟ್ಟಿ ಕೊಲೆಗೂ ಯಾವುದೇ ರೀತಿಯ ಸಂಬಂಧ ಇಲ್ಲ, ನನಗೆ ಫಾಝಿಲ್ ಮನೆಯವರು ಕರೆ ಮಾಡಿ ಹೇಳಿದ್ದಾರೆ´ ಎಂದಿದ್ದರು. ಆದರೆ ಈಗ ಸುಹಾಸ್ ಹತ್ಯೆಯ ಹಿಂದೆ ಫಾಝಿಲ್ ನ ಸಹೋದರ ಅದಿಲ್ ಮೆಹರೂಪ್ ನೇರ ಭಾಗಿಯಾಗಿದ್ದಾನೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಮಾಹಿತಿ ನೀಡಿದ್ದಾರೆ. ಹಾಗಾಗಿ, ಸ್ಪೀಕರ್ ಯು ಟಿ ಖಾದರ್ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಶಾಸಕ ಭರತ್ ಶೆಟ್ಟಿ ಟ್ವೀಟ್ ಮಾಡಿದ್ದಾರೆ.
ಫಾಝಿಲ್ ಯಾರು?
ಸುರತ್ಕಲ್‌ನಲ್ಲಿ 2022ರ ಜುಲೈ 26ರಂದು ನಡೆದ ಮೊಹಮ್ಮದ್ ಫಾಝಿಲ್ ಕೊಲೆ ಎಂಬ ಅಮಾಯಕ ಯುವಕ ಕೊಲೆಗೀಡಾಗಿದ್ದ. ನೆಟ್ಟಾರು ಪ್ರವೀಣ್ ಕೊಲೆಗೆ ಪ್ರತೀಕಾರವಾಗಿ ಸುರತ್ಕಲ್‌ನಲ್ಲಿ ಫಾಝಿಲ್ ಎಂಬಾತನ ಕೊಲೆ ನಡೆದಿತ್ತು. ಈ ಕೊಲೆ ಪ್ರಕರಣದಲ್ಲಿ ಸುಹಾಸ್ ಶೆಟ್ಟಿ ಪ್ರಕರಣದ ಎ1 ಆರೋಪಿಯಾಗಿ ಜೈಲು ಸೇರಿದ್ದ. ಕಳೆದ ಮಾರ್ಚ್ ನಲ್ಲಿ ಹೈಕೋರ್ಟ್ ನಿಂದ ಜಾಮೀನು ಪಡೆದು ಸುಹಾಸ್ ಶೆಟ್ಟಿ ಹೊರ ಬಂದಿದ್ದ.