ವಿವಾದಾತ್ಮಕ ವಕ್ಫ್(ತಿದ್ದುಪಡಿ) ಕಾಯ್ದೆ-2025ರ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳ ಮುಂದಿನ ವಿಚಾರಣೆ ಮೇ 15 ರಂದು ಭಾರತದ ನಿಯೋಜಿತ ಮುಖ್ಯ ನ್ಯಾಯಮೂರ್ತಿ ಬಿ ಆರ್ ಗವಾಯಿ ನೇತೃತ್ವದ ಪೀಠ ನಡೆಸಲಿದೆ. ವಕ್ಫ್(ತಿದ್ದುಪಡಿ) ಕಾಯ್ದೆ-2025ರ ಈ ಹೊತ್ತಿನ ಸ್ಥಿತಿ ಏನು?
ವಿವಾದಾತ್ಮಕ ವಕ್ಫ್(ತಿದ್ದುಪಡಿ) ಕಾಯ್ದೆ-2025ರ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ಮೇ 15 ರಂದು ಭಾರತದ ನಿಯೋಜಿತ ಮುಖ್ಯ ನ್ಯಾಯಮೂರ್ತಿ ಬಿ ಆರ್ ಗವಾಯಿ ನೇತೃತ್ವದ ಪೀಠ ವಿಚಾರಣೆ ನಡೆಸಲಿದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.
ವಕ್ಫ್ (ತಿದ್ದುಪಡಿ) ಕಾಯಿದೆ- 2025 ಅನ್ನು ಪ್ರಶ್ನಿಸಿದ್ದ ಅರ್ಜಿಗಳ ವಿಚಾರಣೆಯನ್ನು ಸೋಮವಾರ ಕೈಗೆತ್ತಿಕೊಂಡ ಪೀಠ, “ಹಾಲಿ ಸಿಜೆಐ ಸಂಜೀವ್ ಖನ್ನಾ ನೇತೃತ್ವದ ಪೀಠ ವಿಚಾರಣೆ ನಡೆಸುವುದಿಲ್ಲ. ಸಿಜೆಐ ಖನ್ನಾ ಅವರು ಮೇ 13ರಂದು ನಿವೃತ್ತರಾಗಲಿದ್ದು ಪ್ರಕರಣಕ್ಕೆ ದೀರ್ಘ ವಿಚಾರಣೆ ಅಗತ್ಯವಿರುವುದರಿಂದ ಬದಲಿಗೆ ಮುಂದಿನ ನ್ಯಾಯಮೂರ್ತಿ (ಭಾವಿ ಸಿಜೆಐ) ಬಿ ಆರ್ ಗವಾಯಿ ನೇತೃತ್ವದ ಪೀಠ ವಿಚಾರಣೆ ನಡೆಸಲಿದೆ” ಎಂದು ಸೋಮವಾರ ಸುಪ್ರೀಂ ಕೋರ್ಟ್ ತಿಳಿಸಿದೆ.
ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ, ನ್ಯಾಯಮೂರ್ತಿಗಳಾದ ಸಂಜಯ್ ಕುಮಾರ್ ಹಾಗೂ ಕೆ.ವಿ.ವಿಶ್ವನಾಥನ್ ಅವರನ್ನು ಒಳಗೊಂಡ ಪೀಠವು ಪ್ರಕರಣದ ವಿಚಾರಣೆ ನಡೆಸಬೇಕಿತ್ತು. ಆದರೆ, ಸಿಜೆಐ ಹೊರತುಪಡಿಸಿ ನ್ಯಾಯಮೂರ್ತಿಗಳಾದ ಸಂಜಯ್ ಕುಮಾರ್ ಮತ್ತು ಕೆ ವಿ ವಿಶ್ವನಾಥನ್ ಅವರನ್ನು ಒಳಗೊಂಡ ಪೀಠ ಮಾತ್ರ ಅರ್ಜಿಗಳನ್ನು ಆಲಿಸಿತು.
