ಧಾರವಾಡ ರಂಗಾಯಣವು ಪಂ. ಬಸವರಾಜ ರಾಜಗುರು ಬಯಲು ರಂಗಮಂದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಿವಿಧ ಟ್ರಸ್ಟ್‌ಗಳ ಸಹಯೋಗದಲ್ಲಿ ಆಯೋಜಿಸಿದ್ದ ಚಿಣ್ಣರಮೇಳ-2025ರ “ಚಿಣ್ಣರ ನಾಟಕೋತ್ಸವ”ದ 2ನೇ ದಿನದ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಡಾ. ರೆಹಮತ್ ತರೀಕೆರೆ ಚಿಣ್ಣರಮೇಳದ ಕಿರು ಹೊತ್ತಿಗೆಯನ್ನು ಬಿಡುಗಡೆ ಮಾಡಿದರು.

ಈ ಕುರಿತು ಶಿಬಿರದ ನಿರ್ದೆಶಕ ಲಕ್ಷ್ಮಣ ಪಿರಗಾರ ಮಾತನಾಡಿ, ಮಕ್ಕಳಲ್ಲಿ ಸಂವಿಧಾನ ಮತ್ತು ಅಂಬೇಡ್ಕರ್ ವಿಚಾರಗಳು ಬೇರೂರಬೇಕೆಂಬ ವಿಚಾರದಿಂದ ‘ನಮ್ಮ ಸಂವಿಧಾನ, ನಮ್ಮ ಕಲರವ’ ಘೋಷವಾಕ್ಯದಡಿಯಲ್ಲಿ ಮಕ್ಕಳ ಬೇಸಿಗೆ ಶಿಬಿರವನ್ನು ರೂಪಿಸಲಾಗಿದೆ. ಬೆಳೆಯುವ ಸಿರಿ ಮೊಳಕೆಯಲ್ಲಿ ಕಾಣು ಎಂಬಂತೆ ಮಕ್ಕಳಲ್ಲಿ ಸಂವಿಧಾನ ಆಶಯಗಳನ್ನು ಬಿತ್ತುವ ಅವಶ್ಯವಿದೆ. ಕಾರಣ; ಬಾಬಾಸಾಹೇಬರ ಕುರಿತು ಇಂದಿಗೂ ಬಹುತೇಕರಲ್ಲಿ ಅರಿವಿಲ್ಲದಿರುವುದು ದುರಂತದ ಸಂಗತಿ. ಆ ನಿಟ್ಟಿನಲ್ಲಿ ಮಕ್ಕಳಲ್ಲಿ ಅವರ ಮತ್ತು ಸಂವಿಧಾನದ ಅರಿವು ಮೂಡಿಸು ಚಟುವಟಿಕೆಗಳನ್ನು ಮಾಡಿದರೆ; ಮುಂದಿನ ಪೀಳಿಗೆಯಿಂದ ಸಂವಿಧಾನದ ಆಶಯಗಳನ್ನು ಎತ್ತಿಹಡಿಯುವ ಕೆಲಸವಾಗುತ್ತದೆ. ಮತ್ತು ನಮ್ಮಲ್ಲಿ ಪರಂಪರಾಗತವಾಗಿ ಬೇರೂರಿರುವ ಸಂಕುಚಿತ ಮನೋಭಾವನೆಗಳಿಗೆ ಕಡಿವಾಣ ಹಾಕಲು ಸಂವಿಧಾನದಿಂದ ಮಾತ್ರ ಸಾಧ್ಯ. ಆ ನಿಟ್ಟಿನಲ್ಲಿ ಸಮಾನತೆ, ಸ್ವಾತಂತ್ರ್ಯ, ಸಹೋದರತ್ವ, ಸಮಗ್ರತೆ ಹೀಗೆ ವಿವಿಧ ಗುಂಪುಗಳನ್ನು ಮಾಡಿ, ಮಕ್ಕಳಿಂದ ವಿವಿಧ ನಾಟಕಗಳನ್ನು ಮಾಡಿಸಲಾಗುತ್ತಿದೆ ಎಂದರು.

ಸಾಹಿತಿ ರೆಹಮತ್ ತರೀಕೆರೆ ಸಂವಿಧಾನ’ದ ಕುರಿತು ಮಕ್ಕಳು ರಚಿಸಿ ಹಾಡಿದ ಹಾಡಿಗೆ ಸಂತಸಪಟ್ಟರು. ಚಿಣ್ಣರ ನಾಟಕೋತ್ಸವದ ಕುರಿತು ಹರ್ಷ ವ್ಯಕ್ತಪಡಿಸಿದರು. ನಂತರ ಸಮಾನತೆ ತಂಡ “ದೊಡ್ಡಾಟದ ಹೆಜ್ಜೆಗಳು” ಹಾಗೂ ಸ್ವಾತಂತ್ರ್ಯ ತಂಡದವರು “ಪರಿಸರದ ಗೀತೆಗಳ”ನ್ನು ಪ್ರಸ್ತುತಪಡಿಸಿದರು. ನಂತರ ಸಹೋದರತ್ವ ತಂಡ “ಅದಲ್-ಬದಲ್” ನಾಟಕ ಹಾಗೂ ಸಮಗ್ರತೆ ತಂಡದವರು “ಬೆಳಕು ಹಂಚಿದ ಬಾಲಕ” ನಾಟಕವನ್ನು ಪ್ರದರ್ಶಿಸಿ,ಮಕ್ಕಳು ಸಂವಿಧಾನದ ಕುರಿತು ಹಾಡು ರಚಿಸಿ ಹಾಡಿದರು ಎಲ್ಲರ ಮನತಣಿಸಿದರು.
ಇದನ್ನು ಓದಿದ್ದೀರಾ? ಧಾರವಾಡ | ಕಾರುಗಳೆರಡು ಮುಖಾಮುಖಿ ಡಿಕ್ಕಿ ವ್ಯಕ್ತಿಯೋರ್ವ ಸ್ಥಳದಲ್ಲೇ ಸಾವು
ಈ ಸಂದರ್ಭದಲ್ಲಿ ರಂಗಾಯಣ ನಿರ್ದೇಶಕ ಡಾ. ರಾಜು ತಾಳಿಕೋಟಿ, ರಂಗಕಲಾವಿದ ಮುರುಗೋಡ, ಶಿಬಿರದ ನಿರ್ದೆಶಕ ಲಕ್ಷ್ಮಣ ಪಿರಗಾರ, ಸಾಹಿತಿ ರೆಹಮತ್ ತರೀಕೆರೆ ಇದ್ದರು.