- ವೈದ್ಯಕೀಯ ಕಾಲೇಜಿಗೆ ಅನುಮತಿ ನೀಡುವ ವಿಚಾರವಾಗಿ ಗಲಾಟೆ
- ನಿಮ್ಮ ಸರ್ಕಾರದಲ್ಲಿ ಅನುಮತಿ ಏಕೆ ನೀಡಲಿಲ್ಲ: ಡಿಕೆ ಶಿವಕುಮಾರ್
16ನೇ ವಿಧಾನಸಭೆಯ ನಾಲ್ಕನೇ ದಿನದ ಕಲಾಪ ಆರಂಭವಾಗುತ್ತಿದ್ದಂತೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಮಾಜಿ ಸಚಿವ ಅಶ್ವತ್ಥ ನಾರಾಯಣ ನಡುವೆ ಏರುಧ್ವನಿಯ ಜಟಾಪಟಿ ನಡೆಯಿತು.
ಸರ್ ಎಂ ವಿಶ್ವೇಶ್ವರಯ್ಯ ಅವರ ಹುಟ್ಟೂರಾದ ಮುದ್ದೇನಹಳ್ಳಿಯಲ್ಲಿ ಸತ್ಯ ಸಾಯಿ ಸಂಸ್ಥೆಯು ಪ್ರಾರಂಭಿಸಿರುವ ವೈದ್ಯಕೀಯ ಕಾಲೇಜಿಗೆ ಅನುಮತಿ ನೀಡುವ ವಿಚಾರ ಗುರುವಾರದ ಕಲಾಪದಲ್ಲಿ ಪ್ರತಿಧ್ವನಿಸಿತು.
ಪ್ರಶೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಯಶ್ ಪಾಲ್ ಸುವರ್ಣ ಅವರ ಪ್ರಶ್ನೆಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಉತ್ತರ ನೀಡುತ್ತಿದ್ದ ಸಂದರ್ಭದಲ್ಲಿ ಆಡಳಿತ ಪಕ್ಷದ ಹಿರಿಯ ಸದಸ್ಯ ಟಿ.ಬಿ.ಜಯಚಂದ್ರ ಅವರು, ಮುದ್ದೇನಹಳ್ಳಿಯ ಸತ್ಯ ಸಾಯಿ ಸಂಸ್ಥೆ ಪ್ರಾರಂಭಿಸಿರುವ ವೈದ್ಯಕೀಯ ಕಾಲೇಜಿಗೆ ಅನುಮತಿ ನೀಡುವ ವಿಚಾರವನ್ನು ಉಪ ಪ್ರಶ್ನೆ ಕೇಳುವ ಮೂಲಕ ಪ್ರಸ್ತಾಪಿಸಿದರು.
ಈ ಹಂತದಲ್ಲಿ ಎದ್ದುನಿಂತ ಸಚಿವ ಅಶ್ವತ್ಥನಾರಾಯಣ, “ಇದೊಂದು ಮಾದರಿ ಸಂಸ್ಥೆಯಾಗಿದ್ದು, ನೂರಕ್ಕೆ ನೂರಷ್ಟು ಚಿಕಿತ್ಸೆ ಮತ್ತು ಶಿಕ್ಷಣ ಉಚಿತವಾಗಿ ನೀಡಲು ಮುಂದಾಗಿದೆ. ಈ ಸಂಸ್ಥೆಗೆ ಶೀಘ್ರ ಅನುಮತಿ ನೀಡಬೇಕು” ಎಂದರು.
