ಗರ್ಭಿಣಿಗೆ ವೈದ್ಯೆಯೊಬ್ಬರು ‘ವಿಡಿಯೋ ಕರೆ’ ಮೂಲಕ ಚಿಕಿತ್ಸೆ ನೀಡಿದ್ದು, ಇದರಿಂದಾಗಿ ಹೆರಿಗೆ ವೇಳೆ ಅವಳಿ ಮಕ್ಕಳು ಸಾವನ್ನಪ್ಪಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ. ಮಹಿಳೆ ಬಟ್ಟಿ ಕೀರ್ತಿ ವಿವಾಹವಾಗಿ ಏಳು ವರ್ಷಗಳ ಬಳಿಕ ಗರ್ಭ ಧರಿಸಿದ್ದು, ಅವಳಿ ಮಕ್ಕಳ ನಿರೀಕ್ಷೆಯಲ್ಲಿದ್ದರು. ಆದರೆ ವೈದ್ಯೆ ಮಾಡಿದ ಎಡವಟ್ಟಿನಿಂದ ಮಕ್ಕಳನ್ನು ಕಳೆದುಕೊಂಡಿರುವುದಾಗಿ ಆರೋಪಿಸಿದ್ದಾರೆ.
ತನ್ನ ಮಕ್ಕಳನ್ನು ಕಳೆದುಕೊಳ್ಳಲು ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಎಲಿಮಿನೇಡು ಗ್ರಾಮದ ಕೀರ್ತಿ ದೂರಿದ್ದಾರೆ. ಕೀರ್ತಿ ಐದು ತಿಂಗಳ ಹಿಂದೆ ಐವಿಎಫ್ ಮೂಲಕ ಗರ್ಭ ಧರಿಸಿದ್ದರು. ಡಾ. ಅನುಷಾ ರೆಡ್ಡಿ ಅವರು ಕೀರ್ತಿಗೆ ಚಿಕಿತ್ಸೆ ನೀಡುತ್ತಿದ್ದರು ಎನ್ನಲಾಗಿದೆ.
ಇದನ್ನು ಓದಿದ್ದೀರಾ? ಗದಗ | ವೈದ್ಯರ ನಿರ್ಲಕ್ಷ್ಯ ಆರೋಪ: ಅವಳಿ ಮಕ್ಕಳು, ಬಾಣಂತಿ ಸಾವು; ಕುಟುಂಬಸ್ಥರಿಂದ ಪ್ರತಿಭಟನೆ
ಕಳೆದ ತಿಂಗಳು ಕೀರ್ತಿ ಜಯ ಲಕ್ಷ್ಮಿ ಆಸ್ಪತ್ರೆಗೆ ತಪಾಸಣೆಗಾಗಿ ಭೇಟಿ ನೀಡಿದ್ದು ಗರ್ಭಕಂಠ ಸಡಿಲವಾಗಿದೆ ಎಂದು ಹೇಳಿ ವೈದ್ಯೆ ಹೊಲಿಗೆ ಹಾಕಿದ್ದರು. ಹಾಗೆಯೇ ವಿಶ್ರಾಂತಿ ಪಡೆಯುವಂತೆ ಸಲಹೆ ನೀಡಿ ಮನೆಗೆ ಕಳುಹಿಸಿದ್ದರು. ಈ ಚಿಕಿತ್ಸೆ ಪಡೆದ ಒಂದು ತಿಂಗಳಲ್ಲೇ ಕೀರ್ತಿಗೆ ತೀವ್ರ ಹೆರಿಗೆ ನೋವು ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ.
ಹೆರಿಗೆ ನೋವು ಬಂದ ಕಾರಣ ಕೀರ್ತಿ ಅವರನ್ನು ಅದೇ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆ ಸಮಯದಲ್ಲಿ, ವೈದ್ಯರು ಇರಲಿಲ್ಲ. ವಿಡಿಯೋ ಮತ್ತು ಆಡಿಯೋ ಕರೆಗಳ ಮೂಲಕ ವೈದ್ಯೆ ನರ್ಸ್‌ಗಳಿಗೆ ಇಂಜೆಕ್ಷನ್ ನೀಡುವುದು ಸೇರಿದಂತೆ ಹಲವು ವೈದಕೀಯ ವಿಧಾನಗಳನ್ನು ಮಾಡುವಂತೆ ಸೂಚಿಸಿದ್ದಾರೆ.