ಮೇ 13 ರಂದು ನಿವೃತ್ತರಾಗಲಿರುವ ಹಾಲಿ ಸಿಜೆಐ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು, “ಕಾನೂನಿನ ಕೆಲವು ಅಂಶಗಳಿಗೆ ಸ್ಪಷ್ಟೀಕರಣದ ಅಗತ್ಯವಿರುವುದರಿಂದ ಈ ವಿಷಯದ ಕುರಿತು ತೀರ್ಪು ಅಥವಾ ಮಧ್ಯಂತರ ಆದೇಶವನ್ನು ಕಾಯ್ದಿರಿಸಲು ಬಯಸುವುದಿಲ್ಲ” ಎಂದು ತಿಳಿಸಿದರು.
“ಕೇಂದ್ರ ವ್ಯವಹರಿಸಿದ ಕೆಲವು ಅಂಶಗಳಿವೆ. ಆದರೆ, ಅವುಗಳಿಗೆ ಸ್ಪಷ್ಟೀಕರಣದ ಅಗತ್ಯವಿದೆ. ಈ ಮಧ್ಯಂತರ ಹಂತದಲ್ಲಿ ನಾನು ಯಾವುದೇ ತೀರ್ಪು ಅಥವಾ ಆದೇಶವನ್ನು ಕಾಯ್ದಿರಿಸಲು ಬಯಸುವುದಿಲ್ಲ. ಈ ವಿಷಯವನ್ನು ಸಮಂಜಸವಾಗಿ ಆರಂಭಿಕ ದಿನಾಂಕದಂದು ವಿಚಾರಣೆ ಮಾಡಬೇಕಾಗುತ್ತದೆ” ಎಂದು ಸಿಜೆಐ ಖನ್ನಾ ಹೇಳಿದರು.
ಯಾವುದೇ ನೇಮಕಾತಿ ಇಲ್ಲ
ನ್ಯಾಯಮೂರ್ತಿಗಳಾದ ಸಂಜಯ್ ಕುಮಾರ್ ಮತ್ತು ಕೆ ವಿ ವಿಶ್ವನಾಥನ್ ಅವರನ್ನು ಒಳಗೊಂಡ ಪೀಠವು ಅರ್ಜಿಗಳನ್ನು ಆಲಿಸುವ ವೇಳೆ, “ವಿಚಾರಣೆಯ ಸಮಯದಲ್ಲಿ, ವಕ್ಫ್ ಆಸ್ತಿಗಳ ನೋಂದಣಿಗೆ ಸಂಬಂಧಿಸಿದಂತೆ ಕೇಂದ್ರವು ಕೆಲವು ಅಂಶಗಳನ್ನು ಎತ್ತಿದೆ. ಇವುಗಳ ಬಗ್ಗೆ ನ್ಯಾಯಾಲಯವು ವಿವರವಾದ ವಿಚಾರಣೆ ನಡೆಸಬೇಕಾಗುತ್ತದೆ” ಎಂದು ಹೇಳಿದರು.
ಇದೇ ವೇಳೆ “ಬಳಕೆದಾರರಿಂದ ವಕ್ಫ್” ಸೇರಿದಂತೆ ವಕ್ಫ್ ಆಸ್ತಿಗಳನ್ನು ಡಿನೋಟಿಫೈ ಮಾಡುವುದಿಲ್ಲ ಅಥವಾ ಮೇ 15ರಂದು ಮುಂದಿನ ವಿಚಾರಣೆಯವರೆಗೆ ಕೇಂದ್ರ ವಕ್ಫ್ ಕೌನ್ಸಿಲ್ ಮತ್ತು ಮಂಡಳಿಗಳಿಗೆ ಯಾವುದೇ ನೇಮಕಾತಿಗಳನ್ನು ಮಾಡುವುದಿಲ್ಲ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಸುಪ್ರೀಂ ಕೋರ್ಟ್‌ಗೆ ಭರವಸೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮೋದಿಯ ಅಮೃತಕಾಲದಲ್ಲಿ ದಾಳಿ ಮತ್ತು ದ್ವೇಷಕ್ಕಿದೆ ಮಾರುಕಟ್ಟೆ
ಕೇಂದ್ರ ಸಲ್ಲಿಸಿದ ಅಫಿಡವಿಟ್‌ನಲ್ಲಿ ಏನು ಹೇಳಿದೆ?
