ರಾಜ್ಯದಲ್ಲಿ ಪರಿಶಿಷ್ಟ ಜಾತಿಗಣತಿ ವೇಳೆ ಸಿಂದೋಳು, ಬೇಡ, ಬುಡ್ಗ ಜಂಗಮ, ದಕ್ಕಲಿಗ, ಹಂದಿ ಜೋಗಿ, ಸಿಳ್ಳೇಕ್ಯಾತ, ದೊಂಬರು, ಚನ್ನದಾಸರು, ಸುಡುಗಾಡು ಸಿದ್ಧರು ಗಣತಿ ಕಾರ್ಯದ ವೇಳೆ ಅರ್ಜಿಗಳನ್ನು ಭರ್ತಿ ಮಾಡುವಾಗ ಸ್ಪಷ್ಟವಾಗಿ ʼಪರಿಶಿಷ್ಟ ಜಾತಿʼ ಎಂಬುದನ್ನು ಕಡ್ಡಾಯವಾಗಿ ಬರೆಸಬೇಕು’ ಎಂದು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ, ಅಲೆಮಾರಿ ಸಂಘಟನೆಗಳ ಮಹಾ ಒಕ್ಕೂಟದ ಜಿಲ್ಲಾಧ್ಯಕ್ಷ ವೈ ಶಿವಕುಮಾರ್ ತಿಳಿಸಿದರು.
ಬಳ್ಳಾರಿ ನಗರದ ಸ್ಥಳೀಯ ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, “ಈ ಕುರಿತು ನಾವೀಗಾಗಲೇ ಸಮುದಾಯದಲ್ಲಿ ಜಾಗೃತಿ ಮೂಡಿಸುತ್ತಿದ್ದು ಕರ್ನಾಟಕ ರಾಜ್ಯ ಎಸ್‌ಸಿ, ಎಸ್‌ಟಿ, ಅಲೆಮಾರಿ ಬುಡಕಟ್ಟು ಮಹಾಸಭಾ ಬಳ್ಳಾರಿ ಜಿಲ್ಲಾ ಘಟಕ, ಪರಿಶಿಷ್ಠ ಜಾತಿ, ಪರಿಶಿಷ್ಠ ಪಂಗಡ ಅಲೆಮಾರಿ ಸಂಘಟನೆಗಳ ಮಹಾ ಒಕ್ಕೂಟಗಳು ಸಲಹೆ ನೀಡಿದಂತೆ ಸಮುದಾಯದ ಜನರು ಜಾತಿ ಗಣತಿಯಲ್ಲಿ ಪರಿಶಿಷ್ಟ ಜಾತಿ ಎಂದು ನಮೂದಿಸಬೇಕು” ಎಂದು ಹೇಳಿದರು.
“ಸರ್ವೋಚ್ಛ ನ್ಯಾಯಾಲಯವು ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ನೀಡಲು ರಾಜ್ಯ ಸರ್ಕಾರಗಳಿಗೆ ಅಧಿಕಾರ ಇದೆಯೆಂದು ತೀರ್ಪು ನೀಡಿದೆ. ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿ ಇರುವ ಜಾತಿಗಳನ್ನು ಉಪ ವರ್ಗಿಕರಣ ಮಾಡಿ ಒಳಮಿಸಲಾತಿಯನ್ನು ನೀಡಬಹುದು. ನಿವೃತ್ತ ನ್ಯಾಯಮೂರ್ತಿ ಹೆಚ್ ಎನ್ ನಾಗಮೋಹನ್ ದಾಸ್ ಅವರ ಅಧ್ಯಕ್ಷತೆಯಲ್ಲಿ ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿ ಕಲ್ಪಿಸುವ ನಿಟ್ಟಿನಲ್ಲಿ ವರದಿ ನೀಡಲು ಏಕಸದಸ್ಯ ಆಯೋಗ ರಚನೆ ಮಾಡಿದೆ. ಆಯೋಗದ ಶಿಫಾರಸಿನ ಅನ್ವಯ ಒಳಮಿಸಲಾತಿ ಕಲ್ಪಿಸುವ ಸಂಬಂಧ ಸಮೀಕ್ಷೆ ನಡೆಸಲು ಸರ್ಕಾರ ತೀರ್ಮಾನ ಮಾಡಿದೆ. ಈ ಸಮೀಕ್ಷೆ ಮೇ 5ರಿಂದ ಆರಂಭವಾಗಲಿದೆ” ಎಂದರು.
