ಬೆಳಗಾವಿ ತಾಲೂಕಿನ ಚಿಕ್ಕಬಾಗೇವಾಡಿ ಗ್ರಾಮದ ಬಳಿ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗೋಕಾಕದಿಂದ ಹಿಂತಿರುಗುತ್ತಿದ್ದ ಸೈಯ್ಯದ್ ಕುಟುಂಬದ ಕಾರಿಗೆ ಮಾಜಿ ಶಾಸಕ ಆರ್.ವಿ.ಪಾಟೀಲ ಅವರ ಪುತ್ರನ ಕಾರು ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಗಾಯಗೊಂಡ ಇಬ್ಬರನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಹಿರೇಬಾಗೇವಾಡಿ ಗ್ರಾಮದ ಅನಿಸ್ ಸೈಯ್ಯದ (26), ಉಮೇಹೈಮಾನ ಸೈಯ್ಯದ (22), ಒಂದು ವರ್ಷದ ಮಗು ಅಹ್ಮದ ಸೈಯ್ಯದ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇನ್ನೊಂದು ಕಾರಿನಲ್ಲಿದ್ದ ಮಾಜಿ ಶಾಸಕ ಆರ್.ವಿ.ಪಾಟೀಲ ಅವರ ಪುತ್ರ ಗಾಯಗೊಂಡು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆಂದು ತಿಳಿದು ಬಂದಿದೆ.
ಸೈಯ್ಯದ ಕುಟುಂಬ ಗೋಕಾಕ ನಗರದಲ್ಲಿ ಸಂಬಂಧಿಕರ ಮದುವೆ ಮುಗಿಸಿಕೊಂಡು ಅಲ್ಟೋ ಕಾರಿನಲ್ಲಿ ಬರುವಾಗ ಚಿಕ್ಕಬಾಗೇವಾಡಿ ಗ್ರಾಮದ ಹತ್ತಿರ ಮಾಜಿ ಶಾಸಕ ಆರ್.ವಿ.ಪಾಟೀಲ ಪುತ್ರ ಕಿಯಾ ಕಾರನ್ನು ಓವರ್ ಟೆಕ್ ಮಾಡಲು ಹೋಗಿ ಅಲ್ಟೋ ಕಾರಿಗೆ ಎದುರಿನಿಂದ ಹೊಡೆದಿದ್ದರಿಂದ ಸ್ಥಳದಲ್ಲಿಯೇ ಮೂವರು ಮೃತಪಟ್ಟಿದ್ದಾರೆ.
ಸ್ಥಳಕ್ಕೆ ಬೈಲಹೊಂಗಲ ಪೊಲೀಸ್ ಠಾಣೆಯ ಸಿಪಿಐ ಪಂಚಾಕ್ಷರಿ ಸಾಲಿಮಠ ಬೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಕುರಿತು ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.