ಒಂದು ಸಂದರ್ಶನದಲ್ಲಿ ವೇಡನ್ ತನ್ನ ಕಾಲೊನಿಯನ್ನು ಪರಿಚಯ ಮಾಡಿದ ರೀತಿ ಎಂಥವರನ್ನೂ ತಟ್ಟಬಹುದು. ‘ಮಾಧ್ಯಮಗಳು ಎಂದಿಗೂ ತೋರಿಸಲು ಇಚ್ಛೆಪಡದ, ಶೇಕಡಾ ಎಪ್ಪತ್ತರಷ್ಟು ಕೆಳಜಾತಿಯವರು ವಾಸಿಸುವ ಕಾಲೊನಿಯಿಂದ ಬಂದವನು ನಾನು. ಬೆಳಿಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವ ತನಕ ಹಿಂಸೆಯನ್ನು ಕಾಣುತ್ತಲೇ ಬದುಕುವವರು ನಾವು’ ಎಂದು ಹೇಳುವ ವೇಡನ್, ಹಿಂಸೆ ಎಂಬುದು ಜನರ ಬದುಕಿನ ಭಾಗವಾಗಿದೆ ಎನ್ನುವುದನ್ನು ಮತ್ತೆ ಮತ್ತೆ ಒತ್ತಿ ಹೇಳುತ್ತಾರೆ.
ಅಪ್ಪಟ ಕಪ್ಪುಮನುಷ್ಯ, ಕಪ್ಪೆನ್ನುವ ಅಭಿಮಾನವನ್ನು ಎದೆಗೊತ್ತಿಕೊಂಡ ಚಿರಯುವಕ. ಅವನ ಧ್ವನಿ ಕರುಳಿನಾಳದ ಕೂಗಿನಂತೆ ಎಲ್ಲರೆದೆಯ ಹಾಡಿನಂತೆ ನೊಂದ ಸಮೂಹಕ್ಕೆ ಜೀವಜಲದಂತೆ. ಅವನ ಸಾಲುಗಳು ನೋವಿನ ಕುಲುಮೆಯಲ್ಲಿ ಕರಗಿ ಕರಗಿ ಸೃಷ್ಟಿಯಾದ ಜ್ವಾಲೆಯಂತೆ ಕೇರಳದ ಮೂಲೆ ಮೂಲೆಗೂ ಹಬ್ಬಿದೆ. ಕೇರಳದಲ್ಲೀಗ ಕೇಳಿಸುತ್ತಿರುವುದು ಒಂದೇ ಹೆಸರು ವೇಡನ್ (vedan) .
ತಾಯಿ ಉತ್ತರ ಶ್ರೀಲಂಕಾದ ತಮಿಳು ಇತಿಹಾಸ ಹೊಂದಿರುವ ಜಾಫ್ನಾ ಎನ್ನುವ ನಗರದವರು. ತಂದೆ ಕೇರಳದ ತ್ರಿಶೂರ್ ಮೂಲದವರು. ತ್ರಿಶೂರ್ ರೈಲು ನಿಲ್ದಾಣದ ಬಳಿ ಸ್ವಪ್ನಭೂಮಿ ಎನ್ನುವ ಕಾಲೊನಿಯಲ್ಲಿ ಹುಟ್ಟಿಬೆಳೆದ ಸಾಮಾನ್ಯ ಹುಡುಗ ಹಿರಣ್ ದಾಸ್ ಮುರಳಿ. ಬೇಡ ಜನಾಂಗದವರಾಗಿರುವುದರಿಂದ ಮುರಳಿಯನ್ನು ಬಾಲ್ಯದಿಂದಲೂ ‘ವೇಡನ್’ ಎಂದು ಕರೆಯುತ್ತಿದ್ದರು. ಒಂದರ್ಥದಲ್ಲಿ ಅದು ಅವನ ಬಾಲ್ಯದ ಹೆಸರಾಗಿತ್ತು. ಬೆಳೆದಂತೆ ಆ ಹೆಸರನ್ನು ಮುರಳಿ ಮರೆತುಬಿಟ್ಟಿದ್ದ.
ತಂದೆ ಜನಪದ ಹಾಡುಗಳನ್ನು ಹಾಡುತ್ತಿದ್ದದ್ದು ಕೇಳಿಸುತ್ತ ಅದನ್ನು ಕರಗತ ಮಾಡಿಕೊಂಡಿದ್ದ ಮುರಳಿ, ಸ್ವಪ್ನಗಳೇ ಹುಟ್ಟದ ಸ್ವಪ್ನಭೂಮಿ ಕಾಲೊನಿಯಲ್ಲಿ ಹಾಡುತ್ತ ಬೆಳೆಯುತ್ತ ಬಂದ. ಓದಿದ್ದು ಹತ್ತನೇ ತರಗತಿವರೆಗೆ. ಅದರಾಚೆ ಓದುವ ಕನಸಿದ್ದರೂ, ಕಾಲು ಚಾಚಲು ಹಾಸಿಗೆ ಅಷ್ಟು ಉದ್ದ ಇರಲಿಲ್ಲ. ಆದರೆ ಈಗ ಅದೇ ಮುರಳಿ, ಬಾಲ್ಯದ ವೇಡನ್ ಬರುತ್ತಾರೆಂದರೆ ಅಲ್ಲಿ ಜನಸಾಗರದ ನಡುವೆ ಕಾಲಿಡಲು ಜಾಗವಿರುವುದಿಲ್ಲ. ಆಳದಲ್ಲಿ ಬೇರೂರಿದ ನೋವು ಹಾಡಾಗಿ ಹರಿದು ಸಾಗರವಾಗುವುದೆಂದರೆ ಇದೇ ಇರಬೇಕು.