ಏಪ್ರಿಲ್ 17ರ ವಿಚಾರಣೆಯ ಸಂದರ್ಭದಲ್ಲಿ ಕೇಂದ್ರ ಸರ್ಕಾರವು, “ಕೇಂದ್ರ ವಕ್ಫ್ ಪರಿಷತ್ತು ಮತ್ತು ರಾಜ್ಯ ವಕ್ಫ್ ಮಂಡಳಿಗಳಿಗೆ ಮುಂದಿನ ವಿಚಾರಣೆಯವರೆಗೆ ಯಾವುದೇ ನೇಮಕಾತಿ ನಡೆಸುವುದಿಲ್ಲ ಮತ್ತು ನ್ಯಾಯಾಲಯಗಳು ವಕ್ಫ್ ಎಂದು ಘೋಷಿಸಿರುವ ಆಸ್ತಿಗಳನ್ನು ಡಿ-ನೋಟಿಫೈ ಮಾಡುವುದಿಲ್ಲ” ಭರವಸೆ ನೀಡಿದೆ.
ಮುಂದುವರಿದು, ಏಪ್ರಿಲ್ 25ರಂದು ಸುಪ್ರೀಂ ಕೋರ್ಟ್‌ಗೆ 1,332 ಪುಟಗಳ ಪ್ರಾಥಮಿಕ ಪ್ರಮಾಣಪತ್ರ ಸಲ್ಲಿಸಿದ್ದ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ, “ಕಾಯ್ದೆಯ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಲಾಗಿರುವ ಮೇಲ್ಮನವಿಗಳನ್ನು ವಜಾಗೊಳಿಸಬೇಕು” ಎಂದು ಮನವಿ ಮಾಡಿಕೊಂಡಿದೆ.
“ಕಾಯ್ದೆಯಲ್ಲಿನ ಕೆಲ ಅವಕಾಶಗಳ ಕುರಿತು ದುರುದ್ದೇಶದಿಂದ ಕೂಡಿದ ಸುಳ್ಳು ಕಥೆಗಳನ್ನು ಈ ಮೇಲ್ಮನವಿಗಳು ಒಳಗೊಂಡಿವೆ. ಹೀಗಾಗಿ ಕಾಯ್ದೆಯಲ್ಲಿರುವ ಅವಕಾಶಗಳಿಗೆ ತಡೆ ನೀಡಬಾರದು. ಕಾಯ್ದೆಗೆ ಸಂಬಂಧಿಸಿ ಸಂಪೂರ್ಣ ಅಥವಾ ಭಾಗಶಃ ತಡೆ ನೀಡುವುದರಿಂದ ಆಗುವ ಪರಿಣಾಮಗಳ ಕುರಿತು ಅರಿವು ಇಲ್ಲದೆಯೇ ಇಂತಹ ಯಾವುದೇ ಆದೇಶ ನೀಡುವುದನ್ನು ಒಪ್ಪತಕ್ಕದ್ದಲ್ಲ. ಇಂತಹ ಆದೇಶವು ಮುಸ್ಲಿಂ ಸಮುದಾಯದ ಸದಸ್ಯರ ಮೇಲೂ ಅಡ್ಡ ಪರಿಣಾಮ ಬೀರುತ್ತದೆ” ಕೇಂದ್ರ ಸರ್ಕಾರ ಅಭಿಪ್ರಾಯಪಟ್ಟಿದೆ.