ಅಶ್ವತ್ಥನಾರಾಯಣ ಮಾತಿಗೆ ಕೆರಳಿದ ಡಿಸಿಎಂ ಡಿ ಕೆ ಶಿವಕುಮಾರ್, “ನೀವು ಅಧಿಕಾರದಲ್ಲಿ ಇದ್ದಾಗ ಏಕೆ ಅನುಮತಿ ಕೊಡಲಿಲ್ಲ, ಪ್ರಧಾನಮಂತ್ರಿಗಳೇ ಖುದ್ದಾಗಿ ಉದ್ಘಾಟಿಸಿದ್ದಾರೆ. ನೀವೇಕೆ ಅನುಮತಿ ಕೊಡಲಿಲ್ಲ. ನಿಮಗೆ ಮಾನ ಮರ್ಯಾದೆ ಇಲ್ಲವೆ?” ಎಂದು ಹರಿಹಾಯ್ದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮೈಸೂರು ಸ್ಯಾಂಡಲ್ ಸೋಪ್: ಭ್ರಷ್ಟ ಜನಪ್ರತಿನಿಧಿ, ಅಧಿಕಾರಶಾಹಿಗೆ ಬೇಕಿದೆ ಚಾಟಿಯೇಟು
ಇಲ್ಲಿಂದ ಇಬ್ಬರ ನಡುವಿನ ಮಾತಿನ ಚಕಮಕಿಗೆ ಆರಂಭವಾಯಿತು. ಇದಕ್ಕೆ ತಿರುಗೇಟು ನೀಡಿದ ಅಶ್ವತ್ಥನಾರಾಯಣ, “ನಿಮ್ಮದು ಅಹಂನಿಂದ ಕೂಡಿದ ಮಾತು. ಜನ ನಿಮ್ಮನ್ನು ನೋಡಿ ಮತ ಹಾಕಿಲ್ಲ, ಗ್ಯಾರಂಟಿಗಳನ್ನು ನಂಬಿ ಮತ ನೀಡಿದ್ದಾರೆ. ಅನುಮತಿ ನೀಡುವ ವಿಚಾರದಲ್ಲಿ ಏನಾದರೂ ಅಡೆ ತಡೆ ಇದ್ದರೆ ಹೇಳಿ” ಎಂದರು.
ಡಿಕೆಶಿ ಪ್ರತಿಕ್ರಿಯಿಸಿ, “ಇಷ್ಟು ದಿನ ಏಕೆ ಅನುಮತಿ ಕೊಡಲಿಲ್ಲ. ನಿಮ್ಮ ಮಂತ್ರಿ ಹಾಗೂ ಸರ್ಕಾರಕ್ಕೆ ಏನು ಕಷ್ಟವಿತ್ತು” ಎಂದು ಏಕವಚನದಲ್ಲೇ ಎಂದು ಪ್ರಶ್ನಿಸಿದರು.
ಮಧ್ಯೆ ಪ್ರವೇಶಿಸಿದ ಸಭಾಧ್ಯಕ್ಷ ಯು ಟಿ ಖಾದರ್, ಇದೊಂದು ಮಾದರಿ ಸಂಸ್ಥೆಯಾಗಿದ್ದು, ಎಲ್ಲರಿಗೂ ಗೌರವ ತರುವ ವಿಷಯವಾಗಿದೆ. ಆದಷ್ಟು ಬೇಗ ಸರ್ಕಾರ ಅನುಮತಿ ಕೊಡಬೇಕು ಎಂದು ಸಚಿವರಿಗೆ ಸೂಚಿಸಿದರು.
ಶರಣ ಪ್ರಕಾಶ್ ಪಾಟೀಲ್ ಮಾತನಾಡಿ, “ಸತ್ಯ ಸಾಯಿ ವೈದ್ಯಕೀಯ ಕಾಲೇಜಿಗೆ ಸಂಬಂಧಿಸಿದ ಕಡತ ಇನ್ನೂ ಬಂದಿಲ್ಲ. ಕೆಳಹಂತದಲ್ಲಿರಬಹುದು. ಕಡತ ತರಿಸಿ ಪರಿಶೀಲಿಸಲಾಗುವುದು. ಏನು ನ್ಯೂನತೆ ಇದೆಯೋ ಗೊತ್ತಿಲ್ಲ. ನಾವು ಹಿಂದೆ ಕಾನೂನು ಬದ್ಧವಾಗಿ, ನಿಯಮಾನುಸಾರ ಕ್ರಮ ಕೈಗೊಂಡಿದ್ದೇವೆ. ಒಳ್ಳೆಯ ಮೆಡಿಕಲ್ ಸ್ಥಾಪನೆಗೆ ಸಕಾರಾತ್ಮಕ ಅನುಮತಿ ನೀಡಲು ಕೈಗೊಳ್ಳಲಾಗುವುದು” ಎಂದರು.