ಮುರಳಿ ಮರಳಿ ವೇಡನ್ ಆದಾಗ
ಅದು 2020ರ ಜೂನ್, ಕೋವಿಡ್ ಸಮಯ. ಆಗ ಆತನಿಗೆ ಅಂದಾಜು 25 ವರ್ಷ. ಯೂಟ್ಯೂಬ್ ನಲ್ಲಿ ‘ವಾಯ್ಸ್ ಆಫ್ ವಾಯ್ಸ್ ಲೆಸ್’ ಎನ್ನುವ ರ್ಯಾಪ್ ಹಾಡೊಂದು ಕೇರಳಿಗರನ್ನು ಬೆರಗುಗೊಳಿಸುತ್ತದೆ. ಜಾತಿ ತಾರತಮ್ಯದ ವಿರುದ್ಧ ಸಿಡಿದೆದ್ದ ಹುಡುಗನ ಕಿಡಿಯಂತಹ ಹಾಡಾಗಿತ್ತು ಅದು. ‘ಞಾನ್ ಪಾಣನಲ್ಲ, ಪರಯನಲ್ಲ, ಪೊಲಯನಲ್ಲ, ನೀ ತಂಬುರಾನುಮಲ್ಲ ಆಣೇಲ್ ಒರು ಮೈರುಮಿಲ್ಲ’ (ನಾನು ಜೋಗಿಯಲ್ಲ, ಹೊಲೆಯನಲ್ಲ, ಕುರುಬನಲ್ಲ ನೀನೇನ್ ಮೇಲು ಅಲ್ಲ. ಆದರೂನು ನಂಗೇನು ಆಗ್ಬೇಕಿಲ್ಲ) ಎಂಬ ತೀವ್ರ ಆಕ್ರೋಶದ ರ್ಯಾಪ್ ಹಾಡು, ಚಳಿ ಕಾಯುತ್ತ ಜಾತಿ ವ್ಯವಸ್ಥೆಯ ಸುಖ ಅನುಭವಿಸುತ್ತಿದ್ದ ಮೇಲ್ವರ್ಗದವರ ಚಳಿ ಬಿಡಿಸಿತು. ವೇಡನ್ ಈ ಹಾಡಿನಲ್ಲಿ ಬಳಸಿದ ಒಂದು ಕೆಟ್ಟ ಅಥವಾ ಬೈಗುಳದ ಪದ, ಜಾತಿಶ್ರೇಷ್ಠರನ್ನು ಅವರ ಶ್ರೇಷ್ಠತೆಯ ವ್ಯಸನವನ್ನು ಕಿತ್ತು ನದಿಗೆ ಎಸೆದ ಹಾಗಿತ್ತು. ಐದು ವರ್ಷಗಳ ನಂತರವೂ ಈ ಹಾಡು ಇಂದಿಗೂ ನೊಂದ ಸಮೂಹಕ್ಕೆ ನಿರಾಳತೆ ನೀಡುತ್ತಿದೆ. ಈ ಹಾಡು ಹಿರಣ್ ದಾಸ್ ಮುರಳಿಯೊಳಗಿನ ವೇಡನ್ ನನ್ನು ಎದ್ದು ನಿಲ್ಲಿಸಿತು. ವೇಡನ್ ಎಂದರೆ ಬೇಡ ಎಂದರ್ಥ. ಹಾಗಾಗಿ ಇಡೀ ಬೇಡ ಸಮುದಾಯದ ಗುರುತು ಎಂಬಂತೆ ಆತ ತನ್ನ ಕಾವ್ಯನಾಮವನ್ನು ವೇಡನ್ ಎಂದು ಮಾಡಿಕೊಂಡ. ಕೇರಳದಲ್ಲಿ ಡಬ್ಝಿ, ಫೆಜೊ ಮತ್ತು ಇನ್ನು ಕೆಲವು ರ್ಯಾಪ್ ಗಾಯಕರಿದ್ದಾರೆ. ಅವರೂ ಖ್ಯಾತರೇ. ಆದರೆ ಗಾಯಗೊಂಡ ಪ್ರಾಣಿಯೊಂದರ ಕೂಗಿನಂತಹ ಹರಿತ ಭಾಷೆಯ ವೇಡನ್ ನ ಸಾಹಿತ್ಯದ ಮುಂದೆ ಅವರ ಪ್ರತಿಭೆ ಲೆಕ್ಕಕ್ಕೆ ಸಿಗಲಿಲ್ಲ. ವೇಡನ್ ರ್ಯಾಪ್ ಹಾಡುಗಳು ಸುಮ್ಮನೇ ಒಂದು ಕಿವಿಯಲ್ಲಿ ಕೇಳಿ ಇನ್ನೊಂದು ಕಿವಿಯಲ್ಲಿ ಬಿಟ್ಟುಬಿಡಬಹುದಾದ ಪದಗಳ ಪೋಣಿಕೆಯಲ್ಲ. ಅದೊಂದು ನೋವಿನ ಹಾಡು. ನೊಂದವರ ಬದುಕಿನ ಪಾಡು. ಬಡವರ ಮಕ್ಕಳ ಬಡಿದೆಚ್ಚರಿಸುವ ಧ್ವನಿಯದು. ಈ ಬಗೆಯ ಪ್ರಬಲ, ಹರಿತವಾದ ಬಂಡಾಯ ಭಾಷೆಯ ಬಳಕೆ ಬಹುಶಃ ಇತ್ತೀಚಿನ ದಿನಗಳಲ್ಲಿ ಕೇರಳದಲ್ಲಿ ಯಾರೂ ಮಾಡಿರಲಿಕ್ಕಿಲ್ಲ.

