ಒಳ ಮೀಸಲಾತಿ ಜಾರಿಗೆ ಪರಿಶಿಷ್ಟ ಜಾತಿಯಲ್ಲಿನ ಉಪಜಾತಿಗಳ ನಿಖರ ದತ್ತಾಂಶ ಸಂಗ್ರಹದ ಸಮೀಕ್ಷೆಯಲ್ಲಿ ಧರ್ಮದ ಕಾಲಂ ಸೇರಿಸಬೇಕು. ಈ ವೇಳೆ ಬಲಗೈ ಸಮುದಾಯದ 37 ಉಪಜಾತಿಗೆ ಸೇರಿದವರು ತಮ್ಮ ಉಪಜಾತಿಯನ್ನು ಛಲವಾದಿ ಅಥವಾ ಹೊಲೆಯರು ಎಂದು ನಮೂದಿಸಬೇಕು ಮತ್ತು ಧರ್ಮದ ಕಾಲಂನಲ್ಲಿ ’ನವಬೌದ್ಧ’ ಎಂದು ನಮೂದಿಸಬೇಕು ಎಂದು ಭಾರತೀಯ ಮೂಲ ನಿವಾಸಿ ದ್ರಾವಿಡ ಒಕ್ಕೂಟದ ರಾಜ್ಯ ಸಂಚಾಲಕ ಶಂಕರ್ ಅಜ್ಮನಿ ಹೇಳಿದರು.
ಹುಬ್ಬಳ್ಳಿಯ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಒಳ ಮೀಸಲಾತಿ ಜಾರಿಗೆ ಪರಿಶಿಷ್ಟ ಜಾತಿಯಲ್ಲಿನ ಉಪಜಾತಿಗಳ ನಿಖರ ದತ್ತಾಂಶ ಸಂಗ್ರಕ್ಕಾಗಿ ರಾಜ್ಯ ಸರ್ಕಾರ ಹೊಸದಾಗಿ ಸಮೀಕ್ಷೆ ನಡೆಸಲು ಮುಂದಾಗಿದ್ದು, ಈ ಜಾತಿ ಸಮೀಕ್ಷೆಯಲ್ಲಿ ಧರ್ಮದ ಕಾಲಂ ಇಲ್ಲ. ಧರ್ಮವನ್ನು ನಮೂದಿಸದಿದ್ದರೆ ಸಂವಿಧಾನಾತ್ಮಕವಾಗಿ ಸಿಗಬೇಕಾದ ಸೌಲಭ್ಯಗಳು ಕೆಲವು ಉಪಜಾತಿಗಳಿಗೆ ಸಿಗುವುದಿಲ್ಲ. ಹೀಗಾಗಿ ಧರ್ಮದ ಕಾಲಂ ಸೇರಿಸಬೇಕು. ಮತ್ತು ಸಮಾಜದವರು ಜಾತೀಯ ಸಮೀಕ್ಷೆ ವೇಳೆ ಧರ್ಮದ ಕಾಲಂನಲ್ಲಿ ’ನವಬೌದ್ಧ’ ಎಂದು ನಮೂದಿಸಬೇಕು ಆಗ ಮಾತ್ರ ಶೈಕ್ಷಣಿಕ ಮತ್ತು ರಾಜಕೀಯವಾಗಿ ಸರ್ಕಾರದ ಎಲ್ಲ ಸೌಲಭ್ಯ ಪಡೆಯಲು ಸಾಧ್ಯ ಎಂದರು.
ಸದಾಶಿವ ಆಯೋಗ ಹಾಗೂ ಜೆಸಿ ಮಾಧುಸ್ವಾಮಿ ಆಯೋಗದ ವರದಿಯಲ್ಲಿನ ನ್ಯೂನ್ಯತೆ ಸರಿಪಡಿಸಿ ವೈಜ್ಞಾನಿಕವಾಗಿ ಮಾಹಿತಿ ಸಂಗ್ರಹಿಸಲು ಮೇ 5 ರಿಂದ ಸಮೀಕ್ಷೆ ನಡೆಯಲಿದೆ. ಸಮೀಕ್ಷೆ ನಡೆಸಲು ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರನ್ನು ಸರ್ಕಾರ ಈಗಾಗಲೇ ನಿಯೋಜಿಸಿದೆ. ಪರಿಶಿಷ್ಟ ಜಾತಿಗಳಲ್ಲಿ ಛಲವಾದಿ ಅಂದರೆ; ಬಲಗೈ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ನಿಖರ ಮಾಹಿತಿ ಗೊತ್ತಾಗಬೇಕಾದರೆ ಎಲ್ಲರೂ ಸಮೀಕ್ಷೆಯಲ್ಲಿ ಪಾಲ್ಗೊಳ್ಳಬೇಕು ಎಂದರು. ಮೂರು ಹಂತಗಳಲ್ಲಿ ಸಮೀಕ್ಷೆ ನಡೆಯಲಿದ್ದು ಸಮೀಕ್ಷೆಯಲ್ಲಿ ಭಾಗವಹಿಸಿದವರು ಆನ್ಲೈನ್ ಮೂಲಕ ನೊಂದಣಿ ಮಾಡಲು ಅವಕಾಶ ಕಲ್ಪಿಸಲಾಗಿದೆ. ಸಮೀಕ್ಷೆ ಮಾಡಲು ಮನೆಗೆ ಬಂದಾಗ ಮಾಹಿತಿ ಕೊಡಲು ಸಾಧ್ಯವಾಗದಿದ್ದರೆ; ಅಂಗನವಾಡಿ ಶಿಶುವಿಹಾರಗಳಲ್ಲಿನ ಬೂತ್ ಕಚೇರಿಗೆ ಹೋಗಿ ಮಾಹಿತಿ ಕೊಡಬೇಕು. ಬೇರೆ ರಾಜ್ಯ ವಿದೇಶಗಳಲ್ಲಿ ಇರುವವರು ಮೊಬೈಲ್ ಆ್ಯಪ್ ಮೂಲಕ ಸಮೀಕ್ಷೆಯಲ್ಲಿ ಪಾಲ್ಗೊಳ್ಳಬಹುದು ಎಂದರು.
ಈ ಸಂದರ್ಭದಲ್ಲಿ ಗಣೇಶ್ ದೊಡ್ಡಮನಿ, ಇಂದೂಮತಿ, ಮಂಜುನಾಥ್ ಗುಡಿಮನಿ, ಫಕೀರಪ್ಪ ಚಲವಾದಿ ಇದ್ದರು.