ಭಾರೀ ಮಿಲಿಟರಿ ಕಾರ್ಯಾಚರಣೆಗೆ ಉಭಯ ದೇಶಗಳಿಂದ ತಯಾರಿ: ಯುದ್ಧದ ನಂತರ ಆಗುವ ಅನಾಹುತಗಳೇನು?

Date:

Advertisements
ಒಂದು ಸೀಮಿತ ಅಣ್ವಸ್ತ್ರ ವಿನಿಮಯ ಭಾರತ ಮತ್ತು ಪಾಕಿಸ್ತಾನದ ದಟ್ಟ ಜನಸಂಖ್ಯೆಯಿರುವ ನಗರಗಳ 2-5 ಕೋಟಿ ಜನರನ್ನು ತಕ್ಷಣವೇ ಕೊಲ್ಲಬಹುದು. ಅಮೆರಿಕದ ರಟ್ಜರ್ಸ್ ವಿಶ್ವವಿದ್ಯಾಲಯ 2019 ರಲ್ಲಿ ಮಂಡಿಸಿದ ಅಧ್ಯಯನದ ಪ್ರಕಾರ, 50 ಅಣ್ವಸ್ತ್ರ ಸಿಡಿತಲೆ ವಿನಿಮಯವು 12.5 ಕೋಟಿ ಜನರನ್ನು ಕೊಲ್ಲಬಹುದು...

ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆಯು ಏಪ್ರಿಲ್‌ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಿಂದ ಮತ್ತಷ್ಟು ತೀವ್ರಗೊಂಡಿದೆ. ಪಹಲ್ಗಾಮ್‌ ದಾಳಿಯಲ್ಲಿ 26 ಮಂದಿ ಮೃತಪಟ್ಟಿದ್ದರು. ಈಗಾಗಲೇ ಪಾಕ್‌ ಜೊತೆ ಒಂದಿಷ್ಟು ಸಂಬಂಧ ಕಡಿದುಕೊಂಡಿದ್ದ ಭಾರತ ಈ ಘಟನೆಯ ನಂತರ ಮತ್ತಷ್ಟು ರಾಜತಾಂತ್ರಿಕ ಸಂಬಂಧಕ್ಕೆ ತಿಲಾಂಜಲಿಯಿಟ್ಟಿದೆ. 1960ರ ಸಿಂಧೂ ನದಿ ಒಪ್ಪಂದ, ಸರಕು ಸಾಗಣೆ ಒಪ್ಪಂದ ರದ್ದು ಸೇರಿದಂತೆ ಹಲವು ಕಠಿಣ ಕ್ರಮಗಳನ್ನು ಕೈಗೊಂಡಿದೆ. ಭಾರತದಲ್ಲಿ ವಾಸಿಸುವ ಪಾಕಿಸ್ತಾನದ ಪ್ರಜೆಗಳನ್ನು ದೇಶ ತೊರೆಯುವಂತೆ ಸೂಚಿಸಲಾಗಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ, ಪಾಕಿಸ್ತಾನ ಕೂಡ ಭಾರತೀಯ ವಿಮಾನಯಾನ ಸಂಸ್ಥೆಗಳಿಗೆ ತನ್ನ ವಾಯುಸೀಮೆಯನ್ನು ಸಂಪೂರ್ಣವಾಗಿ ಮುಚ್ಚಿದೆ ಮತ್ತು ಎಲ್ಲ ಒಪ್ಪಂದಗಳನ್ನು ನಿಷೇಧಿಸುವ ನಿರ್ಧಾರವನ್ನು ಪ್ರಕಟಿಸಿದೆ. ಭಾರತವು ಪಾಕಿಸ್ತಾನಿ ಕಲಾವಿದರು, ಯೂಟ್ಯೂಬ್ ಚಾನೆಲ್‌ಗಳು, ಮತ್ತು ಸೆಲೆಬ್ರಿಟಿಗಳ ಸಾಮಾಜಿಕ ಮಾಧ್ಯಮದ ಖಾತೆಗಳನ್ನು ನಿಷೇಧಿಸಿದೆ. ಪ್ರತಿಯಾಗಿ, ಪಾಕಿಸ್ತಾನವು ಎಫ್‌ಎಂ ರೇಡಿಯೋ ಮತ್ತು ಟಿವಿಗಳಲ್ಲಿ ಭಾರತೀಯ ಹಾಡುಗಳ ಪ್ರಸಾರವನ್ನು ನಿಷೇಧಿಸಿದೆ.

