- ಬಳ್ಳಾರಿ ವಲಯದ ಪೊಲೀಸ ಮಹಾ ನಿರೀಕ್ಷಕರಿಗೆ ಶಾಸಕ ರಾಯರೆಡ್ಡಿ ಪತ್ರ
- ಪೊಲೀಸ್ ಅಧಿಕಾರಿಗಳ ಹೆಸರಿನ ಮುಂದೆ ವರ್ಗಾಯಿಸಬೇಕಾದ ಸ್ಥಳ ನಮೂದು
ವರ್ಗಾವಣೆ ದಂಧೆಯಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆಯುತ್ತಿದೆ ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಪದೇ ಪದೇ ಆರೋಪಿಸುತ್ತಲೇ ಇದ್ದಾರೆ. ಎಚ್‌ಡಿಕೆ ಆರೋಪಕ್ಕೆ ಬಿಜೆಪಿ ಕೂಡ ಧ್ವನಿಗೂಡಿಸಿದೆ. ಈ ನಡುವೆಯೇ ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಅವರು ಕೊಪ್ಪಳ ಜಿಲ್ಲೆಯ 25ಕ್ಕೂ ಹೆಚ್ಚು ಪೊಲೀಸರನ್ನು ವರ್ಗಾವಣೆ ಮಾಡುವಂತೆ ಕೋರಿ ಐಜಿಪಿಗೆ ಪತ್ರ ಬರೆದಿದ್ದಾರೆ.
ವರ್ಗಾವಣೆಯಾಗಬೇಕಾದ ಪೊಲೀಸ್ ಅಧಿಕಾರಿಗಳ ಹೆಸರಿನ ಮುಂದೆ ವರ್ಗಾಯಿಸಬೇಕಾದ ಸ್ಥಳವನ್ನು ಕೂಡ ನಮೂದಿಸಿರುವುದು ವರ್ಗಾವಣೆ ದಂಧೆಯ ಅನುಮಾನಕ್ಕೆ ಕಾರಣವಾಗಿದೆ.
ಬಳ್ಳಾರಿ ವಲಯದ ಪೊಲೀಸ್ ಮಹಾ ನಿರೀಕ್ಷಕ ಲೋಕೇಶ್ ಕುಮಾರ್ ಅವರಿಗೆ ಪತ್ರ ಬರೆದಿರುವ ಯಲಬುರ್ಗಾ ಶಾಸಕ ಬಸವರಾಜ ರಾಯರೆಡ್ಡಿ ನಡೆ ಮೇಲೆ ಪ್ರತಿಪಕ್ಷದ ನಾಯಕರು ಕಿಡಿಕಾರಿದ್ದಾರೆ. ರಾಯರೆಡ್ಡಿ ಬರೆದ ಪತ್ರ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಸಾಮೂಹಿಕ ವರ್ಗಾವಣೆ ಮಾಡಿಸುವುದಕ್ಕೆ ಇವರ‍್ಯಾರು ಎಂಬ ಪ್ರಶ್ನೆಗಳು ಕೇಳಿಬರುತ್ತಿವೆ.

ಬಸವರಾಜ ರಾಯರೆಡ್ಡಿ ಅವರ ಹೆಸರಿನ ಲೆಟರ್ ಹೆಡ್‌ನಲ್ಲಿಯೇ ಪತ್ರ ಬರೆಯಲಾಗಿದ್ದು, ಕೊಪ್ಪಳ ಜಿಲ್ಲೆಯ 25 ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲು ಮನವಿ ಮಾಡಿದ್ದಾರೆ. ಅದರಲ್ಲೂ ತಮ್ಮ ಕ್ಷೇತ್ರ ಯಲಬುರ್ಗಾ ವ್ಯಾಪ್ತಿಯ ಕುಕನೂರು ಮತ್ತು ಯಲಬುರ್ಗಾ ಪೊಲೀಸ್ ಠಾಣೆಗಳಿಗೆ ಸೇರಿದ ಹೆಚ್ಚಿನ ಪೊಲೀಸರನ್ನು ವರ್ಗಾವಣೆ ಮಾಡಲು ಮನವಿ ಮಾಡಿದ್ದಾರೆ. ಜೊತೆಗೆ ಕೊಪ್ಪಳ, ಗಂಗಾವತಿ ಹಾಗೂ ಕುಷ್ಟಗಿ ತಾಲೂಕುಗಳ ಪೊಲೀಸರನ್ನು ಕೂಡ ವರ್ಗಾವಣೆ ಮಾಡಬೇಕೆಂದು ಪತ್ರದಲ್ಲಿ ಹೇಳಿದ್ದಾರೆ.
ರಾಯರೆಡ್ಡಿ ಅವರು ಈ ರೀತಿ ಸಾಮೂಹಿಕ ವರ್ಗಾವಣೆ ಮೂಲಕ ಹಣ ಮಾಡುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ತಮಗೆ ಬೇಕಾದವರಿಗೆ ವರ್ಗಾವಣೆ ಮಾಡಿಸಿ ರಾಜಕಾರಣ ಹಾಗೂ ಹಣ ಮಾಡುತ್ತಿದ್ದಾರೆಂದು ಸ್ಥಳೀಯ ಬಿಜೆಪಿ ಮುಖಂಡರು ದೂರಿದ್ದಾರೆ.