ವಿಜಯಪುರ ಪಟ್ಟಣದ ಯುವ ರೈತ ಮೆಹಬೂಬ್ ಖಾನ್ ಪಟೇಲ್ ಬೇಸಿಗೆಯಲ್ಲಿ ಮೂರು ಎಕರೆ ಜಮೀನಿನಲ್ಲಿ ಗುಣಮಟ್ಟದ ಕಲ್ಲಂಗಡಿ ಹಣ್ಣು ಬೆಳೆದು ಲಕ್ಷಾಂತರ ರೂಪಾಯಿಗಳ ಆದಾಯ ಪಡೆದಿದ್ದಾರೆ.
ವಿಜಯಪುರ ಜಿಲ್ಲೆಯ ಕೊಲ್ಹಾರ ಪಟ್ಟಣದ ಆಸಂಗಿ ರಸ್ತೆಯ ಪಕ್ಕದ ಒಟ್ಟು 24 ಎಕರೆ ಜಮೀನಿನ ಪೈಕಿ ಮೂರು ಎಕರೆಯಲ್ಲಿ ಕಲ್ಲಂಗಡಿ ಕೃಷಿ ಮಾಡಿ ಉತ್ತಮ ಫಸಲು ಪಡೆದಿದ್ದಾರೆ. ಈರುಳ್ಳಿ, ಕಬ್ಬು, ಮೆಕ್ಕೆಜೋಳ, ಬೆಳೆದು ಲಾಭ ಬರದೇ ಕೈಸುಟ್ಟುಕೊಂಡಿದ್ದರು. ಇದರಿಂದ ಹೊರಬರಲು ಆಯ್ಕೆ ಮಾಡಿಕೊಂಡ ಕಲ್ಲಂಗಡಿ ಕೃಷಿ ಉತ್ತಮ ಪ್ರತಿಫಲ ನೀಡಿದೆ.
24 ಎಕೆರೆ ಜಮೀನಿನಲ್ಲಿ 3 ಎಕರೆ ಕಲ್ಲಂಗಡಿ ಇದ್ದರೆ ಇನ್ನು 3 ಎಕರೆಯಲ್ಲಿ ಜಮೀನಿನಲ್ಲಿ ಈರುಳ್ಳಿ ಬೆಳೆ ಇದೆ. ಈರುಳ್ಳಿ ಬೆಳೆಗೆ ಅಂದಾಜು 1 ಲಕ್ಷದವರೆಗೆ ಖರ್ಚು ಮಾಡಿದ್ದರೆ ಆದರೆ ಆದರೆ ದರ ಮಾರುಕಟ್ಟೆಯಲ್ಲಿ ಒಂದು ಕ್ವಿಂಟಾಲಿಗೆ ಕೇವಲ ₹700 ಮಾತ್ರ ಇದೆ. ಇಂದಿನ ದಿನಗಳಲ್ಲಿ ಬೆಲೆ ಏರಿಕೆಯಿಂದ ಬಳಲುತ್ತಿರುವ ರೈತರಿಗೆ ತಮ್ಮ ಬೆಳೆಗೆ ಬೆಲೆ ಸಿಗದೆ ಪರಿತಪಿಸುವ ಪರಿಸ್ಥಿತಿ ನಿರ್ಮಾಣವಾಗಿರುವುದು ಹಗಲಿನಷ್ಟೇ ಸತ್ಯ. ಏಕೆಂದರೆ ರೈತರು ಶ್ರಮಜೀವಿಗಳು. ರೈತರ ಶ್ರಮಕ್ಕೆ ಸರಿಯಾದ ಪ್ರತಿಫಲ ಸಿಗದೇ ಇರುವುದರಿಂದ ಅನೇಕ ರೈತರು ಆತ್ಮಹತ್ಯೆಗೆ ಮೊರೆ ಹೋಗುತ್ತಿರುವುದು ದುರಂತವೇ ಸರಿ. ಈರುಳ್ಳಿ ಬೆಳೆ ಕೈಕೊಟ್ಟಿದ್ದರಿಂದ ಕಲ್ಲಂಗಡಿ ಬೆಳೆ ಕೈ ಹಿಡಿದಿರುವುದು ಮೆಹಬೂಬ್ ಖಾನ್ ಪಟೇಲರಿಗೆ ಸಂತಸ ತಂದಿದೆ.