ಪಾಕ್ ಪ್ರಧಾನಿ ಶಹಬಾಜ್ ಷರೀಫ್ ಇಸ್ಲಾಮಾಬಾದ್‌ನಲ್ಲಿ ಉನ್ನತ ಮಟ್ಟದ ಭದ್ರತಾ ಸಭೆಯನ್ನು ನಡೆಸಿದ್ದು, ಇದರಲ್ಲಿ ಮೂರು ಸೇನಾಪಡೆಗಳ ಮುಖ್ಯಸ್ಥರು, ಪ್ರಮುಖ ಸಚಿವರು ಮತ್ತು ಉನ್ನತ ಅಧಿಕಾರಿಗಳು ಭಾಗವಹಿಸಿದ್ದರು. ಈ ಸಭೆಯಲ್ಲಿ, ಭಾರತವು ಪಾಕಿಸ್ತಾನದ ಪಾಲಿನ ನೀರನ್ನು ತಡೆದರೆ ಅದನ್ನು ಯುದ್ಧದ ಕೃತ್ಯವೆಂದು ಪರಿಗಣಿಸುವುದಾಗಿ ನಿರ್ಧರಿಸಲಾಯಿತು. ಇದರ ಜೊತೆಗೆ ಪಾಕಿಸ್ತಾನದ ರಾಷ್ಟ್ರೀಯ ಭದ್ರತಾ ಸಮಿತಿಯು ಭಾರತದಲ್ಲಿ ಮುಸ್ಲಿಮರು ಮತ್ತು ಅಲ್ಪಸಂಖ್ಯಾತರ ಮೇಲಿನ ದಬ್ಬಾಳಿಕೆ ಹೆಚ್ಚಾಗಿದೆ ಎಂದು ಆರೋಪಿಸಿದೆ. ಅಲ್ಲದೆ ವಕ್ಫ್‌ ತಿದ್ದುಪಡಿ ಕಾಯ್ದೆಯ ಮೂಲಕ ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಲಾಗುತ್ತಿದೆ ಎಂದು ದೂರಿದೆ. ಭಾರತವು ಮುಂದಿನ 24-36 ಗಂಟೆಗಳಲ್ಲಿ ಮಿಲಿಟರಿ ಕ್ರಮಕ್ಕೆ ಸಿದ್ಧತೆ ನಡೆಸುತ್ತಿದ್ದು, ಯುದ್ಧಕ್ಕೆ ಸನ್ನದ್ಧವಾಗುತ್ತಿದೆ ಎಂದು ಪಾಕಿಸ್ತಾನದ ಸಚಿವರು ಹಾಗೂ ರಾಯಭಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಒಂದು ವೇಳೆ ಭಾರತ ದಾಳಿ ನಡೆಸಿದ್ದೇ ಆದರೆ ತಮ್ಮಲ್ಲಿರುವ ಅಣ್ವಸ್ತ್ರ ಪ್ರಯೋಗಿಸಲಾಗುವುದು ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ.