“ಬಳ್ಳಾರಿ ಜಿಲ್ಲೆಯ ಅಲೆಮಾರಿ ಪರಿಶಿಷ್ಟ ಜಾತಿಯ ಪಟ್ಟಿಗೆ ಸೇರಿರುವ ಸಿಂದೋಳು, ಬೇಡ, ಬುಡ್ಗ, ದಕ್ಕಲಿಗ, ಹಂದುಜೋಗಿ, ಸಿಳ್ಳೆಕ್ಯಾತ, ದೊಂಬರು, ಚನ್ನದಾಸರು, ಸುಡುಗಾಡುಸಿದ್ದ ಜನರ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ರಾಜಕೀಯ, ಔದ್ಯೋಗಿಕ ಪ್ರಾತಿನಿಧ್ಯತೆ ಸೇರಿದಂತೆ ಇನ್ನಿತರ ಸ್ಥಿತಿಗತಿಗಳ ಬಗ್ಗೆ ಸಮೀಕ್ಷೆ ಮಾಡುವುದು ಆಯೋಗದ ಉದ್ದೇಶವಾಗಿದೆ. ದತ್ತಾಂಶ ಸಂಗ್ರಹ ಮಾಡುವುದರಿಂದ ಅಲೆಮಾರಿ ಪರಿಶಿಷ್ಟ ಜಾತಿಗೆ ಸೇರಿರುವ ಈ ಸಮುದಾಯಗಳ ಜನಸಂಖ್ಯೆಗಳ ಎಷ್ಟಿದೆ ಎಂಬ ಮಾಹಿತಿ ಸರ್ಕಾರದ ಗಮನಕ್ಕೆ ಹೋಗುತ್ತದೆ” ಎಂದರು.
“ಕರ್ನಾಟಕ ರಾಜ್ಯ ಎಸ್‌ಸಿ/ಎಸ್‌ಟಿ, ಅಲೆಮಾರಿ ಬುಡಕಟ್ಟು ಮಹಾಸಭಾ ಬಳ್ಳಾರಿ ಜಿಲ್ಲಾ ಘಟಕ ಈ ಸಂಘದಿಂದ ಬಳ್ಳಾರಿ ಜಿಲ್ಲಾ ಸಮುದಾಯಗಳ ಜಾತಿಗೆ ಒಳಮೀಸಲಾತಿ ನೀಡುವ ಬಗ್ಗೆ ಮನವಿ ಸಲ್ಲಿಸಲಾಗಿದೆ. ನಿವೃತ್ತ ನ್ಯಾಯಮೂರ್ತಿ ಹೆಚ್ ಎನ್ ನಾಗಮೋಹನ್ ದಾಸ್ ಇವರನ್ನು ಭೇಟಿ ನೀಡಿ ಈಗಾಗಲೇ ಮನವಿ ಪತ್ರವನ್ನು ಸಲ್ಲಿಸಲಾಗಿದೆ” ಎಂದು ವಿವರಗಳನ್ನು ನೀಡಿದರು.