ಬೇಸಾಯ ಕ್ರಮ: ಮೂರು ಎಕರೆ ಜಮೀನನ್ನು ಟ್ರ್ಯಾಕ್ಟರ್ ಮೂಲಕ ಅದಗೊಳಿಸಿದ್ದಾರೆ. ಮಣ್ಣಿನಲ್ಲಿ ಗೊಬ್ಬರ ಮಿಶ್ರಣವಾದ ಬಳಿಕ ಸಾಲಿನಿಂದ ಸಾಲಿಗೆ 4.5 ಅಡಿಯಂತೆ ಸಾಲು ಬಿಟ್ಟು ಸಾಲಿನಲ್ಲಿ ಸಸಿಯಿಂದ ಸಸಿಗೆ ಎರಡು ಅಡಿಯಂತೆ ಸಾತರದ ಕಳಶ ಕಂಪನಿಯಿಂದ ಬಿತ್ತನೆಬೀಜ ತಂದು ಬಿತ್ತಿದ್ದಾರೆ. 15 ಸಾವಿರ ಸಸಿಗಳನ್ನು ಬೆಳಸಿ ನಂತರ ನಾಟಿ ಮಾಡಿ ಹನಿ ನೀರಾವರಿ ಮೂಲಕ ಬೆಳೆಸಲಾಗಿದೆ. ಕಲ್ಲಂಗಡಿ ಹಣ್ಣಿನ ಬೇಸಾಯಕ್ಕೆ ಸೂಕ್ತ ಸಮಯವೆಂದರೆ ಫೆಬ್ರವರಿ ಮೊದಲನೇ ವಾರದಲ್ಲಿ ನಾಟಿ ಮಾಡಬೇಕು. 55ರಿಂದ 60 ದಿನಗಳಲ್ಲಿ ಫಸಲು ಕೈಗೆ ಬರುತ್ತದೆ. ಈ ಬೆಳಗೆ ರೋಗಭಾದೆ ಕಡಿಮೆ 3 ಎಕರೆಯಲ್ಲಿ 75ರಿಂದ 80 ಟನ್‌ಗಳಷ್ಟು ಇಳುವರಿ ಬಂದಿದೆ.

ಮೆಹಬೂಬ್ ಖಾನ್ ಪಟೇಲ್ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಕಲ್ಲಂಗಡಿ ಹಣ್ಣಿನ ಬೇಸಾಯಕ್ಕೆ 20 ಸಾವಿರದಂತೆ ಅರವತ್ತು ಸಾವಿರ ಖರ್ಚು ತಗುಲುತ್ತದೆ. ಬೆಂಗಳೂರಿನ ಮೆಟ್ರೋ ಮಾರುಕಟ್ಟೆಗೆ ಹಣ್ಣು ಕಳುಹಿಳಿಸಿರುವೆ. ಹಣ್ಣಿನ ಬೆಲೆ ಸರಾಸರಿ ಕೆ.ಜಿಗೆ ₹8ರಿಂದ ₹10ರಷ್ಟು ಇದ್ದು, ₹6 ಲಕ್ಷದಿಂದ ₹7.5ಲಕ್ಷ ಆದಾಯ ಲಭಿಸಿದೆ. ಮೂರು ಎಕರೆ ಬೆಳೆಯಿಂದ ನಿವ್ವಳ ₹6ಲಕ್ಷ ಲಾಭ ಬಂದಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಯಾದಗಿರಿ | ಬುದ್ಧಗಯಾ ಮಹಾಬೋಧಿ ಬೌದ್ಧರಿಗೆ ಒಪ್ಪಿಸಲು ಆಗ್ರಹಿಸಿ ಬೃಹತ್ ಪ್ರತಿಭಟನೆ
ಇಂದಿನ ದಿನಗಳಲ್ಲಿ ವೈಜ್ಞಾನಿಕ ಬೆಳೆಗಳಿಗೆ ಪ್ರಮುಖ ಮಾಹಿತಿಯನ್ನು ಒದಗಿಸುವ ಕೆಲಸ ಸರ್ಕಾರ ಮತ್ತು ಸರ್ಕಾರಿ ಅಧಿಕಾರಿಗಳ ರೈತರಿಗೆ ಮಾಹಿತಿ ತಲುಪಿಸುವ ವ್ಯವಸ್ಥೆ ಜರೂರಾಗಿ ಆಗಬೇಕಿದೆ. ಬೆಳೆಗಳಿಗೆ ಬೆಂಬಲ ಪ್ರೋತ್ಸಾಹಧನದಂತಹ ಕಾರ್ಯಕ್ರಮಗಳಿದ್ದಾಗಿ ರೈತರ ಆತ್ಮಹತ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಸರ್ಕಾರ ಮಧ್ಯಸ್ಥಿಕೆ ವಹಿಸಿ ಇಂತಹ ರೈತರ ಸ್ಪೂರ್ತಿದಾಯಕ ಬೆಳೆಗಳನ್ನು ಇನ್ನಿತರ ರೈತರಿಗೆ ಪರಿಚಯಿಸಿ ಪ್ರೋತ್ಸಾಹಿಸಬೇಕಾಗಿದೆ.