ಸೇನಾ ವಾಹನವೊಂದು ಕಂದಕಕ್ಕೆ ಉರುಳಿದ್ದು, ಮೂವರು ಸೇನಾ ಸಿಬ್ಬಂದಿ ಸಾವನ್ನಪ್ಪಿರುವ ಘಟನೆ ಜಮ್ಮು ಮತ್ತು ಕಾಶ್ಮೀರದ ರಾಂಬನ್‌ನಲ್ಲಿ ನಡೆದಿದೆ.
ಜಮ್ಮುವಿನಿಂದ ಶ್ರೀನಗರಕ್ಕೆ ತೆರಳುತ್ತಿದ್ದ ಸೇನಾ ಬೆಂಗಾವಲು ವಾಹನವು ರಾಂಬನ್‌ನಲ್ಲಿನ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ತೆಳುತ್ತಿದ್ದಾಗ, ರಸ್ತೆ ಬದಿಯ 700 ಅಡಿ ಆಳದ ಕಂದಕಕ್ಕೆ ಉರುಳಿ ಬಿದ್ದಿದೆ. ಘಟನೆಯಲ್ಲಿ ಮೂವರು ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಸೇನೆ, ಪೊಲೀಸರು, ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆ (SDRF) ಮತ್ತು ಸ್ಥಳೀಯ ಸ್ವಯಂಸೇವಕರು ಧಾವಿಸಿದ್ದು, ಜಂಟಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಮೂವರು ಸೈನಿಕರ ಮೃತದೇಹವನ್ನು ಹೊರತೆಗೆದಿದ್ದಾರೆ.
ಮೃತರನ್ನು ಅಮಿತ್ ಕುಮಾರ್, ಸುಜೀತ್ ಕುಮಾರ್ ಹಾಗೂ ಮನ್ ಬಹದ್ದೂರ್ ಎಂದು ಗುರುತಿಸಲಾಗಿದೆ. ಕಂದಕಕ್ಕೆ ಉರುಳಿದ ವಾಹನವು ಸಂಪೂರ್ಣವಾಗಿ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.