ವೇಡನ್ ಗೆ ಒಂದು ರಾಜಕೀಯ ಸ್ಪಷ್ಟತೆ ಇದೆ. ಆತನ ಹಾಡಿನ ಭಾಷೆ ಹೇಗೆ ಬೇಡನ ಈಟಿಯಂತೆ ತಿವಿಯುತ್ತದೆಯೋ ಆತನ ಮಾತೂ ಅಷ್ಟೇ. ಕಟುವಾಸ್ತವವನ್ನು ಕಣ್ಣೆದುರಿಗೆ ತಂದಿಡುವ ಛಾತಿ ಆತನದ್ದು. ಮಲಯಾಳಂ ನಟ, ಗೀತ ರಚನೆಕಾರ ಅನೂಪ್ ಮೆನನ್ ಹಾಗೂ ವೇಡನ್ ಭಾಗವಹಿಸಿದ್ದ ಒಂದು ಸಂದರ್ಶನದಲ್ಲಿ ವೇಡನ್ ತನ್ನ ಕಾಲೊನಿಯನ್ನು ಪರಿಚಯ ಮಾಡಿದ ರೀತಿ ಎಂಥವರನ್ನೂ ತಟ್ಟಬಹುದು. ‘ಮಾಧ್ಯಮಗಳು ಎಂದಿಗೂ ತೋರಿಸಲು ಇಚ್ಛೆಪಡದ, ಶೇಕಡಾ ಎಪ್ಪತ್ತರಷ್ಟು ಕೆಳಜಾತಿಯವರು ವಾಸಿಸುವ ಕಾಲೊನಿಯಿಂದ ಬಂದವನು ನಾನು. ಬೆಳಿಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವ ತನಕ ಹಿಂಸೆಯನ್ನು ಕಾಣುತ್ತಲೇ ಬದುಕುವವರು ನಾವು’ ಎಂದು ಹೇಳುವ ವೇಡನ್, ಹಿಂಸೆ ಎಂಬುದು ಜನರ ಬದುಕಿನ ಭಾಗವಾಗಿದೆ ಎನ್ನುವುದನ್ನು ಮತ್ತೆ ಮತ್ತೆ ಒತ್ತಿ ಹೇಳುತ್ತಾರೆ. ತನ್ನ ಹಾಡಿನಲ್ಲಿ ಹಿಂಸೆಯ ಕುರಿತೂ ವಿಚಾರಗಳಿರುವ ಪ್ರಶ್ನೆ ಬಂದಾಗ, ‘ಸಂಪೂರ್ಣ ಸಾಕ್ಷರರ ನಾಡು ಎಂದೇ ಹೆಸರಾದ ಇದೇ ಕೇರಳದಲ್ಲಿ ಶಬರಿಮಲೆ ವಿಚಾರ ಬಂದಾಗ ಎಪ್ಪತ್ತಕ್ಕೂ ಹೆಚ್ಚು ಜನ ಬೀದಿಯಲ್ಲಿ ಹೊಡೆದಾಡಿಕೊಂಡರಲ್ಲ…ಎಲ್ಲಿ ಹೋಯ್ತು ನಿಮ್ಮ ಸಾಕ್ಷರತೆ? ಹಿಂಸೆಯ ಕುರಿತು ಅವರಿಗೆ ಅರಿವಿಲ್ಲವೇ?’ ಎಂದು ಸಹಜವಾಗಿ ಅಷ್ಟೇ ತೀಕ್ಷ್ಣ ನೆಲೆಯಲ್ಲಿ ಪ್ರಶ್ನೆ ಮಾಡುತ್ತಾರೆ.
