- 2022ರಲ್ಲಿ ಮೀನುಗಳು ಸಾವನ್ನಪ್ಪಿರುವಂತಹ 17 ಘಟನೆಗಳು ವರದಿ ಆಕ್ಷನ್ ಏಡ್
- ಮೀನುಗಳು ಸಾಯದಂತೆ ತಡೆಯಲು ಯಾವುದೇ ಕ್ರಮ ಇಲ್ಲಿಯವರೆಗೂ ಕೈಗೊಂಡಿಲ್ಲ
ರಾಜ್ಯ ರಾಜಧಾನಿ ಬೆಂಗಳೂರಿನ ಕೆರೆಗಳಲ್ಲಿ ಒಟ್ಟು 11 ಬಾರಿ ಮೀನುಗಳು ಸಾವನ್ನಪ್ಪಿರುವ ಘಟನೆಗಳು ವರದಿಯಾಗಿವೆ. ಇನ್ನೂ ಹಲವು ಘಟನೆಗಳು ಗಮನಕ್ಕೆ ಬಾರದೆ ಅಥವಾ ವರದಿಯಾಗದೆ ಹೋಗಿರಬಹುದು. ಅಷ್ಟರ ಮಟ್ಟಿಗೆ ಈ ವರ್ಷ ಮೀನುಗಳ ಮಾರಣಹೋಮ ನಡೆದಿದೆ.
“ಬೆಂಗಳೂರಿನ ಕೆರೆಗಳಲ್ಲಿ ನೂರಾರು ಮೀನುಗಳು ಸಾವನ್ನಪ್ಪಿರುವುದನ್ನು ಕಾಣಬಹುದು. ಇದು ಕೆರೆಗಳಲ್ಲಿನ ಮಾಲಿನ್ಯದ ಬಗ್ಗೆ ಸ್ಪಷ್ಟವಾಗಿ ತಿಳಿಸುತ್ತದೆ. ಮೀನುಗಳು ಸಾಯದಂತೆ ತಡೆಯಲು ಯಾವುದೇ ಕ್ರಮಗಳನ್ನೂ ಇಲ್ಲಿಯವರೆಗೂ ಕೈಗೊಂಡಿಲ್ಲ” ಎಂದು ತಜ್ಞರು ಹೇಳುತ್ತಾರೆ.
“ಮೀನುಗಳು ಸಾವನ್ನಪ್ಪುತ್ತಿರುವ ಘಟನೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಹೆಚ್ಚಿನ ಮಾಲಿನ್ಯ ಕೆರೆಗಳು ಬಾಹ್ಯ ಪ್ರದೇಶಗಳಲ್ಲಿವೆ ಎಂದು ತಿಳಿದುಬಂದಿದೆ. ಒಳಚರಂಡಿ ಮತ್ತು ಕೊಳಚೆ ನೀರಿನ ಸಂಸ್ಕರಣಾ ಘಟಕಗಳ(ಎಸ್‌ಟಿಪಿ) ಕೊಳಚೆ ನೀರು ಕೆರೆಗಳಿಗೆ ಸೇರುತ್ತದೆ. ಇದು ಕೆರೆಯ ಪರಿಸರ ವ್ಯವಸ್ಥೆಗೆ ತೊಂದರೆಯಾಗಿದೆ” ಎಂದು ಅಭಿಪ್ರಾಯಪಟ್ಟಿದ್ದಾರೆ.
“ಪೆರಿಫೆರಲ್ ಪ್ರದೇಶಗಳಲ್ಲಿ ಒಳಚರಂಡಿ ಮಾರ್ಗಗಳನ್ನು ಹಾಕುವ ಯೋಜನೆ ಬಹುತೇಕ ಪೂರ್ಣಗೊಂಡಿದೆ. ಎಸ್‌ಟಿಪಿಗಳ ನಿರ್ಮಾಣವೂ ಪ್ರಗತಿಯಲ್ಲಿದೆ” ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯೂಎಸ್‌ಎಸ್‌ಬಿ) ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
“ಕೆರೆಗಳಿಗೆ ಕೊಳಚೆ ನೀರು ಸೇರುವುದು ಮೀನುಗಳ ಸಾವಿಗೆ ಪ್ರಮುಖ ಕಾರಣ ಎಂದು ವರದಿಗಳು ಬಹಿರಂಗಪಡಿಸಿವೆ. ಹಲವಾರು ದೂರುಗಳ ನಂತರವೂ ಅಧಿಕಾರಿಗಳು ಕೊಳಚೆ ನೀರು ಕೆರೆಗೆ ಪ್ರವೇಶಿಸುವುದನ್ನು ತಡೆಯಲು ವಿಫಲರಾಗಿದ್ದಾರೆ” ಎಂದು ಆಕ್ಷನ್ ಏಡ್ ಅಸೋಸಿಯೇಶನ್ ವ್ಯವಸ್ಥಾಪಕ ರಾಘವೇಂದ್ರ ಬಿ ಪಚ್ಚಾಪುರ ಹೇಳಿದರು.
