ತಮಿಳುನಾಡು ವ್ಯಾಪಾರಿ ಸಂಘಗಳ ಸದಸ್ಯರು ವಾರ್ಷಿಕವಾಗಿ ವ್ಯಾಪಾರಿಗಳ ದಿನವಾಗಿ ಆಚರಿಸುವ ಮೇ 5 ಅನ್ನು ಶೀಘ್ರದಲ್ಲೇ ವ್ಯಾಪಾರಿಗಳ ದಿನವೆಂದು ಅಧಿಕೃತವಾಗಿ ಘೋಷಿಸಲಾಗುವುದು ಎಂದು ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಘೋಷಿಸಿದ್ದಾರೆ.
ಸೋಮವಾರ ಉಪನಗರ ಮಧುರಾಂತಕಂನಲ್ಲಿ ನಡೆದ ವ್ಯಾಪಾರಿಗಳ ಸಂಘದ 42ನೇ ವಾರ್ಷಿಕ ಸಭೆಯಲ್ಲಿ ಮಾತನಾಡಿದ ಸ್ಟಾಲಿನ್ ಅವರು ಮೇ 5 ಅನ್ನು ವ್ಯಾಪಾರಿಗಳ ದಿನವೆಂದು ಘೋಷಿಸಲು ಶೀಘ್ರದಲ್ಲೇ ಆದೇಶ ಹೊರಡಿಸಲಾಗುವುದು ಎಂದು ಹೇಳಿದರು.
ಇದನ್ನು ಓದಿದ್ದೀರಾ? ‘₹’ ಸಂಕೇತ ಕೈಬಿಟ್ಟ ತಮಿಳುನಾಡು ಸರ್ಕಾರ, ಎಂ ಕೆ ಸ್ಟಾಲಿನ್‌ನಿಂದ ದಿಟ್ಟ ಕ್ರಮ: ಕರವೇ ನಾರಾಯಣಗೌಡ
ಇದೇ ಸಂದರ್ಭದಲ್ಲಿ ವ್ಯಾಪಾರಿಗಳಿಗಾಗಿ ಹಲವು ಕ್ರಮಗಳನ್ನು ಸಿಎಂ ಸ್ಟಾಲಿನ್ ಪ್ರಕಟಿಸಿದರು. “ವ್ಯಾಪಾರಿಗಳ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿಸಿಕೊಂಡ ಮತ್ತು ಶಾಶ್ವತ ಸದಸ್ಯರಾಗಿರುವವರಿಗೆ ಸಹಾಯ ಧನವನ್ನು 3 ಲಕ್ಷ ರೂ.ಗಳಿಂದ 5 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗುವುದು. ಉಚಿತ ಸದಸ್ಯತ್ವದ ಅವಧಿಯನ್ನು ಇನ್ನೂ 6 ತಿಂಗಳವರೆಗೆ ವಿಸ್ತರಿಸಲಾಗುವುದು” ಎಂದು ತಿಳಿಸಿದರು.
ಇನ್ನು ತಮ್ಮ ಅಂಗಡಿಗಳ ಬೋರ್ಡ್ ಅನ್ನು ತಮಿಳಿನಲ್ಲಿಯೇ ಬರೆಯುವಂತೆ ಮನವಿ ಮಾಡಿದ ಸ್ಟಾಲಿನ್ ಅವರು, ಆಹಾರ ಉತ್ಪನ್ನಗಳ ಮಾರಾಟವನ್ನು ಹೊರತುಪಡಿಸಿ 500 ಚದರ ಅಡಿಗಿಂತ ಕಡಿಮೆ ಇರುವ ವ್ಯವಹಾರಗಳಿಗೆ ಸ್ವಯಂ ಪ್ರಮಾಣೀಕರಣದ ಆಧಾರದ ಮೇಲೆ ಪರವಾನಗಿಗಳನ್ನು ನೀಡಲಾಗುವುದು ಎಂದು ಹೇಳಿದರು.