ವರ್ಣ ತಾರತಮ್ಯವೂ ಕೇರಳದಲ್ಲಿ ಜೀವಂತವಾಗಿದೆ ಎನ್ನುವುದನ್ನು ವೇಡನ್ ಹೇಳುತ್ತಾರೆ. ‘ಮಲಯಾಳಂನಲ್ಲಿ ಯಾರಾದರೂ ಕಪ್ಪು ಸ್ಟಾರ್ ನಟ ಇದ್ದಾರಾ?’ ಎಂದು ವೇಡನ್ ಪ್ರಶ್ನಿಸಿದಾಗ, ಸಂದರ್ಶಕ, ‘ವಿನಾಯಕನ್ ಇದ್ದಾರಲ್ಲ’ ಎನ್ನುತ್ತಾರೆ. ‘ಅವರನ್ನು ಗೌರವದಿಂದ, ಘನತೆಯೊಂದಿಗೆ ಮಲಯಾಳಂ ಸಿನಿಮಾ ಬಳಸಿಕೊಂಡಿಲ್ಲವಲ್ಲ’ ಎಂದು ಪ್ರಶ್ನಿಸುತ್ತಾರೆ ವೇಡನ್. ‘ದುಬೈನಲ್ಲಿ ಕಪ್ಪು ಜನಾಂಗದ ಮಾಡಲ್ ಗಳನ್ನು ನೋಡಿ ತುಂಬ ಖುಷಿಪಟ್ಟೆ, ಅದೇ ಕ್ಷಣ ನಮ್ಮ ನಾಡಿನ ಬಗ್ಗೆ ನೆನೆದು ಬೇಸರವಾಯ್ತು’ ಎನ್ನುತ್ತಾರೆ. ‘ಪಾಣನಲ್ಲ ಪೊಲೆಯನಲ್ಲ’ ಎನ್ನುವ ಆಕ್ರೋಶದ ಹಾಡನ್ನು ನಾನು ಮಾತಿನ ರೂಪದಲ್ಲಿ ಜನರ ಬಳಿ ಹೋಗಿ ಹೇಳಿದರೆ ಅವರು ನನ್ನನ್ನು ಖಂಡಿತಾ ಕೊಂದಾರು. ಅದಕ್ಕಾಗಿ ಹಾಡಿನ ಹಾದಿ ಹಿಡಿದಿದ್ದೇನೆ. ಬೆದರಿಕೆಗಳು ಬರುತ್ತಲೇ ಇರುತ್ತವೆ. ಆದರೆ ಇದು ನನ್ನ ಕೆಲಸ. ನಾನದನ್ನು ಸಾಯುವವರೆಗೂ ಮಾಡುತ್ತೇನೆ’ ಎಂದು ಗಟ್ಟಿಯಾಗಿ ಹೇಳುವ ವೇಡನ್, ಹಾಡಿನ ಮೂಲಕವೇ ಹೇಳಿದ ಸಾಲುಗಳಿವೆ. ‘ವ್ಯಕ್ತಿ ಸಾಯಬಹುದು, ಆದರೆ ಅವನ ಆಶಯ ಸಾಯದು, ಒಬ್ಬ ವೇಡನ್ ಸತ್ತರೂನು ಸಹಸ್ರ ವೇಡನ್ ಹುಟ್ಟುತಾರೆ’.
ಕಾಡ್ ಕಟ್ಟವಂಡೆ ನಾಟ್ಟಿಲ್ ಚೋರು ಕಟ್ಟವನ್ ಮರಿಕ್ಕುಂ (ಕಾಡು ಕದ್ದವನ ನಾಡಿನಲ್ಲಿ ಕೂಳು ಕದ್ದವನ ಕೊಲೆ). ಕೇರಳದಲ್ಲಿ ಅಕ್ಕಿ ಕದ್ದ ಮಧು ಎಂಬ ವ್ಯಕ್ತಿಯನ್ನು ಥಳಿಸಿ ಕೊಂದ ಪ್ರಕರಣ ಹಾಗೂ ವೀರಪ್ಪನ್ ಪ್ರಕರಣ, ಕಾಡಿನ ‘ನಂಟು’ ಹೊಂದಿರುವ ರಾಜಕಾರಣಿಗಳ ಬಗ್ಗೆ ಇದಕ್ಕಿಂತ ಸ್ಪಷ್ಟವಾಗಿ ಕಡಿಮೆ ಸಾಲುಗಳಲ್ಲಿ ಹೇಗೆ ಹೇಳಲು ಸಾಧ್ಯ?
ವೇಡನ್ ಹಲವು ಸಿನಿಮಾಗಳಿಗೆ ಹಾಡುಗಳನ್ನು ರಚಿಸಿ ಹಾಡಿದ್ದಿದೆ. ಅದರಲ್ಲೂ ಮೊದಲು ವೇಡನ್ ಗೆ ಹೆಸರು ತಂದುಕೊಟ್ಟ ಸಿನಿಮಾ ಹಾಡು ‘ಮಂಜುಮ್ಮೇಲ್ ಬಾಯ್ಸ್’ ಚಿತ್ರದ ‘ಕುತಂತ್ರಂ’. ಇತ್ತೀಚೆಗೆ ಐದೋ, ಆರೋ ಗ್ರಾಂ ಗಾಂಜಾ ವಿಚಾರಕ್ಕೆ, ಹುಲಿಯುಗುರು ವಿಚಾರಕ್ಕೆ ಬಂಧನಕ್ಕೊಳಗಾಗುತ್ತಾರೆ ಎಂದರೆ ಅದರ ಹಿಂದಿನ ಹುನ್ನಾರ ವೇಡನ್ ಗೂ ವೇದ್ಯವಾದದ್ದೇ. ಅಷ್ಟೆ ಅಲ್ಲ ಈ ಪ್ರಕರಣದಲ್ಲಿ ವೇಡನ್ ವಿರುದ್ಧ ನಿಂತವರೇ ಕಡಿಮೆ. ಜಾತಿ ತಾರತಮ್ಯದ ವಿರುದ್ಧ, ವರ್ಣ ತಾರತಮ್ಯದ ವಿರುದ್ಧ ವೇಡನ್ ಹಾಡುಗಳು ಕೇರಳದಾಚೆಗೂ ಅಲೆಯೆಬ್ಬಿಸಿದ್ದು ಮುಟ್ಟಬೇಕಾದಲ್ಲಿಗೆ ಮುಟ್ಟಿದೆ. ಅದರ ಪರಿಣಾಮವಾಗಿ ವೇಡನ್ ಎಂಬ ಕಿಡಿಯನ್ನು ಆರಿಸುವ ಯತ್ನ ನಡೆಯುತ್ತಿದೆ. ಅದರ ಭಾಗವಾಗಿಯೇ ಇತ್ತೀಚಿನ ಬೆಳವಣಿಗೆ ನಡೆಯಿತು. ತಮಾಷೆಯೆಂದರೆ ಈ ಬೆಳವಣಿಗೆ ವೇಡನ್ ಗೆ ಕೊಟ್ಟ ನೆಗೆಟಿವ್ ಪಬ್ಲಿಸಿಟಿಯ ಹಾಗೆ ಕೆಲಸ ಮಾಡಿತು. ಇದು ವೇಡನ್ ಯಾರು ಎಂದು ಕೇರಳದಾಚೆಗೂ ಜನರು ಗೂಗಲ್ ನಲ್ಲಿ ಜಾಲಾಡಿ ಆತನ ಹಾಡುಗಳನ್ನು ಕೇಳಿಸಿಕೊಂಡು ಅಭಿಮಾನಿಗಳಾಗುವಂತೆ ಮಾಡಿತು.