“ವಕ್ಪ್ ತಿದ್ದುಪಡಿ ಕಾಯ್ದೆಯು ಮೂಲಭೂತ ಹಕ್ಕುಗಳ ಉಲ್ಲಂಘನೆ ಎಂಬ ವಾದದಲ್ಲಿ ಸತ್ಯಾಂಶ ಇಲ್ಲ. ಕಾಯ್ದೆಯು ಮುಸ್ಲಿಂ ಸಮುದಾಯದ ಮುಖ್ಯ ಧಾರ್ಮಿಕ ಪದ್ಧತಿಗಳನ್ನು ಗೌರವಿಸುತ್ತದೆ. ನಂಬಿಕೆ ಮತ್ತು ಪ್ರಾರ್ಥನೆಯಂತಹ ವಿಚಾರಗಳ ಗೊಡವೆಗೆ ಹೋಗಿಲ್ಲ” ಎಂದು ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
2025ರ ತಿದ್ದುಪಡಿಗೆ ವಿರೋಧ, ಸುಪ್ರೀಂ ಕೋರ್ಟ್ ಮುಂದೆ ಸಾಲು ಸಾಲು ಅರ್ಜಿ
1995ರ ವಕ್ಫ್ ಕಾಯ್ದೆಯ ತಿದ್ದುಪಡಿ ಮಸೂದೆಯು ಲೋಕಸಭೆಯಲ್ಲಿ ಏ. 2ರ ಮಧ್ಯರಾತ್ರಿ 2 ಗಂಟೆಗೆ ಹಾಗೂ ರಾಜ್ಯಸಭೆಯಲ್ಲಿ ಏ. 3ರ ಮಧ್ಯರಾತ್ರಿ 3 ಗಂಟೆಯಲ್ಲಿ ಮತದಾನಗಳ ಮೂಲಕ ಅಂಗೀಕೃತಗೊಂಡಿದೆ. ಏ. 8ರಂದು ರಾಷ್ಟ್ರಪತಿಗಳ ಸಹಿಯೂ ಬಿದ್ದಿದೆ. ಆದರೆ, ರಾಷ್ಟ್ರಪತಿಗಳ ಸಹಿ ಬೀಳುವುದರೊಳಗೆ 10ಕ್ಕಿಂತಲೂ ಹೆಚ್ಚು ಕೇವಿಯಟ್ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಲಾಗಿದೆ.
ವಕ್ಫ್ ಮಸೂದೆಗೆ ತರಲಾಗಿರುವ ತಿದ್ದುಪಡಿಗಳು, ಮುಸ್ಲಿಮರ ಧಾರ್ಮಿಕ ಹಕ್ಕುಗಳನ್ನು ಮೊಟಕುಗೊಳಿಸುತ್ತವೆ ಎಂದು ವಿಪಕ್ಷಗಳು ಹಾಗೂ ಮುಸ್ಲಿಂ ಸಂಘ-ಸಂಸ್ಥೆಗಳು ಆರೋಪಿಸಿವೆ. ಸಂವಿಧಾನದ 25 ಹಾಗೂ 26ನೇ ಪರಿಚ್ಛೇದಗಳನ್ನು ಉಲ್ಲಂಘಿಸಲಾಗಿದೆ ಎಂದು ಆರೋಪಿಸಿ ಸುಪ್ರೀಂ ಕೋರ್ಟ್‌ನಲ್ಲಿ ವಿವಾದಾತ್ಮಕ ವಕ್ಫ್(ತಿದ್ದುಪಡಿ) ಕಾಯ್ದೆ-2025ರ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಅರ್ಜಿಗಳನ್ನು ಸಲ್ಲಿಸಲಾಗಿದೆ.
ಮಸೂದೆಗೆ ರಾಷ್ಟ್ರಪತಿಗಳ ಸಹಿ ಬಿದ್ದಿರುವುದರಿಂದ 1995ರ ವಕ್ಫ್ ಕಾಯ್ದೆ ತಿದ್ದುಪಡಿ ಮಸೂದೆಯು ಕಾಯ್ದೆಯಾಗಿ ಜಾರಿಯಾಗಿದೆ. ಈಗಾಗಲೇ ಹಲವಾರು ರಾಜ್ಯ ಸರ್ಕಾರಗಳು ತಮ್ಮ ವ್ಯಾಪ್ತಿಯಲ್ಲಿನ ವಕ್ಫ್ ಆಸ್ತಿಪಾಸ್ತಿಗಳನ್ನು ತನಿಖೆ ನಡೆಸಲು ಮುಂದಾಗಿವೆ. ಮಧ್ಯಪ್ರದೇಶದಲ್ಲಿ ಸುಮಾರು ವಕ್ಫ್ ಆಸ್ತಿಗಳ ಸರ್ವೇ ಕಾರ್ಯ ಆರಂಭವಾಗಿದೆ. ಈ ನಡುವೆಯೇ ವಕ್ಫ್(ತಿದ್ದುಪಡಿ) ಕಾಯ್ದೆ-2025ರ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆ ಏ. 17ರಿಂದ ಆರಂಭವಾಗಿದೆ.
