ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ಹಾಗೂ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಕುರಿತು ಗೌಪ್ಯ ಸಭೆಯಲ್ಲಿ ಪಾಕಿಸ್ತಾನವನ್ನು ವಿಶ್ವಸಂಸ್ಥೆ ಭದ್ರತಾ ಮಂಡಳಿ ತೀವ್ರವಾಗಿ ಟೀಕಿಸಿದೆ ಎಂದು ಎಎನ್‌ಐ ವರದಿ ಮಾಡಿದೆ.
ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಸದಸ್ಯರು ಪಾಕಿಸ್ತಾನದ ರಾಜತಾಂತ್ರಿಕರೊಂದಿಗೆ ಇಸ್ಲಾಮಾಬಾದ್‌ನಲ್ಲಿ ಸಭೆ ನಡೆಸಿದ್ದಾರೆ. ಸಭೆಯಲ್ಲಿ, ಏಪ್ರಿಲ್ 22ರಂದು ನಡೆದ ಪಹಲ್ಗಾಮ್ ದಾಳಿಯಲ್ಲಿ ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೈಬಾ ಭಾಗಿಯಾಗಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಇತ್ತೀಚೆಗೆ ಪಾಕ್ ನಡೆಸಿರುವ ಕ್ಷಿಪಣಿ ಪರೀಕ್ಷೆಗಳ ಬಗ್ಗೆಯೂ ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಒಂದು ಗಂಟೆಗೂ ಹೆಚ್ಚು ಕಾಲ ನಡೆದ ಮಾತುಕತೆಯಲ್ಲಿ, ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸದಸ್ಯರು ಪಹಲ್ಗಾಮ್ ದಾಳಿ ಕುರಿತು ಪಾಕಿಸ್ತಾನದ ಸುಳ್ಳು ನಿರೂಪಣೆಯನ್ನು ಪರಿಗಣಿಸಲು ನಿರಾಕರಿಸಿದರು. ಭಾರತದೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸುವ ಮೂಲಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವಂತೆ ಸೂಚಿಸಿದರು ಎಂದು ವರದಿಯಾಗಿದೆ.
ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಪಾಕಿಸ್ತಾನದ ರಾಯಭಾರಿ ಅಸಿಮ್ ಇಫ್ತಿಕರ್, “ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ತಮ್ಮ (ಪಾಕ್) ಪಾತ್ರವಿದೆ ಎಂಬ ಎಲ್ಲ ಆರೋಪಗಳನ್ನು ತಮ್ಮ ದೇಶ ತಿರಸ್ಕರಿಸಿದೆ. ಸಿಂಧೂ ಜಲ ಒಪ್ಪಂದವನ್ನು ಭಾರತ ಸ್ಥಗಿತಗೊಳಿಸಿರುವುದು ಅಂತಾರಾಷ್ಟ್ರೀಯ ಕಾನೂನಿನ ಉಲ್ಲಂಘನೆಯಾಗಿದೆ” ಎಂದಿದ್ದಾರೆ.
ಸಭೆಯ ನಂತರ, ಟುನೀಷಿಯಾದ ರಾಜತಾಂತ್ರಿಕ ಖಲೀದ್ ಮೊಹಮ್ಮದ್ ಖಿಯಾರಿ, “ಪರಿಸ್ಥಿತಿ ಅಸ್ಥಿರವಾಗಿದೆ. ಸಭೆ, ಮಾತುಕತೆ ಹಾಗೂ ಶಾಂತಿಯುತವಾಗಿ ಸಂಘರ್ಷಕ್ಕೆ ಪರಿಹಾರ ಕಂಡುಕೊಳ್ಳಲು ಸೂಚನೆ ನೀಡಲಾಗಿದೆ” ಎಂದು ಹೇಳಿದ್ದಾರೆ.
ಸಭೆಗೂ ಮುನ್ನ, ವಿಶ್ವಸಂಸ್ಥೆಯ ಮುಖ್ಯಸ್ಥ ಆಂಟೋನಿಯೊ ಗುಟೆರೆಸ್, “ಮಿಲಿಟರಿ ಕಾರ್ಯಾಚರಣೆ ಅಥವಾ ಕ್ರಮಗಳು ಸಮಸ್ಯೆಗೆ ಪರಿಹಾರವಲ್ಲ. ಎರಡೂ ದೇಶಗಳು ಗರಿಷ್ಠ ಸಂಯಮದಿಂದ ನಡೆದುಕೊಳ್ಳಬೇಕು. ಗಡಿಯಿಂದ ಹಿಂದೆ ಸರಿಯಬೇಕು. ಸಂಬಂಧಗಳು ಉದ್ವಗ್ನಗೊಳ್ಳುವುದನ್ನು ನೋಡಲು ನನಗೆ ನೋವಾಗುತ್ತದೆ” ಎಂದು ಹೇಳಿದ್ದರು.
ಭಯೋತ್ಪಾದಕ ದಾಳಿಯನ್ನು ಖಂಡಿಸಿದ ಗುಟೆರೆಸ್, “ನಾಗರಿಕರನ್ನು ಗುರಿಯಾಗಿಸಿಕೊಂಡು ದಾಳಿ ಮಾಡುವುದು ಸ್ವೀಕಾರಾರ್ಹವಲ್ಲ. ಜವಾಬ್ದಾರಿಯುತ ನಾಯಕರು ವಿಶ್ವಾಸಾರ್ಹ ಮತ್ತು ಕಾನೂನುಬದ್ಧ ವಿಧಾನಗಳ ಮೂಲಕ ನ್ಯಾಯ ಮತ್ತು ಪರಿಹಾರ ಕಂಡುಕೊಳ್ಳಬೇಕು” ಎಂದಿದ್ದರು.
ಏಪ್ರಿಲ್ 22ರಂದು ನಡೆದ ಪಹಲ್ಗಾಮ್ ದಾಳಿಯು ಇತ್ತೀಚಿನ ವರ್ಷಗಳ ಅತ್ಯಂತ ಭೀಕರ ಮತ್ತು ಆಘಾತಕಾರಿ ದಾಳಿಯಾಗಿದೆ. ದಾಳಿಯಲ್ಲಿ ವಿದೇಶಿಗರು, ಸ್ಥಳೀಯರು ಹಾಗೂ ಪ್ರವಾಸಿಗರು ಸೇರಿ 28 ಮಂದಿ ಸಾವನ್ನಪ್ಪಿದ್ದಾರೆ. ಈ ಹತ್ಯಾಕಾಂಡದ ಹಿಂದೆ ಪಾಕಿಸ್ತಾನದ ಕುಮ್ಮಕ್ಕು ಇದೆ ಎಂದು ಭಾರತ ಅರೋಪಿಸಿದೆ. ಪಾಕ್ ಜೊತೆಗಿನ ಸಿಂಧು ನದಿ ನೀರು ಒಪ್ಪಂದವನ್ನು ಭಾರತ ಸ್ಥಗಿತಗೊಳಿಸಿದೆ. ಭಾರತದಲ್ಲಿ ವಾಸಿಸುವ ಪಾಕಿಸ್ತಾನಿಗಳ ವೀಸಾಗಳನ್ನು ರದ್ದುಗೊಳಿಸಿದ್ದು, ಪಾಕಿಸ್ತಾನ್ ಪ್ರಜೆಗಳನ್ನು ವಾಪಸ್ ಕಳಿಸಿದೆ.