ಸಿನಿಮಾಗಳಿಗೆ ಹಾಡು ಬರೆಯಲು ಸಿಗುವ ಅವಕಾಶವನ್ನು ಕೂಡ ವೇಡನ್ ಸುಮ್ಮನೆ ವ್ಯರ್ಥ ಮಾಡುವುದಿಲ್ಲ. ಅಲ್ಲಿಯೂ ತಾನು ಹೇಳಬೇಕಾದದ್ದನ್ನು ಹೇಳಿಯೇ ತೀರುತ್ತಾರೆ. ಕುತಂತ್ರಂ ಹಾಡಿನಲ್ಲಿ ಪ್ರಸಿದ್ಧ ಸಾಲೊಂದಿದೆ.
ಕುತಂತ್ರತಂತ್ರಮಂತ್ರಮೊನ್ನುಂ ಅರಿಯಿಲ್ಲಡಾ, ಕುಡಿಚ್ಚ ಕಳ್ಳ್ ಕಳ್ಳಮೊನ್ನುಂ ಪರಯಿಲ್ಲಡಾ (ಕುತಂತ್ರ ತಂತ್ರ ಮಂತ್ರವೇನೂ ನಂಗೆ ಅರಿಯದು, ಕುಡಿದ ಕಳ್ಳು ಸುಳ್ಳನೆಂದೂ ಹೇಳಲಾರದು) ಎಂಬ ಈ ಸಾಲು ಮೇಲ್ವರ್ಗದವರಿಗೆ ಕೊಟ್ಟ ಬಿಗಿ ಹೊಡೆತದಂತಿದೆ. ಇವೆಲ್ಲವೂ ಸದ್ದಿಲ್ಲದೇ ಒಂದು ವರ್ಗಕ್ಕೆ ವೇಡನ್ ಎಂಬ ಬೇಟೆಗಾರನನ್ನೇ ಬೇಟೆಯಾಡುವ ತಂತ್ರ ಹೆಣೆಯುವಷ್ಟು ಸಿಟ್ಟು ತಂದಿದೆ. ಇದೇ ಹಾಡಿನ ಇನ್ನೊಂದು ಸಾಲು ನೋಡಿ; ವಿಯರ್ಪ್ ತುನ್ನಿಯಿಟ್ಟ ಕುಪ್ಪಾಯಂ, ಅದಿಲ್ ನಿರಂಙಳ್ ಮಾಯುಗಿಲ್ಲ, ಕಟ್ಟಾಯಂ/ ಕಿನಾವ್ ಕೊಂಡ್ ಕೆಟ್ಟುಂ ಕೊಟ್ಟಾರಂ, ಅದಿಲ್ ಮಂತ್ರಿ ನಮ್ಮಲ್ ತನ್ನೆ ರಾಜಾವುಂ (ಬೆವರು ಹೊಲಿದು ಹಾಕಿಕೊಂಡ ಬಟ್ಟೆಯಿದು, ಅದರ ಬಣ್ಣವಂತೂ ಎಂದಿಗೆಂದೂ ಮಾಸದು, ಕನಸಿನಲ್ಲೆ ಕಟ್ಟುತೇವೆ ಅರಮನೆ, ಆಗುತೇವೆ ಅಲ್ಲಿ ನಾವೇ ಮಂತ್ರಿ, ನಾವೇ ರಾಜರೂ).