“ರಾಜ್ಯದಲ್ಲಿ ಪರಿಶಿಷ್ಟ ಜಾತಿಗೆ ಜಾತಿಗಣತಿ ಕಾರ್ಯಕ್ಕೆ ಸರ್ಕಾರ ದಿಟ್ಟ ಕ್ರಮಕೈಗೊಂಡಿದೆ. ಈ ಅವಧಿಯಲ್ಲಿ ಈಗಾಗಲೇ ನಾವು ಸೂಚಿಸಿದ ಜಿಲ್ಲೆಯ ಸಮುದಾಯದ ಜನರು ಅತ್ಯಂತ ಜವಾಬ್ದಾರಿಯುತವಾಗಿ ವರ್ತಿಸಬೇಕು. ಜಾತಿಗಣತಿ ಕಾರ್ಯ ಪೂರ್ಣಗೊಳ್ಳುವವರೆಗೂ ಜಾತ್ರೆಗಳು, ಉತ್ಸವ, ಹಬ್ಬ, ಜಯಂತಿಗಳ ಆಚರಣೆಯಲ್ಲಿ ತೊಡಗಬಾರದು. ಜಾತಿಗಣತಿ ಕಾರ್ಯ ಪೂರ್ಣಗೊಂಡು ಒಳಮೀಸಲು ಜಾರಿಯಾಗುವವರೆಗೂ ನಾವೆಲ್ಲ ಮನೆಯಲ್ಲಿದ್ದು, ಗಣತಿದಾರರು ಬಂದಾಗ ಅವರೊಂದಿಗೆ ಸೇರಿ ಬಡಾವಣೆ ಸುತ್ತಬೇಕು. ಸಮುದಾಯದವರು ಪರಿಶಿಷ್ಟ ಜಾತಿಗೆ ಸೇರಿದ ಎಲ್ಲರೂ ಪರಿಶಿಷ್ಟ ಜಾತಿಯೆಂದು ಕಡ್ಡಾಯವಾಗಿ ಬರೆಸಬೇಕು” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ವಿಜಯನಗರ | ಮೇ 20ರಂದು ಕಾಂಗ್ರೆಸ್ ಸರ್ಕಾರದ ಸಾಧನಾ ಸಮಾವೇಶ: ಶಾಸಕ ನಾರಾ ಭರತ್ ರೆಡ್ಡಿ
“ಜಿಲ್ಲೆ, ತಾಲೂಕು, ಪಟ್ಟಣಗಳಲ್ಲಿ ಗ್ರಾಮ, ಪಟ್ಟಣ, ಹೋಬಳಿ, ವಾರ್ಡ್‌ಗಳಲ್ಲಿ, ಕಾಲೋನಿಯಗಳಲ್ಲಿ, ನಗರಗಳಲ್ಲಿ ಜಿಲ್ಲಾ ಮಟ್ಟದ ಅಲೆಮಾರಿ ಸಮುದಾಯದ ಜನರಲ್ಲಿ ಜಾಗೃತಿ ಮೂಡಿಸಬೇಕು. ಯಾವುದೇ ಕುಟುಂಬಗಳು ಬಿಟ್ಟು ಹೋಗದಂತೆ ಸಮೀಕ್ಷೆ ಮಾಡುವುದು ಮುಖ್ಯವಾಗಿದೆ. ನಮ್ಮ ಸಂಘದ ರಾಜ್ಯ ಪದಾಧಿಕಾರಿಗಳು ಜಿಲ್ಲಾ, ತಾಲೂಕು, ಅಧ್ಯಕ್ಷರು, ಉಪಾಧ್ಯಕ್ಷರು ಕಾರ್ಯದರ್ಶಿಗಳು, ಮುಖಂಡರು, ಖಜಾಂಚಿ, ಸಮಾಜದ ಕುಲಬಾಂಧವರು ಈ ದಿಸೆಯಲ್ಲಿ ಕಾರ್ಯಪ್ರವೃತ್ತರಾಗಬೇಕು” ಎಂದು ಹೇಳಿದರು.
ಸಂಘಟನೆಗಳ ಪದಾಧಿಕಾರಿಗಳಾದ ಡಿ ರಂಗಯ್ಯ, ಸುಬ್ಬಣ್ಣ, ರಾಮಾಂಜಿನಿ, ಹುಚ್ಚಪ್ಪ, ಹನುಮಂತಪ್ಪ, ಗಾದಿಲಿಂಗ, ಹುಲುಗನ್ನ, ಅಜಪ್ಪ, ಕೆ ಚನ್ನಬಸಪ್ಪ, ವೆಂಕಟೇಶ್, ಶೈಲಾ ಸೀತಾರಾಮ್, ಕಂಡಪ್ಪ ಸೇರಿದಂತೆ ವಿವಿಧ ಎಸ್‌ಸಿ ಹಾಗೂ ಅಲೆಮಾರಿ ಸಮುದಾಗಳ ಮುಖಂಡರು ಸೇರಿದಂತೆ ಇತರರು ಇದ್ದರು.