ನಗರದ ಜಿಪಂ ಕಚೇರಿಯ ಸರ್.ಎಂ.ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಸೋಮವಾರ ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿಗಳಾದ ಕೆ.ಎನ್.ಫಣೀಂದ್ರ ಅವರ ನೇತೃತ್ವದಲ್ಲಿ ಸಾರ್ವಜನಿಕರ ಕುಂದು ಕೊರತೆ, ದೂರುಗಳು ವಿಚಾರಣೆ ಹಾಗೂ ಪ್ರಕರಣ ವಿಲೇವಾರಿ ವಿಚಾರವಾಗಿ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ದೂರುದಾರರು ಮತ್ತು ಎದುರುದಾರರ ಸಭೆ ನಡೆಯಿತು.
ಮೊದಲಿಗೆ ಸಭೆಯನ್ನುದ್ದೇಶಿಸಿ ಮಾತನಾಡಿದ ಉಪ ಲೋಕಾಯುಕ್ತ ನ್ಯಾ.ಕೆ.ಎನ್.ಫಣೀಂದ್ರ ಅವರು, ಸಾರ್ವಜನಿಕರಿಗೆ ಎಲ್ಲಿ, ಯಾರಿಗೆ ಅರ್ಜಿ ಸಲ್ಲಿಸಬೇಕು ಎಂಬ ಕಾನೂನು ತಿಳುವಳಿಕೆ ಇರುವುದಿಲ್ಲ. ಜನರಿಂದ ಅರ್ಜಿಗಳನ್ನು ಸ್ವೀಕರಿಸಿ, ಎಲ್ಲಿಗೆ ಹೋಗಬೇಕು ಎಂಬುದರ ಕುರಿತು ಉಚಿತ ಕಾನೂನು ಸಲಹೆ ಕೊಡಲು ನಾವು ಸಿದ್ಧ. 3 ಲಕ್ಷ ಆದಾಯ ಮಿತಿ ಇರುವವರು ಕೋರ್ಟ್ ಶುಲ್ಕ ಕಟ್ಟುವಂತಿಲ್ಲ ಎಂದು ಹೇಳಿದರು.
ನಮ್ಮ ಬಳಿ ಎಷ್ಟೇ ದಿನ ಪ್ರಕರಣ ಇಟ್ಟುಕೊಂಡರು ಕೆಲ ಪ್ರಕರಣಗಳು ಬಗೆಹರಿಯುವುದಿಲ್ಲ. ಪ್ರತಿ ದಿನ 250-300 ಪ್ರಕರಣಗಳು ದಾಖಲಾಗುತ್ತವೆ. ನಮ್ಮಲ್ಲಿರುವುದು ಕೇವಲ 40 ಜನ ಸಿಬ್ಬಂದಿ ಮಾತ್ರ. ಅರ್ಜಿಗಳು ನನ್ನ ಬಳಿ ಬರುವಷ್ಟರಲ್ಲಿ ತಿಂಗಳಾದರೂ ಅಚ್ಚರಿಯಿಲ್ಲ. ಆದ್ದರಿಂದ, ಅಧಿಕಾರಿಗಳು ಜನರೊಂದಿಗೆ ಅನುಚಿತವಾಗಿ ವರ್ತಿಸಬಾರದು. ಪ್ರಕರಣ ನಿಮ್ಮ ವ್ಯಾಪ್ತಿಗೆ ಬರದೇ ಇದ್ದಲ್ಲಿ ಎಲ್ಲಿಗೆ ಹೋಗಬೇಕು ಎಂಬ ಕುರಿತು ಹೇಳಿ ಕಳಿಸಬೇಕು ಎಂದು ಸಲಹೆ ನೀಡಿದರು.

ಸುಮಾರು 10.30ಗಂಟೆಗೆ ವಿಚಾರಣೆ ಆರಂಭವಾಯಿತು. ಮೊದಲ ದೂರನ್ನು ಕೈಗೆತ್ತಿಕೊಂಡ ನ್ಯಾಯಮೂರ್ತಿಗಳು ಎದುರುದಾರರು ಮತ್ತು ದೂರುದಾರರನ್ನು ಕರೆಸಿ ಪರಸ್ಪರ ಅಹವಾಲನ್ನು ಆಲಿಸಿದರು.
ಮೊದಲ ದೂರುದಾರರೊಬ್ಬರು ಮಾತನಾಡಿ, ನಮ್ಮ ಖಾತೆ ದುರಸ್ತಿ ಆಗಬೇಕು. 3 ತಿಂಗಳೊಳಗೆ ಖಾತೆ ಮಾಡಿಕೊಡುವಂತೆ ಹೈಕೋರ್ಟ್ ಆದೇಶ ಹೊರಡಿಸಿತ್ತು. ಆದರೆ, ಆದೇಶ ಬಂದು ಒಂದು ವರ್ಷವಾದರೂ ಖಾತೆ ಮಾಡಿಲ್ಲ. ನಿತ್ಯ ಕಚೇರಿ ಅಲೆಯುವಂತಾಗಿದೆ ಎಂದು ಅಲವತ್ತುಕೊಂಡರು.