ಪಹಲ್ಗಾಮ್‌ ಘಟನೆಯ ನಂತರ ಭಾರತದ ಪ್ರಧಾನಿ ನರೇಂದ್ರ ಮೋದಿ ಕೂಡ ನವದೆಹಲಿಯಲ್ಲಿ ನಡೆಸಿದ ಉನ್ನತ ಮಟ್ಟದ ಸಭೆಯಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಎನ್ಎಸ್ಎ ಅಜಿತ್ ದೋವಲ್, ಸಿಡಿಎಸ್ ಮತ್ತು ಮೂರು ಸೇನಾ ಮುಖ್ಯಸ್ಥರು ಭಾಗವಹಿಸಿದ್ದರು. ಒಂದೂವರೆ ಗಂಟೆ ನಡೆದ ಈ ಸಭೆಯಲ್ಲಿ, ಪಹಲ್ಗಾಮ್ ದಾಳಿಗೆ ಪ್ರತಿಕ್ರಿಯೆಯಾಗಿ ಮಿಲಿಟರಿ ಕಾರ್ಯಾಚರಣೆಯ ವಿಧಾನ, ಗುರಿಗಳು ಮತ್ತು ಸಮಯವನ್ನು ನಿರ್ಧರಿಸಲು ಸಶಸ್ತ್ರ ಪಡೆಗಳಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ. ಈ ನಡುವೆ ಭಾರತೀಯ ವಾಯುಸೇನೆಯು ರಫೆಲ್ ಮತ್ತು ಸುಖೋಯ್ 30 ಯುದ್ಧವಿಮಾನಗಳೊಂದಿಗೆ ಅಂಬಾಲಾ ಮತ್ತು ಹಸಿಮರಾಗಳಲ್ಲಿ ಸಮರಾಭ್ಯಾಸ ಆರಂಭಿಸಿದೆ.

Advertisements

ಈ ಸುದ್ದಿ ಓದಿದ್ದೀರಾ? ಸಂಸ್ಕೃತದ ಬಗ್ಗೆ ಇರುವ ಅರೆಸತ್ಯಗಳು ಮತ್ತು ಮಿಥ್ಯೆಗಳು: ಅವುಗಳನ್ನೇ ಸಾರುತ್ತಿರುವ ಬಿಜೆಪಿ ನಾಯಕರು

ಭಾರತೀಯ ಸೇನೆಯ ಮೂರು ದಳಗಳಾದ ಭೂಸೇನೆ, ವಾಯುಸೇನೆ ಮತ್ತು ನೌಕಾಪಡೆಯ ಕಮಾಂಡೆಂಟ್‌ಗಳು ಸನ್ನದ್ಧ ಸ್ಥಿತಿಯಲ್ಲಿದ್ದಾರೆ. ರಾ, ಐಬಿ, ಎನ್ಐಎ ಮತ್ತು ಎನ್‌ಟಿಆರ್‌ಒ ಸಂಸ್ಥೆಗಳ ಗುಪ್ತಚರ ಜಾಲವನ್ನು ಸಕ್ರಿಯಗೊಳಿಸಲಾಗಿದ್ದು, ಪಾಕಿಸ್ತಾನದ ವಾಯುಸೀಮೆಯ ಮೇಲೆ ಕಣ್ಗಾವಲು ಇಡಲಾಗಿದೆ. ನೌಕಾಪಡೆಯು ಪಶ್ಚಿಮ ಸಮುದ್ರ ಗಡಿಯಲ್ಲಿ ಯುದ್ಧ ತಯಾರಿಗೆ ಸಜ್ಜಾಗಿದೆ. ಮೇ 7 ರಂದು ದೇಶಾದ್ಯಂತ ಕರ್ನಾಟಕದ ಬೆಂಗಳೂರು, ರಾಯಚೂರು ಒಳಗೊಂಡಂತೆ ದೇಶದ 259 ಕಡೆ ಅಣಕು ಪ್ರದರ್ಶನ ಆಯೋಜಿಸಿದ್ದು, 30 ನಿಮಿಷಗಳ ಕಾಲ ದೀಪಗಳನ್ನು ಆರಿಸುವುದು ಮತ್ತು ಸೇನೆಯ ಡ್ರಿಲ್ ನಡೆಸುವುದು ಇದರ ಭಾಗವಾಗಿದೆ.