ವಕ್ಫ್ (ತಿದ್ದುಪಡಿ) ಕಾಯ್ದೆ 2025 ಅನ್ನು ಪ್ರಶ್ನಿಸಿ ತಮಿಳಗ ವೆಟ್ರಿ ಕಳಗಂನ ಅಧ್ಯಕ್ಷ ವಿಜಯ್ ಸುಪ್ರೀಂ ಕೋರ್ಟ್ ಅರ್ಜಿ ಸಲ್ಲಿಸಿದ್ದಾರೆ. ಇದಲ್ಲದೆ ಅಸದುದ್ದೀನ್ ಓವೈಸಿ, ಎ.ರಾಜಾ, ಕಾಂಗ್ರೆಸ್, ಡಿಎಂಕೆ ಸ್ಟಾಲಿನ್ ಸರ್ಕಾರ ಸಲ್ಲಿಸಲಾದ ಇತರ ಹಲವಾರು ಅರ್ಜಿಗಳಲ್ಲಿ ಅವರ ಅರ್ಜಿಯೂ ಸೇರಿದೆ.
ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (AIMPLB) ಸಹ ಈ ಕಾಯ್ದೆಯನ್ನು ವಿರೋಧಿಸಿದೆ. ಈ ತಿದ್ದುಪಡಿಗಳು “ಏಕಪಕ್ಷೀಯ, ತಾರತಮ್ಯ ಎಂದು ಹೇಳಿದೆ. ಬಿಹಾರದಿಂದ ರಾಷ್ಟ್ರೀಯ ಜನತಾ ದಳದ ಸಂಸದರಾದ ಮನೋಜ್ ಝಾ ಮತ್ತು ಫಯಾಜ್ ಅಹ್ಮದ್, ಶಾಸಕ ಮುಹಮ್ಮದ್ ಇಜಾರ್ ಆಸ್ಫಿ ಸಹ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ತಮಿಳುನಾಡಿನ ಆಡಳಿತ ಪಕ್ಷ ಡಿಎಂಕೆ ಸಹ ಕಾನೂನು ಹೋರಾಟಕ್ಕೆ ಕೈಜೋಡಿಸಿದೆ. ಮಸೂದೆಯ ಜಂಟಿ ಸಂಸದೀಯ ಸಮಿತಿಯ ಭಾಗವಾಗಿದ್ದ ಸಂಸದ ಎ.ರಾಜಾ ಅರ್ಜಿ ಸಲ್ಲಿಸಿದ್ದಾರೆ.
ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದ್ದು, ವಕ್ಫ್ ಕಾಯ್ದೆ ವಿಚಾರದಲ್ಲಿ ಯಾವುದೇ ಆದೇಶ ಹೊರಡಿಸುವ ಮುನ್ನ ವಿಚಾರಣೆ ನಡೆಸುವಂತೆ ಕೋರಿದೆ. ಹೈಕೋರ್ಟ್‌ಗಳು ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ಯಾವುದೇ ಅರ್ಜಿಯ ಬಗ್ಗೆ ವಿಚಾರಣೆ ಮಾಡದೆ ಯಾವುದೇ ಆದೇಶ ಹೊರಡಿಸದಂತೆ ನೋಡಿಕೊಳ್ಳಲು ಕೇವಿಯಟ್ ಅನ್ನು ಸಲ್ಲಿಸಿದೆ.
2025 ತಿದ್ದುಪಡಿಯ ಪ್ರಮುಖಾಂಶಗಳು
ಅನಿಯಂತ್ರಿತ ಆಸ್ತಿ ಹಕ್ಕುಗಳು
ಈಗ ಮಾಡಿರುವ ತಿದ್ದುಪಡಿಗಳಲ್ಲಿ ಇದು ಎಲ್ಲಕ್ಕಿಂತ ಮುಖ್ಯವಾದದ್ದು. ಈ ತಿದ್ದುಪಡಿಯನ್ವಯ, ವಕ್ಫ್ ಮಂಡಳಿಯು ತನಗೆ ಇಷ್ಟ ಬಂದ ಭೂಮಿಯನ್ನು ಅದು ವಕ್ಫ್ ಮಂಡಳಿಗೆ ಸೇರಿದ್ದು ಎಂದೆನಿಸಿದರೆ ಆ ಭೂಮಿಯನ್ನು ಕೂಡಲೇ ವಕ್ಫ್ ಆಸ್ತಿ ಎಂದು ಘೋಷಿಸುವ ಹಾಗಿಲ್ಲ.