ಇದಕ್ಕೆ ಕುಪಿತಗೊಂಡ ನ್ಯಾಯಮೂರ್ತಿಗಳು, 5 ವರ್ಷ ಬೇಕೆನ್ರೀ… ಒಂದು ಖಾತೆ ಮಾಡಲು ಎಷ್ಟು ವರ್ಷ ಬೇಕು ನಿಮಗೆ. ಯೋಗ್ಯತೆ ಇಲ್ಲ ಎಂದು ಬರೆದುಕೊಡಿ.,ನಾಚಿಕೆ ಆಗಲ್ವಾ.? ಇವರ ಮೇಲೆ ಕಂಟೆಪ್ಷನ್(ನ್ಯಾಯಂಗ ನಿಂದನೆ ಪ್ರಕರಣ) ಹಾಕಿ. ಕುತ್ತಿಗೆಗೆ ಬರಬೇಕು ಇವರಿಗೆ. ಆಗ ಗೊತ್ತಾಗುತ್ತದೆ. ಇಷ್ಟು ದಿನಗಳಾದರೂ ಖಾತೆ ಮಾಡಿಲ್ಲ. ಏನು ಮಾಡಬೇಕು ನಿಮಗೆ. ಈ ಕುರಿತು ಇಲಾಖೆ ತನಿಖೆಗೆ ಆದೇಶ ಮಾಡಬೇಕಾಗುತ್ತದೆ ಎಂದು ತಹಶೀಲ್ದಾರ್ ಅನಿಲ್ ಅವರನ್ನು ತರಾಟೆಗೆ ತೆಗೆದುಕೊಂಡರು.
ಇದಕ್ಕೆ ಉತ್ತರಿಸಿದ ತಹಶೀಲ್ದಾರ್ ಅನಿಲ್ ಕುಮಾರ್, ಸ್ವಾಮಿ ಅದು ಖಾತೆ ದುರಸ್ತಿ ಆಗಬೇಕಿದೆ. ಅದು ಸರಕಾರಿ ಭೂಮಿ ಎಂದು ತಡಬಡಾಯಿಸಿದರು.
ಸಂಪೂರ್ಣ ಕಂದಾಯ ಇಲಾಖೆಯನ್ನೇ ಕೋರ್ಟ್‌ಗೆ ಎಳೆಯುತ್ತೇನೆ. ಆಗುವುದಿಲ್ಲ ಎಂದರೆ ಎಂಡೋರ್ಸ್‌ಮೆಂಟ್ ಕೊಡಿ. ನಾನು ಕೋರ್ಟ್‌ಗೆ ಎಳೆಯುತ್ತೇನೆ ನಿಮ್ಮನ್ನ. ಅರ್ಜಿ ಕೊಟ್ಟು 6 ವರ್ಷ ಆಗಿದೆ ಎಂದು ಗರಂ ಆದರು.

ಇದಕ್ಕೆ ಧ್ವನಿಗೂಡಿಸಿದ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅವರು, ರೀ ವಿವೇಕ್ ಖಾತೆ ಮಾಡಲು ಏನು ಅವಕಾಶ ಇದೆ ಅದನ್ನ ಸರಿಯಾಗಿ ತಿಳಿಸಿ ಎಂದು ಎಡಿಎಲ್‌ಆರ್ ವಿವೇಕ್ ಮಹದೇವ್ ಮತ್ತು ತಹಶೀಲ್ದಾರ್ ಅನಿಲ್ ಕುಮಾರ್‌ಗೆ ಹೇಳಿದರು.
ಬಳಿಕ ಪ್ರತಿಕ್ರಿಯಿಸಿದ ತಹಶೀಲ್ದಾರ್ ಅನಿಲ್ ಕುಮಾರ್ ಅವರು, ಇನ್ನು 5 ದಿನಗಳಲ್ಲಿ ಆರ್.ಟಿ.ಸಿ ಕೊಡುತ್ತೇವೆ ಮತ್ತು ಒಂದು ತಿಂಗಳಲ್ಲಿ ಪೂರ್ತಿ ಪ್ರಕರಣ ಸಮಸ್ಯೆ ಬಗೆಹರಿಸುತ್ತೇವೆ ಎಂದು ನ್ಯಾಯಮೂರ್ತಿಗಳಲ್ಲಿ ವಿನಂತಿ ಮಾಡಿಕೊಂಡರು. ಅದರಂತೆ ನ್ಯಾಯಮೂರ್ತಿಗಳು ತಿಂಗಳ ಅನುಮತಿ ನೀಡಿ ಆದೇಶ ಹೊರಡಿಸಿದರು.
