ಮಹಾರಾಷ್ಟ್ರ ಎನ್‌ಸಿಪಿಯಲ್ಲಿ ನಡೆಯುತ್ತಿರುವ ಬಣ ಜಗಳ ಚುನಾವಣಾ ಆಯೋಗದ ಮೆಟ್ಟಿಲೇರಿದ್ದು, ಅಜಿತ್ ಪವಾರ್ ನೇತೃತ್ವದ 40ಕ್ಕೂ ಹೆಚ್ಚು ಶಾಸಕರ ಗುಂಪು ಪಕ್ಷದ ಹೆಸರು ಮತ್ತು ಚಿಹ್ನೆಗಾಗಿ ಅಫಿಡವಿಟ್‌ಗಳೊಂದಿಗೆ ಮನವಿ ಸಲ್ಲಿಸಿದ್ದಾರೆ.
ಏತನ್ಮಧ್ಯೆ, ಎನ್‌ಸಿಪಿ ರಾಷ್ಟ್ರೀಯ ಅಧ್ಯಕ್ಷ ಶರದ್ ಪವಾರ್ ಬಣ ಕೂಡ ಹೆಸರು ಮತ್ತು ಚಿಹ್ನೆಯನ್ನು ನೀಡುವಂತೆ ಚುನಾವಣಾ ಪ್ರಾಧಿಕಾರಕ್ಕೆ ಕೇವಿಯಟ್ ಸಲ್ಲಿಸಿದೆ.
ಚುನಾವಣಾ ಆಯೋಗವು ಮುಂಬರುವ ದಿನಗಳಲ್ಲಿ ಅರ್ಜಿಗಳನ್ನು ಪ್ರಕ್ರಿಯೆಗೊಳಿಸಲು ಮತ್ತು ತನ್ನ ಮುಂದೆ ಸಲ್ಲಿಸಿದ ಆಯಾ ದಾಖಲೆಗಳನ್ನು ಎರಡೂ ಕಡೆಯಯವರನ್ನು ಕೇಳುವ ಸಾಧ್ಯತೆಯಿದೆ.
ಅಜಿತ್ ಪವಾರ್ ಅವರನ್ನು ಬೆಂಬಲಿಸಿ 40ಕ್ಕೂ ಹೆಚ್ಚು ಶಾಸಕರು ಮತ್ತು ಸಂಸದರ ಗುಂಪು ಅಫಿಡವಿಟ್‌ಗಳನ್ನು ಸಲ್ಲಿಸಿದೆ. ತಮ್ಮ ಚಿಕ್ಕಪ್ಪ ಶರದ್ ಪವಾರ್‌ಗಿಂತ ಹೆಚ್ಚಿನ ಶಾಸಕರನ್ನು ತಾವು ಹೊಂದಿದ್ದು, ತಮಗೆ ಪಕ್ಷದ ಹೆಸರು ಮತ್ತು ಚಿಹ್ನೆ ನೀಡುವಂತೆ ಅಜಿತ್ ಪವಾರ್ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದ್ದಾರೆ.
ಇದಕ್ಕೂ ಮುನ್ನ ಎರಡು ಬಣಗಳಾದ ಶರದ್ ಪವಾರ್ ನೇತೃತ್ವದ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷ ಮತ್ತು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಬುಧವಾರ ಮುಂಬೈನಲ್ಲಿ ತಮ್ಮ ಶಾಸಕರೊಂದಿಗೆ ಪ್ರತ್ಯೇಕ ಸಭೆ ನಡೆಸಿದರು.
ಅಜಿತ್ ಪವಾರ್ ಅವರು ಕರೆದಿದ್ದ ಪಕ್ಷದ ಸಭೆಯಲ್ಲಿ 53 ಎನ್‌ಸಿಪಿ ಶಾಸಕರ ಪೈಕಿ 31 ಮಂದಿ ಹಾಜರಿದ್ದರು. ಆದರೆ ಶರದ್ ಪವಾರ್ ಕರೆದಿದ್ದ ಸಭೆಯಲ್ಲಿ ಕೇವಲ 10 ಶಾಸಕರಿದ್ದರು ಎಂದು ಹೇಳಲಾಗಿದೆ. ಪಕ್ಷದ ಮೇಲೆ ತಮ್ಮ ಹಿಡಿತ ಸಾಧಿಸಲು ಎರಡು ಬಣಗಳು ನಿರ್ಣಾಯಕ ಹೇಳಿಕೆಗಳನ್ನು ನೀಡಿದ ನಂತರ ಸಭೆಗಳು ನಡೆದವು.
