‘ಹಿಂದುಗಳನ್ನೇ ಕೊಂದಾತ ಹಿಂದು ಹೋರಾಟಗಾರ ಹೇಗಾಗುತ್ತಾನೆ?’ ಎಂಬ ಪತ್ರಕರ್ತರ ಪ್ರಶ್ನೆಗೆ ಬಿಜೆಪಿ ಶಾಸಕಿ ಭಾಗೀರಥಿ ಮುರುಳ್ಯ ಅವರು ತಬ್ಬಿಬ್ಬಾಗಿದ್ದಾರೆ. ಉತ್ತರ ಕೊಡಲಾಗದೆ ಪತ್ರಿಕಾಗೋಷ್ಠಿಯಿಂದ ಎದ್ದು ಹೋಗಿದ್ದಾರೆ.
ರೌಡಿಶೀಟರ್ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ ಸಂಬಂಧ ಮಂಗಳೂರಿನ ಬಿಜೆಪಿ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿ ಕರೆಯಲಾಗಿತ್ತು. ಸುಳ್ಯದ ಶಾಸಕಿ ಭಾಗೀರಥಿ ಮುರುಳ್ಯ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು. ಈ ವೇಳೆ, ಪತ್ರಕರ್ತರು ಶಾಸಕಿಗೆ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ.
‘ಸುಹಾಸ್ ಶೆಟ್ಟಿ ಮೇಲೆ ದಲಿತ ದೌರ್ಜನ್ಯ ಪ್ರಕರಣವೂ ದಾಖಲಾಗಿದೆ. ಈ ಬಗ್ಗೆ ಏನಂತೀರಿ?, ಸುಹಾಸ್ ಮೇಲೆ ರೌಡಿಶೀಟ್ ತೆರೆದಿರುವುದೇ ಬಿಜೆಪಿ ಸರಕಾರದ ಅವಧಿಯಲ್ಲಿ ಅಲ್ಲವೇ?’ ಎಂಬ ಪ್ರಶ್ನೆಗಳನ್ನು ಪತ್ರಕರ್ತರು ಕೇಳಿದರು. ಯಾವೊಂದು ಪ್ರಶ್ನೆಗೂ ಉತ್ತರಿಸಲು ಸಾಧ್ಯವಾಗದ ಶಾಸಕಿ, ಸುದ್ದಿಗೋಷ್ಠಿಯನ್ನೇ ಅವಸರದಲ್ಲಿ ಮುಗಿಸಿ ಹೊರಟು ಹೋದರು.
“ಸುಹಾಸ್ ಶೆಟ್ಟಿ ರೌಡಿ ಶೀಟರ್ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಆದರೆ ಆತ ರೌಡಿ ಅಲ್ಲ. ಆತ ಹಿಂದುತ್ವಕ್ಕಾಗಿ ಹೋರಾಡಿದ ಯುವಕ” ಎಂದು ಹೇಳಿದ ಶಾಸಕಿಗೆ, “ಸುಹಾಸ್ ಶೆಟ್ಟಿ ಹಿಂದು ಯುವಕನೋರ್ವನ ಕೊಲೆ ಪ್ರಕರಣದಲ್ಲಿ 3ನೇ ಆರೋಪಿಯಾಗಿದ್ದ. ಹಿಂದು ಯುವಕನನ್ನು ಕೊಂದಾತ ‘ಹಿಂದೂ ಹೋರಾಟಗಾರ’ ಹೇಗಾಗುತ್ತಾನೆ?” ಎಂದು ಮಾಧ್ಯಮದವರು ಪ್ರಶ್ನಿಸಿದರು.
“ಪ್ರಕರಣ ದಾಖಲಾದವರ ಮೇಲೆ ರೌಡಿಶೀಟ್ ತೆರೆಯುವುದಾದರೆ ಕೆಲವು ರಾಜಕಾರಣಿಗಳ ಮೇಲೂ ಕೇಸ್ ಪ್ರಕರಣಗಳಿವೆ. ಅವರ ಮೇಲೂ ರೌಡಿಶೀಟ್ ತೆರೆಯಬೇಕು” ಎಂದು ಶಾಸಕಿ ಭಾಗೀರಥಿ ಹೇಳಿದಾಗ, “ಆರ್.ಅಶೋಕ್ ಗೃಹ ಸಚಿವರಾಗಿದ್ದ ಬಿಜೆಪಿ ಸರಕಾರದ ಅವಧಿಯಲ್ಲೇ ಸುಹಾಸ್ ಶೆಟ್ಟಿ ಮೇಲೆ ರೌಡಿಶೀಟ್ ತೆರೆದಿರುವುದು ಅಲ್ಲವೇ?” ಎಂದು ಪತ್ರಕರ್ತರು ಕೇಳಿದರು.
ಪ್ರಶ್ನೆಗೆ ಉತ್ತರಿಸದ ಶಾಸಕಿ, “ಈ ಬಗ್ಗೆ ಇನ್ನೊಮ್ಮೆ ಮಾಹಿತಿ ನೀಡುವೆ. ನಾನೀಗ ಕೊಲೆ ಕೃತ್ಯವನ್ನು ಖಂಡಿಸಲು ಸುದ್ದಿಗೋಷ್ಠಿ ಕರೆದಿದ್ದೇನೆ. ಮುಗಿಸುವ. ಆಗಮಿಸಿದ ಎಲ್ಲರಿಗೂ ಅಭಿನಂದನೆಗಳು” ಎಂದು ಗಡಿಬಿಡಿಯಲ್ಲಿ ಸುದ್ದಿಗೋಷ್ಠಿಯನ್ನು ಮುಗಿಸಿ ಎದ್ದು ಹೊರಟರು.