ರೇಬೀಸ್ ಲಸಿಕೆ ಪಡೆದರೂ ಚಿಕಿತ್ಸೆ ಪಡೆಯುತ್ತಿದ್ದ ಏಳು ವರ್ಷದ ಬಾಲಕಿ ಸಾವನ್ನಪ್ಪಿದ ಘಟನೆ ಕೇರಳದಲ್ಲಿ ನಡೆದಿದೆ.
ಕೊಲ್ಲಂನ ಕುನ್ನಿಕೋಡ್‌ನ ನಿಯಾ ಫೈಸಲ್ ಮೃತ ಬಾಲಕಿ. ರೇಬೀಸ್ ಪತ್ತೆಯಾದ ಬಳಿಕ ಆಕೆಯನ್ನು ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಈ ಸಾವಿನೊಂದಿಗೆ ಕಳೆದ ಒಂದು ತಿಂಗಳಲ್ಲಿ ಕೇರಳದಲ್ಲಿ ರೇಬೀಸ್ ಸೋಂಕಿನಿಂದ ಸಾವನ್ನಪ್ಪಿದ ಮಕ್ಕಳ ಸಂಖ್ಯೆ ಮೂರಕ್ಕೇರಿದೆ.
ಏಪ್ರಿಲ್ 8 ರಂದು ಬಾಲಕಿ ಅಂಗಳದಲ್ಲಿ ಆಟವಾಡುತ್ತಿದ್ದಾಗ ಬೀದಿ ನಾಯಿ ಕಚ್ಚಿತ್ತು. ಅಂಗಳದಲ್ಲಿದ್ದ ಬಾತುಕೋಳಿ ಮೇಲೆ ದಾಳಿ ಮಾಡಲು ಮುಂದಾಗಿದ್ದಾಗ ಬಾಲಕಿ ರಕ್ಷಿಸಲು ಹೋಗಿದ್ದಳು. ಈ ವೇಳೆ ನಾಯಿ ಬಾಲಕಿಯ ಮೊಣಕೈಗೆ ಕಚ್ಚಿತ್ತು. ಬಾಲಕಿಯನ್ನು ಕೂಡಲೇ ವಿಲಕ್ಕುಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ರೇಬೀಸ್ ಲಸಿಕೆಯ ಮೊದಲ ಡೋಸ್ ನೀಡಲಾಯಿತು. ನಂತರ ಏ.11 ಮತ್ತು 15 ರಂದು ಕ್ರಮವಾಗಿ ಎರಡನೇ ಮತ್ತು ಮೂರನೇ ಡೋಸ್ ನೀಡಲಾಯಿತು. ಅಂತಿಮ ಡೋಸ್ ಅನ್ನು ಮೇ 6 ರಂದು ನೀಡಲು ನಿಗದಿಪಡಿಸಲಾಗಿತ್ತು.
ಎರಡನೇ ಡೋಸ್ ಪಡೆದ ಕೆಲ ದಿನಗಳಲ್ಲಿ ಆಕೆಗೆ ಜ್ವರ ಬಂದಿದೆ. ನಾಯಿ ಕಚ್ಚಿದ ಮೊಣಕೈಯಲ್ಲಿ ನೋವು ಅನುಭವಿಸಲು ಪ್ರಾರಂಭಿಸಿದಳು. ನಂತರ ಆಕೆಯನ್ನು ಪುನಲೂರು ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಯಿತು ಮತ್ತು ನಂತರ ವಿಶೇಷ ಆರೈಕೆಗಾಗಿ ಸ್ಯಾಟ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮಂಗಳೂರು ಹತ್ಯೆಗಳಲ್ಲಿ ಮಾಧ್ಯಮಗಳೂ ಆರೋಪಿಗಳಲ್ಲವೇ?
ಬಾಲಕಿಯನ್ನು ಕಚ್ಚಿದ್ದ ನಾಯಿಯನ್ನು ಸ್ಥಳೀಯ ನಿವಾಸಿಗಳು ಓಡಿಸಿದ್ದರೂ ಮರುದಿನ ಹತ್ತಿರದ ಹೊಲದಲ್ಲಿ ಅದು ಶವವಾಗಿ ಪತ್ತೆಯಾಗಿತ್ತು.
2021 ರಲ್ಲಿ ರಾಜ್ಯದಲ್ಲಿ 11 ಮಂದಿ ರೇಬೀಸ್‌ನಿಂದ ಸಾವನ್ನಪ್ಪಿದ್ದಾರೆ. 2022 ರಲ್ಲಿ 27, 2023 ರಲ್ಲಿ 25,2024 ರಲ್ಲಿ 26 ಮಂದಿ ಮೃತಪಟ್ಟಿದ್ದಾರೆ. ಈ ವರ್ಷದ ಐದನೇ ತಿಂಗಳಿಗೆ ಕಾಲಿಡುತ್ತಿದ್ದಂತೆ, 14 ಜನರು ಸಾವನ್ನಪ್ಪಿದ್ದಾರೆ. ಇವರಲ್ಲಿ ಹೆಚ್ಚಿನವರು ಮಕ್ಕಳು. ಕಳೆದ 5 ವರ್ಷಗಳಲ್ಲಿ 102 ಜನರು ರೇಬೀಸ್‌ನಿಂದ ಸಾವನ್ನಪ್ಪಿದ್ದಾರೆ. ಈ ಪೈಕಿ 20 ಮಂದಿ ಲಸಿಕೆ ಹಾಕಿಸಿಕೊಂಡಿದ್ದರೂ ಪ್ರಾಣ ಕಳೆದುಕೊಂಡಿದ್ದಾರೆ.
ನಾಯಿ ಕಚ್ಚಿದ ಮೊದಲ ಕೆಲವು ನಿಮಿಷಗಳು ನಿರ್ಣಾಯಕ ಎಂದು ವೈದ್ಯರು ಹೇಳುತ್ತಾರೆ. ಗಾಯವನ್ನು ಸೋಪಿನಿಂದ ಕೆಲವು ನಿಮಿಷ ತೊಳೆದುಕೊಂಡು ಲಸಿಕೆ ಹಾಕಿಸಿಕೊಳ್ಳುವುದು ತುರ್ತಾಗಿ ಮಾಡಬೇಕಾದ ಕೆಲಸಗಳಾಗಿವೆ. ರೇಬೀಸ್ ರೋಗವು ಅಂತಿಮ ಹಂತ ತಲುಪಿದರೆ ಯಾವುದೇ ಪರಿಣಾಮಕಾರಿ ಚಿಕಿತ್ಸೆ ಇಲ್ಲ ಮತ್ತು ಇದು ಶೇ. 100 ಮಾರಣಾಂತಿಕವಾಗಿದೆ.