ಫ್ರೆಂಡ್ಸ್ ಆಫ್ ಲೇಕ್ಸ್‌ನ (ಎಫ್‌ಒಎಲ್) ಸಹ-ಸಂಸ್ಥಾಪಕ ವಿ ರಾಮಪ್ರಸಾದ್ ಮಾತನಾಡಿ, ”ಬೆಂಗಳೂರಿನಲ್ಲಿ ಮಳೆನೀರು ಚರಂಡಿಗಳ (ಎಸ್‌ಡಬ್ಲ್ಯೂಡಿ) ಕಳಪೆ ನಿರ್ವಹಣೆಯು ಕೆರೆಗಳನ್ನು ಕಲುಷಿತಗೊಳಿಸುತ್ತಿದೆ. ಮುಂಗಾರು ಮಳೆ ಸಮಯದಲ್ಲಿ ಭಾರೀ ಮಳೆಯಾಗುವ ಹಿನ್ನೆಲೆ, ಚರಂಡಿಗಳಲ್ಲಿ ಉಳಿದಿರುವ ಎಲ್ಲ ಮಾಲಿನ್ಯಕಾರಕಗಳನ್ನು ತೊಳೆಯುತ್ತದೆ. ಚರಂಡಿಗಳನ್ನು ನಿರ್ವಿುಸದೇ ಇದ್ದರೆ ಮಲಿನಕಾರಿಗಳು ಕೆರೆಗಳಿಗೆ ಸೇರುವ ಸಾಧ್ಯತೆ ಇದ್ದು, ಮೀನುಗಳ ಮಾರಣಹೋಮಕ್ಕೆ ಕಾರಣವಾಗಲಿದೆ” ಎಂದರು.
“ಕೆರೆಗಳ ನಿರ್ವಹಣೆ ಮತ್ತು ಸೌಂದರ್ಯೀಕರಣಕ್ಕೆ ಒತ್ತು ನೀಡುವಲ್ಲಿ ಬಿಬಿಎಂಪಿ ವಿಫಲವಾಗಿದೆ. ಬಿಬಿಎಂಪಿ ನಿರ್ವಹಣಾ ಗುತ್ತಿಗೆಗೆ ನೀಡಿದರೂ, ನೀರಿನ ಗುಣಮಟ್ಟವನ್ನು ಕಾಪಾಡಿಕೊಳ್ಳಲು ಗುತ್ತಿಗೆದಾರನ ಜವಾಬ್ದಾರಿಯೂ ಇದೆ ಎಂದು ಅವರಿಗೆ ಪಾಲಿಕೆ ಮನವರಿಕೆ ಮಾಡಬೇಕು” ಎಂದರು.
“ಸರ್ಕಾರವು ಅನೇಕ ಸಂಸ್ಥೆಗಳನ್ನು ಸ್ಥಾಪಿಸಿದ್ದರೂ, ಅಂತಹ ಘಟನೆಗಳ ಬಗ್ಗೆ ಕ್ರಮ ವಹಿಸುವ ಜವಾಬ್ದಾರಿಯನ್ನು ಯಾರೂ ತೆಗೆದುಕೊಂಡಿಲ್ಲ. ಬಿಬಿಎಂಪಿಯು ಕೆರೆಯ ಕಾವಲುಗಾರನಾಗಿದ್ದರೆ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಮಾಲಿನ್ಯದ ಮೇಲೆ ನಿಗಾ ಇಡುವ ಜವಾಬ್ದಾರಿಯನ್ನು ಹೊಂದಿದೆ. ಹಾಗೆಯೇ, ಬಿಡಬ್ಲ್ಯೂಎಸ್‌ಎಸ್‌ಬಿ ಕೊಳಚೆ ನೀರನ್ನು ನಿರ್ವಹಿಸುವ ಕೆಲಸ ಹೊಂದಿದೆ” ಎಂದರು.
“ನಾವು ಬಿಡಬ್ಲ್ಯೂಎಸ್‌ಎಸ್‌ಬಿಯೊಂದಿಗೆ ಸರಣಿ ಸಭೆಗಳನ್ನು ನಡೆಸಿದ್ದೇವೆ. ಕೆಎಸ್‌ಪಿಸಿಬಿಗೆ ಪತ್ರ ಬರೆದಿದ್ದೇವೆ. ಆದರೆ, ಹಲವು ಕೆರೆಗಳಿಗೆ ಕೊಳಚೆ ನೀರು ಸೇರುವುದು ಮುಂದುವರಿದಿದೆ. ಬಿಡಬ್ಲ್ಯುಎಸ್‌ಎಸ್‌ಬಿ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿರುವುದರಿಂದ ಇದನ್ನು ಹೇಗೆ ಪರಿಹರಿಸಬೇಕೆಂದು ನಮಗೆ ಖಚಿತ ಮಾಹಿತಿಯಿಲ್ಲ” ಎಂದು ಕೆರೆಗಳ ಇಲಾಖೆಯ ಹಿರಿಯ ಬಿಬಿಎಂಪಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕರಾವಳಿಯಲ್ಲಿ ಬೆಂಬಿಡದೆ ಸುರಿಯುತ್ತಿರುವ ಮಳೆ
ಸಾಮಾಜಿಕ ಮತ್ತು ಪರಿಸರ ನ್ಯಾಯಕ್ಕಾಗಿ ಕೆಲಸ ಮಾಡುವ ಆಕ್ಷನ್ ಏಡ್ ಅಸೋಸಿಯೇಷನ್ ಸಂಗ್ರಹಿಸಿದ ಮಾಹಿತಿಯ ಪ್ರಕಾರ, 2022ರಲ್ಲಿ ಮೀನುಗಳು ಸಾವನ್ನಪ್ಪಿರುವಂತಹ 17 ಘಟನೆಗಳು ವರದಿಯಾಗಿವೆ.