ಪೆಹಲ್ಗಾಮ್ ಉಗ್ರರ ದಾಳಿಯ ನಂತರ ಭಾರತ ಹಾಗೂ ಪಾಕಿಸ್ತಾನ ನಡುವೆ ಉದ್ವಿಗ್ವ ವಾತಾವರಣ ನಿರ್ಮಾಣವಾಗಿರುವ ಸಂದರ್ಭದಲ್ಲೆ ಪಾಕ್‌ನ ರಾಯಭಾರಿಯೊಬ್ಬರು ಭಾರತದ ಮೇಲೆ ಅಣ್ವಸ್ತ್ರ ದಾಳಿ ಪ್ರಯೋಗಿಸುವುದಾಗಿ ಬಹಿರಂಗವಾಗಿ ಎಚ್ಚರಿಕೆ ನೀಡಿದ್ದಾರೆ.
ಮಾಸ್ಕೋದಲ್ಲಿ ಸಂದರ್ಶನವೊಂದರಲ್ಲಿ ಮಾತನಾಡಿದ ರಷ್ಯಾದ ಪಾಕ್ ರಾಯಭಾರಿಯಾಗಿರುವ ಮೊಹಮ್ಮದ್ ಖಾಲೀದ್ ಜಮಾಲಿ, ಪಾಕಿಸ್ತಾನದ ಮೇಲೆ ಭಾರತ ದಾಳಿ ಮಾಡುತ್ತವೆ ಎಂದು ಕೆಲವೊಂದು ಸೋರಿಕೆಯಾದ ದಾಖಲೆಗಳು ಹೇಳುತ್ತವೆ. ಭಾರತ ದಾಳಿ ಮಾಡುವುದು ಸನ್ನಿಹಿತವಾಗಿದೆ. ಉನ್ಮಾದದಲ್ಲಿರುವ ಭಾರತದ ಮಾಧ್ಯಮಗಳ ವರದಿ ಹಾಗೂ ಬೇಜವಾಬ್ದಾರಿ ಹೇಳಿಕೆಗಳು ನಮ್ಮನ್ನು ಈ ರೀತಿ ಹೇಳಿಕೆ ನೀಡುವಂತೆ ಒತ್ತಾಯಿಸಿವೆ. ಪಾಕಿಸ್ತಾನದ ಕೆಲವು ಪ್ರದೇಶದ ಮೇಲೆ ದಾಳಿ ನಡೆಯುವುದಾಗಿ ಕೆಲವೊಂದು ದಾಖಲೆಗಳು ಹೇಳುತ್ತವೆ. ಹಾಗಾಗಿ ನಮ್ಮ ಮೇಲೆ ದಾಳಿ ನಡೆಯುವುದು ಸನ್ನಿಹಿತವಾಗಿದೆ ಎಂದು ತಿಳಿಸಿದ್ದಾರೆ.
ಭಾರತ ಹಾಗೂ ಪಾಕಿಸ್ತಾನದ ವಿಷಯ ಬಂದರೆ ನಾವು ಸಂಖ್ಯಾಬಲದ ಮೇಲೆ ಚರ್ಚೆಯಲ್ಲಿ ಭಾಗಿಯಾಗಲು ಬಯಸುವುದಿಲ್ಲ. ಆದರೆ ನಾವು ಸಾಂಪ್ರದಾಯಿಕ ಹಾಗೂ ಅಣ್ವಸ್ತ್ರ ಒಳಗೊಂಡು ಎಲ್ಲ ರೀತಿಯ ಶಕ್ತಿಯನ್ನು ಬಳಸುತ್ತೇವೆ. ಪಾಕ್ ಜನರ ಬೆಂಬಲದೊಂದಿಗೆ ನಮ್ಮ ಸೇನೆ ಎಲ್ಲ ರೀತಿಯ ಶಕ್ತಿಯನ್ನು ಬಳಸುತ್ತದೆ ಎಂದು ಎಚ್ಚರಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮಂಗಳೂರು ಹತ್ಯೆಗಳಲ್ಲಿ ಮಾಧ್ಯಮಗಳೂ ಆರೋಪಿಗಳಲ್ಲವೇ?
ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನ ಬೈಸರನ್ ಕಣಿವೆಯಲ್ಲಿ ಪ್ರವಾಸಿಗರ ಮೇಲೆ ಉಗ್ರರು ದಾಳಿ ಮಾಡಿದ ನಂತರ ಪಾಕಿಸ್ತಾನವು ಭಾರತದ ಪ್ರತೀಕಾರದ ಭಯದಲ್ಲಿದೆ. ಇದಕ್ಕೂ ಮೊದಲು, ಪಾಕಿಸ್ತಾನ ಸಚಿವ ಹನೀಫ್ ಅಬ್ಬಾಸಿ ಭಾರತಕ್ಕೆ ಪರಮಾಣು ಪ್ರತೀಕಾರದ ಬೆದರಿಕೆಯೊಡ್ಡಿದ್ದರು. ಘೋರಿ, ಶಾಹೀನ್ ಮತ್ತು ಘಜ್ನಿ ಕ್ಷಿಪಣಿಗಳು ಮತ್ತು 130 ಪರಮಾಣು ಸಿಡಿತಲೆಗಳನ್ನು ಒಳಗೊಂಡಂತೆ ಪಾಕಿಸ್ತಾನದ ಶಸ್ತ್ರಾಗಾರವನ್ನು ಭಾರತಕ್ಕಾಗಿ ಮಾತ್ರ ಇಡಲಾಗಿದೆ ಎಂದು ಎಚ್ಚರಿಸಿದ್ದರು.
ಸಿಂಧೂ ನದಿ ನೀರು ಒಪ್ಪಂದವನ್ನು ಸ್ಥಗಿತಗೊಳಿಸುವ ಮೂಲಕ ಪಾಕಿಸ್ತಾನದ ನೀರು ಸರಬರಾಜನ್ನು ನಿಲ್ಲಿಸಲು ಭಾರತ ಧೈರ್ಯ ಮಾಡಿದರೆ, ಅದು ಪೂರ್ಣ ಪ್ರಮಾಣದ ಯುದ್ಧಕ್ಕೆ ಸಿದ್ಧವಾಗಬೇಕು ಎಂದು ಅಬ್ಬಾಸಿ ಹೇಳಿದ್ದರು.
ಪಾಕಿಸ್ತಾನದ ಮತ್ತೊಬ್ಬ ಸಚಿವ ಅತಾವುಲ್ಲಾ ತರಾರ್, ತಮ್ಮ ದೇಶಕ್ಕೆ ವಿಶ್ವಾಸಾರ್ಹ ಗುಪ್ತಚರ ಮಾಹಿತಿ ದೊರಕಿದ್ದು ಮುಂದಿನ 24 ರಿಂದ 36 ಗಂಟೆಗಳಲ್ಲಿ ಭಾರತ ಮಿಲಿಟರಿ ದಾಳಿ ನಡೆಸಬಹುದು ಎಂದು ಹೇಳಿದ್ದರು.