ನೋವು ಕಡಿಮೆಯಾಗಲು ಕೀರ್ತಿಗೆ ಚುಚ್ಚುಮದ್ದನ್ನು ನೀಡಿದಾಗ ಹೊಲಿಗೆ ಬಿಟ್ಟಿದೆ. ಅದಾದ ಬಳಿಕ ಗರ್ಭದಿಂದ ಅವಳಿ ಮಕ್ಕಳನ್ನು ಹೊರತೆಗೆಯಲಾಗಿದ್ದು, ಕೀರ್ತಿಗೆ ತುಂಬಾ ರಕ್ತಸ್ರಾವವಾಗಿದೆ. ಇವೆಲ್ಲಾ ಆದ ಬಳಿಕ ವೈದ್ಯೆ ಅನುಷಾ ರೆಡ್ಡಿ ಬಂದು ಅವಳಿ ಮಕ್ಕಳು ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ ಎಂದು ಕುಟುಂಬ ದೂರಿದೆ.
ಇದನ್ನು ಓದಿದ್ದೀರಾ? ವಿಜಯಪುರ | ಜೀವನ್ಮರಣದ ನಡುವೆ ಹೋರಾಡುತ್ತಿದ್ದ ನವಜಾತ ಶಿಶುವಿಗೆ ಮರುಜನ್ಮ ನೀಡಿದ ವೈದ್ಯರು
ಈ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿರುವ ಕೀರ್ತಿ, “ನನಗೆ ಹೆರಿಕೆ ನೋವು ಕಾಣಿಸಿಕೊಂಡಿತು. ಅದಕ್ಕಾಗಿ ವೈದ್ಯರಿಗೆ ಕರೆ ಮಾಡಿದೆ. ಅವರು ಇಂಜೆಕ್ಷನ್ ತೆಗೆದುಕೊಳ್ಳಲು ಹೇಳಿದರು. ಆದರೆ ನನಗೆ ನೋವು ಹೆಚ್ಚಾಗುತ್ತಿದ್ದಂತೆ ಚಿಂತೆಯಾಯಿತು. ಆದ್ದರಿಂದ ಅರ್ಧ ಗಂಟೆಯಲ್ಲೇ ಆಸ್ಪತ್ರೆಗೆ ಬಂದೆವು. ವೈದ್ಯರು ಫೋನ್ ಮೂಲಕ ನರ್ಸ್‌ಗಳಿಗೆ ಸಲಹೆ ನೀಡಿದರು. ವೈದ್ಯರ ಸೂಚನೆಯಂತೆ ನರ್ಸ್‌ಗಳು ಚಿಕಿತ್ಸೆ ನೀಡಿದರು” ಎಂದು ತಿಳಿಸಿದ್ದಾರೆ.
“ನರ್ಸ್ ನನ್ನನ್ನು ಎರಡು ಬಾರಿ ಪರಿಶೀಲಿಸಿದರು. ನನ್ನ ಶಿಶುಗಳು ಹೊರಬಂದ ನಂತರವೇ ವೈದ್ಯರು ಬಂದರು. ಶಿಶುಗಳು ಪ್ರಾಣ ಕಳೆದುಕೊಂಡಿವೆ ಎಂದು ಹೇಳಿದರು. ವೈದ್ಯರು ನನ್ನನ್ನು ಪರೀಕ್ಷಿಸಲಿಲ್ಲ” ಎಂದು ದೂರಿದ್ದಾರೆ.
“ವೈದ್ಯರು ನರ್ಸ್‌ಗಳಿಗೆ ಕ್ಲಿಷ್ಟವಾದ ಚಿಕಿತ್ಸೆಯನ್ನು ಮಾಡುವಂತೆ ತಿಳಿಸಿರುವುದು ವೃತ್ತಿಪರವಲ್ಲದ ಕೆಲಸವಾಗಿದೆ. ನಾವು ಸಂಪೂರ್ಣ ತನಿಖೆ ನಡೆಸಿ ಪೊಲೀಸರು ಮತ್ತು ಉನ್ನತ ಅಧಿಕಾರಿಗಳಿಗೆ ನಮ್ಮ ವರದಿಯನ್ನು ಸಲ್ಲಿಸುತ್ತೇವೆ” ಎಂದು ಮಾಧ್ಯಮಕ್ಕೆ
ರಂಗಾರೆಡ್ಡಿಯ ಜಿಲ್ಲಾ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ ಬಿ ವೆಂಕಟೇಶ್ವರ ರಾವ್ ಹೇಳಿದ್ದಾರೆ.
ಇನ್ನು ಕೀರ್ತಿ ಕುಟುಂಬ ಈ ಬಗ್ಗೆ ದೂರೂ ನೀಡಿದ್ದು, ವೈದ್ಯರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಆರೋಗ್ಯ ಇಲಾಖೆಯ ವರದಿಯ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.