ಭಾರತಕ್ಕೆ ಪ್ರತಿಸ್ಪರ್ಧಿಯಾಗಿ ಪಾಕಿಸ್ತಾನ ಕೂಡ ಭಾರತದ ಗಡಿ ಬಳಿ ಸೇನಾ ಮುಖ್ಯಸ್ಥರ ಸಮ್ಮುಖದಲ್ಲಿ ಸಮರಾಭ್ಯಾಸ ನಡೆಸುತ್ತಿದೆ. ಪಾಕ್‌ ತುರ್ತಾಗಿ ಎರಡು ಕ್ಷಿಪಣಿ ಪರೀಕ್ಷೆಗಳನ್ನು ನಡೆಸಿದೆ. ಮೇ 3 ರಂದು 450 ಕಿ.ಮೀ ವ್ಯಾಪ್ತಿಯ ಅಬ್ದಾಲಿ ಕ್ಷಿಪಣಿ ಮತ್ತು ಮೇ 5 ರಂದು 120 ಕಿ.ಮೀ ವ್ಯಾಪ್ತಿಯ ಫತಹ್ ಕ್ಷಿಪಣಿಗಳನ್ನು ಪರೀಕ್ಷೆಗೊಳಪಡಿಸಲಾಗಿದೆ. ಈ ಪರೀಕ್ಷೆಗಳನ್ನು “ಸೈನಿಕರ ಕಾರ್ಯಾಚರಣೆಯ ಸಿದ್ಧತೆಯನ್ನು ಖಚಿತಪಡಿಸಲು” ಮತ್ತು ಕ್ಷಿಪಣಿಗಳ ಸುಧಾರಿತ ಸಂಚಾರ ಮತ್ತು ನಿಖರತೆಯನ್ನು ಮೌಲ್ಯಮಾಪನ ಮಾಡಲು ನಡೆಸಲಾಗಿದೆ ಎಂದು ಪಾಕಿಸ್ತಾನದ ಸೇನೆ ತಿಳಿಸಿದೆ.

ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಸಯೀದ್ ಆಸಿಮ್ ಮುನೀರ್ ಅವರು ಮೇ 2 ರಂದು ನಡೆದ ಉನ್ನತ ಸೇನಾ ಕಮಾಂಡರ್‌ಗಳ ಸಭೆಯಲ್ಲಿ “ಎಲ್ಲ ಪಡೆಗಳಲ್ಲಿ ಉನ್ನತ ಜಾಗರೂಕತೆ ಮತ್ತು ಸಕ್ರಿಯ ಸಿದ್ಧತೆ”ಯನ್ನು ಒತ್ತಿಹೇಳಿದ್ದಾರೆ. ನಿಯಂತ್ರಣ ರೇಖೆ ಬಳಿ ಪಾಕಿಸ್ತಾನವು ತನ್ನ ಸೇನಾ ಉಪಸ್ಥಿತಿಯನ್ನು ಬಲಪಡಿಸಿದೆ. ಇದರಲ್ಲಿ 5,60,000 ಸೈನಿಕರು, 70,000 ವಾಯುಪಡೆ ಸಿಬ್ಬಂದಿ ಮತ್ತು 30,000 ನೌಕಾಪಡೆ ಸಿಬ್ಬಂದಿ ಸೇರಿದ್ದಾರೆ.

