ʼಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಿದ್ದು 12ನೇ ಶತಮಾನದ ಬಸವಾದಿ ಶರಣರು, ಅದರಂತೆ ನಾವೆಲ್ಲರೂ ಕನ್ನಡಕ್ಕಾಗಿ ಟೊಂಕಕಟ್ಟಿ ಗಡಿಭಾಗದಲ್ಲಿ ಕನ್ನಡ ಉಳಿಸುವ ಕಾರ್ಯ ಮಾಡಬೇಕಾಗಿದೆʼ ಎಂದು ಶರಣ ಸಾಹಿತ್ಯ ಪರಿಷತ್ ತಾಲ್ಲೂಕಾಧ್ಯಕ್ಷ ಚಂದ್ರಕಾಂತ ನಿರ್ಮಳೆ ಅಭಿಪ್ರಾಯಪಟ್ಟರು.
ಔರಾದ್ ಪಟ್ಟಣದ ಬಸವ ಗುರುಕುಲ ಶಾಲೆಯಲ್ಲಿ ತಾಲ್ಲೂಕು ಕಸಾಪ ಆಯೋಜಿಸಿರುವ ಕನ್ನಡ ಸಾಹಿತ್ಯ ಪರಿಷತ್ತಿನ 111ನೇ ಸಂಸ್ಥಾಪನೆ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ʼಸಾಹಿತ್ಯ, ಕಲೆ, ಸಂಸ್ಕೃತಿ ಸಂರಕ್ಷಿಸುವ ಜೊತೆಗೆ ಕನ್ನಡ ಎಲ್ಲರ ಉಸಿರಾಗಿಸುವ ಕಾರ್ಯ ಕನ್ನಡ ಸಾಹಿತ್ಯ ಪರಿಷತ್ತು ಮಾಡುತ್ತಿದೆʼ ಎಂದರು.
ʼಕನ್ನಡ ನಾಡು, ನುಡಿ, ಸಂಸ್ಕೃತಿ ರಕ್ಷಣೆಗಾಗಿ 1915ರಲ್ಲಿ ಅಂದಿನ ಮೈಸೂರು ಅರಸರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಳಜಿ ವಹಿಸಿ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿ ಪರಿಷತ್ ಸ್ಥಾಪನೆಗೊಳ್ಳಲು ಪ್ರಮುಖ ಕಾರಣರಾಗಿದ್ದರು. ಅಂದಿನಿಂದ ಈಗಿನವರೆಗೂ ಹಲವು ಮಹನೀಯರು ಕನ್ನಡ ಕಟ್ಟುವ ಕಾರ್ಯದಲ್ಲಿ ತೊಡಗಿ ಕನ್ನಡ ನಾಡು, ನುಡಿ ಬೆಳವಣಿಗೆಗೆ ನೆರವಾಗಿದ್ದಾರೆʼ ಎಂದರು.
ಸಂಪನ್ಮೂಲ ಶಿಕ್ಷಕ ಮಾರುತಿ ಗಾದಗೆ ಮಾತನಾಡಿ, ʼಕನ್ನಡ ಸಾಹಿತ್ಯ ಪರಿಷತ್ತು ಸುದೀರ್ಘ ಇತಿಹಾಸ ಹೊಂದಿದ್ದು, ದೇಶ-ವಿದೇಶಗಳಲ್ಲಿ ಸಹ ಸದಸ್ಯರನ್ನು ಹೊಂದಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಸೇರಿದಂತೆ ಸರ್.ಎಂ.ವಿಶ್ವೇಶ್ವರಯ್ಯ ಹಾಗೂ ಮಿರ್ಜಾ ಇಸ್ಮಾಯಿಲ್ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಬೆಳವಣಿಗೆಗೆ ಶ್ರಮಿಸಿದ್ದರುʼ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಹಿರಿಯ ಸದಸ್ಯ ಡಾ. ಸುಭಾಷ ಮೀಸೆ ಅವರನ್ನು ಸನ್ಮಾನಿಸಲಾಯಿತು. ಸರ್ಕಾರಿ ಐಟಿಐ ತರಬೇತಿ ಅಧಿಕಾರಿ ಯುಸುಫ್ ಮಿಯ್ಯ, ಕಸಾಪ ಅಧ್ಯಕ್ಷ ಬಾಲಾಜಿ ಅಮರವಾಡಿ ಮಾತನಾಡಿದರು.
ಈ ಸುದ್ದಿ ಓದಿದ್ದೀರಾ? BREAKING NEWS | ಒಳಮೀಸಲಾತಿ – ಇಂದಿನಿಂದ ಮೇ 17ರವರೆಗೆ ಮನೆ ಮನೆ ಸಮೀಕ್ಷೆ: ಸಿಎಂ
ಕಾರ್ಯಕ್ರಮದಲ್ಲಿ ಬಸವ ಕೇಂದ್ರದ ತಾಲ್ಲೂಕಾಧ್ಯಕ್ಷ ಜಗನ್ನಾಥ ಮೂಲಗೆ, ಮುಖ್ಯ ಶಿಕ್ಷಕಿ ನಿರ್ಮಲಾ ಸೇರಿ, ಪ್ರಕಾಶ ಅಲ್ಮಾಜೆ, ನಾಗನಾಥ ಶಂಕು, ಸಂದೀಪ ಪಾಟೀಲ, ಅಮರಸ್ವಾಮಿ ಸ್ಥಾವರಮಠ, ಸಂಜೀವಕುಮಾರ ವಲಾಂಡೆ, ವಾಮನ ಮಾನೆ, ಸಂತೋಷ ಮಡಿವಾಳ, ಅಮರ ನಿಸ್ಪತೆ ಮತ್ತಿತರರಿದ್ದರು.