ಈ ಸುದ್ದಿ ಓದಿದ್ದೀರಾ? ಮಹಾರಾಷ್ಟ್ರ | ಎನ್‌ಸಿಪಿಯಿಂದ ಮೂವರ ಉಚ್ಚಾಟನೆ; 9 ಶಾಸಕರು, ಇಬ್ಬರು ಸಂಸದರ ಅನರ್ಹತೆಗೆ ನಿರ್ಣಯ
1999 ರಲ್ಲಿ ಶರದ್ ಪವಾರ್ ಸ್ಥಾಪಿಸಿದ ಎನ್‌ಸಿಪಿ, ಭಾನುವಾರ ಅಜಿತ್ ಪವಾರ್ ಅವರೊಂದಿಗೆ ವಿಭಜನೆಗೆ ಸಾಕ್ಷಿಯಾಯಿತು. 40 ಕ್ಕೂ ಹೆಚ್ಚು ಶಾಸಕರ ಬೆಂಬಲವನ್ನು ಹೇಳಿಕೊಂಡು ಮಹಾರಾಷ್ಟ್ರದಲ್ಲಿ ಶಿವಸೇನೆ-ಬಿಜೆಪಿ ಸಮ್ಮಿಶ್ರ ಸರ್ಕಾರವನ್ನು ಸೇರಿತು.
ಭಾನುವಾರ ನಡೆದ ಅನಿರೀಕ್ಷಿತ ಸಂಪುಟ ವಿಸ್ತರಣೆಯಲ್ಲಿ ಅಜಿತ್ ಪವಾರ್ ಸೇರಿದಂತೆ ಒಂಬತ್ತು ಎನ್‌ಸಿಪಿ ಶಾಸಕರು ಮಹಾರಾಷ್ಟ್ರ ಸರ್ಕಾರದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ವಯಸ್ಸು 83 ಆಗಿದೆ, ನಿವೃತ್ತರಾಗಿ: ಅಜಿತ್ ಪವಾರ್
ಶರದ್ ಪವಾರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಅಜಿತ್ ಪವಾರ್, ”ನಿಮಗೆ ಈಗಾಗಲೇ 83 ವರ್ಷ ವಯಸ್ಸಾಗಿದೆ. ಬಿಜೆಪಿಯಲ್ಲಿ ನಾಯಕರು 75ನೇ ವಯಸ್ಸಿನಲ್ಲಿ ನಿವೃತ್ತಿ ಹೊಂದುತ್ತಾರೆ. ಕೆಲವೇ ಸಮಯದಲ್ಲಿ ಶತಾಯುಷಿಯಾಗುತ್ತೀರಿ. ಪ್ರತಿಯೊಬ್ಬರಿಗೂ ಅವರದೆ ಆದ ಇನ್ನಿಂಗ್ಸ್ ಇರುತ್ತದೆ. ಆಡಳಿತದ ವಯಸ್ಸು 25 ರಿಂದ 75. ನೀವು ನಿವೃತ್ತರಾಗಿ ನಮಗೆಲ್ಲ ಆಶೀರ್ವಾದ ನೀಡಿ. ನಾವು ನಿಮ್ಮನ್ನು ದೀರ್ಘಕಾಲ ಬದುಕಬೇಕೆಂದು ಪ್ರಾರ್ಥಿಸುತ್ತೇವೆ” ಎಂದು ತಿಳಿಸಿದ್ದಾರೆ.
ಇದಕ್ಕೆ ತಿರುಗೇಟು ನೀಡಿರುವ ಶರದ್ ಪವಾರ್ ಪುತ್ರಿ ಹಾಗೂ ಎನ್‌ಸಿಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷೆ ಸುಪ್ರಿಯಾ ಸುಳೆ, ಅಮಿತಾಭ್ ಬಚ್ಚನ್, ರತನ್ ಟಾಟಾ ಮುಂತಾದ ಹಿರಿಯರು 80 ವರ್ಷ ದಾಟಿದವರು. ಅವರೆಲ್ಲರೂ ತಮ್ಮ ವೃತ್ತಿಯನ್ನು ಮುನ್ನಡೆಸುತ್ತಿಲ್ಲವೆ. ನಾವು ದೇಶದ ಅತ್ಯಂತ ಭ್ರಷ್ಟ ಪಕ್ಷ ಬಿಜೆಪಿಯ ವಿರುದ್ಧ ಹೋರಾಟ ಮಾಡುತ್ತಿದ್ದೇವೆ. ಜನರು ಮುಂದಿನ ದಿನಗಳಲ್ಲಿ ಎಲ್ಲವನ್ನು ನಿರ್ಧರಿಸಲಿದ್ದಾರೆ” ಎಂದು ಹೇಳಿದ್ದಾರೆ.