ಸರ್ಕಾರಿ ಜಾಗಗಳು ಮತ್ತು ವಕ್ಫ್ ವಿವಾದಗಳು
ಇನ್ನು ಮುಂದೆ ಸರ್ಕಾರಿ ಜಾಗಗಳನ್ನು ವಕ್ಫ್ ಮಂಡಳಿಯು ತಮ್ಮ ಆಸ್ತಿಯೆಂದು ಕ್ಲೈಮ್ ಮಾಡಿದರೆ ಆ ವಿವಾದಗಳನ್ನು ಜಿಲ್ಲಾಧಿಕಾರಿ ಹಾಗೂ ಅದಕ್ಕೂ ಹೆಚ್ಚಿನ ಮಟ್ಟದ ಅಧಿಕಾರಿಗಳೇ ತನಿಖೆ ಮಾಡಬೇಕು.
ಸೀಮಿತ ಕಾಯ್ದೆ ಅನ್ವಯ
1923ರಲ್ಲಿ ಜಾರಿಯಾಗಿದ್ದ ಸೀಮಿತ ಅಧಿಕಾರ ಕಾಯ್ದೆಯನ್ನು ವಕ್ಫ್ ಮಂಡಳಿಗಳ ಆಸ್ತಿ ಕ್ಲೈಮ್‌ಗಳ ಮೇಲೆ ಅನ್ವಯಿಸಲಾಗುತ್ತದೆ. ಇದರಿಂದ ದೀರ್ಘಕಾಲದವರೆಗೆ ವಕ್ಫ್ ಆಸ್ತಿ ವಿವಾದಗಳು ನ್ಯಾಯಾಲಯಗಳಲ್ಲಿ ಮುಂದುವರಿಯುವಂತಿಲ್ಲ.
ವಕ್ಫ್ ಮಂಡಳಿಗಳಿಂದ ಟ್ರಸ್ಟ್‌ಗಳ ಪ್ರತ್ಯೇಕತೆ
ವಕ್ಫ್ ಮಂಡಳಿಯ ಅಡಿಯಲ್ಲಿ ಹುಟ್ಟಿಕೊಂಡಿದ್ದ ಸಣ್ಣ ಸಣ್ಣ ಮುಸ್ಲಿಂ ಟ್ರಸ್ಟ್‌ಗಳನ್ನು ವಕ್ಫ್ ಮಂಡಳಿಗಳಿಂದ ಬೇರೆ ಮಾಡುವುದು. ಅಲ್ಲದೆ, ಯಾವುದೇ ಕಾನೂನಿನ ಅಡಿಯಲ್ಲಿ ಮುಸ್ಲಿಮರಿಂದ ಸ್ಥಾಪಿತವಾಗಿರುವ ಯಾವುದೇ ಟ್ರಸ್ಟ್ ಅನ್ನು ವಕ್ಫ್ ಎಂದು ಪರಿಗಣಿಸಲಾಗುವುದಿಲ್ಲ ಎಂದು ಈ ತಿದ್ದುಪಡಿಯಲ್ಲಿ ಅತ್ಯಂತ ಸ್ಪಷ್ಟವಾಗಿ ಹೇಳಲಾಗಿದೆ.
ಮುಸ್ಲಿಮೇತರ ಪ್ರಾತಿನಿಧ್ಯ
ವಕ್ಫ್ ಮಂಡಳಿಗಳಲ್ಲಿ ಇಬ್ಬರು ಮುಸ್ಲಿಮೇತರ ಸಮುದಾಯಗಳ ವ್ಯಕ್ತಿಗಳು ಇರುವುದು ಕಡ್ಡಾಯ. ಇದು ಕೇಂದ್ರೀಯ ವಕ್ಫ್ ಮಂಡಳಿಗಳಿಗೆ ಹಾಗೂ ರಾಜ್ಯಮಟ್ಟದ ವಕ್ಫ್ ಮಂಡಳಿಗಳಿಗೆ ಅನ್ವಯವಾಗುತ್ತದೆ.