ಭಾರತದ ಸೇನಾ ಬಲ

ಭಾರತದಲ್ಲಿ ಕರ್ತವ್ಯನಿರತ ಸೈನಿಕರ ಸಂಖ್ಯೆ 14.80 ಲಕ್ಷ ಇದೆ. ಇದರಲ್ಲಿ ಸೇನಾ ಪಡೆಯಲ್ಲಿ 12.30 ಲಕ್ಷ ಸೈನಿಕರಿದ್ದಾರೆ. ವಾಯುಪಡೆಯಲ್ಲಿ 1,39,576 ಮಂದಿ ಹಾಗೂ ನೌಕಾಪಡೆಯಲ್ಲಿ 67,228 ಮಂದಿ ಸೈನಿಕರು ಇದ್ದಾರೆ. ಇದರ ಜೊತೆಗೆ, ಮೀಸಲು ಪಡೆಯಲ್ಲಿ 11.5 ಲಕ್ಷ ಹಾಗೂ ಅರೆ ಸೇನಾಪಡೆಗಳಲ್ಲಿ 13 ಲಕ್ಷ ಯೋಧರಿದ್ದಾರೆ. ಇವೆಲ್ಲ ಸೇರಿ ಸುಮಾರು 40 ಲಕ್ಷ ಸಮೀಪದಷ್ಟು ಯೋಧರಿದ್ದಾರೆ. ಲ್ಯಾಂಡ್ ವಾರ್​​ಫೇರ್ ಅಥವಾ ನೆಲದಲ್ಲಿನ ಯುದ್ಧದಲ್ಲಿ ಬ್ಯಾಟಲ್ ಟ್ಯಾಂಕ್​​​ಗಳ ಪಾತ್ರ ಮಹತ್ವದ್ದಿದೆ. ಭಾರತದ ಬಳಿ 3,500 ಟ್ಯಾಂಕ್​​ಗಳಿವೆ. ಭಾರತದ ವಾಯುಪಡೆ ಬಳಿ 606 ಯುದ್ಧವಿಮಾನಗಳಿವೆ. ಇದರಲ್ಲಿ 272 ಸುಖೋಯ್-30 ವಿಮಾನಗಳಿವೆ. ಫ್ರಾನ್ಸ್ ನಿರ್ಮಿತ 36 ರಫೇಲ್ ಹಾಗೂ ಎಚ್​​​ಎಎಲ್ ನಿರ್ಮಿತ 120 ತೇಜಸ್ ಏರ್​​ಕ್ರಾಫ್ಟ್​​ಗಳಿವೆ. ಭಾರತದ ನೌಕಾಪಡೆಯಲ್ಲಿ 150 ಯುದ್ಧಹಡಗುಗಳಿವೆ. ಚೀನಾವನ್ನು ದೃಷ್ಟಿಯಲ್ಲಿಟ್ಟುಕೊಂಡು ಭಾರತದ ನೌಕಾಪಡೆ ಅಭಿವೃದ್ಧಿ ಹೊಂದುತ್ತಿದೆ. ಪರಮಾಣು ವಿಷಯಕ್ಕೆ ಬಂದಾಗ ಭಾರತದ ಬಳಿ 172 ಅಣ್ವಸ್ತ್ರ ಸಿಡಿತಲೆಗಳಿವೆ.

ಪಾಕ್‌ ಸೇನಾಬಲ ಕೂಡ ಕಡಿಮೆಯೇನಿಲ್ಲ

ಸೇನಾಬಲದಲ್ಲಿ ಭಾರತ ಒಂದಷ್ಟು ಮೇಲುಗೈ ಸಾಧಿಸಿದರೂ ಪಾಕಿಸ್ತಾನದ ಸೇನಾಬಲ ಕೂಡ ಕಡಿಮೆಯೇನಲ್ಲ. ಪಾಕಿಸ್ತಾನದ ಬಳಿ ಸಕ್ರಿಯ ಸೈನಿಕರು ಮತ್ತು ಮೀಸಲು ಸೇರಿ ಒಟ್ಟು 12 ಲಕ್ಷ ಯೋಧರು ಲಭ್ಯರಿದ್ದಾರೆ. ಪಾಕಿಸ್ತಾನದ ಬಳಿ 2,500 ಸಮೀಪದಷ್ಟು ಟ್ಯಾಂಕ್​​ಗಳಿವೆ. ಪಾಕಿಸ್ತಾನದ ಬಳಿ ಎಸ್-15 ಶ್ರೇಣಿಯ 155 ಎಂಎಂನ ಹಲವು ಗನ್​​ಗಳಿವೆ. ಪಾಕಿಸ್ತಾನದ ಬಳಿ 387 ಫೈಟರ್ ಜೆಟ್‌ಗಳಿವೆ. ಪಾಕ್‌ ಬಳಿ ಅಮೆರಿಕ ನಿರ್ಮಿತ ಎಫ್-16 ಜೆಟ್​​ಗಳಿವೆ. ಇದು ಸುಖೋಯ್​​ಗಿಂತ ಪಾಕಿಸ್ತಾನದ ಎಫ್-16 ಹೆಚ್ಚು ಶಕ್ತಿಶಾಲಿ ಎನಿಸಿದೆ. ಪಾಕಿಸ್ತಾನದ ಬಳಿ ಚೀನಾದ ಎಚ್​​ಕ್ಯೂ-9ಬಿ ಎನ್ನುವ ರಕ್ಷಣಾ ವ್ಯವಸ್ಥೆಯಿದ್ದು ಇದು 250 ಕಿಮೀ ಸಾಮರ್ಥ್ಯ ಹೊಂದಿದೆ. ಪಾಕಿಸ್ತಾನದ ಬಳಿ 170 ಅಣ್ವಸ್ತ್ರ ಸಿಡಿತಲೆಗಳಿವೆ. ಶಾಹೀನ್-III ಕ್ಷಿಪಣಿಯು 2,750 ಕಿ.ಮೀ. ವ್ಯಾಪ್ತಿಯನ್ನು ಹೊಂದಿದೆ.