ಸರಕಾರಿ ಜಾಗದಲ್ಲಿ ಅಕ್ರಮವಾಗಿ ವಿದ್ಯುತ್ ಸಂಪರ್ಕ ನೀಡಲಾಗಿದೆ ಎಂದು ದೂರಿರುವ ಮಂಜುನಾಥ್ ಎಂಬುವರ ಅರ್ಜಿಯನ್ನು ಕೈಗೆತ್ತಿಕೊಂಡ ನ್ಯಾಯಮೂರ್ತಿಗಳು, ಕೆಇಬಿ ಅಧಿಕಾರಿಗಳನ್ನು ವಿಚಾರಿಸಿದರು. ಕೆರೆಯಲ್ಲಿ ಬೋರ್‌ವೆಲ್ ಇರುವ ಪ್ರಕರಣ ನ್ಯಾಯಾಲಯದಲ್ಲಿದೆ. ಪ್ರಕರಣ ನ್ಯಾಯಾದಲ್ಲಿರುವಾದ ಯಾವುದೇ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ. ಪ್ರಕರಣ ಇತ್ಯರ್ಥ ಆದ ಬಳಿಕ ನಿಮ್ಮ ಸಮಸ್ಯೆ ಬಗೆಹರಿಸಲಾಗುವುದು ಎಂದು ಸಲಹೆ ನೀಡಿದರು.
ನಂತರದ ಪ್ರಕರಣವೊಂದರಲ್ಲಿ, ರೈತರೊಬ್ಬರು ಜಮೀನು ದುರಸ್ತಿಗೆ ಅರ್ಜಿ ಕೊಟ್ಟು 7 ವರ್ಷಗಳಾಗಿವೆ. ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಪೋಡಿ ಮಾಡಿಕೊಟ್ಟಿಲ್ಲ ಎಂದು ನ್ಯಾಯಮೂರ್ತಿಗಳಿಗೆ ದೂರು ಹೇಳಿದರು.
ವಿಚಾರಣೆಯನ್ನು ಕೈಗೆತ್ತಿಕೊಂಡ ನ್ಯಾಯಮೂರ್ತಿಗಳು ಅಧಿಕಾರಿ ವರ್ಗವನ್ನು ಉತ್ತರಿಸುವಂತೆ ಕೇಳಿದರು. ಈ ವಿಚಾರವಾಗಿ ತಡಬಡಾಯಿಸುತ್ತಿದ್ದ ಅಧಿಕಾರಿಗಳನ್ನು ನೋಡಿದ ನ್ಯಾಯಮೂರ್ತಿಗಳು, ತಹಶೀಲ್ದಾರ್ ಮಹೇಶ್ ಪತ್ರಿ ಹಾಗೂ ಸಂಬಂಧಿಸಿದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಈ ಪ್ರಕರಣದ ನಿಮಗೆ 10 ದಿನಗಳ ಹಿಂದೆಯೇ ನೋಟಿಸ್ ಕಳಿಸಲಾಗಿದೆ. ಆದರೂ, ಉತ್ತರಿಸಲು ತಡಬಡಾಯಿಸುತ್ತಿದ್ದೀರಿ. ಪ್ರಕರಣ ಕುರಿತು ಮೊದಲೇ ನೋಡಿಕೊಂಡು ಬರಬೇಕು ಎಂಬ ಜ್ಞಾನ ಬೇಡವಾ? ಎಂದು ತಹಶೀಲ್ದಾರ್ ಹಾಗೂ ಎಡಿಎಲ್‌ಆರ್ ಅವರ ವಿರುದ್ಧ ಸಿಟ್ಟಾದರು.
ಇದನ್ನೂ ಓದಿ : ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ : ಪ್ರತೀ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲು ಜಿಲ್ಲಾಧಿಕಾರಿ ಸೂಚನೆ
ಇದಕ್ಕೆ ಪ್ರತಿಕ್ರಿಯಿಸಿದ ತಹಶೀಲ್ದಾರ್ ಅವರು, ಪರಿಶೀಲನೆ ನಡೆಸಿ ಬಗೆಹರಿಸುವುದಾಗಿ ಭರವಸೆ ನೀಡಿದರು.
ನಿವೃತ್ತಿ ಪಿಂಚಣಿ, ಕಂದಾಯ ಇಲಾಖೆ, ಸಾರ್ವಜನಿಕ ಆಸ್ತಿ ಸೇರಿದಂತೆ ಸುಮಾರು 60 ಪ್ರಕರಣಗಳನ್ನು ಸಭೆಯಲ್ಲಿ ಇತ್ಯರ್ಥ ಮಾಡಲಾಯಿತು.
ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಜಿಪಂ ಸಿಇಒ ಪ್ರಕಾಶ್ ನಿಟ್ಟಾಲಿ, ಡಿಎಫ್‌ಒ ಗಿರೀಶ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶಿಲ್ಪಾ, ಲೋಕಾಯುಕ್ತ ಎಸ್ಪಿ ಆಂಟೋನಿ ಜಾನ್ ಸೇರಿದಂತೆ ಜಿಲ್ಲೆ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಸಾರ್ವಜನಿಕರು ಸಭೆಯಲ್ಲಿ ಹಾಜರಿದ್ದರು.