ಗಾಂಜಾ ಪ್ರಕರಣವಾಗಲಿ, ಹುಲಿಯುಗುರು ಪ್ರಕರಣವಾಗಲಿ ಕೇರಳದಲ್ಲಿ ಹೊಸತೇನಲ್ಲ. ವೇಡನ್ ಅದಕ್ಕೆ ದಾಳವಾದದ್ದಷ್ಟೆ. ಜಾಮೀನಿನ ಮೇಲೆ ಹೊರಗೂ ಬಂದಾಗಿದೆ. ಆದರೆ ವೇಡನ್ ಮಾಧ್ಯಮದ ಮುಂದೆ ಮಾತನಾಡುವಾಗ ತೋರಿದ ಪ್ರಬುದ್ಧತೆಗೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೇರಳದ ಚಿಂತಕರು, ಪ್ರಗತಿಪರರು ‘ಇದು ವೇಡನ್ ನ ರಾಜಕೀಯ ನಿಲುವಿನ ಮೇಲಿರುವ ಅಸಮಾಧಾನದ ಫಲವೇ ಹೊರತು ಬೇರೇನಲ್ಲ’ ಎಂದು ಟೀಕಿಸುವ ಮೂಲಕ ವೇಡನ್ ಪರ ನಿಂತಿದ್ದಾರೆ. 2021ರಲ್ಲಿ ‘ಮೀ ಟೂ’ ಪ್ರಕರಣದಲ್ಲಿ ಇಬ್ಬರು ಯುವತಿಯರೊಂದಿಗೆ ಅನುಚಿತವಾಗಿ ವರ್ತಿಸಿದ್ದ ವಿಚಾರವಾಗಿ ವೇಡನ್ ವಿರುದ್ಧ ಆರೋಪ ಬಂದಿತ್ತು. ಅದಕ್ಕೆ ವೇಡನ್ ತನ್ನ ಸಾಮಾಜಿಕ ಜಾಲತಾಣಗಳಲ್ಲಿ ಕ್ಷಮೆಯನ್ನೂ ಯಾಚಿಸಿದ್ದರು. ವೇಡನ್ ಗೆ ಕುಡಿತ ಹಾಗೂ ಸಿಗರೇಟಿನ ಚಟ ಇದೆ. ವೇದಿಕೆಗಳಲ್ಲಿ ಯುವಸಮೂಹಕ್ಕೆ ಕುಡಿತ, ಗಾಂಜಾ ಸೇವಿಸದಂತೆ ಅಣ್ಣನ ಸ್ಥಾನದಲ್ಲಿ ನಿಂತು ಬುದ್ಧಿಮಾತು ಹೇಳುವ ವೇಡನ್, ಸ್ವತಃ ಕುಡಿದಿರುವುದನ್ನೂ ಪ್ರಾಮಾಣಿಕವಾಗಿ ಒಪ್ಪಿಕೊಳ್ಳುತ್ತಾರೆ. ಆದರೆ ಕೇರಳದಲ್ಲಿ ಕುಡಿತ, ಗಾಂಜಾ ಚಟದಿಂದ ಚಿತ್ರರಂಗದ ಹಲವು ಅದ್ಭುತ ನಟರು ಬದುಕು ಹಾಳುಮಾಡಿಕೊಂಡಿದ್ದಾರೆ. ಪ್ರಸ್ತುತ ಶೈನ್ ಟಾಮ್ ಚಾಕೊ ಹಾಗೂ ಶ್ರೀನಾಥ್ ಭಾಸಿ ಎಂಬ ಪ್ರತಿಭಾನ್ವಿತ ನಟರ ಹೆಸರು ಆಗಾಗ ಈ ಪಟ್ಟಿಯಲ್ಲಿ ಕೇಳಿಬರುತ್ತಿದೆ. ದಮನಿತರ ಧ್ವನಿಯಾಗಿ ಕೊನೆಯವರೆಗೂ ನಿಲ್ಲಬೇಕಾದ ಜವಾಬ್ದಾರಿ ಸದ್ಯ ವೇಡನ್ ಮೇಲಿದೆ. ಹಾಗಾಗಿ ವೇಡನ್ ದಾರಿ ತಪ್ಪಬಾರದು, ಪ್ರತಿ ಹೆಜ್ಜೆಯೂ ಎಚ್ಚರದಿಂದ ಇಡಬೇಕಾಗುತ್ತದೆ.