ಯುದ್ಧದ ನಂತರದ ಪರಿಣಾಮಗಳು ಊಹಿಸಲು ಅಸಾಧ್ಯ

ಒಂದು ವೇಳೆ ಉಭಯ ದೇಶಗಳಲ್ಲಿ ಅಣ್ವಸ್ತ್ರ ದಾಳಿ ನಡೆದರೆ ಆಗುವ ಅನಾಹುತ ಅಷ್ಟಿಷ್ಟಲ್ಲ. ಇದನ್ನು ಊಹಿಸಲು ಕೂಡ ಸಾಧ್ಯವಾಗುವುದಿಲ್ಲ. ಭಾರತ ಮತ್ತು ಪಾಕಿಸ್ತಾನದ ನಡುವಿನ ಅಣ್ವಸ್ತ್ರ ಯುದ್ಧವು ದಕ್ಷಿಣ ಏಷ್ಯಾದಲ್ಲಿ ಮಾತ್ರವಲ್ಲದೆ, ಜಾಗತಿಕವಾಗಿಯೂ ಗಂಭೀರ ಮತ್ತು ವಿನಾಶಕಾರಿ ಪರಿಣಾಮಗಳನ್ನು ಉಂಟುಮಾಡಬಹುದು. ಎರಡೂ ರಾಷ್ಟ್ರಗಳು ಅಣ್ವಸ್ತ್ರ ಸಾಮರ್ಥ್ಯವನ್ನು ಹೊಂದಿರುವುದರಿಂದ ಅಣ್ವಸ್ತ್ರ ವಿನಿಮಯವು ಕೂಡ ಭೀಕರವಾದ ಫಲಿತಾಂಶಗಳಿಗೆ ಕಾರಣವಾಗಬಹುದು. ಒಂದು ಸೀಮಿತ ಅಣ್ವಸ್ತ್ರ ವಿನಿಮಯ (15 ರಿಂದ 100 ಕಿಲೋಟನ್‌ನ 50 ರಿಂದ 100 ಸಿಡಿತಲೆ) ಭಾರತ ಮತ್ತು ಪಾಕಿಸ್ತಾನದ ದಟ್ಟ ಜನಸಂಖ್ಯೆಯಿರುವ ನಗರಗಳ 2-5 ಕೋಟಿ ಜನರನ್ನು ತಕ್ಷಣವೇ ಕೊಲ್ಲಬಹುದು. ದಟ್ಟ ಜನಸಂಖ್ಯೆಯ ನಗರಗಳಾದ ದೆಹಲಿ, ಮುಂಬೈ, ಲಾಹೋರ್ ಮತ್ತು ಕರಾಚಿಯನ್ನು ಗುರಿಯಾಗಿಸುತ್ತದೆ. ಅಮೆರಿಕದ ರಟ್ಜರ್ಸ್ ವಿಶ್ವವಿದ್ಯಾಲಯ 2019 ರಲ್ಲಿ ಮಂಡಿಸಿದ ಅಧ್ಯಯನದ ಪ್ರಕಾರ, 50 ಅಣ್ವಸ್ತ್ರ ಸಿಡಿತಲೆ ವಿನಿಮಯವು 12.5 ಕೋಟಿ ಜನರನ್ನು ಆಹುತಿ ತೆಗೆದುಕೊಳ್ಳುತ್ತದೆ.

ಲಕ್ಷಾಂತರ ಜನರು ತೀವ್ರ ಸುಟ್ಟಗಾಯಗಳು, ವಿಕಿರಣ ರೋಗ ಮತ್ತು ಕ್ಯಾನ್ಸರ್‌ನಿಂದ ಬಳಲಬಹುದು. ಆಸ್ಪತ್ರೆಗಳು ಮತ್ತು ವೈದ್ಯಕೀಯ ಮೂಲಸೌಕರ್ಯವು ನಾಶವಾದರೆ, ಚಿಕಿತ್ಸೆ ಸಾಧ್ಯವಾಗದೆ ಇನ್ನಷ್ಟು ಸಾವುಗಳು ಸಂಭವಿಸಬಹುದು. ವಿಕಿರಣ ಸೋರಿಕೆ ಕಾರಣಗಳಿಂದ ಜನನ ದೋಷಗಳು, ಲ್ಯುಕೇಮಿಯಾ ಮತ್ತು ಇತರ ಕಾಯಿಲೆಗಳು ದಶಕಗಳವರೆಗೆ ಜನರನ್ನು ಕಾಡಬಹುದು. ಯುದ್ಧವು ಕೋಟ್ಯಂತರ ಜನರನ್ನು ಸ್ಥಳಾಂತರಗೊಳಿಸಬಹುದು. ಇದು ನೆರೆಯ ರಾಷ್ಟ್ರಗಳ ಮೇಲೆ ಒತ್ತಡವನ್ನುಂಟುಮಾಡಬಹುದು. ಅಣ್ವಸ್ತ್ರ ಸ್ಫೋಟಗಳಿಂದ ಉಂಟಾಗುವ ಹೊಗೆ ಮತ್ತು ಧೂಳು ವಾತಾವರಣದಲ್ಲಿ ಮಿತಿಮೀರಿದ ಇಂಗಾಲದ ಆಮ್ಲವನ್ನು ಉತ್ಪತ್ತಿ ಮಾಡುತ್ತದೆ. ಸೂರ್ಯನ ಬೆಳಕನ್ನು ತಡೆಯುವ ಮಾಲಿನ್ಯ ಅಣ್ವಸ್ತ್ರ ಸ್ಫೋಟಿಸಿದ ಸ್ಥಳದಲ್ಲಿ ನಡೆಯುತ್ತದೆ. ಜಾಗತಿಕ ತಾಪಮಾನವನ್ನು 1-5 ಸೆಂಟಿಗ್ರೇಡ್‌ ಕಡಿಮೆಗೊಳಿಸಬಹುದು. “ಅಣ್ವಸ್ತ್ರ ಚಳಿಗಾಲ”ವು 5-10 ವರ್ಷಗಳವರೆಗೆ ಇರಬಹುದು, ಇದು ಕೃಷಿ ಉತ್ಪಾದನೆಯನ್ನು ಕುಗ್ಗಿಸುತ್ತದೆ ಮತ್ತು 200 ಕೋಟಿ ಜನರಿಗೆ ಆಹಾರ ಕೊರತೆಯನ್ನು ಉಂಟುಮಾಡಬಹುದು. ಇವೆಲ್ಲ ಕಾರಣಗಳಿಂದ ಎರಡೂ ದೇಶಗಳು ಬಹುತೇಕ ಸರ್ವನಾಶವಾಗುತ್ತದೆ.

ಯುದ್ಧ ಬೇಕಾ ಎಂಬುದನ್ನು ರಾಷ್ಟ್ರವನ್ನು ಮುನ್ನಡೆಸುವವರು ಇನ್ನೊಮ್ಮೆ ಯೋಚಿಸುವುದೊಳಿತು.

blank profile picture 973460 640
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗದಗ | ಮುಶಿಗೇರಿ ವಸತಿ ನಿಲಯಕ್ಕೆ ಮೂಲ ಸೌಕರ್ಯಗಳ ಕೊರತೆ; ವಿದ್ಯಾರ್ಥಿಗಳ ಗೋಳು ಕೇಳೋರ್ಯಾರು?

ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ವಸತಿ...

Download Eedina App Android / iOS

X