ವಕ್ಫ್‌ಗೆ ಆಸ್ತಿ ದಾನ ಮಾಡಲು ಇರುವ ಅರ್ಹತೆ
ವಕ್ಪ್ ಮಂಡಳಿಗಳಿಗೆ ಸಿಕ್ಕಸಿಕ್ಕವರು ಇನ್ನು ತಮ್ಮ ಆಸ್ತಿಗಳನ್ನು ದಾನ ಮಾಡುವಂತಿಲ್ಲ. ಇಸ್ಲಾಂ ಧರ್ಮವನ್ನು ಕನಿಷ್ಠ ಐದು ವರ್ಷಗಳವರೆಗೆ ಪಾಲಿಸಿರುವವರು ಮಾತ್ರ ಇನ್ನುಮುಂದೆ ಆಸ್ತಿಗಳನ್ನು ದಾನ ಮಾಡಲು ಅರ್ಹರು. ಇದು 2013ರಲ್ಲಿ ಹೊಸ ಸ್ವರೂಪದಲ್ಲಿ ಜಾರಿಯಾದ ವಕ್ಫ್ ಕಾಯ್ದೆಗೂ ಮುನ್ನ ಇದ್ದ ಕಾಯ್ದೆಯಲ್ಲಿರುವ ಅಂಶ.
ಕುಟುಂಬಗಳ ವಕ್ಫ್ ವ್ಯವಹಾರಗಳಲ್ಲಿ ಮಹಿಳೆಯರಿಗೆ ಹಕ್ಕು
ಯಾವುದೇ ವ್ಯಕ್ತಿಯು ತನ್ನ ಸ್ಥಿರಾಸ್ತಿಯನ್ನು ವಕ್ಫ್ ಮಂಡಳಿಗೆ ದಾನ ಮಾಡುವ ಮುನ್ನ ಕಾನೂನಿಗೆ ಅನುಗುಣವಾಗಿ ತನ್ನ ಕುಟುಂಬ ಹೆಣ್ಣುಮಕ್ಕಳಿಗೆ ಆ ಆಸ್ತಿಯಲ್ಲಿ ಕೊಡಬೇಕಾದ ದಾನವನ್ನು ಕೊಟ್ಟು ಉಳಿದ ಆಸ್ತಿಯನ್ನು ವಕ್ಫ್‌ಗೆ ದಾನ ನೀಡಬೇಕು. ಹಾಗೆ ತನ್ನ ಕುಟುಂಬದ ಹೆಣ್ಣುಮಕ್ಕಳಿಗೆ ದಾನ ನೀಡುವಾಗ ವಿಧವೆಯರಿಗೆ, ವಿಚ್ಛೇದಿತ ಮಹಿಳೆಯರಿಗೆ ಹಾಗೂ ಅನಾಥ ಮಹಿಳೆಯರಿಗೆ ಮೊದಲ ಆದ್ಯತೆಯನ್ನು ನೀಡಬೇಕು.
ವಕ್ಫ್ ಮಂಡಳಿಗಳಲ್ಲಿ ಪಾರದರ್ಶಕತೆ
ವಕ್ಫ್ ಆಸ್ತಿಗಳ ನಿರ್ವಹಣೆ ಮಾಡುವ ಮುತಾವಲಿಗಳಿಗೆ ಹೊಸ ಜವಾಬ್ದಾರಿ ನೀಡಲಾಗಿದೆ. ಇದರನ್ವಯ, ಮುತಾವಲಿಗಳು ವಕ್ಫ್ ಮಂಡಳಿಗೆ ಬಂದ ದೇಣಿಗೆ ರೂಪದ ಆಸ್ತಿಪಾಸ್ತಿಗಳನ್ನು ಕಡ್ಡಾಯವಾಗಿ ಆರು ತಿಂಗಳುಗಳೊಳಗೆ ಸೆಂಟ್ರಲ್ ಪೋರ್ಟಲ್‌ನ ಅಡಿಯಲ್ಲಿ ನೋಂದಾಯಿಸಬೇಕಿದೆ.