ಒಂದು ಬಾರಿ ಮೀನುಗಾರ ಕುಟುಂಬದ ಮಹಿಳೆಯೊಬ್ಬರು ‘ಕಡಲಿನ ಮಕ್ಕಳಿಗಾಗಿ ಒಂದು ಹಾಡು ಬರೆದು ಹಾಡು ಮಗಾ…’ ಎಂದು ವೇಡನ್ ಬಳಿ ಕೇಳಿಕೊಳ್ಳುತ್ತಾರೆ. ‘ನೀವು ಕೇಳಿದ್ದೀರಲ್ಲ, ಖಂಡಿತಾ ನಾನದನ್ನು ಮಾಡುವೆ’ ಎಂದು ಮಾತು ಕೊಟ್ಟಿದ್ದ ವೇಡನ್. ಆ ಮಾತನ್ನು ನಂತರದಲ್ಲಿ ಜನರೂ ಮರೆತಿದ್ದರು. ಆದರೆ, ‘ಕಡಲಮ್ಮ ಕರಞಲ್ಲೆ ಪೆಟ್ಟದ್, ಕಣ್ಣೀರೆಲ್ಲಾಂ ಅವಳಲ್ಲೆ ಕಟ್ಟದ್….’, (ಅತ್ತು ಹೆತ್ತಳಲ್ಲ ಕಡಲತಾಯಿ, ಕದ್ದಳಲ್ಲ ಅವಳೆ ಕಣ್ಣೀರನೆಲ್ಲ) ಎನ್ನುವ ಆ್ಯಂಟನಿ ವರ್ಗೀಸ್ ಪೆಪೆ ಹಾಗೂ ರಾಜ್ ಬಿ.ಶೆಟ್ಟಿ ನಟಿಸಿರುವ ‘ಕೊಂಡಲ್’ ಸಿನಿಮಾದಲ್ಲಿನ ಹಾಡು, ಕೇವಲ ಹಾಡಷ್ಟೇ ಆಗಿರಲಿಲ್ಲ, ಅದು ವೇಡನ್ ಆ ತಾಯಿಗೆ ಕೊಟ್ಟಿದ್ದ ಮಾತು ಉಳಿಸಿದ ರೀತಿಯೂ ಆಗಿತ್ತು. ತನ್ನ ಜನರನ್ನು ಎಂದೂ ಮರೆಯದ ವೇಡನ್ ಗುಣ ಜನಸಾಮಾನ್ಯರು ಆತನನ್ನು ಎದೆಯೊಳಗಿಟ್ಟು ತೂಗುವಷ್ಟು ಪ್ರೀತಿ ಹುಟ್ಟುಹಾಕಿದೆ. ಆ ಹಾಡು ಎಷ್ಟು ಧ್ವನಿಪೂರ್ಣವಾಗಿದೆಯೆಂದರೆ, ಅದು ಕಡಲಿನೊಂದಿಗೆ ಅಗಾಧ ನಂಟು ಹೊಂದಿರುವ ಮೀನುಗಾರ ಕುಟುಂಬಗಳ ಎದೆಯಾಳದ ಹಾಡಾಗಿದೆ ಈಗ. ವೇಡನ್ ಪ್ರಾಮಾಣಿಕತೆಯ ಮೂಲಕ ಜನರಿಗೆ ಇಷ್ಟವಾಗುವುದು ಮತ್ತು ಹತ್ತಿರವಾಗುವುದು. ಎಲ್ಲಿ ವೇದಿಕೆ ಹತ್ತಿದರೂ ಆತ ಜನರೊಂದಿಗೆ ಮಾತನಾಡುವ ರೀತಿ, ಆತನ ಧ್ವನಿ, ಮಾತಿನ ಆಕರ್ಷಣೆ ಎಂಥವರನ್ನೂ ಸೆಳೆಯಬಲ್ಲದು.
ವೇಡನ್ ಹಾಡಿನ ಕಾರ್ಯಕ್ರಮ ಆಯೋಜನೆಯೇ ಈಗ ಕೇರಳದಲ್ಲಿ ಕಷ್ಟದ ಕೆಲಸ ಆಗಿಬಿಟ್ಟಿದೆ. ಆತನನ್ನು ನೋಡಲು, ಹಾಡಿಗೆ ಕುಣಿಯಲು, ಮಕ್ಕಳಿಂದ, ಯುವಕರು, ಮಹಿಳೆಯರು, ವೃದ್ಧರೆನ್ನದೆ ಜನಸಾಗರವೇ ಹರಿದುಬರುವುದರಿಂದ ನಿಯಂತ್ರಣ ಕಷ್ಟವಾಗಿದೆ. ಯಾವ ಸ್ಟಾರ್ ನಟರ ಕಾರ್ಯಕ್ರಮಕ್ಕೂ ಬಾರದಷ್ಟು ಜನ ವೇಡನ್ ಕಾರ್ಯಕ್ರಮಕ್ಕೆ ಸೇರುತ್ತಿದ್ದಾರೆ ಎಂಬುದು ಉತ್ಪ್ರೇಕ್ಷೆಯಂತೆ ಕಂಡರೂ ಒಪ್ಪಲೇಬೇಕಾದ ವಾಸ್ತವ.

ದಲಿತ ಎನ್ನುವ ಪದ ದಲಿತ ಸಮುದಾಯವನ್ನು ಸೂಚಿಸುವುದು. ‘ದಲಿತಪ್ರಜ್ಞೆ’ ಎನ್ನುವುದು ಅದು ಕೇವಲ ದಲಿತ ಸಮುದಾಯವಷ್ಟೇ ಅಲ್ಲ, ಜಗತ್ತಿನ ತುಂಬ ನೋವು ನುಂಗಿದ, ಜಾತಿ, ವರ್ಣ ಬೇಧಕ್ಕೆ ಒಳಗಾದ ಎಲ್ಲರ ಕಾಳಜಿಯಾಗಿ, ಧ್ವನಿಯಾಗಿ ಕಾಣಿಸುತ್ತದೆ. ಪ್ಯಾಲೆಸ್ತೀನಿನ ಬಾವುಟವನ್ನು ಅಲ್ಲಿನ ಮಕ್ಕಳನ್ನು ಅಪ್ಪಿಕೊಂಡಂತೆ ಬರಿಮೈಗೆ ಹೊದ್ದುಕೊಂಡ ವೇಡನ್, ಜೀವ ಸಂವೇದನೆಯುಳ್ಳ ಯಾರಿಗೆ ತಾನೆ ಇಷ್ಟವಾಗದಿರಲು ಸಾಧ್ಯ?! ಇದೇ ಸನ್ನಿವೇಶ ಕರ್ನಾಟಕದಲ್ಲಾಗಿದ್ದಿದ್ದರೆ ಅದನ್ನು ಊಹಿಸಲೂ ಭಯವಾಗುತ್ತದೆ. ವೇಡನ್ ಕಾವ್ಯ ಪ್ಯಾಲೆಸ್ತೀನಿಗರ ಧ್ವನಿಯಾಗುತ್ತದೆ, ಆಸ್ಟ್ರೇಲಿಯಾದ ಕಾಳ್ಗಿಚ್ಚಿನ ಕತೆ ಹೇಳುತ್ತದೆ, ಅಮೆರಿಕದ ಪೊಲೀಸ್ ತನ್ನ ಮಂಡಿಯಿಂದ ಕತ್ತು ರಸ್ತೆಗೊತ್ತಿ ಕೊಂದ ಜಾರ್ಜ್ ಫ್ಲಾಯ್ಡ್ ಎಂಬ ಕಪ್ಪು ಮನುಷ್ಯನಿಗೆ ಮಿಡಿಯುತ್ತದೆ. ವಿಶ್ವವನ್ನೇ ಸುತ್ತಿ ಎಲ್ಲರ ನೋವನ್ನು ತನ್ನ ಅಕ್ಷರಗಳೊಳಗೆ ಹಿಡಿದು ತರುತ್ತದೆ. ಹೀಗೆ ವೇಡನ್ ಕೇವಲ ಒಂದು ಜನಾಂಗದ, ಸಮುದಾಯದ ಧ್ವನಿಯಷ್ಟೇ ಅಲ್ಲ, ಅದೊಂದು ಜ್ವಾಲೆ. ನೊಂದ ಜನರ ಕಾವ್ಯ ಜ್ವಾಲೆ, ಕೇಡುಗಾಲದಲ್ಲಿ ಹುಟ್ಟಿಕೊಂಡ, ಹುಟ್ಟಲೇಬೇಕಿದ್ದ ಹಾಡು. ನೊಂದವರ ನಾಡಲಿ ವೇಡನ್ ಮತ್ತೆ ಮತ್ತೆ ಹಾಡಲಿ ಎಂಬ ಹಾರೈಕೆ ಎಲ್ಲರದ್ದೂ ಹೌದು.
ವೇಡನ್ ಕೆಲವು ಹಾಡುಗಳ ಯೂಟ್ಯೂಬ್ ಲಿಂಕ್ ಇಲ್ಲಿದೆ…
ವಾಯ್ಸ್ ಆಫ್ ವಾಯ್ಸ್ ಲೆಸ್
https://youtu.be/OPzY3ekoIrA?si=TFq5lJXX2S7DA1KZ
ಕಡಲಮ್ಮ ಕರಂಞಲ್ಲೆ ಪೆಟ್ಟದ್
https://youtu.be/qpWHNA2loyA?si=bcOSwm8OoDkaEolC
ಕುತಂತ್ರಂ
https://youtu.be/W6-O00alJUo?si=6hIgtPn31xWIiqSb
ಬುದ್ಧನಾಯ್ ಪಿರ
https://youtu.be/LXfcmXy84ZY?si=gScODQAV5W6IUXUF

ಶರೀಫ್ ಕಾಡುಮಠ
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವರು. ಸದ್ಯ ಸೌದಿ ಅರೇಬಿಯಾದ ರಿಯಾಧ್ ನಲ್ಲಿದ್ದಾರೆ. ಪ್ರಜಾವಾಣಿ ಸೇರಿದಂತೆ ಹಲವು ಪತ್ರಿಕೆಗಳಲ್ಲಿ ಕೆಲಸ ಮಾಡಿದ್ದಾರೆ.
ವೇಡನ್ ಎಂಬ ‘ಆಕ್ರೋಶದ ಕಿಡಿ’ ನೋವಿನ ಚಿಲುಮೆಯನ್ನು ಅತ್ಯಂತ ಮನೋಜ್ಞವಾಗಿ ಓದುಗರ ಎದೆಗೆ ಒರಗಿಸಿದ್ದೀರಿ. ಓದುಗರು ಮಮತೆಯ ಕಂಗಳಿಂದ ಸ್ವೀಕರಿಸುವಂಹ ಅದ್ಭುತ ಲೇಖನ ನಿಮ್ಮದು ಶರೀಫ್ ಕಾಡುಮಠ ರವರೇ.
🙏🙏🙏 ಹೊಸ ಪರಿಚಯ,, ಹೊಸದಾರಿ ಹಳೆತತ್ವದ ಅನಾವರಣ ಹೊಸ ಕಿಚ್ಚಿನೊಂದ ಕಿಚ್ಚಿನೊಂದಿಗೆ….
ವೇಡನ್ ಕುರಿತ ಲೇಖನ ಮನೋಜ್ಞವಾಗಿದೆ. ಪರಿಚಯಿಸದ್ದಕ್ಕೆ ಧನ್ಯವಾದಗಳು
ಬೇಡನ ಹಿಂದಿನ ರೋಚಕ ಕಥೆ,,, ಮನದಾಳದ ಅನುಭವದ ಪದಗುಚ್ಛಗಳು ಸರಾಗವಾಗಿ ಮೂಡಿಬರುವ ಪರಿ ಮನೋದ್ನ್ಯವಾಗಿ ಮೂಡಿಬಂದಿದೆ ತಮ್ಮ ಲೇಖನದಲ್ಲಿ…. ಓದಿ ಖುಷಿಯಾಯಿತು ಧನ್ಯವಾದಗಳು 💐💐💐