ವಾರ್ಷಿಕ ಅನುದಾನ ಕಡಿತ
ವಕ್ಫ್ ಸಂಸ್ಥೆಗಳಿಂದ ವಕ್ಫ್ ಮಂಡಳಿಗಳಿಗೆ ಬರುವ ವಾರ್ಷಿಕ ಅನುದಾನವನ್ನು ಕಡಿತಗೊಳಿಸಲಾಗಿದೆ. 1 ಲಕ್ಷ ರೂ.ಗಳಿಗಿಂತ ಹೆಚ್ಚಿನ ಅನುದಾನ ಪಡೆಯುವ ವಕ್ಫ್ ಮಂಡಳಿಗಳಿನ್ನು ಕಡ್ಡಾಯವಾಗಿ ಆಡಿಟಿಂಗ್‌ಗೆ ಒಳಗಾಗಬೇಕು. ಆಡಿಟಿಂಗ್ ನಡೆಸುವ ತಂಡವನ್ನು ರಾಜ್ಯ ಸರ್ಕಾರವೇ ನಿಯೋಜಿಸಬೇಕು.
ತಂತ್ರಜ್ಞಾನ ಹಾಗೂ ಕೇಂದ್ರೀಯ ಪೋರ್ಟಲ್
ವಕ್ಫ್ ಮಂಡಳಿಗಳ ಸುಪರ್ದಿಗೆ ಬಂದ ಪ್ರತಿಯೊಂದು ಆಸ್ತಿಯನ್ನು ಆರು ತಿಂಗಳೊಳಗೆ ಡಿಜಿಟಲ್ ವ್ಯವಸ್ಥೆಯಡಿ ಪ್ರತ್ಯೇಕವಾಗಿ ರೂಪಿಸಲಾಗುವ ಪೋರ್ಟಲ್‌ನಲ್ಲಿ ರಿಜಿಸ್ಟರ್ ಮಾಡುವುದು ಕಡ್ಡಾಯವಾಗಲಿದೆ. ಇದರಿಂದ ವಕ್ಫ್ ಆಸ್ತಿಗಳ ನಿರ್ವಹಣೆ, ಅವುಗಳ ಪರಿಣಾಮಕಾರಿತ್ವವನ್ನು ಅಭಿವೃದ್ಧಿಪಡಿಸುವುದು ಹಾಗೂ ಪಾರದರ್ಶಕತೆಯನ್ನು ಕಾಪಾಡುವುದು ಅನುಕೂಲವಾಗಲಿದೆ.
ಇದಿಷ್ಟು ವಿವಾದಾತ್ಮಕ ವಕ್ಫ್(ತಿದ್ದುಪಡಿ) ಕಾಯ್ದೆ-2025ರ ಈ ಹೊತ್ತಿನ ಸ್ಥಿತಿ. ಸುಪ್ರೀಂ ಕೋರ್ಟ್‌ನ ಹಾಲಿ ಸಿಜೆಐ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು ಮೇ 13 ರಂದು ನಿವೃತ್ತರಾಗಲಿದ್ದು, ಮುಂದಿನ ವಿಚಾರಣೆ ಮೇ 15 ರಂದು ಭಾರತದ ನಿಯೋಜಿತ ಮುಖ್ಯ ನ್ಯಾಯಮೂರ್ತಿ ಬಿ ಆರ್ ಗವಾಯಿ ನೇತೃತ್ವದ ಪೀಠ ನಡೆಸಲಿದೆ. ಮುಂದಿನ ವಿಚಾರಣೆಯವರೆಗೂ ಕೇಂದ್ರ ವಕ್ಫ್ ಕೌನ್ಸಿಲ್ ಮತ್ತು ಮಂಡಳಿಗಳಿಗೆ ಯಾವುದೇ ನೇಮಕಾತಿ ಮಾಡುವುದಿಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂಗೆ ತಿಳಿಸಿದೆ.

ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.